Saturday, November 8, 2008

ಕಥೆ ಕಟ್ಟುವ ಬಗೆ...

'ನಾನು ಕಥೆ ಬರೀಲಿಕ್ಕೆ ಪ್ರಾರಂಭಿಸಿ ಆರೇಳು ವರ್ಷ ಆಯಿತಷ್ಟೆ. ಹೀಗಿರುವಾಗ 'ಕಥೆ ಕಟ್ಟುವುದು ಹೇಗೆ' ಎಂಬ ವಿಷಯದಲ್ಲಿ ಉಪನ್ಯಾಸ ಕೊಡಿ ಅಂತಂದ್ರೆ ಮುಜುಗರ ಅನ್ಸುತ್ತೆ' ಅಂತ ವಸುದೇಂಧ್ರ ವಿನೀತಭಾವದಿಂದಲೇ ಪೀಠಿಕೆ ಹಾಕಿದ್ದರು. ಅದರಲ್ಲೂ ನೂಪುರ ಭ್ರಮರಿಯನ್ನು ಪ್ರಾರಂಭಿಸಿದ ಹೊಸತರಲ್ಲಿ, ಕಳಿಸಿಕೊಟ್ಟ ಮೊದಲ ಸಂಚಿಕೆಯನ್ನು ಪ್ರೀತಿಯಿಂದ ಓದಿ, ಅವರಾಗಿಯೇ ಬರೆದ ಉತ್ಸಾಹದ ಮಾತುಗಳನ್ನು ಮರೆಯಲಿಕ್ಕಾದೀತೇ? ಹಾಗಾಗಿಯೇ ಅವರ ಪತ್ರ ಎಷ್ಟೋ ಪತ್ರಗಳ ಕಳೆದುಹೋಗುವಿಕೆಯ ನಡುವೆಯೂ ಜೋಪಾನವಾಗಿದೆ. ಅಷ್ಟು ಮಾತ್ರವಲ್ಲ, ಕಂಡಷ್ಟು ಬಾರಿಯೂ, ಮೊನ್ನೆ ಮೊನ್ನೆ ಗೆಳೆಯ ರಾಮುವಿನ ಚೈತ್ರರಶ್ಮಿಯ ನಾಲ್ಕನೇ ವಾರ್ಷಿಕ ಸಂಭ್ರಮಕ್ಕೂ ಬಂದಾಗಲೂ ಪ್ರೀತಿಯಿಂದ ಅವರಾಗಿಯೇ ಗುರುತು ಹಿಡಿದು ಮಾತನಾಡಿಸುವ ಸಹೃದಯತೆಗೆ, ಪತ್ರಿಕೆಯ ಬಗೆಗಿರುವ ಅವರ ಪ್ರೀತಿಗೆ.. ನಿಜಕ್ಕೂ ಒಂದು ಕ್ಷಣಕ್ಕೂ ನನಗೆ ಏನೂ ತೋಚುವುದಿಲ್ಲ.
ಹಾಗಾಗಿಯೇ ಒಂದಾನೊಂದು ಕಾಲದಲ್ಲಿ ಅವರೊಂದಿಗಿನ ಕಥೆಗಳ ಕುರಿತಾದ ಒಂದೂವರೆ ಘಂಟೆಗಳ ಸುದೀರ್ಘ ಸಂವಾದದ ಪುಟ್ಟ ಪುಟ್ಟ ನೆನಪುಗಳನ್ನು ಭ್ರಮರಿಯ ಬ್ಲಾಗ್ ಅಂಗಳದಲ್ಲಿ ನಿಮ್ಮೆದುರಿಗಿರುಸುತ್ತಿದ್ದೇನೆ. (ವಿಶೇಷವೆಂದರೆ, ಈ ಮೌನದೊಳಗಡೆ ಅರಳುವ ಕಥೆಗಳ ಬೆರಗಿನ ಪ್ರಸಂಗವು ಮಾತುಗಳ ಚಮತ್ಕಾರದೊಳಗೆ ಎದುರು ಕುಳಿತ ಕ್ಷಣಗಳ, ಸಂವಾದದ ೧೦ ಪುಟಗಳ ಕಥಾನಕದ ವರದಿ ಪ್ರಕಟವಾಗದೇ ಇದ್ದರೂ, ಇದರ ಪ್ರತಿ ಬಹುಷಃ ಒಂದು ನನ್ನ ಬಳಿಯಲ್ಲೂ, 'ಮಂಥನ'ದ ವಾದಿರಾಜರಲ್ಲೂ, ಪ್ರೀತಿಯ ಬರಹಗಾರ ವಸುಧೇಂಧ್ರರ ಬಳಿಯಲ್ಲೂ ಇದೆ. ! ಅದರ ಒಂದು ಮಿಂಚು ಓದುಗರಿಗಾಗಿ ಈ ಅಂಚೆಯಲ್ಲಿದೆ.)

'ಹೇಳಲಾರದ ಕಥೆಗಳೇ ಇಲ್ವೇ !' ಹಳೆಯ ವಸ್ತುಗಳಿಗೆ ಹೊಸ ರೂಪ ಹೊಸ ಬಣ್ಣ, ಹೊಸ ಕಣ್ಣು. ಅದೊಂದು ಬೆರಗಿನ, ಸಂಭ್ರಮದ ಅನುಭವ. ಆದರೆ ಆ ಕ್ಷಣ ಕ್ಷಣಿಕವಾಗಬಾರದಷ್ಟೇ !
ಥೆ ಅವಸರದ ಪ್ರಸವ ಅಲ್ಲ. ಸ್ಪಂದನವಿಲ್ಲದೆ ಕಥೆ ಮಾಡಲು ಹೊರಟರೆ ಆ ಪ್ರಯತ್ನ ನಿರರ್ಥಕ. ಕಥೆಗಿಂತ ಬದುಕು ದೊಡ್ಡದು. ಬದುಕಿನ ಒಂದು ಭಾಗ ಕಥೆಯೇ ಹೊರತು, ಕಥೆಯೇ ಬದುಕಲ್ಲ.
'ಕಣ್ಣು ತೆರೆದು ಬದುಕಬೇಕು. ಕಣ್ಣು ಮುಚ್ಚಿ ಬರೆಯಬೇಕು'. ಏಕೆಂದರೆ ಕಥೆಗೆ ಬೇಕಿರುವುದು, ಅದು ಹುಟ್ಟುವುದು ಮೌನದಲ್ಲಿ..ಅಂತರಂಗದಲ್ಲಿ.. ಕಥೆ ಬರೆಯೋದಕ್ಕೆ 'ಧ್ಯಾನ' ಬೇಕೆ ಬೇಕು. ಅಂದರೆ ಕಥೆಯಲ್ಲೇ ಮಿಂದು ಮುಳುಗುವ ಕಥಾ ಧ್ಯಾನ !
ಥೆ ಬರೀಬೇಕು ಅಂತಿದೀರಾ? ಹಾಗಾದ್ರೆ ಓದೋ ಚಟ ಬೆಳೆಸಿಕೊಳ್ಳಿ. ಕಥೆ ಕೇಳುವ ಅಭ್ಯಾಸವನ್ನೂ ಕೂಡಾ ! ನನಗಂತೂ ಸಾಹಿತ್ಯಕ್ಕಿಂತಲೂ ಸಿನಿಮಾಗಳೇ ಕಥೆಗಳಿಗೆ ಸ್ಫೂರ್ತಿ. ಬೇರೆ-ಬೇರೆ ಭಾಷೆಗಳ ಸಿನಿಮಾದೆಡೆಗಿನ ಹಪಹಪಿಯೇ ನನ್ನನ್ನು ಇನ್ನಷ್ಟು ಕಥೆ ಬರೆಯಲು ಪ್ರೇರೇಪಿಸುತ್ತದೆ. ಜೀವನವನ್ನು ಅನುಭವಿಸೋದು ಕೂಡಾ ಕಥೆ ಹೆಣೆಯುವಲ್ಲಿ ಒಂದು ದಾರಿಯಾಗುತ್ತದೆ.
ಒಂದು ವೇಳೆ ಕಥೆಗೂ, ಕವನಕ್ಕೂ -ಎರಡಕ್ಕೂ ಸರಿಹೊಂದುವ ವಸ್ತು ಸಿಕ್ಕಿದರೆ ಏನು ಮಾಡ್ತೀರಿ ? ಕಾಯ್ಕಿಣಿ ಹೇಳೋ ಹಾಗೆ, 'ಕಾವ್ಯ ಎನ್ನುವುದು ಪ್ರೇಮ. ಕಥೆ ಎನ್ನುವುದು ಮದುವೆ. ಕಾವ್ಯವು ವಧುವಾದರೆ, ಕಥೆ ವರ.' ವಸ್ತು ಮತ್ತು ಓದುಗರ ಆಯ್ಕೆ ನಿಮ್ಮದು.
ನೀವು ಐದು ಸಾವಿರ ಜನರು ಕುಳಿತು ಒಂದು ವರ್ಷ ಓದುವ ಕಥೆ, ಸಾಹಿತ್ಯವನ್ನು ಬರೀತೀರೋ ? ಅಥವಾ, ಐವತ್ತು ಜನರಂತೆ ಒಂದು ಸಾವಿರ ವರ್ಷ ಕೃತಿಯನ್ನು ಬರೀತೀರೋ ?
ಥೆ ಬರೆಯಲು ಪ್ರಾಮಾಣಿಕತೆ ಬೇಕು. ಧೈರ್ಯ ಬೇಕು. atleast ಇಂದಿನ ಮಟ್ಟಿಗಾದ್ರೂ ಕಥೆ ಬರೆಯೋವಾಗ ಪ್ರಾಮಾಣಿಕರಾಗಿರಬೇಕು. ಇಲ್ಲವಾದರೆ ಇಂದಿಗೆ ಚೆಂದ ಕಂಡ ಕಥೆ ನಾಳೆಗೆ ನಂದಿ ಹೋಗುತ್ತದೆ. ಸಾವಿರಾರು ಜನರ ಮನಸ್ಸಿಗೆ ಸುಖ ಕೊಟ್ಟರೂ, ಒಬ್ಬನ ಮನಸ್ಸನ್ನು ಹಿಂಸಿಸಿ ನೋಯಿಸುವುದು ಕಥೆಗಾರನ ಅಪ್ರಾಮಾಣಿಕತೆಯನ್ನು ತೋರಿಸುತ್ತದೆ.
ನಾವು ಪ್ರಭಾವಗಳಿಂದ ತಪ್ಪಿಸಿಕೊಳ್ಳಲಾರೆವು. ಆದರೆ ಅಂತಹ ಪ್ರಭಾವಗಳಲ್ಲೂ ನಮ್ಮದೇ ಶೈಲಿ, ಬಳಸಿಕೊಳ್ಳುವ ಕಲೆ, ಸ್ವಂತಿಕೆ ಇದ್ದರೆ ಎಷ್ಟು ಒಳ್ಳೆಯದು ಅಲ್ಲವೇ ? ಕಥೆಗಾರನು ಪೂರ್ವಾಗ್ರಹ ಬಿಟ್ಟು, ಎಲ್ಲವನ್ನೂ ಒಂದೇ ಚೌಕಟ್ಟಿಗೆ ಸೇರಿಸದೆ ನೋಡಿದಾಗಲೇ, ವಸ್ತುಗಳೆಡೆಗೆ ಪೂರ್ಣವಾಗಿ ತನ್ನನ್ನು ಅರ್ಪಿಸಿಕೊಳ್ಳಲು ಸಾಧ್ಯ. ಹಾಗಾಗಿ ನಿಮ್ಮೊಳಗಿನ, ಹೃದಯಾಂತರಾಳದ ಅಭಿವ್ಯಕ್ತಿ ಅಲ್ಲಿರಲಿ. ಪಾತ್ರ, ಸನ್ನಿವೇಶಗಳೂ ಬೇರೆ ಬೇರೆ ಅನ್ನಿಸಿದರೂ, ಕಥೆಗೆ ಇರುವ ಒಳಧ್ವನಿ ನಮ್ಮದಾಗಿರಲಿ.
ಥೆಗಳಲ್ಲಿ 'ಕಥನ ಕುತೂಹಲ'ವಿರಬೇಕು., ನಿಜ. ಆದರೆ ಕುತೂಹಲದ ಕುದುರೆಯೇರುವ ಪ್ರಸಂಗ ಪ್ರತೀ ಬಾರಿ ಒಳ್ಳೆಯದಲ್ಲ.
'ಕಲ್ಲು ಹೂವಾಗಿ ಅರಳುತ್ತದೆ' ಅನ್ನುವುದಿದ್ದರೆ ಹೂವಾಗಿ ಅರಳುವ ಸೌಂದರ್ಯದ ನಿರೀಕ್ಷೆ ಕಥೆಗಾರನಿಗೆ ಇರಬೇಕೇ ವಿನಃ 'ಅದ್ಹೇಗೆ, ಕಲ್ಲು ಹೂವಾಗಿ ಅರಳಿಯೇ ಬಿಡುತ್ತದೆ? ನೋಡಿಯೇ ಬಿಡೋಣ' ಎನ್ನುವ ವೈಜ್ಞಾನಿಕ, ವೈಚಾರಿಕ ನೆಲೆಗಟ್ಟಲ್ಲ. ಯಾವತ್ತಿಗೂ ವಿಚಾರಗಳು ಕಥೆಗಳಿಗೆ ಪೂರಕವಾಗಿ ಧ್ವನಿಸಬೇಕೇ ಹೊರತು, ಅದನ್ನೇ ಕೇಂದ್ರವಾಗಿಟ್ಟುಕೊಳ್ಳಬಾರದು.

ಮ್ಮ ಕಾಲದ್ದೇ ಆದ ಸಂಗತಿಗಳಿಗೇ ಅವಕಾಶ ನಾವು ಕೊಡದಿದ್ದರೆ ಹ್ಯಾಗೆ ? ಕಥೆ ಮೇಲಿನ ಪ್ರೀತಿ ಭಾಷೆಯನ್ನೇ ಮೀರಿ ನಿಲ್ಲಬೇಕು.
ಇಂದಿನ ಕಾಲದಲ್ಲಿ ಹದಿನೈದು ದಿನ ಪ್ರವಾಸಕ್ಕೆ ಹೊರದೇಶಕ್ಕೆ ಹೋಗಿಬಂದವರೂ ಕೂಡಾ ' ಪ್ರವಾಸ ಕಥನ'ಗಳನ್ನು ಬರೆದು ಪ್ರಕಟಿಸುತ್ತಾರೆ. ಎಲ್ಲೋ ಕೆಲವರು ಮಾತ್ರ ಆಳವಾಗಿ ಶೋಧಿಸಿದ್ದು ಬಿಟ್ಟರೆ, ಉಳಿದೆಲ್ಲವು ಸುಮ್ಮನೆ ನೋಡುವ ಪ್ರಕ್ರಿಯೆ ಅಷ್ಟೇ!
ಪಾತ್ರದ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಕಥೆಗೆ ಮಾಡುವ ಬಹಳ ದೊಡ್ಡ ಅನ್ಯಾಯ ಮತ್ತು ಅವಮಾನ. ಕಥೆಗಾರನಿಗೆ ಚಹಾ ಕುಡಿಯುವ ಅಭ್ಯಾಸವಿಲ್ಲವೆಂದರೆ ಪಾತ್ರಗಳೂ ಚಹಾ ಕುಡಿಯಬಾರದು ಎಂಬ ಕುತರ್ಕ ಯಾಕೆ ? ಕಥೆಯ ಪಾತ್ರದೊಳಗೆ ನಾವು ಹೋಗಿ-ಬಂದು ಬರೆಯಬೇಕೇ ವಿನಃ, ಪಾತ್ರಗಳನ್ನು ನಮ್ಮಲ್ಲಿ ಆಹ್ವಾನಿಸಿ ಬರೆಯುವ ಪ್ರಯತ್ನ ಮಾಡಬಾರದು.
ಮ್ಮ ಸ್ನೇಹಿತರಿಗೇ ನಮ್ಮ ಕಥೆಗಳು ಅರ್ಥವಾಗದೇ ಹೋದಲ್ಲಿ ಏನು ಲಾಭ ? ಕೇವಲ ವಿಮರ್ಶಕರನ್ನು ಮೆಚ್ಚಿಸುವ ಕೆಲಸ ಮಾಡೋಕೆ ಹೊರಟರೆ, ಒಂದಲ್ಲ ಒಂದು ದಿನ ಕಥೆ, ಮನಸ್ಸಿಗೆ ತಟ್ಟದೇ ಬಿದ್ದು ಹೋಗುತ್ತದೆ. ಯಾರೋ ಪಂಡಿತರು ಹೇಳಿದ ಮಾತ್ರಕ್ಕೆ ಕಥೆ ಚೆನ್ನಾಗಿದೆ ಎಂಬ ಆಯ್ಕೆ ನಮ್ಮದಾಗಬಾರದು. ಯಾವುದೇ ಕೃತಿಯನ್ನಾಗಲೀ ಸ್ವೀಕರಿಸುವ ಮುಕ್ತ ಮನೋಭಾವ, ಜೊತೆಗೊಂದಿಷ್ಟು ಸ್ವಂತಿಕೆ ಪ್ರತಿಯೊಬ್ಬರಲ್ಲೂ ಇದ್ದರೆ ನಮ್ಮ ಆಯ್ಕೆಗಳನ್ನು ಮತ್ಯಾರೋ ನಿಯಂತ್ರಿಸಲಾರರು. ಬಹುಷಃ ಇಂದಿನ ಹಲವರಿಗೆ ಮತ್ತು ಕಥೆಗಳಿಗೆ ಹಿರಿಯರನ್ನು ಮೆಚ್ಚಿಸುವುದೇ ಮುಖ್ಯ ಗುರಿಯಾಗಿದೆ !
ಥೆಗಳು ಅಂಗಳದಲ್ಲಿ ಹಾಕುವ ರಂಗೋಲಿಯಂತಿರಬೇಕೇ ವಿನಃ ಎಂಜಿನಿಯರಿಂಗ್ ಡ್ರಾಪ್ಟ್‌ಬೋರ್ಡ್‌ನ ಡ್ರಾಯಿಂಗ್ ಗಳಾಗಬಾರದು. ಕಥೆಯೆಂಬ ಕಥೆಯೇ ಓದುವುದಕ್ಕೆ ಕಷ್ಟ ಆದರೆ ಹ್ಯಾಗೆ ಸ್ವಾಮೀ ?
'ನನ್ನ ಕಥೆಗಳು ಮುಖ್ಯವಾಹಿನಿಯಲ್ಲಿ ಬರಬೇಕು' ಅನ್ನೋ ಹಟಕ್ಕೆ ಕಟ್ಟುಬಿದ್ದು ಮಿತಿಗಳನ್ನು ಹಾಕಿಕೊಂಡರೆ ಕಥಾ ಸ್ವಾತಂತ್ರ್ಯವನ್ನೇ ಕಸಿದುಕೊಂಡಂತೆ ! ಕೆಲವೊಂದು ಬಾರಿ ಒಳ್ಳೆಯ ಕಥೆಯಾದರೂ ಅದು ಮುಖ್ಯವಾಹಿನಿಗಳಲ್ಲಿ, ಮಾಧ್ಯಮದಲ್ಲಿ ಪ್ರಕಟವಾಗದೇ ಹೋಗಬಹುದು. ಹಾಗಾಗಿ ಕಥೆಗಾರ ತಾನು ಬರೆದ ಕಥೆ ತಕ್ಷಣವೇ ಶ್ರೇಷ್ಟ ಕಥೆಯಾಗಬೇಕು ಎಂಬ ಅಭಿಪ್ರಾಯಕ್ಕೆ ಇಳಿಯಬಾರದು.
ಥೆಗಾರರು ಮೈಗಳ್ಳತನಕ್ಕೆ ಬೀಳೋದು ಯಾವಾಗ ? - 'ಸ್ಫೂರ್ತಿ ಬರಬೇಕು' ಅಂತ ಪಟ್ಟಾಗಿ ಕುಳಿತು ಪ್ರಯತ್ನ ಕೈಬಿಟ್ಟಾಗ ! ಕೊನೆಗೆ ಕಥೆ ಅದರ ಪಾಡಿಗೆ, ತಾನು ತನ್ನ ಪಾಡಿಗೆ. ಕಥೆ ಬರೆಯುವ passion ಇದ್ದರೆ ಸಮಯ ಇಲ್ಲದಿದ್ದರೂ ನಾವು ಅದನ್ನು ಹೊಂದಿಸಿಕೊಳ್ಳಬಲ್ಲೆವು. ನಾನಂತೂ ಆಫೀಸ್‌ಗೆ ಹೋಗುವ, ಮತ್ತು ವಾಪಾಸ್ಸು ಬರುವ ತಲಾ ಒಂದೂವರೆ-ಒಂದೂವರೆ ಗಂಟೆಗಳ ಹೊತ್ತಿನಲ್ಲಿ ಬೆಂಗಳೂರಿನ ಟ್ರಾಫಿಕ್ ಜಾಮ್‌ನ ನಡುವೆ ಕತೆ ಬರೆಯೋದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಕಂಪ್ಯೂಟರ್ ಲ್ಯಾಪ್‌ಟಾಪ್ ನನ್ನ ಕೈ ಹೇಳಿದಂತೆ ಕೇಳುತ್ತಾ ಹೋಗುತ್ತದೆ. ಹಾಗಾಗಿಯೇ ನನ್ನ ಕಥಾ ಸಂಕಲನ 'ಚೇಳು' ಬೆಂಗಳೂರಿನ ಟ್ರಾಫಿಕ್‌ಗೂ, ಅದರ ನಡುವೆ ತೊಂದರೆಯಾಗದಂತೆ ಓಡಿಸುವ ನನ್ನ ಡ್ರೈವರ್‌ಗೂ ಅರ್ಪಣೆ !
ವಿದೇಶಗಳಲ್ಲಿ ಸಣ್ಣ ಕಥಾ ಪ್ರಕಾರ ಅಡಗಿಹೋಗುತ್ತಿದೆಯದರೂ, ಯಾವುದೇ ಲೇಖಕನ ಕಥೆ ಬಂದರೂ ಅದೊಂಥರಾ ಸಂಭ್ರಮ ! ಎಷ್ಟೋ ಸಲ ಲೇಖಕನೇ ಆ ಸಂಭ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ತಾನೇ ತೆರಳಿ ಪ್ರತಿಗಳನ್ನು ಮಾರಾಟ ಮಾಡುವ ಸಂಸ್ಕೃತಿ ಇದೆ. ಹಾಗಾಗಿ, 'ಕಥೆ ಬರೆಯೋ ತನಕ ಮಾತ್ರ ತನ್ನದು. ಬರೆದ ನಂತರ ಓದುಗರದ್ದು' ಅನ್ನೋ ಮಾತಿನಲ್ಲಿ ಅರ್ಥವಿಲ್ಲ. ಬಿಡುಗಡೆ ಅನ್ನೋದು ಮನಸ್ಸಿನ ಪ್ರಕ್ರಿಯೆ. ಓದುಗ ಕಥೆಯನ್ನು ಓದಿದ ಮೇಲೆ ನಮ್ಮ ಹೃದಯದಿಂದ ಅವನ ಮನಸ್ಸಿಗೆ ಆಗುವ ಭಾವ ವರ್ಗಾವಣೆಯೇ ಕಥೆಯ ಬಿಡುಗಡೆ...
ಯಾ ರೀತಿಯ ಓದುಗರು ಮೆಚ್ಚಿದ್ದಾರೆ ಎಂಬುದು ಮುಖ್ಯವೇ ಹೊರತು ವಿಮರ್ಶಕರನ್ನು ನಂಬಿ, ಕಥೆಗಳನ್ನು ಶ್ರೇಣೀಕರಿಸಿ ಪುರಸ್ಕರಿಸುವುದೋ, ತಿರಸ್ಕರಿಸುವುದೋ ಒಳ್ಳೆಯದಲ್ಲ. ಜನಪ್ರಿಯತೆಯೂ ಸಾಹಿತ್ಯಕ್ಕೆ ಅಗತ್ಯವಾದದ್ದರಿಂದ ಯವುದೇ ಸಾಹಿತ್ಯವನ್ನು ಜನಪ್ರಿಯ ಸಾಹಿತ್ಯ ಅಂತ ಧಿಕ್ಕರಿಸುವ ಅಗತ್ಯವಿಲ್ಲ.
ಥೆ ಕಟ್ಟಲಿಕ್ಕಾಗದು. ಅದು ಹುಟ್ಟುವ ಪ್ರಕ್ರಿಯೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ನಮ್ಮ ಅನುಭವದ ಕಥೆಯನ್ನು, ನಮ್ಮದೇ ಆದ ಪ್ರಪಂಚದಲ್ಲಿ ಬರೆಯೋಣ. ತಂತ್ರವೆನ್ನುವುದು ಏನಿದ್ದರೂ ಕಥೆಯೆಂಬ ದೇಹಕ್ಕೆ ಮಾಡುವ ಶೃಂಗಾರ !

ಒಟ್ಟಿನಲ್ಲಿ ವಸುದೇಂಧ್ರರ 'ಕಥೆ ಕಟ್ಟುವ' ಟಿಪ್ಸ್ ನಮ್ಮೊಳಗಿನ ಕಥೆಗಳಿಗೆ ಪುಟ್ಟ ಮುನ್ನುಡಿ. ಏನಂತೀರಾ !

3 comments:

ಕಾರ್ತಿಕ್ ಪರಾಡ್ಕರ್ said...

ಇತ್ತೇಚೆಗೆ ವಾದಿರಾಜ್ ಸಿಕ್ಕಾಗ ಹೇಳಿದ್ದರು....ಈ ವಿಷಯದ ಮುಂದುವರಿದ ಚರ್ಚೆ ವಿವೇಕ್ ಶಾನಭಾಗ ಅವರು ಬೆಂಗಳೂರಿನಲ್ಲಿ ಏರ್ಪಡಿಸಿದ ಕಾರ್ಯಕ್ರಮವೊಂದರಲ್ಲಿ ನಡೆದಿತ್ತಂತೆ.
ಬೆಂಗಳೂರಿನ ಬಗ್ಗೆ ಯಾಕೆ ಕತೆಗಾರರು ಕತೆ ಬರೆಯುತ್ತಿಲ್ಲ, ಹಳ್ಳಿಯನ್ನು ಬಿಟ್ಟು ಯಾಕೆ ಹೊರಬರುತ್ತಿಲ್ಲ? ಈ ಕುರಿತು ಚರ್ಚೆಯಾಯಿತು ಅಂದರು........

ಕತೆ, ಕವಿತೆಯಂತಹ ಮೋಹಕ ಚಿಟ್ಟೆಗಳ ಬೆನ್ನು
ಹತ್ತುವುದು ನಿಜಕ್ಕೂ ರೋಮಾಂಚನ.

ಕಡೆಗೂ ಈ ಬರಹ ಓದಲು ಸಿಕ್ಕಿತಲ್ಲ. ಅದೇ ಖುಷಿ. ಇನ್ನು ನಿಮಗಿರುವ ಕೆಲಸ ಒಂದೇ. ಬ್ಲಾಗಿಸು ಕನ್ನಡ ಡಿಂಡಿಮವ..

ಆಲಾಪಿನಿ said...

ಎಲ್ಲಿಂದಲೋ ನಿಮ್ಮ ಬ್ಲಾಗ್‌ಗೆ ಬಂದೆ. ವಸುಧೇಂದ್ರರ ಟಿಪ್ಸ್‌ ನಿಜಕ್ಕೂ ಉಪಯುಕ್ತ. thanks manorama.

ಅಕ್ಷಯ ರಾಮ ಕಾವಿನಮೂಲೆ said...

nice...