Wednesday, December 10, 2008

ಕಳೆದು ಹೊದೇವೆ ನಾವು ?
ಗೆಳತಿ ಶ್ರೀನಿಧಿ ಒಮ್ಮೆ ಹೇಳಿದ ಮಾತುಗಳು ಆಗಾಗ ನೆನಪಾಗುತ್ತವೆ. ’ಯಾವುದೋ ಅನಿಶ್ಚಿತತೆಯತ್ತ ಸಾಗುತ್ತಿದ್ದೇವೆ ಅಂತನ್ಸುತ್ತೆ. ಮೊದಲಿನ ಮಹತ್ವಾಕಾಂಕ್ಷೆ ಈಗಿಲ್ಲ. ಎಷ್ಟು ಹೆಸರು ಬಂದ್ರೇನು, ನೆಮ್ಮದಿ ಸಿಗುತ್ತೆ ಅನ್ನೋ ನಂಬಿಕೆಯಿಲ್ಲ. ಬೇರೆ ದಾರಿನಾದ್ರೂ ಹಿಡಿಯೋಣ ಅಂದ್ರೆ ಜಾಬ್ ಸ್ಯಾಟಿಸ್ಫ್ಯಾಕ್ಷನ್ ಸಿಗುತ್ತೆ ಅನ್ನೋ ಗ್ಯಾರಂಟಿಯಿಲ್ಲ. ಮೊದಲು ಯಾವೆಲ್ಲಾ ಕಲ್ಪನೆಯಿಟ್ಟು ಉತ್ಸಾಹದಿಂದ ಬಂದಿದ್ದೆವೋ ಅದೆಲ್ಲಾ ಇಳಿದುಹೋಗಿದೆ. ಕ್ರಿಯೇಟಿವ್..! ಹಾಗಂದ್ರೆ ? ಎಲ್ಲಾ ಅಟ್ಟ ಹತ್ತಿ ಕೂತಿದೆ. ಎಲ್ಲಿ ದಿನದಿಂದ ದಿನಕ್ಕೆ ವರ್ಕೊಲಿಕ್ ಆಗ್ತೀವೋ ಅಂತ ಭಯ ಕಾಡ್ತಿದೆ !’
ನಿರಾಸೆಯೋ..., ಬೇಸರವೋ.., ಅರಗಿಸಿಕೊಳ್ಳಲಾರದೇ ಹೋದ ವಾಸ್ತವವೋ ! ಗೊತ್ತಿಲ್ಲ. ಒಟ್ಟಿನಲ್ಲಿ ದಿನವೂ ಮತ್ತೆ ಮಿಂದೆದ್ದು ಮತ್ತೆ ಮುಳುಗುತ್ತಿರುವ, ಕಳೆದ ೭ ವರ್ಷಗಳಿಂದ ನಮ್ಮ ಒಡನಾಡಿಯಾದ ’ಪತ್ರಿಕೋದ್ಯಮ’ ಎನ್ನುವ ನಾಗಾಲೋಟದ ಕುದುರೆಯೆಡೆಗೆ ಆಡಿದ ಈ ಮಾತುಗಳು ಬಹುಷಃ ಇಂದು ಒಬ್ಬಿಬ್ಬರ ಅನುಭವವಾಗಿ ಉಳಿದಿಲ್ಲ. ಸಮೂಹ ಮಾಧ್ಯಮ, ಪತ್ರಿಕೋದ್ಯಮದ ಬಗ್ಗೆ ಅಪಾರ ನಿರೀಕ್ಷೆ, ಕನಸು, ಗುರಿಗಳ ಸಾಧ್ಯತೆಗಳೆಡೆಗೆ ನಂಬಿಕೆಯಿಟ್ಟು ಬಂದ ನಮ್ಮಂತವರು ದಿನದಿನವೂ ಮಾಡಿಕೊಳ್ಳುವ ಆತ್ಮ ವಿಮರ್ಶೆ. ಹೀಗೊಂದು ಜಿಜ್ಞಾಸೆ..!
ಎಷ್ಟೋ ಬಾರಿ ಮಾಧ್ಯಮವೆಂಬ ಅತಿರಂಜಿತ ಲೋಕದೆದುರು, ಅದರೊಳಗಿನ ಉದ್ವಿಗ್ನತೆ, ಆತಂಕ, ನಿತ್ಯ ಜಂಜಾಟ, ಸ್ಪರ್ಧೆಯಿಂದಾಗಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮುಲುಗಿ ಹೋಗಿ, ಒಂದರ್ಥದಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳುವ ಈ ಹಂತಕ್ಕೆ ಬಂದರೂ ಅದೆಷ್ಟೋ ಬಾರಿ ನಾವು ಜಾಣ ಕಿವುಡರಾಗುವುದಿದೆ. ಅದು ನಮ್ಮ ದೌರ್ಬಲ್ಯವೋ, ವೃತ್ತಿಯ ಸಹಜತೆಯೋ ಅಥವಾ ನಮ್ಮನ್ನು ನಾವು ಅರ್ಪಿಸಿಕೊಳ್ಳುವ ಭರದಲ್ಲಿ ಕಣ್ಮರೆಯಾಗಿ ಹೋಗುವ ವಿಚಿತ್ರವೋ..,ಒಟ್ಟಿನಲ್ಲಿ ಅನುಭವ ಎಂದೆನ್ನುವ ಕುಲುಮೆಯಲ್ಲಿ ಬೆಂದರೂ ನಾಲಿಗೆಗೆ ಹತ್ತಿದ ಉಪ್ಪಿನಕಾಯಿ ರುಚಿಯನ್ನು ಕಳೆದುಕೊಳ್ಳಲು ಯಾರು ತಾನೇ ಸಿದ್ಧರಿರುತ್ತಾರೆ ?
ಕೆಲವರು ಹೊಟ್ಟೆಯ ಹಿಟ್ಟಿನ ಚೀಟಿಯ ದಾರಿಗಾಗಿ ಬಂದುಳಿದವರಾದರೆ, ಇನ್ನೊಂದಷ್ಟು ಮಂದಿ ಕನಸಿನ ಮೊಂಬತ್ತಿಯೊಳಗೆ ಕರಗಿ ಕಣ್ಕಣ್ಣು ಬಿಟ್ಟವರು. ಬಹಳ ಬೇಗ ಹೆಸರು ತಂದುಕೊಡಬಲ್ಲ ಕ್ಷೇತ್ರಕ್ಕಿಳಿದ ಧನ್ಯತೆ, ಸೆಟ್ಲ್ದ್ ಎಂಬ ಭದ್ರತಾ ಭಾವ ಕಾಲಕ್ರಮೇಣ ಹಗಲಿರುಳು ದುಡಿಯುವ ಒತ್ತಡಕ್ಕೆ ಕೊರಗಿ ಕರಗಿಹೋಗಿ ಬಿಟ್ಟು ಬರಲಾಗದವರು ಮತ್ತೊಂದಷ್ಟು ಜನ. ಭ್ರಮೆಯೊಳಗಣ ಪ್ರಪಂಚಕ್ಕೆ ಒಂದಷ್ಟು ಲಾಬಿ, ಇನ್ನೊಂದಷ್ಟು Hippocraticನೀತಿಗಳು-ಒಂದಷ್ಟು ಕಲ್ಪಿತ ಧೋರಣೆಗಳು.., ಫಲ? ಬಲಿಯಾಗುತ್ತಿರುವ ಪತ್ರಿಕಾಧರ್ಮ, ಪಾರದರ್ಶಕವೆಂದು ಹೇಳಿಕೊಳ್ಳುತ್ತಲೇ ಅದನ್ನು ಸಾಧಿಸಿಕೊಳ್ಳುವಲ್ಲಿ ಸೋಲುತ್ತಿರುವ, ಲಯ ತಪ್ಪುತ್ತಿರುವ ’ಮಾಧ್ಯಮಾಲಯ’ಗಳು ; ಟಿ ಅರ್ ಪಿ ದಾಸ್ಯಕ್ಕೆ ಬಲಿಯಾಗಿ ಕಂಡಕಂಡದ್ದನ್ನೆಲ್ಲಾ ತಿಂದು ಕಕ್ಕುವ ಕೆಟ್ಟ ಹಸಿವು ; ಯಾರದೋ ವೈಯಕ್ತಿಕ ಬದುಕನ್ನು ’ತಮ್ಮದೇ ಇಷ್ಟ, ಎನ್ನುವ ಸ್ವೇಚ್ಛೆ, ದಾರ್ಷ್ಟ್ಯ; ಜನರು ಕೇಳುತ್ತಿದ್ದಾರೆ ಅಂತ ನೆವದಲ್ಲಿ ಮಸ್ಕಾ ಹೊಡೆಯುತ್ತಾ, ಲಂಗುಲಗಾಮಿಲ್ಲದೆ ಹುಚ್ಚು ಕುದುರೆಯಂತಾಡುವ ’ಆದರ್ಶ ಪತ್ರಕರ್ತರು, ಮಾಧ್ಯಮ ಮಿತ್ರರು’, ತಮ್ಮ ಅಭಿಪ್ರಾಯಗಳನ್ನೇ ಜನರದ್ದೆಂದು ಹೇಳಿ ಮೂದಲಿಸಿಯೋ ಅಥವಾ ಸಮರ್ಥಿಸಿಕೊಂಡೋ ದಾರಿ ತಪ್ಪಿಸುವ ದೀವಟಿಗರು ! ; ಇದು ಯಾರ ಸೋಲು , ಯಾರ ಗೆಲುವು? ಮಾಧ್ಯಮದ್ದೇ ? ಎನ್ನುವ ಮಾಧ್ಯಮಮಿತ್ರರದ್ದೇ ?
ಕಲಿತ ಥಿಯರಿಗಳಷ್ಟೇ ಪತ್ರಿಕೋದ್ಯಮ ಅಲ್ಲ ಎಂಬ ಸತ್ಯದಿಂದ ತೊಡಗಿ, ಕಸಿವಿಸಿಯೊಂದಿಗೆ ಆರಂಭಗೊಂಡ ತರ್ಕಗಳು ಇಂದೇಕೋ ಅಸಡ್ಡೆಯಾಗಿ ಬೆಳೆದಿದೆ, ಭ್ರಮನಿರಸನವಾಗಿದೆ. ಆಗೆಲ್ಲಾ ಪ್ರಶ್ನಿಸಿಕೊಳ್ಳುವವಳಿದ್ದೇನೆ., ’ನನ್ನ ಕನಸಿನ ಪತ್ರಕರ್ತೆ ಮೂಲೆ ಪಾಲಾದಳೇ ?’
ಅಷ್ಟಕ್ಕೂ ’ಈ ಕ್ಷೇತ್ರ ಅವಕಾಶಗಳ ಆಗರ, ಜ್ಞಾನದ ಪೀಯೋಶ , ಮೊಗೆದಷ್ಟು ಹರಿವು ಜಾಸ್ತಿ, ಪಡೆದುಕೊಳ್ಳುವ ಜಾಣ್ಮೆ, ಉಳಿಸಿಕೊಳ್ಳುವ ತಾಳ್ಮೆ ಇದ್ದಲ್ಲಿ ಅದು ಬದುಕಿನ ಸಂಜೀವಿನಿ, Sky is as big as your Windowಅಂತೀರಾ?
ತಪ್ಪೇನಿಲ್ಲ ಬಿಡಿ..!

No comments: