Saturday, March 28, 2009


'ವರುಷವೆರಡು ಕಳೆದಿದೆ... ಶಿಶಿರ ಶೃಂಗಾರದಲ್ಲಿ ವಸಂತ ವಿಹರಿಸಿದೆ...'

ಅದೊಂದು ರೀತಿಯಲ್ಲಿ ಬಯಸದೇ ಒಲಿದು ಬಂದ ಭಾಗ್ಯ !!!
ಎರಡು ವಸಂತಗಳನ್ನು ಪೂರೈಸಿ ಮೂರನೇ ಸಂವತ್ಸರಕ್ಕೆ ಕಾಲಿಡುವ ಹೊತ್ತಿಗೆ ಅಂತಹುದೊಂದು ಶುಭಾರಂಭ ಒದಗೀತು ಎಂಬುದನ್ನು ನೂಪುರ ಭ್ರಮರಿಯ ಬಳಗದ ಯಾವ ಮಿತ್ರರೂ ಕಲ್ಪಿಸಿಯೂ ಇರಲಿಲ್ಲ. ಏಕೆಂದರೆ ಕಳೆದ ವರ್ಷದಂತೆ ಒಂದು ವರ್ಷ ಪೂರೈಸಿದ ಪ್ರಯುಕ್ತ ಮಿತ್ರರೆಲ್ಲಾ ಒಟ್ಟಾಗಿ ವಾರ್ಷಿಕ ಸಂಭ್ರಮವನ್ನು ಆಚರಿಸಿಕೊಂಡು, ವೆಬ್‌ಸೈಟ್ ಅನಾವರಣಗೊಳಿಸಿದಂತ ಯಾವುದೇ ನೆವವೂ ಈ ವರ್ಷದ ಪ್ರಾರಂಭಕ್ಕೆ ಇರಲಿಲ್ಲ. ಬಳಗದ ಕುಟುಂಬ ಸಾಕಷ್ಟು ಹಿರಿದಾಗುತ್ತಿದ್ದರೂ ಈ ವರ್ಷಕ್ಕೆ ಅಂತಹ ಸಮಾರಂಭ ಮಾಡುವ ಇರಾದೆ ಯಾರಿಗೂ ಇರಲಿಲ್ಲವೆನ್ನಬಹುದೇನೋ ! ಹಾಗಾಗಿ ಬಳಗದ ಪ್ರಮುಖರು ಸಭೆ ಸೇರಿ ಒಕ್ಕೊರಲಿನಿಂದ ತೀರ್ಮಾನಿಸಿದ್ದು, ಸಮಾರಂಭದ ಬದಲಾಗಿ ಪತ್ರಿಕೆಗೆ ಒಂದು ಹೊಸ ವಿನ್ಯಾಸ ಮತ್ತು ಶೈಲಿ ನೀಡೋಣ ಮತ್ತು ಪತ್ರಿಕೆಯ ಪ್ರಸಾರದ ದಿಕ್ಕನ್ನು ಮತ್ತಷ್ಟು ವಿಶಾಲವಾಗಿಸೋಣ ಎಂದಷ್ಟೇ . ಆದ್ದರಿಂದ ಎಲ್ಲರ ಗಮನವೂ ಇದ್ದದ್ದು ಗುಣಮಟ್ಟದ ಲೇಖನಗಳು ಮತ್ತು ವರ್ಣಮಯ ಮುದ್ರಿತ ಸಂಚಿಕೆಯೆಡೆಗೆ !
ಆದರೆ ಅಯಾಚಿತವಾಗಿ, ಕಾಕತಾಳೀಯವೋ ಎಂಬಂತೆ ಒದಗಿ ಬಂದಿತ್ತು ಭವ್ಯ ವೇದಿಕೆಯಲ್ಲಿ ಎರಡನೇ ವರ್ಷ ಪೂರ್ಣಗೊಳಿಸಿದ ಸಂಭ್ರಮವನ್ನು ಆಚರಿಸಿಕೊಳ್ಳುವ ಅವಕಾಶ. ಅದೂ ಎಷ್ಟು ಕಡಿಮೆ ಅವಧಿಯಲ್ಲಿ ಎಂದರೆ ಹಿಂದಿನ ದಿನ ರಾತ್ರಿ ನಿಗದಿಯಾಗಿ, ಬಳಗದ ಎಲ್ಲರಿಗೂ ಸರಿಯಾಗಿ ವಿಚಾರ ತಿಳಿಸದಷ್ಟೂ ಅವಸರವಸರವಾಗಿ !
ನೂಪುರ ಭ್ರಮರಿಯ ಪ್ರಥಮ ಸಂಚಿಕೆ ಅನಾವರಣಗೊಂಡದ್ದು ೨೦೦೭ ಫೆಬ್ರವರಿಯ ಶಿವರಾತ್ರಿಯಂದು. ಮೊನ್ನೆ ಮೊನ್ನೆ ಕಣ್ಬಿಟ್ಟಳೋ ಎಂಬಂತಿರುವಾಗಲೇ ವಾರ್ಷಿಕ ಸಂಭ್ರಮ ೨೦೦೮ರ ಫೆಬ್ರವರಿ ೧೦ಕ್ಕೆ. ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಹೊತ್ತಿಗೆ ಮಂಟಪ ಪ್ರಭಾಕರ ಉಪಾಧ್ಯರ ಮುಖಪುಟ, ಸಂದರ್ಶನ ಹೊತ್ತ ವಾರ್ಷಿಕ ಸಂಚಿಕೆ ತೆರೆದುಕೊಂಡದ್ದು ಫೆಬ್ರವರಿ ೧೩, ೨೦೦೯. ಅದೂ ಭರತನೃತ್ಯ ಸಭಾದ ಆಶ್ರಯದಲ್ಲಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ ಮಂಟಪರ ಏಕವ್ಯಕ್ತಿ ಯಕ್ಷಗಾನ ಸರಣಿ ಕಾರ್ಯಕ್ರಮದ ಉದ್ಘಾಟನೆಯ ದಿನದಂದು.
ಒಟ್ಟಿನಲ್ಲಿ ಮಂಗಳೂರು ವಲಯದ ಹೊಸ-ಹೊಸ ಗೆಳೆಯರ ಬಳಗ ಆದರದಿಂದ ಸ್ವಾಗತಿಸಿತ್ತು. ಹೊಸ ಓದುಗ ಮಿತ್ರರ ಮೆಚ್ಚುಗೆ ಸಂತಸವನ್ನು ಇಮ್ಮಡಿಸಿತ್ತು. ಈ ಹೊತ್ತಿಗೆ ಸರಿಯಾಗಿ ಮೂರರ ಪೋರಿ ಭ್ರಮರಿಯನ್ನು ಸಿದ್ಧಪಡಿಸಿ ವೇದಿಕೆಗೆ ಹತ್ತಿಸಿ ಸಹಕರಿಸಿದ ಬಳಗದ ಮಿತ್ರ ಸುನಿಲ್ ಕುಲಕರ್ಣಿ ಮತ್ತು ಅಕ್ಷರೋದ್ಯಮದ ಗೆಳೆಯರಿಗೆ ಧನ್ಯವಾದದ ಪುಟ್ಟ ಹೂಗುಚ್ಛ.
ಈ ಸಂಭ್ರಮಕ್ಕೆ ಮುನ್ನುಡಿ ಬರೆದವರು ಭರತನೃತ್ಯ ಸಭಾ ಮತ್ತು ಸನಾತನ ನಾಟ್ಯಾಲಯದ ಅಧ್ಯಕ್ಷರೂ ಆದ ಚಂದ್ರಶೇಖರ ಶೆಟ್ಟಿ ಮತ್ತು ಅವರ ಸನ್ಮಿತ್ರರು. ಕಳೆದ ಒಂದೂವರೆ ವರ್ಷಗಳಿಂದ ಮಂಗಳೂರಿನ ಭರತನೃತ್ಯ ಸಭಾ ಕಲಾಪ್ರೇಮಿಗಳಿಗೆ ಮಾತ್ರವಲ್ಲದೆ ಎಲೆಮರೆಯ ಪ್ರತಿಭಾವಂತ ಕಲಾವಿದರ ಅರಳುವಿಕೆಗೆ ಸಾಕಷ್ಟು ಚಟುವಟಿಕೆಗಳು, ಅವಕಾಶಗಳು, ಉತ್ಸವ, ಕಾರ್ಯಾಗಾರಗಳನ್ನು ನಡೆಸಿಕೊಡುತ್ತ ಬಂದಿರುವ ಸಮಾನ ಮನಸ್ಕರ ಸಂಸ್ಥೆ.
ಕಲಾಜಗತ್ತಿನ ದಿಗ್ಗಜರ, ಹಿರಿಯರ ಉಪಸ್ಥಿತಿಯಿದ್ದರೂ ಅಂದು ಸನಾತನ ನಾಟ್ಯಾಲಯದ ಚಾವಡಿಯಲ್ಲಿ ಜರುಗಿದ್ದು ಆಡಂಬರದ ಸದ್ದುಗದ್ದಲವಿಲ್ಲದ, ಹೊಗಳಿಕೆ-ತೆಗಳಿಕೆ-ಓಲೈಕೆ-ಸ್ವಂತಿಕೆ ಮೆರೆಸುವ ಭಾಷಣಗಳಿಲ್ಲದ ಕಲಾವಂತರನ್ನು ನೇರವಾಗಿ ತಟ್ಟುವ ಸಮಯಪ್ರಜ್ಞೆಯ ಚೊಕ್ಕ ಚಿಕ್ಕ ಕಾರ್ಯಕ್ರಮ. ಔಪಚಾರಿಕವಾಗಿದ್ದರೂ, ಪ್ರೀತಿ-ಗೌರವ, ಆದರದಿಂದಾಗಿ ಅನೌಪಚಾರಿಕ ನೆಲೆಯಲ್ಲಿ ಮೂಡಿಬಂದ ವೇದಿಕೆಗೆ ದೀಪಬೆಳಗಿ ಉದ್ಘಾಟನೆ ನೆರವೇರಿಸಿದವರು 'ಚಿಂತನೆಯಲ್ಲಿ ಹೊಸತನ ಕಂಡಾಗ ಪರಿಣಾಮಕಾರಿ ಬದಲಾವಣೆ ಸಾಧ್ಯ' ಎಂದು ಶುಭಪ್ರದವಾಗಿ ಮಾತನಾಡಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಕುಂಬ್ಳೆ ಸುಂದರ ರಾವ್.
ಜೊತೆಗೆ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರ ಅಧ್ಯಕ್ಷತೆ, ಸ್ತ್ರೀ ವೇಷ ಸಾಮ್ರಾಟ ಮಂಟಪ ಪ್ರಭಾಕರ ಉಪಾಧ್ಯ, ಹಿರಿಯ ನೃತ್ಯ ಗುರು ಮುರಳೀಧರ ರಾವ್, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ನಾಗೇಶ್. ಎ. ಬಪ್ಪನಾಡು, ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್, ನೃತ್ಯಾಭ್ಯಾಸಿಗಳು, ವಿಮರ್ಶಕರು, ಕಲಾವಿದರು.., ಹೀಗೆ ಹಮ್ಮು ಬಿಮ್ಮು ಇಲ್ಲದ ಸಹೃದಯ ಮನಸ್ಥಿತಿ.
ಅಧ್ಯಕ್ಷತೆಯ ನೆಲೆಯಲ್ಲಿ ಮಾತನಾಡಿದ ಡಾ. ಎಂ. ಪ್ರಭಾಕರ ಜೋಶಿ ಅವರ ಮಾತುಗಳು ಸಮಕಾಲೀನ ಸಂದರ್ಭವನ್ನು ಇಣುಕಿ ನೋಡಿ, ಚಿಂತನೆಗೆ ಪೂರಕವಾಗಿ ಧ್ವನಿಸಿತ್ತು.. ಇದೋ, ಅವರ ಮಾತುಗಳಲ್ಲಿ ಬೊಗಸೆಗೆ ಸಿಕ್ಕಿದ ಒಂದಷ್ಟು ನುಡಿಗಳಿಗೆ ಕಿವಿಯಾಗೋಣ..
' ಒಬ್ಬ ನರ್ತಕನಿಗೆ ಲಯ ಮುಖ್ಯವಾದದ್ದು. ಅದರ ಆಧಾರದಲ್ಲಿ ಅವನ ನೈಪುಣ್ಯತೆ ನಿಗದಿಯಾಗುತ್ತದೆ. ಇಂತಹ ನೃತ್ಯಾಧಾರಿತ ವಿಷಯಗಳನ್ನು ಅವಲೋಕನ ಮತ್ತು ಅಭಿವೃದ್ದಿಪಡಿಸುವಲ್ಲಿ ನೂಪುರ ಭ್ರಮರಿಯ ಕೆಲಸ ಸಮಾಜಕ್ಕೆ ಅವಶ್ಯಕ.
ಪರಂಪರೆ, ಸುಧಾರಣೆ, ಹೊಸತನ -ಅತ್ಯಂತ ಭಯಾನಕ ಶಬ್ದಗಳು. ನಮಗೆ ತಿಳಿಯದೇ ಮಾಡಿದ್ದನ್ನೇ ಮಾಡಿದರೆ ಅದು ಪರಂಪರೆಯೆನ್ನುತ್ತೇವೆ. ಸಂಪ್ರದಾಯವೆಂಬುದು ಕಲೆಯಲ್ಲಿ ನುಸುಳಿದೆ. ಆದರೆ ಇಂತಹ ಶಬ್ದಗಳ ಗಂಭೀರ ಅರ್ಥವನ್ನು ತಿಳಿದುಕೊಂಡು, ಕಲೆಯಲ್ಲಿ ಏನಾಗಿದೆ ಎಂದು ನೋಡುವ ಕೆಲಸ ಅಗಬೇಕು.. ಇಂತಹ ಅವಲೋಕನ ನೂಪುರ ಭ್ರಮರಿ ಮುನ್ನಡೆಸಿಕೊಂಡು ಬರುತ್ತಿದೆ..
ಕಲೆಯ ಚರಿತ್ರೆಯನ್ನು ತಿಳಿದರೆ ಕಾಲಕಾಲಕ್ಕೂ ಕಲೆಯೊಂದು ಕವಲೊಡೆಯುವುದನ್ನು ಕಾಣುತ್ತೇವೆ. ಕಲೆಗಳೆಲ್ಲ ಒಂದೇ ಮೂಲದಿಂದ ಬಂದವಾಗಿದ್ದರೂ, ಬೇರೆ ಬೇರೆ ದಿಕ್ಕನ್ನು ಹಿಡಿದು ಹೊರಟ ಕಾರಣ ಅಂತಹ ವ್ಯತ್ಯಾಸಗಳನ್ನು ಅರಿತುಕೊಳ್ಳಬೇಕು. ಇಲ್ಲವಾದರೆ ಮುಂದೊಂದು ದಿನ ಕಲೆಯೊಂದನ್ನು ಕಲಿಯಬೇಕು ಅಥವಾ ನೋಡಬೇಕೆಂದರೆ ಅದು ಅಂಚೆ ತೆರಪಿನ ಶಿಕ್ಷಣದಲ್ಲಿ ಕಳಿಸುವ ಪುಸ್ತಕವಾಗುವ ಅಪಾಯವಿದೆ.
ನಮ್ಮ ಅನುಭವಕ್ಕೆ ಬಾರದ ವಿಷಯಗಳನ್ನು ಕಲಿಯುವಾಗ ಹೆಚ್ಚು ಆಲೋಚಿಸಿ ಕಲಿಯಬೇಕಾದ ಆವಶ್ಯಕತೆಯಿದೆ. ಯಾವುದೇ ಪ್ರಸಂಗವನ್ನು ನಿರ್ವಹಿಸುವಾಗ ಕಲಾವಿದನಿಗೆ ಹೊಸ ಕಲ್ಪನೆಗಳಿರಬೇಕು. ಆ ಕಲ್ಪನೆಯಲ್ಲಿ ಔಚಿತ್ಯ-ಪ್ರಾಯ-ವಯಸ್ಸು-ಲಿಂಗ-ಅನುಭವ ಎಲ್ಲವನ್ನೂ ಹೊಂದಿಸಿಕೊಂಡಂತೆ ಆ ಪಾತ್ರದ ಮಟ್ಟವನ್ನು ತಿಳಿಯಬೇಕು. ಆದರೆ ಅನೇಕ ಸಂದರ್ಭಗಳಲ್ಲಿ ಮುದ್ರೆಗಳನ್ನು ಯಥಾವತ್ತಾಗಿ ಮಾಡುವಾಗಲೂ ಎಷ್ಟೋ ಜನರು ಯೋಚಿಸುವುದೇ ಇಲ್ಲ.
ಪಾತ್ರ ಯಾವುದು; ಅನುಭವ ಏನು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ನಟಿಸುವುದು ಮುಖ್ಯ. ಜನರು ಮೆಚ್ಚುತ್ತಾರೆ ಎಂದು ಕ್ರಿಯೆ-ಪ್ರತಿಕ್ರಿಯೆಗಳನ್ನು ತಪ್ಪಾಗಿ ಮಾಡಕೂಡದು. ಆದರೆ ಇಂದು ದೊಡ್ಡ-ದೊಡ್ಡ ಕಲಾವಿದರೆನಿಸಿಕೊಂಡವರಲ್ಲೇ ಇದರ ಕೊರತೆ ಕಾಣುತ್ತಿದೆ.
ಇಂದು ಕಲೆಯ ಮೇಲಿನ ಬೆಲೆ ಕಡಿಮೆಯಾಗುತ್ತಿದೆ. ಮಾಧ್ಯಮಗಳಲ್ಲಿ ನೃತ್ಯದ ಕಾರ್ಯಕ್ರಮವೂ ನೋಡಲು ಸಿಗುತ್ತಿದೆ. ಇಂದು ಕಲೆಯನ್ನು ಪೂರ್ಣವಾಗಿ ಅರ್ಥೈಸಿಕೊಳ್ಳದೇ ಹಾಡುವುದು, ನರ್ತಿಸುವುದು, ಪ್ರೋತ್ಸಾಹ-ಬಹುಮಾನ-ಬಿರುದುಗಳನ್ನು ನೀಡುವುದು ಜಾಸ್ತಿಯಾಗುತ್ತಿದೆ. ರಂಗಭೂಮಿ ಬತ್ತಿ ಹೋಗುತ್ತಿದೆಯೇನೋ ಎಂಬಂತೆ ಇತ್ತೀಚೆಗಿನ ದಿನಗಳಲ್ಲಿ ಭಾಸವಾಗುತ್ತಿದೆ. ಸಾಧಿಸುವ ಮೊದಲ ಮೆಟ್ಟಿಲಿನಲ್ಲಿರುವವರನ್ನು ಹಿರಿಯ ಸಾಧಕರೊಂದಿಗೆ ಹೋಲಿಸುವಾಗ ಅರ್ಹತೆ, ಸಾಧನೆಗಳಿಗಿಂತಲೂ ಓಲೈಕೆ, ಜಾಸ್ತಿಯಾಗುತ್ತಿದೆ. ಇಲ್ಲವಾದರೆ ಟಿವಿಯಲ್ಲಿ ಬಾಯಿಪಾಠ ಕಲಿತು ಹಾಡುವ ಮಗುವನ್ನು ಲತಾ ಮಂಗೇಶ್ಕರ್ ತರಹ ಹಾಡುತ್ತೀ ಎಂದರೆ ಕಲೆಗೂ, ಕಲಾವಿದನಿಗೂ ಮಾಡುವ ಅಪಹಾಸ್ಯ ಮತ್ತು ಅವಿವೇಕ.
ಇಂತಹ ಸಂದರ್ಭದಲ್ಲಿ ನಾವು ತುಂಬಾ ಗಟ್ಟಿಯಾಗಿ ನಿಲ್ಲಬೇಕಾದ ಅವಶ್ಯಕತೆಯಿದೆ. ಕಲೆಗಳ ಕೀಳು ಮಾರುಕಟ್ಟೆಯ ಕಾಲದಲ್ಲಿ ತಪಸ್ಸಿನಂತೆ ಛಲ ಹೊತ್ತು ಸಣ್ಣ-ಸಣ್ಣ ರೂಪದಿಂದ, ಪಿಸುಧ್ವನಿಯಿಂದ ಹಿಡಿದು ಸ್ಥಿರವಾಗಿ, ಅರ್ಥಪೂರ್ಣವಾದ ಕೆಲಸ ಮಾಡುವ ಅನಿವಾರ್ಯತೆಯಿದೆ. ಈಗಾಗಲೇ ಯಕ್ಷಗಾನವನ್ನೂ ಒಳಗೊಂಡಂತೆ ವಿವಿಧ ನೃತ್ಯ ಪ್ರಕಾರಗಳಲ್ಲಿ ಹುದುಗಿಕೊಂಡಿರುವ ಸಾಹಿತ್ಯವನ್ನು ಬಳಸಿಕೊಂಡು ಕಲೆಗಳು ಬೆಳೆಯಬೇಕಾಗಿದೆ. ಜೊತೆಗೆ ಈ ಸಾಹಿತ್ಯಗಳು ಯಾವ್ಯಾವ ಭಾವಗಳನ್ನು ಕೊಡುತ್ತವೆ ಎಂಬುದನ್ನು ಮಕ್ಕಳೂ ಸೇರಿದಂತೆ ಹಿರಿಯರು ವಿಶೇಷವಾಗಿ ಗಮನಿಸಬೇಕು.'
ತದನಂತರ ಸತತ ಮೂರು ದಿನಗಳ ಪರ್ಯಂತವೂ ಭಾವ-ರಸ ಸರಣಿ. ಮಂಟಪರ ಅಭಿನಯ, ರಸಪ್ರತಿಪಾದನೆ ಮತ್ತಷ್ಟು ಮನೆಮಂದಿ ಸನಾತನ ನಾಟ್ಯಾಲಯದ ಚಾವಡಿಗೆ ಬಂದು ಕುಳಿತುಕೊಳ್ಳುವಂತೆ ಮಾಡಿತ್ತು. ಜೊತೆಗೆ ಎರಡು ದಿನಗಳ ಸಂವಾದ ಸರಣಿ ಸಹೃದಯರನ್ನು ಕಲೆಗೆ ಇನ್ನಷ್ಟು ಸಮೀಪಕ್ಕೆ ತಂದಿತ್ತು. ಧನ್ಯತೆಯ ಕ್ಷಣಗಳವು.
ಆದರೆ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುವ ಹೊತ್ತಿಗೆ ಪೋನ್ ಕಾಲ್, ಇ-ಮೇಲ್ ಗಳಲ್ಲಿ ಆತ್ಮೀಯ ಸ್ನೇಹಿತರ ಪ್ರೀತಿ ತುಂಬಿದ ಆಕ್ರೋಶ, ನಲುಮೆಯ ಹಾರೈಕೆ.. 'ನಮಗ್ಯಾಕೆ ಹೇಳಲಿಲ್ಲ ! ಮೊದಲೇ ಹೇಳೋಕೆ ಏನಾಗಿತ್ತು? ಬರೋದಿಲ್ಲಾ ಅಂತಿದ್ವಾ?'
ಕಣ್ಣಿಂದ ಇಣುಕಿದ್ದವು ಹನಿಗಳು !!!

---------------

Monday, February 16, 2009


ಹೀಗೊಂದು ಅವಸರದ ಆಮಂತ್ರಣ...
ಎರಡನೇ ವರ್ಷ ಪೂರೈಸಿದ ವಾರ್ಷಿಕ ಸಂಭ್ರಮ...ಮೂರೂ ವರ್ಷದ ಕಿಶೋರಿ ನಮ್ಮ ಪೋರಿ ..ನೂಪುರ ಭ್ರಮರಿ..

Monday, January 12, 2009

ನೂಪುರ ಭ್ರಮರಿ ಎಂದರೆ...
...ಎಂತಹ ಹೆಸರಿಟ್ಟರೆ ಒಳಿತು ಎಂಬ ಚರ್ಚೆ ಬಂದಾಗ ಹಲವು ವಿಚಾರಗಳು ಹೊಳೆಯಿತು...... ಮಂದಿರ, ನಾಟ್ಯ..., ನೃತ್ಯ..., ಹೆಜ್ಜೆ, ಗೆಜ್ಜೆ, ಕಿಂಕಿಣಿ, ಧೀಂಗಿಣ, ಚಿದಂಬರ... ಹೀಗೆ ಹಲ-ಕೆಲವು ಹೆಸರುಗಳು ಸಂಯೋಗಗೊಂಡವು. ಹೀಗೆ ಪತ್ರಿಕೆಗೆ ಹೆಸರಿಡುವ ಪ್ರಕ್ರಿಯೆಗೇ ೪ ತಿಂಗಳು ತೆಗೆದುಕೊಂಡಿದ್ದು ಸುಳ್ಳಲ್ಲ ! ಏಕೆಂದರೆ ಯಾವುದೇ ಸೀಮಿತವರ್ಗದ ಕಲ್ಪನೆಯನ್ನು ಕಟ್ಟಿಕೊಡುವ ಅಂಕಿತ ಪತ್ರಿಕೆಯದ್ದಾಗಿರಬಾರದು; ಜೊತೆಗೆ ನೃತ್ಯ ಲೋಕಕ್ಕೊಂದು ಪರಿಭ್ರಮಣವೇ ಅದಾಗಿರಬೇಕು. ಹಾಗಾಗಿ ನೃತ್ಯ - ನಾಟ್ಯ ಎಂಬ ಹೆಸರಿನ ಕ್ಲೀಷೆಗಳನ್ನು ಬದಿಗಿಟ್ಟು ’ನೂಪುರ ಭ್ರಮರಿ’ ಎಂಬ ಹೆಸರನ್ನು ಆಯ್ದುಕೊಳ್ಳಲಾಯಿತು.
ನೂಪುರ ಎಂದರೆ ಎಲ್ಲರಿಗೂ ತಿಳಿದಂತೆ ಗೆಜ್ಜೆ ಎಂಬ ಅರ್ಥವಿದೆ. ಆದರೆ ನೂಪುರ ಎಂಬುದೊಂದು ಕರಣವೂ ಹೌದು. ನಾಟ್ಯಶಾಸ್ತ್ರದ ಪ್ರಕಾರ ೩೨ ಚಾರಿಗಳ ಪೈಕಿ ನೂಪುರಪಾದವೆಂಬುದು ಆಕಾಶ ಚಾರಿಯ ಒಂದು ಬಗೆಯೂ ಹೌದು. ನೂಪುರ ಭ್ರಮರಿ ಎಂದರೆನೇ ಒಂದು ದೇಶೀಕರಣ.
ನಂದಿಕೇಶ್ವರನ
ಅಭಿನಯದರ್ಪಣದ ಪ್ರಕಾರ ’ಭ್ರಮರಿ’ ಎಂದರೆ ನೃತ್ಯದ ವೇಳೆ ಬಳಸುವ ವಿವಿಧ ಪಾದಕ್ಕೆ ಸಂಬಂಧಪಟ್ಟ ಚಲನೆಗಳ ಸಮೂಹ ಅಂದರೆ ಪಾದ ಭೇದಗಳಲ್ಲಿ ಒಂದು ಬಗೆ. ಅದು ಆಕಾಶಕೀಚಾರೀಯೂ ಹೌದು....; ಭ್ರಮರಿ ಎಂಬುದರ ಅರ್ಥ ಗೋಳಾಕಾರವಾಗಿ ತಿರುಗುವುದು. ಈ ತಿರುಗುವಿಕೆ ಕೇವಲ ನೃತ್ಯದ ಪರಿಭಾಷೆಯಾಗಿ ಮಾತ್ರವಲ್ಲ, ನರ್ತನ ಜಗತ್ತಿನ ವೈಶಾಲ್ಯತೆಯನ್ನು ಪುಟ್ಟ ಬೊಗಸೆಯಲ್ಲಿ ತುಂಬಿಕೊಳ್ಳುವ ಪ್ರಯತ್ನದ ಪರಿಭ್ರಮಣವೂ ಆಗಬೇಕು ಅನ್ನುವುದು ನಮ್ಮ ಕನಸು.
ನಾಟ್ಯಶಾಸ್ತ್ರದಲ್ಲಿ ಹೇಳಲಾದ ಭ್ರಮರಿ ಎಂಬ ಆಕಾಶಕೀ ಚಾರಿಯಲ್ಲಿ ೭ ಬಗೆಗಳಿವೆ. ಅವು ಉತ್‌ಪ್ಲುತ ಭ್ರಮರಿ, ಚಕ್ರಭ್ರಮರಿ, ಗರುಡಭ್ರಮರಿ, ಏಕಪಾದ ಭ್ರಮರಿ, ಕುಂಚಿತ ಭ್ರಮರಿ, ಆಕಾಶ ಭ್ರಮರಿ, ಮತ್ತು ರಂಗ ಭ್ರಮರಿ ನರ್ತನ ಮಾಡುವಾಗ ಈ ವಿಧವಿಧವಾದ ಅಂದರೆ ಭೂಮಿಯ ಮೇಲೆ ಕಾಲನ್ನಿಟ್ಟು ತಿರುಗುವುದು, ಕಾಲನ್ನೆತ್ತಿ ತಿರುಗುವುದು, ಕಾಲುಗಳನ್ನು ಬಗ್ಗಿಸಿ ತಿರುಗುವುದು, ಕುಳಿತು ತಿರುಗುವುದು- ಮುಂತಾದ ಭ್ರಮರಿಗಳನ್ನು ಉಪಯೋಗಿಸುತ್ತೇವೆ. ನೇರ ಮತ್ತು ಅಕ್ಕಪಕ್ಕದಲ್ಲಷ್ಟೇ ಅಲ್ಲದೆ ನಮ್ಮ ಸುತ್ತಮುತ್ತಲಿನ ಅಷ್ಟೂ ವಸ್ತು ವಿಷಯಗಳ ಅವಲೋಕನ ಭ್ರಮರಿಯಿಂದಷ್ಟೇ ಸಾಧ್ಯ.
ನೂಪುರ ಎಂದರೆ ಎಲ್ಲರಿಗೂ ತಿಳಿದಂತೆ ಗೆಜ್ಜೆ ಎಂಬ ಅರ್ಥವಿದೆ. ಆದರೆ ನೂಪುರ ಎಂಬುದೊಂದು ಕರಣವೂ ಹೌದು. ನಾಟ್ಯಶಾಸ್ತ್ರದ ಪ್ರಕಾರ ೩೨ ಚಾರಿಗಳ ಪೈಕಿ ನೂಪುರಪಾದವೆಂಬುದು ಆಕಾಶ ಚಾರಿಯ ಒಂದು ಬಗೆಯೂ ಹೌದು. ನೂಪುರ ಭ್ರಮರಿ ಎಂದರೆನೇ ಒಂದು ದೇಶೀಕರಣ.
ಭ್ರಮರಿಯ ಹತ್ತಿರದ ಪದ ಭ್ರಮರ. ಭ್ರಮರ ಎಂಬುದರ ಬಗ್ಗೆ ನೃತ್ಯ ಕ್ಷೇತ್ರದಲ್ಲಿ ಹಲವು ವಿಶ್ಲೇಷಣೆಗವೆ. ಭ್ರಮರ ಎಂದರೆ ದುಂಬಿ. ಭ್ರಮಣ ಎಂಬುದು ತಾರಾಕ್ರಮ, ಭ್ರಮರಕ ಎಂಬುದೊಂದು ಕರಣ. ಜೊತೆಗೆ ಅಸಂಯುತ ಹಸ್ತಗಳಲ್ಲಿ ’ಭ್ರಮರ’ ಎಂಬ ಹಸ್ತಜಾತಿಯಿದೆ. ಮಧ್ಯಮ ಮತ್ತು ಹೆಬ್ಬೆರಳು ತುದಿಯನ್ನು ಕೂಡಿಸಿ ತೋರುಬೆರಳನ್ನು ಅದರ ಮಧ್ಯಕ್ಕೆ ಬಾಗಿಸಬೇಕು ನಂತರ ಉಳಿದ ಉಂಗುರ ಮತ್ತು ಕಿರುಬೆರಳನ್ನು ವಿಂಗಡಿಸಿ ಚಾಚಿ ಹಿಡಿದರೆ ಭ್ರಮರ ಹಸ್ತವಾಗುತ್ತದೆ. ಈ ಭ್ರಮರಹಸ್ತ ದುಂಬಿ, ಗಿಣಿ, ಕೋಗಿಣಿ, ಕಮಲ, ಮುಂತಾದ ಉದ್ದನೆಯ ತೊಟ್ಟುಗಳುಳ್ಳ ಹೂಗಳನ್ನು ಕೊಯ್ಯುವುದು, ವಿಷಯಗಳನ್ನು ತೋರಿಸಲು ಬಳಸಲಾಗುತ್ತದೆ. ಇನ್ನುಳಿದಂತೆ ಭ್ರಮರಿ, ಭ್ರಮರಣ ಮುಂತಾದ ಶಬ್ದಗಳು ನಾಟ್ಯಶಾಸ್ತ್ರದ, ನರ್ತನ ಜಗತ್ತಿನ ಉದ್ದಕ್ಕೂ ಕಂಡುಬರುತ್ತವೆ.
ಹಾದಿ...ಹೆಜ್ಜೆಗುರುತು...

ಸುಮಾರು ಐದು ವರ್ಷಗಳಿಂದ ಪತ್ರಿಕೋದ್ಯಮದ ವಿದ್ಯಾರ್ಥಿನಿಯಾಗಿ, ಪ್ರಸ್ತುತ ಉಪನ್ಯಾಸಕಿಯಾಗಿ ಪತ್ರಿಕಾ ರಂಗದೊಂದಿಗಿನ ಒಡನಾಟ ಹಾಗೂ ಸುಮಾರು ೧೮ ವರ್ಷಗಳಿಂದ ಭರತನಾಟ್ಯ ವಿದ್ಯಾರ್ಥಿನಿಯಾದ ನನಗೆ ಪ್ರತೀಸಲ ಬರೆಯಬೇಕಾದಾಗಲೂ ಕಾಣುತ್ತಿದ್ದದ್ದು ನೃತ್ಯಕ್ಕೆ ಸಂಬಂಧಿಸಿದಂತೆ ಭಾವನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತವಾದ ವೇದಿಕೆಯ ಕೊರತೆ; ಜೊತೆಗೆ ಇತರ ಪತ್ರಿಕೆಗಳಲ್ಲೂ ನೃತ್ಯಮಾಧ್ಯಮದ ಕುರಿತಂತೆ ಸಂವಾದ, ಚರ್ಚೆಗಳು, ವಸ್ತುನಿಷ್ಟ ವಿಮರ್ಶೆಗಳು ವಿರಳವಾಗುತ್ತಿದ್ದದ್ದು. ನೃತ್ಯಕ್ಕೆ, ಅದರಲ್ಲೂ ಭರತನಾಟ್ಯಕ್ಕೆ ಸಂಬಂಧಿಸಿದಂತೆ ಕೆಲವು ಪತ್ರಿಕೆಗಳು ಇವೆಯಾದರೂ ಸಾಮಾನ್ಯ ಜನಜೀವನಕ್ಕೆ ತಲುಪುವ ಸಾಧ್ಯತೆ ಇತ್ತೀಚೆಗೆ ಬಹಳ ಕಡಿಮೆಯಾಗುತ್ತ ಹೋಗಿದೆ. ಜೊತೆಗೆ ನೃತ್ಯದ ಕೇವಲ ಶಾಸ್ತ್ರೀಯತೆಯನ್ನಷ್ಟೇ ಅವಲೋಕಿಸದೇ, ಅದರ ಪ್ರಸ್ತುತ ನೆಲೆಗಟ್ಟು, ಸ್ಥಿತಿಗತಿ, ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿಕ್ಕೆ ಪತ್ರಿಕೆ ಬೇಕೆನ್ನಿಸಿದ್ದು ಹೌದು. ಪತ್ರಿಕೋದ್ಯಮದ ವಿದ್ಯಾರ್ಥಿನಿಯಾಗಿ ಕೇವಲ ಸಾಮಾಜಿಕ-ಸಾಮುದಾಯಿಕ ವಿಷಯಗಳಷ್ಟಕ್ಕೇ ಬೆಳಕು ಚೆಲ್ಲದೆ, ಸಾಂಸ್ಕೃತಿಕವಾಗಿಯೂ ಗಟ್ಟಿಗೊಳ್ಳುವಲ್ಲಿ ಮತ್ತು ವಿರಳವಾಗುತ್ತಿರುವ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೊಂದು ಸಣ್ಣಮಟ್ಟಿನ ಉಡುಗೊರೆ ನೀಡುವಲ್ಲಿ ಕರ್ತವ್ಯವಿದೆ ಎಂದೆನಿಸಿತು. ಹಾಗಾಗಿ ಪತ್ರಿಕೋದ್ಯಮದ ಆಶಯಗಳನ್ನು ಜೊತೆಗಿಟ್ಟುಕೊಂಡು, ಸಾಂಸ್ಕೃತಿಕ ಅಡಿಪಾಯದಲ್ಲಿ ನೃತ್ಯದ ವಿವಿಧ ಆಯಾಮಗಳತ್ತ ಬೆಳಕು ಚೆಲ್ಲುವ ಪುಟ್ಟ ಪ್ರಯತ್ನ ಎಂಬ ನಂಬುಗೆಯಲ್ಲಿ ಅರಳುತ್ತಿದೆ ಎರಡು ವರ್ಷದ ಕಿಶೋರಿ ನೂಪುರಭ್ರಮರಿ’.
ಪತ್ರಿಕೆ ಹುಟ್ಟುಹಾಕುವುದೇನೋ ಸುಲಭ. ಆದರೆ ಅದರ ಸಮರ್ಥ ರೂಪಿಸುವಿಕೆ, ಬೆಳೆಸುವಿಕೆ ಕಷ್ಟಸಾಧ್ಯ. ಹಲವಾರು ಸವಾಲುಗಳನ್ನು ಬೇಡುವ ರಂಗವಿದು. ಸಾಂಸ್ಕೃತಿಕ ರಂಗದ ಬಗ್ಗೆ ಅದರಲ್ಲೂ ನೃತ್ಯದ ಕುರಿತಾಗಿ ಸೀಮಿತ ಅಭಿಪ್ರಾಯಗಳು, ಸೀಮಿತ ಓದುಗರು, ಓದುವ ಮತ್ತು ಬರೆಯುವ ನಿಟ್ಟಿನಲ್ಲೂ ಸೀಮಿತ ಸಾಧ್ಯತೆಗಳಿವೆ. ಆದರೆ ಪತ್ರಿಕೆಯನ್ನು ಕೇವಲ ನೃತ್ಯ-ನಾಟ್ಯರಂಗದ ಕಲಾವಿದರಿಗೆ, ಗುರುಗಳಿಗೆ ಸೀಮಿತವಾಗಿರಿಸದೆ ಸಾಮಾನ್ಯ ವೀಕ್ಷಕ, ಓದುಗರಿಗೂ ಮುಟ್ಟಬೇಕು, ಸದಭಿರುಚಿಯ ಎಲ್ಲರಿಗೂ ತಲುಪುವಂತಾಗಬೇಕು ಎಂಬ ಆಶಯ ನಮ್ಮದು. ನೃತ್ಯದ ಕುರಿತಾಗಿ ಚಿಂತನೆಗಳು ಎಲ್ಲಾ ಕಡೆಯಿಂದಲೂ ಹರಿದು ಬಂದು ನೃತ್ಯದ ಆಯಾಮಗಳತ್ತ ಜಾಗೃತಿ, ಅರಿವು ಮೂಡಬೇಕೆಂಬ ಹಂಬಲ ನಮ್ಮದು . ‘ಸೀಮಿತ ವರ್ಗಕ್ಕೆ ಮಾತ್ರ’ ಎಂಬ ಅಪವಾದವನ್ನು ಬದಿಗಿರಿಸಿ ನರ್ತನ ಜಗತ್ತಿನ ಹಲವು ಒಳತೋಟಿಗಳನ್ನು ಅರ್ಥವಾಗುವಂತೆ ವಿವರಿಸುವ ಪ್ರಯತ್ನ ಜೊತೆಗಿನದು. ಪ್ರಾಂತೀಯ ಪ್ರಾಮುಖ್ಯತೆಯನ್ನು ಗಮನದಲ್ಲಿರಿಸಿಕೊಂಡು ಭರತನಾಟ್ಯಕ್ಕೆ ಹೆಚ್ಚಿನ ಅವಕಾಶ ಕೊಡುವ ಉದ್ದೇಶವಿದೆಯಾದರೂ, ಇತರ ನೃತ್ಯಪ್ರಕಾರಗಳ ಕುರಿತು ಸಾದ್ಯಂತವಾಗಿ ವಿಚಾರ ವಿಮರ್ಶೆಗಳನ್ನು ಹಂಚಿಕೊಳ್ಳುವ ಕನಸಿನಲಿ ಆರಂಭಗೊಂಡರೂ ಈಗ ಅಸಾಧ್ಯ ಸಾಧ್ಯತೆಗಳನ್ನು ಬಗಲಿಗಿರಿಸಿಕೊಂಡು ಮುನ್ನಡೆಯುತ್ತಿದೆ. ತಾವೆಲ್ಲರೂ ’ನೂಪುರ ಭ್ರಮರಿಯ ಜೊತೆಗಿರುತ್ತೀರಿ ಎಂಬ ನಂಬಿಕೆಯನ್ನು ಬಗಲಿಗಿಟ್ಟು ಮುನ್ನಡೆಯುತ್ತೇವೆ...
ನೂಪುರ ಭ್ರಮರಿಯ ಪ್ರಥಮ ಸಂಚಿಕೆ ಅನಾವರಣಗೊಂಡದ್ದು ಮಡಿಕೇರಿಯಲ್ಲಿ ಶಿವರಾತ್ರಿ ಅಂಗವಾಗಿ ನೃತ್ಯ ಮಂಟಪ ಟ್ರಸ್ಟ್ ಆಯೋಜಿಸಿದ ನಟರಾಜೋತ್ಸವದಲ್ಲಿ. ಅತಿಥಿಗಳಾಗಿ ಆಗಮಿಸಿದ್ದ ’ಶಕ್ತಿ’ ದೈನಿಕದ ಸಹ ಸಂಪಾದಕ ಶ್ರೀಯುತ ಬಿ. ಜಿ. ಅನಂತಶಯನ, ಆಯುರ್ವೇದ ವೈದ್ಯ, ಸಾಹಿತಿ ನಡಿಬೈಲು ಉದಯಶಂಕರ, ಹಾಗೂ ಶ್ರೀಮತಿ ರೂಪಾ ಶ್ರೀಕೃಷ್ಣ ಉಪಾಧ್ಯ ಅವರು ಪತ್ರಿಕೆಯನ್ನು ಮೊದಲು ತೆರೆದಿಟ್ಟವರು. ನಚಿತರ ೧೦ ಫೆಬ್ರವರಿ ೨೦೦೮ರಂದು ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ನೆರೆದ ಸಮಸ್ತ್ರ ಮುಂದೆ ವೆಬ್ಸೈಟ್ ಉದ್ಘಾಟನೆ, ವಿಶೇಷ ಸಂZಕೆ ಅನಾವರಣ, ತಾಳಮದ್ದಲೆ ಕಾರ್ಯಕ್ರಮ, ಇತಿಹಾಸ ಪುಸ್ತಕದ ಅನಾವರಣಗಳು ನಡೆದವು. ಸಾಹಿತಿ ಕೆ.ಪಿ. ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಯಕ್ಷಗಾನ ಕಲಾವಿದ, ವಿಮರ್ಶಕ ಸರ್ಪಂಗಳ ಈಶ್ವರ ಭಟ್, ವಿದ್ಯಾಭವನದ ಉಪಾಧ್ಯಕ್ಷ ಕೆ.ಎಸ್. ದೇವಯ್ಯ, ಉಜಿರೆ ಎಸ್ ಡಿ‌ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ ಹೆಗಡೆ ಅವರ ಘನ ಉಪಸ್ಥಿತಿಯಲ್ಲಿ ಜರುಗಿತು. ಹೀಗೆ ಶುಭ ಸಂದರ್ಭದಲ್ಲಿ ಶುಭಾಂಸನೆ ಪಡೆದುಕೊಂಡ ನೂಪುರ ಭ್ರಮರಿಯ ಯಾತ್ರೆ ನಿರಂತರವಾಗಿ ನಡೆಯಬೇಕೆಂಬುದು ನಮ್ಮೆಲ್ಲರ ಕನಸು. ಈಗಾಗಲೇ ನೃತ್ಯ ಜಗತ್ತಿನ ಹಲವು ವಿಮರ್ಶಕರು, ಖ್ಯಾತ ಕಲಾವಿದರು, ಗುರುಹಿರಿಯರು, ಓದುಗರಿಂದ ಮನ್ನಣೆ ಪಡೆದುಕೊಂಡಿದೆ.
ಇಂತಹ ಪುಟ್ಟ ವಿಷಯಗಳನ್ನು ತಮ್ಮಲ್ಲಿ ಅರಿಕೆ ಮಾಡಿಕೊಂಡರಷ್ಟೇ ಓದುಗ ಸಹೃದಯರು ಅರ್ಥ ಮಾಡಿಕೊಂಡಾರು ಎನ್ನುವ ಧಾರ್ಷ್ಟ್ಯ ನಮ್ಮದಲ್ಲ. ಬದಲಾಗಿ ಪತ್ರಿಕೆಯ ಇತಿಮಿತಿಗಳನ್ನು ತಿಳಿಸುವುದು ಕರ್ತವ್ಯವೆಂಬುದು ನಮ್ಮ ಭಾವನೆ. ನಿಮ್ಮ ಹೃದಯ ಶ್ರೀಮಂತಿಕೆಯ ಮುಂದೆ ನಮ್ಮ ಪ್ರಯತ್ನಗಳು ಫಲ ಕೊಡಬೇಕೆನ್ನಿಸುವುದಷ್ಟೇ ನಮ್ಮ ಆಶಯ. ಪತ್ರಿಕೆಯ ನಿರೂಪಣೆಯ ಹಿಂದೆ ನಮ್ಮಷ್ಟೇ ಜವಾಬ್ದಾರಿ ಓದುಗರಿಗೂ ಇದೆ. ಸಾಂಸ್ಕೃತಿಕ ಪತ್ರಿಕೆಗಳ ಸಾಲಿನಲ್ಲಿ ‘ನೂಪುರ ಭ್ರಮರಿ’ ಮೈಲಿಗಲ್ಲಾದರೆ ಅದರ ಯಶಸ್ಸು ಓದುಗರಿಗೇ ಸೇರಬೇಕಾದದ್ದು.
ಪುಟಾಣಿ ಪತ್ರಿಕೆಯಾದರೂ, ಇದು ಮೌಲ್ಯಯುತವಾದುದನ್ನಷ್ಟೇ ಹಂಚಿಕೊಳ್ಳುತ್ತದೆ ಎಂಬ ಆಶ್ವಾಸನೆ ನಮ್ಮದು. ಜೊತೆಗೆ ಇದರ ಹಿಂದೆ ಯಾವುದೇ ಲಾಭದ ಉದ್ದೇಶವೂ ಇದರ ಹಿಂದಿಲ್ಲ ಕೂಡಾ ! ಹಾಗೆ ನೋಡಿದರೆ, ಒಂದು ಸಂಚಿಕೆಗೆ ಏನಿಲ್ಲವೆಂದರೂ ಮೂರುಸಾವಿರದಿಂದ ಐದು ಸಾವಿರ ಖರ್ಚು ತಗಲುತ್ತದೆ. ಈ ವರೆಗೆ ಸಹ್ಲದಯರ ಸಹಕಾರ ಮತ್ತು ಬಳಗದವರ ಪ್ರೋತ್ಸಾಹಗಳಿಂದ ಸ್ವಲ್ಪ ವೆಚ್ಚವನ್ನು ಭರಿಸಿದೆ. ಹಾಗೆ ನೋಡಿದರೆ ಈ ಎರಡು ವರ್ಷಗಳ ಪರ್ಯಂತ ಓದುಗರು ಹೆಚ್ಚಿ ಉತ್ತಮ ಮನ್ನಣೆ ಸಿಕಿದ್ದು ಬಿಟ್ಟರೆ ಆರ್ಥಿಕವಾಗಿ ಸುಮಾರು ೩೫,೦೦೦ ರೂ. ಗಳಿಗಿಂತಲೂ ಹೆಚ್ಚು ನಷ್ಟವೇ ಆಗಿದೆ. ಆದರೆ ಕಲಾಸೇವೆಯ ಹಿನ್ನಲೆಯಲ್ಲಿ, ಆಸಕ್ತಿಯಲ್ಲಿ ಅದು ದೊಡ್ಡ ವಿಷಯವಾಗಿ ಕಂಡಿಲ್ಲ.ಏನಿದ್ದರು, ನಮ್ಮನ್ನು ನಾವು ಕಂಡುಕೊಳ್ಳುವ, ಅರಿಯುವ, ಅರ್ಥೈಸುವ, ಅರಿವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮುಕ್ತವೇದಿಕೆ ರೂಪುಗೊಳ್ಳಬೇಕೆಂಬ ಸಣ್ಣ ಮಟ್ಟಿನ ಸ್ವಾರ್ಥ.
ಪತ್ರಿಕೋದ್ಯಮ ಎನ್ನುವ ಕೃಷಿಯಲ್ಲಿ ನೂಪುರ ಭ್ರಮರಿ ಇನ್ನೂ ಚಿಗುರೊಡೆಯುವ ಸಸಿ. ಅದನ್ನು ಭವಿಷ್ಯದ ಹೆಮ್ಮರವಾಗಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು. ನೃತ್ಯದ ಕುರಿತಾಗಿ ಬರುವ ಕ್ಲೀಷೆಯೆನಿಸಿಕೊಂಡ ಮಾಮೂಲಿ ವಿಮರ್ಶೆಗಳ ಸಾಧ್ಯತೆಯನ್ನು ಆದಷ್ಟೂ ಕಡಿಮೆ ಮಾಡುವುದು ಪತ್ರಿಕೆಯ ಆಶಯಗಳಲ್ಲೊಂದು. ಹಾಗಂತ ಆವರಣವಿಲ್ಲವೆಂದಲ್ಲ. ಆವರಣವಿಲ್ಲದ ಕೃಷಿ ಕಾಡಾಗಿ, ಮುಳ್ಳು ಕಂಟಿಗಳ ಸ್ಥಾನವಾಗಿ ಹೋಗುತ್ತದೆ. ಆದರೆ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ಪರಿಪಾಠ ಮುಂದುವರಿಯದಂತೆ ನೋಡಿಕೊಳ್ಳಬೇಕೆಂಬ ಆಸೆಯಿದೆ.
ಭ್ರಮರಿಯ ಸೃಜನಶೀಲತೆಯನ್ನು ಕೆಲವರು ತಮ್ಮದೇ ಸ್ವಂತ ಎಂಬ ರೀತಿಯಲ್ಲಿ ಬಳಸಿಕೊಳ್ಳುವುದನ್ನು ನಾವು ಗಮನಿಸಿದ್ದೇವೆ! ಇದು ಕೇವಲ ಅವರು ಉಳಿಸಿಕೊಳ್ಳಬೇಕಾದ ನಂಬಿಕೆಯ ಪ್ರಶ್ನೆಯಷ್ಟೇ ಅಲ್ಲ, ಬದಲಾಗಿ ಅವರಿಗಿರಬೇಕಾದ ಮನಃಸ್ಸಾಕ್ಷಿಯ ಪ್ರಶ್ನೆಯೂ ಕೂಡಾ! ಒಂದು ವೇಳೆ ಅಂತಹ ಸೃಜನಶೀಲತೆಯನ್ನು ಬಳಸಿಕೊಳ್ಳುವುದೇ ಆದಲ್ಲಿ, ಸೌಜನ್ಯದ ಸಂಭೋಧನೆಗಳಿರಬೇಕಾದದ್ದು ಒಳ್ಳೆಯದು ತಾನೇ?
ಇಂದಿನ ದಿನಗಳಲ್ಲಿ ಪತ್ರಿಕೆಯೊಂದನ್ನು, ಅದೂ ಯಾವುದೇ ಜಾಹೀರಾತಿನ ನೆರವಿಲ್ಲದ, ಭಾರೀ ಆರ್ಥಿಕ ಹಿನ್ನಲೆಯೂ ಇಲ್ಲದ ಪತ್ರಿಕೆಯೊಂದನ್ನು ಮುನ್ನಡೆಸುವುದು ಎಷ್ಟು ಕಷ್ಟ ಅನ್ನುವುದು ನಿಮಗೆ ತಿಳಿದಿದೆ. ಅದರಲ್ಲೂ ಯಾವುದೇ ಲಾಭದ ದೃಷ್ಠಿಯಿಲ್ಲದೆ ಸಮಷ್ಠಿಯ ಒಳಿತಿಗಾಗಿ, ಕಲೆಗೆ ಪುಟ್ಟ ಕಾಣಿಕೆ ನೀಡುವಲ್ಲಿ ಪತ್ರಿಕೆಯೊಂದು ರೂಪುಗೊಳ್ಳುತ್ತಿದೆ ಎಂದಾದಲ್ಲಿ ಅದರ ಹಿಂದಿನ ಸವಾಲುಗಳು ನಿಮಗರಿವಿರಬಹುದು. ರೂಪುಗೊಳ್ಳುತ್ತಿರುವುದರಿಂದ ಆದರೂ ಪುಟ್ಟ ಪುಟ್ಟ ಅಡಿಯಿಡುತ್ತಿರುವ ನೂಪುರ ಭ್ರಮರಿಯು ತನ್ನ ಲೇಖನಗಳ ಹಂಚಿಕೆ, ಮುದ್ರಣ, ವಿತರಣೆಗೆ ಬಹಳಷ್ಟು ಸಲ ಸ್ವಾವಲಂಬಿ ನೀತಿಯನ್ನು ಅಂದರೆ ಸ್ವಂತ ಖರ್ಚು-ಉಳಿತಾಯವನ್ನು ಅವಲಂಬಿಸಿದೆ. ಆದರೂ ಕಲಾಸಕ್ತರು ತಾವೇ ಮುಂದೆ ಬಂದು ತಮ್ಮಿಂದಾದಷ್ಟೂ ಸಹಕಾರ, ಪ್ರೋತ್ಸಾಹವನ್ನೀಯುತ್ತೀದ್ದಾರೆ
ಈ ’ಭ್ರಮರಿ’ ನಿಮ್ಮದು, ನಮ್ಮೆಲ್ಲರದು, ಗುರು-ಕಲಾವಿದರನ್ನು ಒಳಗೊಂಡಂತೆ ಸಾಮಾನ್ಯ ಜನರೂ ನೃತ್ಯ ಕ್ಷೇತ್ರದ ಕುರಿತಂತೆ ಸಂವಾದದಲ್ಲಿ ಪಾಲ್ಗೊಳ್ಳಬೇಕು, ನೃತ್ಯವೆಂಬುದು ಸೀಮಿತ ಕ್ಷೇತ್ರವಾಗದೇ ಮುಕ್ತ ಅವಕಾಶ ಅನುಭವಗಳನ್ನು ಕಲ್ಪಿಸಬೇಕು. ನೃತ್ಯದ ಬಗ್ಗೆ ಎಲ್ಲಾ ರೀತಿಯ ಪರ-ವಿರೋಧವನ್ನು ಒಳಗೊಂಡಂತೆ ಅಭಿಪ್ರಾಯಗಳು ಹರಿದು ಬರಬೇಕು, ಗುಣಾತ್ಮಕ ಚಿಂತನೆಗೆ ಅವಕಾಶಬೇಕು, ಬರಿಯ ಶಾಸ್ತ್ರೀಯ, ಪಾರಂಪರಿಕ ಜ್ಞಾನವನ್ನಷ್ಟೆ ಮುಂದಿಡುವುದಲ್ಲ, ಬದಲಾಗಿ ಪ್ರಚಲಿತ ಸ್ಥಿತಿಗಳತ್ತಲೂ ದೃಷ್ಟಿ ಹೊರಳಿಸಬೇಕೆಂದು ನಮ್ಮ ನಿಲುವು.ಇದರ ಬೆಳವಣಿಗೆಗೆ ನಿಮ್ಮ ಕೊಡುಗೆ, ಸಹಕಾರ ಅತ್ಯಗತ್ಯ ಮತ್ತು ಅಮೂಲ್ಯ. ಹಾಗಾಗಿ ನಮ್ಮೆಲ್ಲರ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ನಿಮ್ಮ ಲೇಖನಿಯಿಂದ ವಿಚಾರಗಳು ಹರಿದುಬರಲಿ. ನಮ್ಮೆಲ್ಲರನ್ನೂ ಮಂಥಿಸಲಿ.

Wednesday, December 10, 2008

ಕಳೆದು ಹೊದೇವೆ ನಾವು ?
ಗೆಳತಿ ಶ್ರೀನಿಧಿ ಒಮ್ಮೆ ಹೇಳಿದ ಮಾತುಗಳು ಆಗಾಗ ನೆನಪಾಗುತ್ತವೆ. ’ಯಾವುದೋ ಅನಿಶ್ಚಿತತೆಯತ್ತ ಸಾಗುತ್ತಿದ್ದೇವೆ ಅಂತನ್ಸುತ್ತೆ. ಮೊದಲಿನ ಮಹತ್ವಾಕಾಂಕ್ಷೆ ಈಗಿಲ್ಲ. ಎಷ್ಟು ಹೆಸರು ಬಂದ್ರೇನು, ನೆಮ್ಮದಿ ಸಿಗುತ್ತೆ ಅನ್ನೋ ನಂಬಿಕೆಯಿಲ್ಲ. ಬೇರೆ ದಾರಿನಾದ್ರೂ ಹಿಡಿಯೋಣ ಅಂದ್ರೆ ಜಾಬ್ ಸ್ಯಾಟಿಸ್ಫ್ಯಾಕ್ಷನ್ ಸಿಗುತ್ತೆ ಅನ್ನೋ ಗ್ಯಾರಂಟಿಯಿಲ್ಲ. ಮೊದಲು ಯಾವೆಲ್ಲಾ ಕಲ್ಪನೆಯಿಟ್ಟು ಉತ್ಸಾಹದಿಂದ ಬಂದಿದ್ದೆವೋ ಅದೆಲ್ಲಾ ಇಳಿದುಹೋಗಿದೆ. ಕ್ರಿಯೇಟಿವ್..! ಹಾಗಂದ್ರೆ ? ಎಲ್ಲಾ ಅಟ್ಟ ಹತ್ತಿ ಕೂತಿದೆ. ಎಲ್ಲಿ ದಿನದಿಂದ ದಿನಕ್ಕೆ ವರ್ಕೊಲಿಕ್ ಆಗ್ತೀವೋ ಅಂತ ಭಯ ಕಾಡ್ತಿದೆ !’
ನಿರಾಸೆಯೋ..., ಬೇಸರವೋ.., ಅರಗಿಸಿಕೊಳ್ಳಲಾರದೇ ಹೋದ ವಾಸ್ತವವೋ ! ಗೊತ್ತಿಲ್ಲ. ಒಟ್ಟಿನಲ್ಲಿ ದಿನವೂ ಮತ್ತೆ ಮಿಂದೆದ್ದು ಮತ್ತೆ ಮುಳುಗುತ್ತಿರುವ, ಕಳೆದ ೭ ವರ್ಷಗಳಿಂದ ನಮ್ಮ ಒಡನಾಡಿಯಾದ ’ಪತ್ರಿಕೋದ್ಯಮ’ ಎನ್ನುವ ನಾಗಾಲೋಟದ ಕುದುರೆಯೆಡೆಗೆ ಆಡಿದ ಈ ಮಾತುಗಳು ಬಹುಷಃ ಇಂದು ಒಬ್ಬಿಬ್ಬರ ಅನುಭವವಾಗಿ ಉಳಿದಿಲ್ಲ. ಸಮೂಹ ಮಾಧ್ಯಮ, ಪತ್ರಿಕೋದ್ಯಮದ ಬಗ್ಗೆ ಅಪಾರ ನಿರೀಕ್ಷೆ, ಕನಸು, ಗುರಿಗಳ ಸಾಧ್ಯತೆಗಳೆಡೆಗೆ ನಂಬಿಕೆಯಿಟ್ಟು ಬಂದ ನಮ್ಮಂತವರು ದಿನದಿನವೂ ಮಾಡಿಕೊಳ್ಳುವ ಆತ್ಮ ವಿಮರ್ಶೆ. ಹೀಗೊಂದು ಜಿಜ್ಞಾಸೆ..!
ಎಷ್ಟೋ ಬಾರಿ ಮಾಧ್ಯಮವೆಂಬ ಅತಿರಂಜಿತ ಲೋಕದೆದುರು, ಅದರೊಳಗಿನ ಉದ್ವಿಗ್ನತೆ, ಆತಂಕ, ನಿತ್ಯ ಜಂಜಾಟ, ಸ್ಪರ್ಧೆಯಿಂದಾಗಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮುಲುಗಿ ಹೋಗಿ, ಒಂದರ್ಥದಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳುವ ಈ ಹಂತಕ್ಕೆ ಬಂದರೂ ಅದೆಷ್ಟೋ ಬಾರಿ ನಾವು ಜಾಣ ಕಿವುಡರಾಗುವುದಿದೆ. ಅದು ನಮ್ಮ ದೌರ್ಬಲ್ಯವೋ, ವೃತ್ತಿಯ ಸಹಜತೆಯೋ ಅಥವಾ ನಮ್ಮನ್ನು ನಾವು ಅರ್ಪಿಸಿಕೊಳ್ಳುವ ಭರದಲ್ಲಿ ಕಣ್ಮರೆಯಾಗಿ ಹೋಗುವ ವಿಚಿತ್ರವೋ..,ಒಟ್ಟಿನಲ್ಲಿ ಅನುಭವ ಎಂದೆನ್ನುವ ಕುಲುಮೆಯಲ್ಲಿ ಬೆಂದರೂ ನಾಲಿಗೆಗೆ ಹತ್ತಿದ ಉಪ್ಪಿನಕಾಯಿ ರುಚಿಯನ್ನು ಕಳೆದುಕೊಳ್ಳಲು ಯಾರು ತಾನೇ ಸಿದ್ಧರಿರುತ್ತಾರೆ ?
ಕೆಲವರು ಹೊಟ್ಟೆಯ ಹಿಟ್ಟಿನ ಚೀಟಿಯ ದಾರಿಗಾಗಿ ಬಂದುಳಿದವರಾದರೆ, ಇನ್ನೊಂದಷ್ಟು ಮಂದಿ ಕನಸಿನ ಮೊಂಬತ್ತಿಯೊಳಗೆ ಕರಗಿ ಕಣ್ಕಣ್ಣು ಬಿಟ್ಟವರು. ಬಹಳ ಬೇಗ ಹೆಸರು ತಂದುಕೊಡಬಲ್ಲ ಕ್ಷೇತ್ರಕ್ಕಿಳಿದ ಧನ್ಯತೆ, ಸೆಟ್ಲ್ದ್ ಎಂಬ ಭದ್ರತಾ ಭಾವ ಕಾಲಕ್ರಮೇಣ ಹಗಲಿರುಳು ದುಡಿಯುವ ಒತ್ತಡಕ್ಕೆ ಕೊರಗಿ ಕರಗಿಹೋಗಿ ಬಿಟ್ಟು ಬರಲಾಗದವರು ಮತ್ತೊಂದಷ್ಟು ಜನ. ಭ್ರಮೆಯೊಳಗಣ ಪ್ರಪಂಚಕ್ಕೆ ಒಂದಷ್ಟು ಲಾಬಿ, ಇನ್ನೊಂದಷ್ಟು Hippocraticನೀತಿಗಳು-ಒಂದಷ್ಟು ಕಲ್ಪಿತ ಧೋರಣೆಗಳು.., ಫಲ? ಬಲಿಯಾಗುತ್ತಿರುವ ಪತ್ರಿಕಾಧರ್ಮ, ಪಾರದರ್ಶಕವೆಂದು ಹೇಳಿಕೊಳ್ಳುತ್ತಲೇ ಅದನ್ನು ಸಾಧಿಸಿಕೊಳ್ಳುವಲ್ಲಿ ಸೋಲುತ್ತಿರುವ, ಲಯ ತಪ್ಪುತ್ತಿರುವ ’ಮಾಧ್ಯಮಾಲಯ’ಗಳು ; ಟಿ ಅರ್ ಪಿ ದಾಸ್ಯಕ್ಕೆ ಬಲಿಯಾಗಿ ಕಂಡಕಂಡದ್ದನ್ನೆಲ್ಲಾ ತಿಂದು ಕಕ್ಕುವ ಕೆಟ್ಟ ಹಸಿವು ; ಯಾರದೋ ವೈಯಕ್ತಿಕ ಬದುಕನ್ನು ’ತಮ್ಮದೇ ಇಷ್ಟ, ಎನ್ನುವ ಸ್ವೇಚ್ಛೆ, ದಾರ್ಷ್ಟ್ಯ; ಜನರು ಕೇಳುತ್ತಿದ್ದಾರೆ ಅಂತ ನೆವದಲ್ಲಿ ಮಸ್ಕಾ ಹೊಡೆಯುತ್ತಾ, ಲಂಗುಲಗಾಮಿಲ್ಲದೆ ಹುಚ್ಚು ಕುದುರೆಯಂತಾಡುವ ’ಆದರ್ಶ ಪತ್ರಕರ್ತರು, ಮಾಧ್ಯಮ ಮಿತ್ರರು’, ತಮ್ಮ ಅಭಿಪ್ರಾಯಗಳನ್ನೇ ಜನರದ್ದೆಂದು ಹೇಳಿ ಮೂದಲಿಸಿಯೋ ಅಥವಾ ಸಮರ್ಥಿಸಿಕೊಂಡೋ ದಾರಿ ತಪ್ಪಿಸುವ ದೀವಟಿಗರು ! ; ಇದು ಯಾರ ಸೋಲು , ಯಾರ ಗೆಲುವು? ಮಾಧ್ಯಮದ್ದೇ ? ಎನ್ನುವ ಮಾಧ್ಯಮಮಿತ್ರರದ್ದೇ ?
ಕಲಿತ ಥಿಯರಿಗಳಷ್ಟೇ ಪತ್ರಿಕೋದ್ಯಮ ಅಲ್ಲ ಎಂಬ ಸತ್ಯದಿಂದ ತೊಡಗಿ, ಕಸಿವಿಸಿಯೊಂದಿಗೆ ಆರಂಭಗೊಂಡ ತರ್ಕಗಳು ಇಂದೇಕೋ ಅಸಡ್ಡೆಯಾಗಿ ಬೆಳೆದಿದೆ, ಭ್ರಮನಿರಸನವಾಗಿದೆ. ಆಗೆಲ್ಲಾ ಪ್ರಶ್ನಿಸಿಕೊಳ್ಳುವವಳಿದ್ದೇನೆ., ’ನನ್ನ ಕನಸಿನ ಪತ್ರಕರ್ತೆ ಮೂಲೆ ಪಾಲಾದಳೇ ?’
ಅಷ್ಟಕ್ಕೂ ’ಈ ಕ್ಷೇತ್ರ ಅವಕಾಶಗಳ ಆಗರ, ಜ್ಞಾನದ ಪೀಯೋಶ , ಮೊಗೆದಷ್ಟು ಹರಿವು ಜಾಸ್ತಿ, ಪಡೆದುಕೊಳ್ಳುವ ಜಾಣ್ಮೆ, ಉಳಿಸಿಕೊಳ್ಳುವ ತಾಳ್ಮೆ ಇದ್ದಲ್ಲಿ ಅದು ಬದುಕಿನ ಸಂಜೀವಿನಿ, Sky is as big as your Windowಅಂತೀರಾ?
ತಪ್ಪೇನಿಲ್ಲ ಬಿಡಿ..!

Saturday, November 8, 2008

ಕಥೆ ಕಟ್ಟುವ ಬಗೆ...

'ನಾನು ಕಥೆ ಬರೀಲಿಕ್ಕೆ ಪ್ರಾರಂಭಿಸಿ ಆರೇಳು ವರ್ಷ ಆಯಿತಷ್ಟೆ. ಹೀಗಿರುವಾಗ 'ಕಥೆ ಕಟ್ಟುವುದು ಹೇಗೆ' ಎಂಬ ವಿಷಯದಲ್ಲಿ ಉಪನ್ಯಾಸ ಕೊಡಿ ಅಂತಂದ್ರೆ ಮುಜುಗರ ಅನ್ಸುತ್ತೆ' ಅಂತ ವಸುದೇಂಧ್ರ ವಿನೀತಭಾವದಿಂದಲೇ ಪೀಠಿಕೆ ಹಾಕಿದ್ದರು. ಅದರಲ್ಲೂ ನೂಪುರ ಭ್ರಮರಿಯನ್ನು ಪ್ರಾರಂಭಿಸಿದ ಹೊಸತರಲ್ಲಿ, ಕಳಿಸಿಕೊಟ್ಟ ಮೊದಲ ಸಂಚಿಕೆಯನ್ನು ಪ್ರೀತಿಯಿಂದ ಓದಿ, ಅವರಾಗಿಯೇ ಬರೆದ ಉತ್ಸಾಹದ ಮಾತುಗಳನ್ನು ಮರೆಯಲಿಕ್ಕಾದೀತೇ? ಹಾಗಾಗಿಯೇ ಅವರ ಪತ್ರ ಎಷ್ಟೋ ಪತ್ರಗಳ ಕಳೆದುಹೋಗುವಿಕೆಯ ನಡುವೆಯೂ ಜೋಪಾನವಾಗಿದೆ. ಅಷ್ಟು ಮಾತ್ರವಲ್ಲ, ಕಂಡಷ್ಟು ಬಾರಿಯೂ, ಮೊನ್ನೆ ಮೊನ್ನೆ ಗೆಳೆಯ ರಾಮುವಿನ ಚೈತ್ರರಶ್ಮಿಯ ನಾಲ್ಕನೇ ವಾರ್ಷಿಕ ಸಂಭ್ರಮಕ್ಕೂ ಬಂದಾಗಲೂ ಪ್ರೀತಿಯಿಂದ ಅವರಾಗಿಯೇ ಗುರುತು ಹಿಡಿದು ಮಾತನಾಡಿಸುವ ಸಹೃದಯತೆಗೆ, ಪತ್ರಿಕೆಯ ಬಗೆಗಿರುವ ಅವರ ಪ್ರೀತಿಗೆ.. ನಿಜಕ್ಕೂ ಒಂದು ಕ್ಷಣಕ್ಕೂ ನನಗೆ ಏನೂ ತೋಚುವುದಿಲ್ಲ.
ಹಾಗಾಗಿಯೇ ಒಂದಾನೊಂದು ಕಾಲದಲ್ಲಿ ಅವರೊಂದಿಗಿನ ಕಥೆಗಳ ಕುರಿತಾದ ಒಂದೂವರೆ ಘಂಟೆಗಳ ಸುದೀರ್ಘ ಸಂವಾದದ ಪುಟ್ಟ ಪುಟ್ಟ ನೆನಪುಗಳನ್ನು ಭ್ರಮರಿಯ ಬ್ಲಾಗ್ ಅಂಗಳದಲ್ಲಿ ನಿಮ್ಮೆದುರಿಗಿರುಸುತ್ತಿದ್ದೇನೆ. (ವಿಶೇಷವೆಂದರೆ, ಈ ಮೌನದೊಳಗಡೆ ಅರಳುವ ಕಥೆಗಳ ಬೆರಗಿನ ಪ್ರಸಂಗವು ಮಾತುಗಳ ಚಮತ್ಕಾರದೊಳಗೆ ಎದುರು ಕುಳಿತ ಕ್ಷಣಗಳ, ಸಂವಾದದ ೧೦ ಪುಟಗಳ ಕಥಾನಕದ ವರದಿ ಪ್ರಕಟವಾಗದೇ ಇದ್ದರೂ, ಇದರ ಪ್ರತಿ ಬಹುಷಃ ಒಂದು ನನ್ನ ಬಳಿಯಲ್ಲೂ, 'ಮಂಥನ'ದ ವಾದಿರಾಜರಲ್ಲೂ, ಪ್ರೀತಿಯ ಬರಹಗಾರ ವಸುಧೇಂಧ್ರರ ಬಳಿಯಲ್ಲೂ ಇದೆ. ! ಅದರ ಒಂದು ಮಿಂಚು ಓದುಗರಿಗಾಗಿ ಈ ಅಂಚೆಯಲ್ಲಿದೆ.)

'ಹೇಳಲಾರದ ಕಥೆಗಳೇ ಇಲ್ವೇ !' ಹಳೆಯ ವಸ್ತುಗಳಿಗೆ ಹೊಸ ರೂಪ ಹೊಸ ಬಣ್ಣ, ಹೊಸ ಕಣ್ಣು. ಅದೊಂದು ಬೆರಗಿನ, ಸಂಭ್ರಮದ ಅನುಭವ. ಆದರೆ ಆ ಕ್ಷಣ ಕ್ಷಣಿಕವಾಗಬಾರದಷ್ಟೇ !
ಥೆ ಅವಸರದ ಪ್ರಸವ ಅಲ್ಲ. ಸ್ಪಂದನವಿಲ್ಲದೆ ಕಥೆ ಮಾಡಲು ಹೊರಟರೆ ಆ ಪ್ರಯತ್ನ ನಿರರ್ಥಕ. ಕಥೆಗಿಂತ ಬದುಕು ದೊಡ್ಡದು. ಬದುಕಿನ ಒಂದು ಭಾಗ ಕಥೆಯೇ ಹೊರತು, ಕಥೆಯೇ ಬದುಕಲ್ಲ.
'ಕಣ್ಣು ತೆರೆದು ಬದುಕಬೇಕು. ಕಣ್ಣು ಮುಚ್ಚಿ ಬರೆಯಬೇಕು'. ಏಕೆಂದರೆ ಕಥೆಗೆ ಬೇಕಿರುವುದು, ಅದು ಹುಟ್ಟುವುದು ಮೌನದಲ್ಲಿ..ಅಂತರಂಗದಲ್ಲಿ.. ಕಥೆ ಬರೆಯೋದಕ್ಕೆ 'ಧ್ಯಾನ' ಬೇಕೆ ಬೇಕು. ಅಂದರೆ ಕಥೆಯಲ್ಲೇ ಮಿಂದು ಮುಳುಗುವ ಕಥಾ ಧ್ಯಾನ !
ಥೆ ಬರೀಬೇಕು ಅಂತಿದೀರಾ? ಹಾಗಾದ್ರೆ ಓದೋ ಚಟ ಬೆಳೆಸಿಕೊಳ್ಳಿ. ಕಥೆ ಕೇಳುವ ಅಭ್ಯಾಸವನ್ನೂ ಕೂಡಾ ! ನನಗಂತೂ ಸಾಹಿತ್ಯಕ್ಕಿಂತಲೂ ಸಿನಿಮಾಗಳೇ ಕಥೆಗಳಿಗೆ ಸ್ಫೂರ್ತಿ. ಬೇರೆ-ಬೇರೆ ಭಾಷೆಗಳ ಸಿನಿಮಾದೆಡೆಗಿನ ಹಪಹಪಿಯೇ ನನ್ನನ್ನು ಇನ್ನಷ್ಟು ಕಥೆ ಬರೆಯಲು ಪ್ರೇರೇಪಿಸುತ್ತದೆ. ಜೀವನವನ್ನು ಅನುಭವಿಸೋದು ಕೂಡಾ ಕಥೆ ಹೆಣೆಯುವಲ್ಲಿ ಒಂದು ದಾರಿಯಾಗುತ್ತದೆ.
ಒಂದು ವೇಳೆ ಕಥೆಗೂ, ಕವನಕ್ಕೂ -ಎರಡಕ್ಕೂ ಸರಿಹೊಂದುವ ವಸ್ತು ಸಿಕ್ಕಿದರೆ ಏನು ಮಾಡ್ತೀರಿ ? ಕಾಯ್ಕಿಣಿ ಹೇಳೋ ಹಾಗೆ, 'ಕಾವ್ಯ ಎನ್ನುವುದು ಪ್ರೇಮ. ಕಥೆ ಎನ್ನುವುದು ಮದುವೆ. ಕಾವ್ಯವು ವಧುವಾದರೆ, ಕಥೆ ವರ.' ವಸ್ತು ಮತ್ತು ಓದುಗರ ಆಯ್ಕೆ ನಿಮ್ಮದು.
ನೀವು ಐದು ಸಾವಿರ ಜನರು ಕುಳಿತು ಒಂದು ವರ್ಷ ಓದುವ ಕಥೆ, ಸಾಹಿತ್ಯವನ್ನು ಬರೀತೀರೋ ? ಅಥವಾ, ಐವತ್ತು ಜನರಂತೆ ಒಂದು ಸಾವಿರ ವರ್ಷ ಕೃತಿಯನ್ನು ಬರೀತೀರೋ ?
ಥೆ ಬರೆಯಲು ಪ್ರಾಮಾಣಿಕತೆ ಬೇಕು. ಧೈರ್ಯ ಬೇಕು. atleast ಇಂದಿನ ಮಟ್ಟಿಗಾದ್ರೂ ಕಥೆ ಬರೆಯೋವಾಗ ಪ್ರಾಮಾಣಿಕರಾಗಿರಬೇಕು. ಇಲ್ಲವಾದರೆ ಇಂದಿಗೆ ಚೆಂದ ಕಂಡ ಕಥೆ ನಾಳೆಗೆ ನಂದಿ ಹೋಗುತ್ತದೆ. ಸಾವಿರಾರು ಜನರ ಮನಸ್ಸಿಗೆ ಸುಖ ಕೊಟ್ಟರೂ, ಒಬ್ಬನ ಮನಸ್ಸನ್ನು ಹಿಂಸಿಸಿ ನೋಯಿಸುವುದು ಕಥೆಗಾರನ ಅಪ್ರಾಮಾಣಿಕತೆಯನ್ನು ತೋರಿಸುತ್ತದೆ.
ನಾವು ಪ್ರಭಾವಗಳಿಂದ ತಪ್ಪಿಸಿಕೊಳ್ಳಲಾರೆವು. ಆದರೆ ಅಂತಹ ಪ್ರಭಾವಗಳಲ್ಲೂ ನಮ್ಮದೇ ಶೈಲಿ, ಬಳಸಿಕೊಳ್ಳುವ ಕಲೆ, ಸ್ವಂತಿಕೆ ಇದ್ದರೆ ಎಷ್ಟು ಒಳ್ಳೆಯದು ಅಲ್ಲವೇ ? ಕಥೆಗಾರನು ಪೂರ್ವಾಗ್ರಹ ಬಿಟ್ಟು, ಎಲ್ಲವನ್ನೂ ಒಂದೇ ಚೌಕಟ್ಟಿಗೆ ಸೇರಿಸದೆ ನೋಡಿದಾಗಲೇ, ವಸ್ತುಗಳೆಡೆಗೆ ಪೂರ್ಣವಾಗಿ ತನ್ನನ್ನು ಅರ್ಪಿಸಿಕೊಳ್ಳಲು ಸಾಧ್ಯ. ಹಾಗಾಗಿ ನಿಮ್ಮೊಳಗಿನ, ಹೃದಯಾಂತರಾಳದ ಅಭಿವ್ಯಕ್ತಿ ಅಲ್ಲಿರಲಿ. ಪಾತ್ರ, ಸನ್ನಿವೇಶಗಳೂ ಬೇರೆ ಬೇರೆ ಅನ್ನಿಸಿದರೂ, ಕಥೆಗೆ ಇರುವ ಒಳಧ್ವನಿ ನಮ್ಮದಾಗಿರಲಿ.
ಥೆಗಳಲ್ಲಿ 'ಕಥನ ಕುತೂಹಲ'ವಿರಬೇಕು., ನಿಜ. ಆದರೆ ಕುತೂಹಲದ ಕುದುರೆಯೇರುವ ಪ್ರಸಂಗ ಪ್ರತೀ ಬಾರಿ ಒಳ್ಳೆಯದಲ್ಲ.
'ಕಲ್ಲು ಹೂವಾಗಿ ಅರಳುತ್ತದೆ' ಅನ್ನುವುದಿದ್ದರೆ ಹೂವಾಗಿ ಅರಳುವ ಸೌಂದರ್ಯದ ನಿರೀಕ್ಷೆ ಕಥೆಗಾರನಿಗೆ ಇರಬೇಕೇ ವಿನಃ 'ಅದ್ಹೇಗೆ, ಕಲ್ಲು ಹೂವಾಗಿ ಅರಳಿಯೇ ಬಿಡುತ್ತದೆ? ನೋಡಿಯೇ ಬಿಡೋಣ' ಎನ್ನುವ ವೈಜ್ಞಾನಿಕ, ವೈಚಾರಿಕ ನೆಲೆಗಟ್ಟಲ್ಲ. ಯಾವತ್ತಿಗೂ ವಿಚಾರಗಳು ಕಥೆಗಳಿಗೆ ಪೂರಕವಾಗಿ ಧ್ವನಿಸಬೇಕೇ ಹೊರತು, ಅದನ್ನೇ ಕೇಂದ್ರವಾಗಿಟ್ಟುಕೊಳ್ಳಬಾರದು.

ಮ್ಮ ಕಾಲದ್ದೇ ಆದ ಸಂಗತಿಗಳಿಗೇ ಅವಕಾಶ ನಾವು ಕೊಡದಿದ್ದರೆ ಹ್ಯಾಗೆ ? ಕಥೆ ಮೇಲಿನ ಪ್ರೀತಿ ಭಾಷೆಯನ್ನೇ ಮೀರಿ ನಿಲ್ಲಬೇಕು.
ಇಂದಿನ ಕಾಲದಲ್ಲಿ ಹದಿನೈದು ದಿನ ಪ್ರವಾಸಕ್ಕೆ ಹೊರದೇಶಕ್ಕೆ ಹೋಗಿಬಂದವರೂ ಕೂಡಾ ' ಪ್ರವಾಸ ಕಥನ'ಗಳನ್ನು ಬರೆದು ಪ್ರಕಟಿಸುತ್ತಾರೆ. ಎಲ್ಲೋ ಕೆಲವರು ಮಾತ್ರ ಆಳವಾಗಿ ಶೋಧಿಸಿದ್ದು ಬಿಟ್ಟರೆ, ಉಳಿದೆಲ್ಲವು ಸುಮ್ಮನೆ ನೋಡುವ ಪ್ರಕ್ರಿಯೆ ಅಷ್ಟೇ!
ಪಾತ್ರದ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಕಥೆಗೆ ಮಾಡುವ ಬಹಳ ದೊಡ್ಡ ಅನ್ಯಾಯ ಮತ್ತು ಅವಮಾನ. ಕಥೆಗಾರನಿಗೆ ಚಹಾ ಕುಡಿಯುವ ಅಭ್ಯಾಸವಿಲ್ಲವೆಂದರೆ ಪಾತ್ರಗಳೂ ಚಹಾ ಕುಡಿಯಬಾರದು ಎಂಬ ಕುತರ್ಕ ಯಾಕೆ ? ಕಥೆಯ ಪಾತ್ರದೊಳಗೆ ನಾವು ಹೋಗಿ-ಬಂದು ಬರೆಯಬೇಕೇ ವಿನಃ, ಪಾತ್ರಗಳನ್ನು ನಮ್ಮಲ್ಲಿ ಆಹ್ವಾನಿಸಿ ಬರೆಯುವ ಪ್ರಯತ್ನ ಮಾಡಬಾರದು.
ಮ್ಮ ಸ್ನೇಹಿತರಿಗೇ ನಮ್ಮ ಕಥೆಗಳು ಅರ್ಥವಾಗದೇ ಹೋದಲ್ಲಿ ಏನು ಲಾಭ ? ಕೇವಲ ವಿಮರ್ಶಕರನ್ನು ಮೆಚ್ಚಿಸುವ ಕೆಲಸ ಮಾಡೋಕೆ ಹೊರಟರೆ, ಒಂದಲ್ಲ ಒಂದು ದಿನ ಕಥೆ, ಮನಸ್ಸಿಗೆ ತಟ್ಟದೇ ಬಿದ್ದು ಹೋಗುತ್ತದೆ. ಯಾರೋ ಪಂಡಿತರು ಹೇಳಿದ ಮಾತ್ರಕ್ಕೆ ಕಥೆ ಚೆನ್ನಾಗಿದೆ ಎಂಬ ಆಯ್ಕೆ ನಮ್ಮದಾಗಬಾರದು. ಯಾವುದೇ ಕೃತಿಯನ್ನಾಗಲೀ ಸ್ವೀಕರಿಸುವ ಮುಕ್ತ ಮನೋಭಾವ, ಜೊತೆಗೊಂದಿಷ್ಟು ಸ್ವಂತಿಕೆ ಪ್ರತಿಯೊಬ್ಬರಲ್ಲೂ ಇದ್ದರೆ ನಮ್ಮ ಆಯ್ಕೆಗಳನ್ನು ಮತ್ಯಾರೋ ನಿಯಂತ್ರಿಸಲಾರರು. ಬಹುಷಃ ಇಂದಿನ ಹಲವರಿಗೆ ಮತ್ತು ಕಥೆಗಳಿಗೆ ಹಿರಿಯರನ್ನು ಮೆಚ್ಚಿಸುವುದೇ ಮುಖ್ಯ ಗುರಿಯಾಗಿದೆ !
ಥೆಗಳು ಅಂಗಳದಲ್ಲಿ ಹಾಕುವ ರಂಗೋಲಿಯಂತಿರಬೇಕೇ ವಿನಃ ಎಂಜಿನಿಯರಿಂಗ್ ಡ್ರಾಪ್ಟ್‌ಬೋರ್ಡ್‌ನ ಡ್ರಾಯಿಂಗ್ ಗಳಾಗಬಾರದು. ಕಥೆಯೆಂಬ ಕಥೆಯೇ ಓದುವುದಕ್ಕೆ ಕಷ್ಟ ಆದರೆ ಹ್ಯಾಗೆ ಸ್ವಾಮೀ ?
'ನನ್ನ ಕಥೆಗಳು ಮುಖ್ಯವಾಹಿನಿಯಲ್ಲಿ ಬರಬೇಕು' ಅನ್ನೋ ಹಟಕ್ಕೆ ಕಟ್ಟುಬಿದ್ದು ಮಿತಿಗಳನ್ನು ಹಾಕಿಕೊಂಡರೆ ಕಥಾ ಸ್ವಾತಂತ್ರ್ಯವನ್ನೇ ಕಸಿದುಕೊಂಡಂತೆ ! ಕೆಲವೊಂದು ಬಾರಿ ಒಳ್ಳೆಯ ಕಥೆಯಾದರೂ ಅದು ಮುಖ್ಯವಾಹಿನಿಗಳಲ್ಲಿ, ಮಾಧ್ಯಮದಲ್ಲಿ ಪ್ರಕಟವಾಗದೇ ಹೋಗಬಹುದು. ಹಾಗಾಗಿ ಕಥೆಗಾರ ತಾನು ಬರೆದ ಕಥೆ ತಕ್ಷಣವೇ ಶ್ರೇಷ್ಟ ಕಥೆಯಾಗಬೇಕು ಎಂಬ ಅಭಿಪ್ರಾಯಕ್ಕೆ ಇಳಿಯಬಾರದು.
ಥೆಗಾರರು ಮೈಗಳ್ಳತನಕ್ಕೆ ಬೀಳೋದು ಯಾವಾಗ ? - 'ಸ್ಫೂರ್ತಿ ಬರಬೇಕು' ಅಂತ ಪಟ್ಟಾಗಿ ಕುಳಿತು ಪ್ರಯತ್ನ ಕೈಬಿಟ್ಟಾಗ ! ಕೊನೆಗೆ ಕಥೆ ಅದರ ಪಾಡಿಗೆ, ತಾನು ತನ್ನ ಪಾಡಿಗೆ. ಕಥೆ ಬರೆಯುವ passion ಇದ್ದರೆ ಸಮಯ ಇಲ್ಲದಿದ್ದರೂ ನಾವು ಅದನ್ನು ಹೊಂದಿಸಿಕೊಳ್ಳಬಲ್ಲೆವು. ನಾನಂತೂ ಆಫೀಸ್‌ಗೆ ಹೋಗುವ, ಮತ್ತು ವಾಪಾಸ್ಸು ಬರುವ ತಲಾ ಒಂದೂವರೆ-ಒಂದೂವರೆ ಗಂಟೆಗಳ ಹೊತ್ತಿನಲ್ಲಿ ಬೆಂಗಳೂರಿನ ಟ್ರಾಫಿಕ್ ಜಾಮ್‌ನ ನಡುವೆ ಕತೆ ಬರೆಯೋದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಕಂಪ್ಯೂಟರ್ ಲ್ಯಾಪ್‌ಟಾಪ್ ನನ್ನ ಕೈ ಹೇಳಿದಂತೆ ಕೇಳುತ್ತಾ ಹೋಗುತ್ತದೆ. ಹಾಗಾಗಿಯೇ ನನ್ನ ಕಥಾ ಸಂಕಲನ 'ಚೇಳು' ಬೆಂಗಳೂರಿನ ಟ್ರಾಫಿಕ್‌ಗೂ, ಅದರ ನಡುವೆ ತೊಂದರೆಯಾಗದಂತೆ ಓಡಿಸುವ ನನ್ನ ಡ್ರೈವರ್‌ಗೂ ಅರ್ಪಣೆ !
ವಿದೇಶಗಳಲ್ಲಿ ಸಣ್ಣ ಕಥಾ ಪ್ರಕಾರ ಅಡಗಿಹೋಗುತ್ತಿದೆಯದರೂ, ಯಾವುದೇ ಲೇಖಕನ ಕಥೆ ಬಂದರೂ ಅದೊಂಥರಾ ಸಂಭ್ರಮ ! ಎಷ್ಟೋ ಸಲ ಲೇಖಕನೇ ಆ ಸಂಭ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ತಾನೇ ತೆರಳಿ ಪ್ರತಿಗಳನ್ನು ಮಾರಾಟ ಮಾಡುವ ಸಂಸ್ಕೃತಿ ಇದೆ. ಹಾಗಾಗಿ, 'ಕಥೆ ಬರೆಯೋ ತನಕ ಮಾತ್ರ ತನ್ನದು. ಬರೆದ ನಂತರ ಓದುಗರದ್ದು' ಅನ್ನೋ ಮಾತಿನಲ್ಲಿ ಅರ್ಥವಿಲ್ಲ. ಬಿಡುಗಡೆ ಅನ್ನೋದು ಮನಸ್ಸಿನ ಪ್ರಕ್ರಿಯೆ. ಓದುಗ ಕಥೆಯನ್ನು ಓದಿದ ಮೇಲೆ ನಮ್ಮ ಹೃದಯದಿಂದ ಅವನ ಮನಸ್ಸಿಗೆ ಆಗುವ ಭಾವ ವರ್ಗಾವಣೆಯೇ ಕಥೆಯ ಬಿಡುಗಡೆ...
ಯಾ ರೀತಿಯ ಓದುಗರು ಮೆಚ್ಚಿದ್ದಾರೆ ಎಂಬುದು ಮುಖ್ಯವೇ ಹೊರತು ವಿಮರ್ಶಕರನ್ನು ನಂಬಿ, ಕಥೆಗಳನ್ನು ಶ್ರೇಣೀಕರಿಸಿ ಪುರಸ್ಕರಿಸುವುದೋ, ತಿರಸ್ಕರಿಸುವುದೋ ಒಳ್ಳೆಯದಲ್ಲ. ಜನಪ್ರಿಯತೆಯೂ ಸಾಹಿತ್ಯಕ್ಕೆ ಅಗತ್ಯವಾದದ್ದರಿಂದ ಯವುದೇ ಸಾಹಿತ್ಯವನ್ನು ಜನಪ್ರಿಯ ಸಾಹಿತ್ಯ ಅಂತ ಧಿಕ್ಕರಿಸುವ ಅಗತ್ಯವಿಲ್ಲ.
ಥೆ ಕಟ್ಟಲಿಕ್ಕಾಗದು. ಅದು ಹುಟ್ಟುವ ಪ್ರಕ್ರಿಯೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ನಮ್ಮ ಅನುಭವದ ಕಥೆಯನ್ನು, ನಮ್ಮದೇ ಆದ ಪ್ರಪಂಚದಲ್ಲಿ ಬರೆಯೋಣ. ತಂತ್ರವೆನ್ನುವುದು ಏನಿದ್ದರೂ ಕಥೆಯೆಂಬ ದೇಹಕ್ಕೆ ಮಾಡುವ ಶೃಂಗಾರ !

ಒಟ್ಟಿನಲ್ಲಿ ವಸುದೇಂಧ್ರರ 'ಕಥೆ ಕಟ್ಟುವ' ಟಿಪ್ಸ್ ನಮ್ಮೊಳಗಿನ ಕಥೆಗಳಿಗೆ ಪುಟ್ಟ ಮುನ್ನುಡಿ. ಏನಂತೀರಾ !

Wednesday, November 5, 2008

ಟ್ಯೂಬ್ಲೈಟ ಹೊತ್ತಿಕೊಂಡಿತ್ತು...

ನಿಮಗ್ಗೊತ್ತಾ?
ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ೪ ವರ್ಷಗಳ ವರೆಗೂ ಭ್ರಮರಿಯ ಕಲ್ಪನೆ ನನ್ನ ಕನಸಿಗೂ ಬಂದಿರಲಿಲ್ಲ. ಅದು ನನ್ನ ಪಿ.ಜಿ. ವಿದ್ಯಾಭ್ಯಾಸದ ಕೊನೆಯ ದಿನಗಳು. ಸುಮ್ಮನೆ ಅದೇನೋ ಒಳಗೊಳಗೇ ಕೊರಗು. ನನ್ನಿಂದ ಹೊಸ ಆಲೋಚನೆಗಳು ಬರಲೇ ಇಲ್ವೇ ? !
ಅದೊಂದು ದಿನ ರಾಮು ೬ ತಿಂಗಳ ನಂತರ ಮೊದಲ ಬಾರಿಗೆ ಫೋನಾಯಿಸಿದ್ದ. ಗಂಟೆಗಳ ಕಾಲ ಮುಂದುವರೆದಿತ್ತು ನಮ್ಮ ಸುಧೀರ್ಘ ಮಾತುಕತೆ. ಯಾವ ಕ್ಷಣದಲ್ಲಿ ನನ್ನ ಟ್ಯೂಬ್ಲೈಟ ಹೊತ್ತಿಕೊಂಡಿತೋ ಗೊತ್ತಿಲ್ಲ, ಆ ವರೆಗೆ ನನ್ನ ಒಳಗೆ ಹೊಯ್ದಾಡುತ್ತಿದ್ದ ಯಾವುದೋ ಕರೆಗೆ ( ಫೋನಿಂದಲ್ಲ !) ಸರಿಯಾಗಿ ಸ್ಪಂದಿಸಿಲ್ಲ ಎಂದು ಕೊರಗುತ್ತಿದ್ದ ನಾನು ಜಿಗ್ಗನೆ ಎದ್ದು ಕುಳಿತಿದ್ದೆ. ಅವನ ಬಳಿಯೇ ನಾನು ಮೊದಲು ನಾನಾ ಯೋಚನೆಯನ್ನು ಬಿಚ್ಚಿಟ್ಟದ್ದು. ಆದರೆ ಚೈತ್ರರಶ್ಮಿಯ ಒಳಗಿನ ತುಡಿತಗಳ ಅರಿವಿದ್ದ ಅವನಿಗೆ ಕಂಡ ನನ್ನ ಆ ತಿಣುಕಾಡುತ್ತಿದ್ದ ಕನವರಿಕೆಗಳು ಅಷ್ಟು ಸುಲಭವಾಗಿ ಉಳಿದವರಿಗೆ ಕಂಡಿರಲಿಲ್ಲ. ಆದರೆ ಮನಸ್ಸು ನಿರ್ಧಾರ ಮಾಡಿಯಾಗಿತ್ತು. ಹಾಗಾಗಿ ನಾನು ನನ್ನ ಪತ್ರಿಕೆ ಪ್ರಾರಂಭಿಸುವ ಐಡಿಯಾ ಯಾರ ಬಳಿ ಹೇಳಿದರೂ ಅದು ಹಾಸ್ಯಾಸ್ಪದ ! ಬಹುಷಃ ಪ್ರತಿ ಪತ್ರಿಕೆಗಳು ಹುಟ್ಟುವ ಮೊದಲು ಈ ಗುಂಗು, ಹೇಳುವ ಹಿತೈಷಿಗಳ (?) ಮಾತನ್ನು ನುಂಗುವುದು ಇರುತ್ತದೇನೋ !

Monday, November 3, 2008

Noopura bhramari- Magazine for Performing Arts

Kannada Privately Circulated Bi-Monthly, Well Known magazine In the Art field Dedicated for Dance and Performing Arts. Website : http://www.noopurabhramari.com/
Come and Join...It is a platform to Know about Ourselves and also Our Dance Tradition...We together can contribute to this field.
Let Us Move around in this Anklets World....Recently I have secured 1st place in AKKA souvenir article International level article writing...Topic is Contribution of Kannadigas to Performence Arts Fusion Tradition.