Friday, February 26, 2010

'ಮುದ್ರಾರ್ಣವ'ದ ಮೋಹಕ ಮೇಘಮಲ್ಹಾರ... : ಅನಾವರಣದಲ್ಲರಳಿದ ಅಲೆಗಳು

ನೂಪುರದ ಬಳಗಕ್ಕೆ ಅಂದು ಕಣ್ತುಂಬಿಕೊಳ್ಳುವ ಹಬ್ಬ. ಇನ್ನೇನು ವಾರ್ಷಿಕ ಸಂಭ್ರಮಕ್ಕೆ ಎರಡು ತಿಂಗಳಿರುವಾಗಲೇ, ಮೂರನೇ ವರ್ಷಾಂತ್ಯವಾಗುವುದರೊಳಗೆ ಸಂತಸದ ಸಂದರ್ಭಗಳಿಗೆ ಮುನ್ಸೂಚನೆಯೇನೋ ಎಂಬಂತೆ ವಿದ್ವತ್ಪೂರ್ಣ ಕ್ಷಣಗಳನ್ನು ಬರಮಾಡಿಕೊಂಡ ಸಾಂಗತ್ಯ. ನವೆಂಬರ್ ೨೨. ಸಂಜೆ ೪.೩೦. ವಿಮರ್ಶಕ, ಲೇಖಕ ವಿ.ಬಿ. ಅರ್ತಿಕಜೆ, ಹಾಸ್ಯ ಸಾಹಿತಿ ಕು.ಗೋ, ನಾಟ್ಯಾಚಾರ್ಯರುಗಳಾದ ಕಮಲಾಕ್ಷಾಚಾರ್, ದೀಪಕ್ ಕುಮಾರ್, ಉಜಿರೆ ಕಾಲೇಜಿನ ಕಲಾಸಕ್ತ ಉಪನ್ಯಾಸಕರು, ಕಲಾರಸಿಕ ವಿದ್ಯಾರ್ಥಿಗಳು, ಊರಿನ ಹೆಮ್ಮೆಯ ನಾಗರಿಕರು ಮುಂತಾಗಿ; ಕೆಲವೇ ಕ್ಷಣಗಳ ಅವಧಿಯಲ್ಲಿ ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ರಾಮಕೃಷ್ಣ ಸಭಾಂಗಣ ಸಧಭಿರುಚಿಯ ಪ್ರೇಕ್ಷಕರಿಂದ, ಸಾಹಿತಿಗಳಿಂದ ತುಂಬಿ ಹೋಗಿತ್ತು. ಶ್ರೀ ರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮೇಳದಿಂದ ನಿರ್ಮಿತವಾದ ಅದ್ಧೂರಿ ವೇದಿಕೆ. ಅಸೀಮರೆನಿಸಿದವರು ವೇದಿಕೆಯಲ್ಲಿ ಅಲಂಕೃತರಾಗಿದ್ದ ಅರ್ಥಗರ್ಭಿತ ಕ್ಷಣ. ಅದು 'ನೂಪುರ ಭ್ರಮರಿ'ಯ ಸಂಪಾದಕಿ, ಪತ್ರಿಕೋದ್ಯಮ ಪ್ರಾಧ್ಯಾಪಕಿ, ಕಲಾವಿದೆ ಕು. ಮನೋರಮಾ ಬಿ.ಎನ್ ರಚಿತ ಹಸ್ತ-ಮುದ್ರೆಗಳ ಕುರಿತಾದ ಸಂಶೋಧನಾ ಕೃತಿ 'ಮುದ್ರಾರ್ಣವ' ಅನಾವರಣದ ದಿನ.

*********

ಕೃತಿಯನ್ನು ಅನಾವರಣಗೊಳಿಸಿ ಶುಭ ಹಾರೈಸಿದವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಎಸ್ ಡಿ ಎಂ ಕಾಲೇಜು ಪ್ರಾಚಾರ್ಯ ಡಾ. ಬಿ. ಯಶೋವರ್ಮ. ಅವರಾಡಿದ ಮಾತುಗಳೆಡೆಗೆ ಒಂದು ನೋಟ ಇಲ್ಲಿದೆ :

'ಪುಸ್ತಕ ಹೊರತರುವುದು ಎಂದರೆ ಹೆರಿಗೆ ನೋವು ಅನುಭವಿಸಿದಂತೆ. ಆದರೆ ಮಗುವಿನ ಜನನವಾಗಿ ಮುಖ ನೋಡಿದಾಕ್ಷಣ ಹೇಗೆ ತಾಯಿ ಖುಷಿ ಪಡುತ್ತಾಳೋ ಹಾಗೆಯೇ ಲೇಖಕ. ಹೇಗೆ ಮಗು ಹೊಸ ಭರವಸೆಯೊಂದನ್ನು ಕೊಡುತ್ತದೆಯೋ ಹಾಗೆಯೇ ಪುಸ್ತಕವೂ ಸಮಾಜದಲ್ಲಿ ಭರವಸೆಯೊಂದನ್ನು ತರಬೇಕು. ಅಂತಹ ಕೆಲಸ ಮುದ್ರಾರ್ಣವದಲ್ಲಾಗಿದೆ.

ಸಿನಿಮಾ ಮಾಧ್ಯಮದಲ್ಲಿ ಹೂ ಕೊಡುವುದನ್ನು ಅಭಿನಯಿಸಬೇಕಿದ್ದರೆ ನಾಯಕ, ನಾಯಕಿ, ಸುತ್ತಮುತ್ತಲ ಸೆಟ್ಟಿಂಗ್, ಹೂವು, ನೂರಾರು ಜನರು, ಹಾಡು ಇತ್ಯಾದಿ ಅಗತ್ಯ. ಅದೇ ನಾಟಕದಲ್ಲಿ ಬೆಳಕು, ರಂಗಸಜ್ಜಿಕೆ, ಹೂವು, ಹುಡುಗ, ಹುಡುಗಿ ಎಲ್ಲರೂ ಬೇಕು. ಅದೇ ಭರತನಾಟ್ಯದಂತಹ ನೃತ್ಯಮಾಧ್ಯಮದಲ್ಲಾದರೋ ಹೂವೂ ಬೇಡ, ಬೇರಾವುದೇ ಪರಿಕರಗಳೂ ಬೇಡ, ಖರ್ಚೂ ಇಲ್ಲ. ನರ್ತಕಿ ಅಥವಾ ನರ್ತಕ ಭಾವಾಭಿನಯದಿಂದ ಹೂವಿನ ಮುದ್ರೆಯನ್ನು ಕೈಯ್ಯಲ್ಲಿ ಹಿಡಿದು ಅಭಿನಯಿಸಿ ಕೊಟ್ಟಂತೆ ಮಾಡಿದರೂ ಸಾಕು; ಕಲಾರಸಿಕನಿಗೆ ಸಂವಹನವಾಗುತ್ತದೆ. ಜೊತೆಗೆ ಸಂತಸವೂ ಕೂಡಾ ! ಹಾಗೆ ನೋಡಿದರೆ ಹೆಚ್ಚು ವಾಕ್ಯಗಳಲ್ಲಿ ಹೇಳುವುದಕ್ಕಿಂತ ಸಣ್ಣ ಪದಗಳಲ್ಲಿ ಹೆಚ್ಚು ಅರ್ಥವನ್ನು ಗ್ರಹಿಸುವಂತದ್ದು ಕಷ್ಟ. ಆದರೆ ಅದರಿಂದಾಗುವ ಸಂತಸದ ಅನುಭವ ಹೆಚ್ಚು.

ನಾವು ದಿನನಿತ್ಯ ೨೦ ಶೇಕಡಾ ಮಾತಿನ ಮೂಲಕ ಸಂವಹನ ಮಾಡುತ್ತೇವೆ. ಉಳಿದ ಶೇಕಡಾ ೮೦ನ್ನು ಭಾವ, ಸಂಜ್ಞೆ, ಮುದ್ರೆಗಳೇ ಆಧಿಪತ್ಯ ಸಾಧಿಸುತ್ತವೆ. ಭರತನಾಟ್ಯದಲ್ಲಿ ಅಲ್ಲೊಂದು ಇಲ್ಲೊಂದು ಶಬ್ದಗಳು, ಮುದ್ರೆಗಳು ಅರ್ಥವಾದರೂ ಅದರಿಂದ ಅವರ್ಣನೀಯ ಆನಂದವಾಗುತ್ತದೆ. ಒಂದುವೇಳೆ ಎಲ್ಲವೂ ಅರ್ಥವಾಗುವಂತಾದರೆ ಎಷ್ಟು ಸಂತಸ, ಆನಂದವಾಗಬಹುದು? ಸಂಗೀತವನ್ನು ದೃಶ್ಯಮಾಧ್ಯಮದಲ್ಲಿ ಕಲಿಸುವಂತದ್ದೇ ನೃತ್ಯ. ಅದನ್ನು ಅರಿಯುವಲ್ಲಿ ಅವಕಾಶ ನೀಡಿದೆ ಮುದ್ರಾರ್ಣವ. ಇಂತಹ ಹೆಚ್ಚು ಹೆಚ್ಚು ಸಾಧನೆಗಳು ಮೂಡಿಬರಲಿ.

ಇವತ್ತಿನ ಯುವಕರಿಗೆ, ಮಕ್ಕಳಿಗೆ ಶಾಸ್ತ್ರೀಯ ಕಲೆಗಳ ಮೇಲೆ ಆಸಕ್ತಿ ಗತಿಸಿಹೋಗುತ್ತಿದೆ. ಆಸಕ್ತಿ ಹುಟ್ಟಿಸುವ ಅವಕಾಶ ಮತ್ತು ಮಾಹಿತಿಯನ್ನು ಕೊಡುತ್ತಿಲ್ಲವೆಂಬುದು ಕಾರಣಗಳಲ್ಲೊಂದು. ಅದಕ್ಕೆ ಸಂಬಂಧಿಸಿದ ಚೇತೋಹಾರಿಯಾದ ಪುಸ್ತಕಗಳು ಅವರ ಕೈಗೆಟುಕುವಂತಾಗಿಲ್ಲ. ಈ ನಿಟ್ಟಿನಲ್ಲಿ ವಿದ್ವಜ್ಜನರಿಗಷ್ಟೇ ಅಲ್ಲ, ಸಾಮಾನ್ಯರಿಗೂ ಓದಿ ತಿಳಿದುಕೊಳ್ಳಲು ಅವಕಾಶವಾಗುವಂತೆ, ನೃತ್ಯ ಸಂದರ್ಭಗಳಲ್ಲಿ ತನ್ಮಯತೆಯಿಂದ ಅರ್ಥಪೂರ್ಣವಾಗಿ ಭಾಗವಹಿಸಲು, ನೋಡಲು ಅನುಕೂಲವಾಗುವಂತೆ ಪುಸ್ತಕವನ್ನು ಸಾರಸ್ವತಲೋಕಕ್ಕೆ ಕೊಟ್ಟಿದ್ದಾರೆ.'

***********

ಮುದ್ರಾರ್ಣವಕ್ಕೆ ಸುಂದರ ಬೆನ್ನುಡಿಯನ್ನಿತ್ತ ಬಹುಶ್ರುತ ವಿದ್ವಾಂಸ, ಯಕ್ಷಗಾನ ಕಲಾವಿದ, ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ. ಅವರು ಕೃತಿಯನ್ನು ವಿಮರ್ಶಿಸುತ್ತಾ ಮಾತನಾಡಿದ್ದರ ಒಂದು ಝಲಕ್ ಇಲ್ಲಿದೆ :
sdm
'ಭಾರತದ ಆರ್ಷೇಯ ಪರಂಪರೆಗಳು ಮುದ್ರೆಗಳನ್ನು ಸ್ಪಷ್ಟಪಡಿಸುತ್ತವೆ. ಹೋಮಾದಿ ಪೂಜೆ ಪ್ರಾರ್ಥನೆಗಳಾದಿಯಾಗಿ ಮುದ್ರೆಗಳ ಬಳಕೆ ಮೊದಲಿನಿಂದಲೂ ಇತ್ತು. ಇಂತಿಂಥ ಮುದ್ರೆಗಳಿಗೆ ಇಂತಿಂಥ ಫಲಗಳು ಎಂಬ ಧಾರ್ಮಿಕ ಪ್ರಜ್ಞೆ ಮತ್ತು ಅದಕ್ಕೆ ಸಾಕ್ಷಿ ಕೂಡಾ ಇತ್ತು. ಇಂತಹ ಮುದ್ರಾಪ್ರಪಂಚದ ಕುರಿತಂತೆ, ಅದರ ಹುಟ್ಟು, ಬೆಳವಣಿಗೆ, ವಿವಿಧ ಆಯಾಮ, ಉಪಯೋಗ, ವಿನಿಯೋಗದ ಕುರಿತಂತೆ ವಿಸ್ತಾರವಾದ ಗ್ರಂಥವಿದು. ಶಬ್ದಕ್ಕೆ ಶಕ್ತಿಯಿದೆ ನಿಜ. ಆದರೆ ಸಂವಹನ ಎಂದಾಗ ಮಾತಿನ ಹೊರತಾಗಿಯೂ ಹೇಗೆಲ್ಲಾ ಇತರ ಸಾಧ್ಯತೆಗಳಿವೆ ಎಂಬುದನ್ನು ಪುಸ್ತಕ ತಿಳಿಸಿಕೊಡುತ್ತದೆ.

ಮುದ್ರೆಗಳ ಬಗ್ಗೆ ಬಂದಿರುವ ಪುಸ್ತಕಗಳ ಪೈಕಿ ಅಂತರ್‌ಶಿಸ್ತೀಯ ನೆಲೆಯಲ್ಲಿ ಹೊರಬಂದಿರುವ ಭಾರತದ ಮೊದಲ ಪುಸ್ತಕವಿದು. ಒಂದೇ ನೋಟಕ್ಕೆ ಓದಿ ಮುಗಿಸುವ ಪುಸ್ತಕವಲ್ಲ. ನೃತ್ಯದಲ್ಲಿನ ಅನೇಕ ಹಿರಿ- ಕಿರಿಯ ಅಧ್ಯಾಪಕರಿಗೆ, ಗುರುಗಳಿಗೆ, ವಿದ್ಯಾರ್ಥಿಗಳಿಗೆ ದಶಕ ದಶಕಗಳ ಕಾಲಕ್ಕೂ ಮಾರ್ಗದರ್ಶಿಯಾಗಬಲ್ಲಂತದ್ದು. ಯಾವ ಪಿಹೆಚ್‌ಡಿ ಸಂಶೋಧನೆಗಳಿಗೂ ಕಡಿಮೆಯಿಲ್ಲದಂತಿದೆ.

ಭಾರತೀಯ ಕಾವ್ಯ ಮೀಮಾಂಸೆ, ಕಲಾಮೀಮಾಂಸೆಯು ಜಗತ್ತಿಗೆ ಬೇರಾವ ಸಂಸ್ಕೃತಿಯೂ ಅಷ್ಟಾಗಿ ನೀಡದ ವಿಶಿಷ್ಟವಾದ ಕೊಡುಗೆಗಳನ್ನು ನೀಡಿದೆ. ಬೇರೆ ಯಾವುದೇ ದೇಶ-ಸಂಸ್ಕೃತಿಗಳಲ್ಲೂ ಇಲ್ಲದ, ಅಭಿಪ್ರಾಯ ವ್ಯತ್ಯಾಸಗಳು ಬಾರದ, ವಾದಕ್ಕೆ ಎಡೆಯಿರದ ಸಂಪೂರ್ಣವಾಗಿ ಆದರಿಸಬೇಕಾದ ಬಗೆಯ ಕಲಾತತ್ವಗಳನ್ನು ಕೊಟ್ಟಿದೆ. ಇಲ್ಲಿ ಕಾವ್ಯ ಎಂದರೆ ಕೇವಲ ಠಿoeಣಡಿಥಿ ಮಾತ್ರ ಅಲ್ಲ. ಗೀತ, ವಾದ್ಯ, ನೃತ್ಯ, ಪಠ್ಯ, ಸಂಗೀತಗಳನ್ನು ಒಳಗೊಂಡ ನಿತ್ಯ ನಿರಂತರವೆನಿಸುವ ಪರಿಕಲ್ಪನೆ. ಇಲ್ಲಿನ ಮಣ್ಣಿನ ನೃತ್ಯ, ನಾಟಕ, ಗೀತ, ವಾದ್ಯಗಳ ಪರಿಕಲ್ಪನೆ ಓದಿದಷ್ಟೂ, ಅನುಭವಿಸಿದಷ್ಟೂ ಹೊಸ ಹೊಳಹುಗಳನ್ನು ಕೊಡುವಂತದ್ದು; ದೂರದೃಷ್ಟಿಯುಳ್ಳವು ; ಸಮಗ್ರವೆನಿಸುವಂತದ್ದು. ಅದರಲ್ಲಿ 'ರಸೋವೈಸಃ' ಭಾರತೀಯ ಸಂಸ್ಕೃತಿಯು ನೀಡಿದ ಆಧ್ಯಾತಿಕವಾಗಿಯೂ, ಕಲಾದೃಷ್ಟಿಯಿಂದಲೂ ಸಂಪೂರ್ಣವೆನಿಸುವ ರಸಪರಿಕಲ್ಪನೆ. ಅಂತಹ ರಸ ಆಧರಿತ ನೃತ್ಯಕ್ಕೆ ಸಂಬಂಧಿಸಿದ ವಿದ್ವತ್ಪೂರ್ಣ ಸಂಶೋಧನಾ ಅಧ್ಯಯನಗಳಲ್ಲಿ ಮುದ್ರಾರ್ಣವ ಮೊದಲನೇಯ ದರ್ಜೆಯದು.

ಭಾರತೀಯ ನೃತ್ಯಗಳ ಪೈಕಿ ಭರತನಾಟ್ಯಕ್ಕೆ ಎಲ್ಲದಕ್ಕಿಂತ ಮೇಲ್ದರ್ಜೆಯ, ಅತ್ಯುನ್ನತ ಸ್ಥಾನವಿದೆ. ಆದರೆ ಇಂದಿನ ಭರತನಾಟ್ಯ ಕಾರ್ಯಕ್ರಮ, ತರಗತಿಗಳು ಕೇವಲ ಪ್ರದರ್ಶನದ ಉದ್ದೇಶವಷ್ಟೇ ಹೊಂದಿ ಗುಣಾತ್ಮಕವಾದ ಅಧ್ಯಯನಗಳು ಬೆರಳೆಣಿಕೆಯಾಗುತ್ತಿವೆ. ದಿನದಿಂದ ದಿನಕ್ಕೆ ಕಳಪೆಯಾಗುತ್ತಿವೆ. ನೃತ್ಯ ಸಂಗೀತಗಳು ಹೆಚ್ಚು ತಪಸ್ಸನ್ನು ಬಯಸುವ ಕ್ಷೇತ್ರ. ಆದರೆ ಇಂದು ೮ ದಿನದಲ್ಲಿ ಕಲಿತು, ೧೬ ದಿನದೊಳಗೆ ಸ್ಟೇಜ್ ಹತ್ತಬೇಕು ಎಂದೇ ಆಗಿದೆ. ಇಂತಹ ಸಂದರ್ಭದಲ್ಲಿ ವೃತ್ತಿಪರವಾದ ಯಶಸ್ಸನ್ನು ಬದಿಗಿರಿಸಿ ಇಂತಹ ಕೆಲಸ ಮಾಡುವುದು ಅಷ್ಟು ಸುಲಭ ಅಲ್ಲ. ಭರತನಾಟ್ಯ ಸ್ವರೂಪದ ಆಂಗಿಕ ವಿಷಯಗಳಲ್ಲಿ ಬರುವ ಮುದ್ರಾವಿಭಾಗದ ಬಗ್ಗೆ ಗಂಭೀರವಾದ, ಪರಿಣಾಮಕಾರಿಯಾದ ಸಂಶೋಧನೆ ನಿಜಕ್ಕೂ ಶ್ಲಾಘನೀಯ.

ಸಂಶೋಧನೆಗಳು ಸಮಾಜಮುಖಿಯಾಗಿರಬೇಕು ; ಆಯಾಯ ಕ್ಷೇತ್ರಕ್ಕೆ ಪ್ರಯೋಜನ ಕೊಡಬೇಕು ; ಅದರಲ್ಲಿ ಕೆಲಸ ಮಾಡುವವರಿಗೆ ಪ್ರೇರಣೆ ಕೊಡಬೇಕು ; ಆ ಕ್ಷೇತ್ರಕ್ಕೆ ಪ್ರಯೋಜನ, ಅರಿವು ನೀಡುವ ಕೆಲಸವಾಗಬೇಕು ; ಕೇವಲ ಗ್ರಂಥಾಲಯಕ್ಕೋ, ಪ್ರಕಾಶಕರಿಗೋ ಸೀಮಿತವಾಗಿ ಉಳಿಯದೆ ಉಪಯುಕ್ತ ಚರ್ಚೆಗಳನ್ನು, ವಿಚಾರಗಳನ್ನು ವಿಷಯಕ್ಕೆ ಸಂಬಂಧಿಸಿದಂತೆ ಬೆಳೆಸಬೇಕು. ಈ ನಿಟ್ಟಿನಲ್ಲಿ ಗಮನಿಸಿದರೆ ಮುದ್ರಾರ್ಣವ ಸಾರ್ಥಕತೆ ಪಡೆದಿದೆ. ಈ ಕೃತಿಯಲ್ಲಿ ಬಹುಮುಖ್ಯವಾಗಿ ಸಮಾಜದಲ್ಲಿ ಮುದ್ರೆಗಳ ಬಳಕೆಯ ಬಗ್ಗೆ, ಪ್ರೇಕ್ಷಕರ ಗ್ರಹಿಕೆ ಹೇಗಿದೆ ಎನ್ನುವುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಇಂದಿನ ಬಹುಪಾಲು ಸಂಶೋಧನೆಗಳ ರೀತಿ-ನೀತಿ, ಸ್ಥಿತಿ-ಗತಿ ಸಮಾಜಕ್ಕೆ ಆದರ್ಶಪ್ರಾಯವಾಗುವಂತಿಲ್ಲ. ಈಗಲೂ 'ದೇಶದ ಸ್ವಾತಂತ್ರ್ಯದಲ್ಲಿ ಗಾಂಧೀಜಿಯವರ ಪಾತ್ರ' ಎಂಬಂತ ಚರ್ವಿತ ಚರ್ವಣ ವಿಷಯಗಳನ್ನೇ ಇನ್ನೂ ಕೂಡಾ ಸಂಶೋಧನೆ ಮಾಡಿದರೆ ಅದರ ಸಾಮಾಜಿಕ ಬಳಕೆಯ ವ್ಯಾಪ್ತಿ ಕುಸಿಯುತ್ತದೆ. ಅದರಲ್ಲೂ ಗುಣಮಟ್ಟದ ಸಂಶೋಧನೆಗಳು ನೃತ್ಯಕ್ಕೆ ಸಂಬಂಧಿಸಿದಂತೆ ಭಾರೀ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಗಮನಿಸಿದಾಗ ಯಕ್ಷಗಾನದಲ್ಲಿ ನಾಟ್ಯಶಾಸ್ತ್ರ ತಿಳಿಸುವ ಚಾರಿ, ಕರಣ, ಭೇದಗಳೆಲ್ಲವೂ ಇದ್ದರೂ ; ವ್ಯವಸ್ಥಿತವಾಗಿಲ್ಲ. ಆದರೆ ಇಂದಿನವರೆಗೂ ಯಕ್ಷಗಾನದಲ್ಲಿ ಬಂದಿರುವ ಅಷ್ಟೂ ಸಂಶೋಧನೆಗಳೂ ಗುಣಮಟ್ಟವುಳ್ಳವೇ ಆಗಿದೆ.

ಆಸಕ್ತಿಯ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದರೆ ಹೆಚ್ಚು ಬೆಳವಣಿಗೆಯಿದೆ ಎಂಬುದಕ್ಕೆ ಮುದ್ರಾರ್ಣವವೇ ಸಾಕ್ಷಿ. ವಿಷಯದ ಆಳ ಮುಟ್ಟುವಲ್ಲಿ ಸಾಕಷ್ಟು ಪರಿಶ್ರಮ ಹೊಂದಿರುವ ಈ ಕೃತಿ ಓದುಗರು ಅಗತ್ಯ ಪರಾಮರ್ಶಿಸಲೇಬೇಕಾದದ್ದು.'

*******

ಸಭಾಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಟಿ. ಶಾಮ ಭಟ್ ಅವರು ಮಾತನಾಡಿ, ನೃತ್ಯ ಕಲಾವಿದರು ಪುಸ್ತಕವನ್ನು ಅಧ್ಯಯನ ಮಾಡಿ ನಾಟ್ಯ ಮಾಡುವಾಗ ಅನುಸರಿಸಿದರೆ ಚೆನ್ನ. ಇನ್ನು ಮುಂದೆಯೂ ಉತ್ತಮ ಕೃತಿಗಳು ಹೊರಬರಲಿ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಕಾರ್ಯವೂ ಈ ನಿಟ್ಟಿನಲ್ಲಿ ಶ್ಲಾಘನೀಯ ಎಂದು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಖ್ಯಾತ ಬರಹಗಾರ ಪ. ರಾ. ಶಾಸ್ತ್ರಿ ಅವರಿಗೆ ಕುರಿಯ ವಿಠಲ ಶಾಸ್ತ್ರಿ ಸಮ್ಮಾನ ಮತ್ತು ನೀರ್ಪಾಜೆ ಭೀಮ ಭಟ್ಟ ಸಂಸ್ಮರಣಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮನೋರಮಾ ಅವರನ್ನು ಪ್ರತಿಷ್ಠಾನದ ವತಿಯಿಂದ ಡಾ. ಬಿ. ಯಶೋವರ್ಮ ಅವರು ಗೌರವಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ. ಸಾ. ಪ. ಪೂರ್ವಾಧ್ಯಕ್ಷ ಶ್ರೀ ಹರಿಕೃಷ್ಣ ಪುನರೂರು, ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸಿ ಮಾತನಾಡಿದರು. ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರೂ, ಕುರಿಯ ವಿಠಲಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಗೌರವಾಧ್ಯಕ್ಷರೂ ಆದ ಶ್ರೀ ವಿಜಯರಾಘವ ಪಡ್ವೆಟ್ನಾಯ, ಮನೋರಮಾ ಅವರ ಹೆತ್ತವರಾದ ಶ್ರೀ ಸಾನ್ನಿಧ್ಯ ಪ್ರಕಾಶನದ ಅಧ್ಯಕ್ಷ, ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಪುರೋಹಿತ ವೇದಮೂರ್ತಿ ಬಿ. ಜಿ. ನಾರಾಯಣ ಭಟ್, ಮತ್ತು ಸಾವಿತ್ರಿ ಭಟ್ ಭಾಗವಹಿಸಿದ್ದರು.

ಕಲಾವಿದ, ಸಂಶೋಧಕ ಶ್ರುತಕೀರ್ತಿರಾಜ್ ಅವರ ನಿರೂಪಣೆಯಲ್ಲಿ ಆರಂಭಗೊಂಡ ಕಾರ್ಯಕ್ರಮದ ಆಶಯ, ಸ್ವಾಗತವನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಬಿಚ್ಚಿಟ್ಟವರು ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಸಂಚಾಲಕ, ಕಲಾವಿದ, ಹೊಸನಗರ ಮೇಳದ ಮೆನೇಜರ್ ಶ್ರೀ ಉಜಿರೆ ಅಶೋಕ್ ಭಟ್. ಪುಸ್ತಕ ನಿರೂಪಣೆಯ ಹಿಂದಿನ ಶಕ್ತಿ-ಸ್ಫೂರ್ತಿಗಳನ್ನು, ನೋವು-ನಲಿವನ್ನು, ಧನ್ಯವಾದ-ಕೃತಜ್ಞತೆ ಅರ್ಪಣೆಯೊಂದಿಗೆ ನೆರವೇರಿಸಿದವರು ಮನೋರಮಾ. ನಂತರ ಅದ್ಧೂರಿಯಿಂದ ಜರುಗಿದ ಯಕ್ಷ ಸಪ್ತಾಹ ಪ್ರಯುಕ್ತದ ಎರಡು ಯಕ್ಷಗಾನ ಬಯಲಾಟಗಳು ಭಾರೀ ಜನಸ್ತೋಮದ ಮೆಚ್ಚುಗೆಗೆ ಪಾತ್ರವಾದದ್ದಲ್ಲದೆ ; ಪರಂಪರೆ-ಆಧುನಿಕ ಪ್ರಜ್ಞೆಗಳಿಗೆ ಸಾಕ್ಷಿ ಹೇಳಿತ್ತು ! ಭ್ರಮರಿಗೆ ಭವಿತವ್ಯದೆಡೆಗಿನ ಭರವಸೆಗಳನ್ನು ಭದ್ರಗೊಳಿಸುವ ಅಮಿತ ಪ್ರೋತ್ಸಾಹ, ಆಶೀರ್ವಾದ ದೊರಕಿತ್ತು.
' ಮುದ್ರಾರ್ಣವ '- ನಾಟ್ಯಶಾಸ್ತ್ರ, ಅಭಿನಯದರ್ಪಣ, ಹಸ್ತಲಕ್ಷಣದೀಪಿಕಾ, ಹಸ್ತಮುಕ್ತಾವಳಿ, ಹಠಯೋಗಪ್ರದೀಪಿಕಾ ಮುಂತಾಗಿ ಸುಮಾರು ನೂರಕ್ಕೂ ಮಿಕ್ಕಿದ ಗ್ರಂಥಾವಲೋಕನ, ಗುಣಾತ್ಮಕ ಪರಿಶೀಲನೆ, ವಿದ್ವಾಂಸರ ಸಂದರ್ಶನ, ನೃತ್ಯ ಪ್ರದರ್ಶನಗಳ ಸಮೀಕ್ಷೆಗಳನ್ನೊಳಗೊಂಡ ; ಸಂಗೀತ, ನೃತ್ತ-ನೃತ್ಯ-ನಾಟ್ಯ, ಯೋಗ, ತಂತ್ರ-ಮಂತ್ರ, ಧಾರ್ಮಿಕ ಪೂಜಾ ವಿಧಿ, ವೇದ-ಶಾಸ್ತ್ರ-ಪುರಾಣ, ಸಾಮಾನ್ಯ ಜೀವನಪದ್ಧತಿ, ಮುದ್ರಾ ವಿಜ್ಞಾನ, ಪ್ರತಿಮಾಶಾಸ್ತ್ರ ಮುಂತಾದವುಗಳಲ್ಲಿ ಉಪಯೋಗಿಸುವ ಸಾವಿರಕ್ಕೂ ಹೆಚ್ಚು ಅಸಂಯುತ, ಸಂಯುತ ಹಸ್ತ-ಮುದ್ರೆಗಳ ಸಂವಹನದ ಬಹು ಆಯಾಮಿ ಅಧ್ಯಯನವಾಗಿದೆ.


' ಮುದ್ರಾರ್ಣವ ';- ಈ ಕೃತಿಯನ್ನು ಯಕ್ಷಗಾನದ ಅಗ್ರಮಾನ್ಯ ಕಲಾವಿದ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣಾರ್ಥವಾಗಿ ರೂಪುಗೊಂಡ ಯಕ್ಷಗಾನ ಪ್ರತಿಷ್ಠಾನವು ಪ್ರಕಾಶಿಸಿದ್ದು, ಪ್ರತಿಷ್ಠಾನದ ಸಂಚಾಲಕರಾಗಿ ಹೊಸನಗರ ಶ್ರೀರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮೇಳದ ಸಂಚಾಲಕ, ಯಕ್ಷಗಾನ ಕಲಾವಿದ ಶ್ರೀ ಉಜಿರೆ ಅಶೋಕ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಪುಸ್ತಕದ ಬೆಲೆ ರೂ. ೨೫೦/- ಆಗಿದ್ದು ; ಪ್ರತಿಗಳಿಗಾಗಿ ದೂರವಾಣಿ ೯೯೬೪೧೪೦೯೨೭, ೯೪೪೯೫೧೦೬೬೬ ಸಂಪರ್ಕಿಸಬಹುದು.
ಖುಷಿ ತಂದ ಕ್ಷಣ

ಕಾದು, ಕಾತರಿಸಿ, ಕನವರಿಸಿ, ನೊಂದು-ಬೆಂದು ನಡೆದು ಪಡೆದ ಖುಷಿ ಎಂದೆಂದಿಗೂ ಇಮ್ಮಡಿಯಾಗುತ್ತಲೇ ಇರುತ್ತದೆ ಎಂಬ ಮಾತು ಸುಳ್ಳಲ್ಲ. ಇಂದಿಗೆ ವಿಶಾಲ ಬಯಲಿನಲ್ಲಿ, ಎತ್ತರದ ಅವಕಾಶದಲ್ಲಿ, ಅನಂತ ಸಾಗರದ ಅಲೆಗಳ ನಡುವೆ ಜೋರಾಗಿ ‘ಹುರ್ರೇ’ ಎಂದು ಮನಬಿಚ್ಚಿ ಕೂಗಿ ಧ್ವನಿಗೈಯ್ಯಬೇಕೆನ್ನಿಸುತ್ತಿದೆ. ಅವು ಮಾರ್ದನಿಯಾಗಿ ನಿತ್ಯವೂ ಅನುರಣಿಸಬೇಕೆನ್ನಿಸುತ್ತಿದೆ. ಕಾರಣ ; ನೂಪುರ ಭ್ರಮರಿ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಫಾರ್ ಇಂಡಿಯಾದಿಂದ ನೋಂದಾವಣೆಗೊಂಡಿದೆ ! ಇದರಲ್ಲೇನಿದೆ? ಸಾಮಾನ್ಯ. ಕಾಣಿಸುವುದು ಸಹಜ. ಆದರೆ ಕಳೆದ ಮೂರು ವರ್ಷಗಳಲ್ಲಿ ನೂಪುರದ ಗೆಳೆಯರ ಬಳಗ ಅದಕ್ಕಾಗಿ ನಡೆಸಿದ ಹೋರಾಟ, ಪ್ರತೀ ಅಂಚೆಯೂ ‘ಸಾನ್ನಿಧ್ಯ’ಕ್ಕೆ ಬಂದಾಗ ಕುತೂಹಲ-ಆತಂಕದಿಂದ ಕಾದು ನೋಡುತ್ತಿದ್ದ ಕಣ್ಣುಗಳು ; ಖಾಸಗೀ ಪ್ರಸಾರದ ಪತ್ರಿಕೆಯೆಂಬ ಬಂಧಗಳಿಂದ ಹೊಸ ಹೊಸಿಲಿಗೆ ಬಂದು ನಿಂತು ಇಂದಿಗೆ ಸಂತಸದ ಹನಿಗೂಡಿರುವುದನ್ನು ಕಾಣುವಾಗ ಸಾರ್ಥಕವೆನಿಸುತ್ತದೆ. ಹೌದು ; ಚಿಕ್ಕಪುಟ್ಟ ಸಂತಸಗಳೇ ಬದುಕಿನ ಸಮೃದ್ಧತೆಯನ್ನು ಬದುಕಿಸುತ್ತವೆ.

ಇವೆಲ್ಲದಕ್ಕೂ ‘ಮುದ್ರಾರ್ಣವ’ವೇ ಮುನ್ನುಡಿ ಬರೆದಿರಬೇಕೆನ್ನಿಸುತ್ತಿದೆ. ಸಂಶೋಧನೆಯ ಚಿಂತನೆ ಪಡಿ ಮೂಡಿದ ಕ್ಷಣಕ್ಕೆ ಮತ್ತಷ್ಟು ಹುಡುಕುವಿಕೆಯ ಎಳೆಗಳು ಸಂಲಗ್ನಗೊಂಡಿವೆ. ನೂಪುರದ ನಾಂದಿ ಧ್ವನಿಸಿದೆ. ನಂತರ, ಕೃತಿ ಅನಾವರಣಗೊಂಡ ಶುಭಲಗ್ನವೋ ಏನೋ, ಮೂರರ ವರ್ಷವನ್ನು ಸ್ವಾಗತಿಸುವ, ನಾಲ್ಕನೇ ಸಂಪುಟವನ್ನು ತೆರೆಯುತ್ತಿರುವ ಘಳಿಗೆಗೆ ಪ್ರೇರಕವಾಗಿ, ಪೂರಕವಾಗಿ ಕೈಯ್ಯಲ್ಲಿ ನೋಂದಾಯಿತಪತ್ರದ ಸಾನ್ನಿಧ್ಯವಿದೆ. ಜೊತೆಗೆ ಶ್ರೀ ಸಾನ್ನಿಧ್ಯ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಇದೀಗ ಹೊಸ ಹುರುಪಿನಿಂದ ತನ್ನ ನಂತರದ ಸದಭಿರುಚಿಯ ಪುಸ್ತಕದ ಆವೃತ್ತಿಗಳಿಗೆ ಸಜ್ಜಾಗಿ ನಿಂತಿದೆ ! ಒಟ್ಟಿನಲ್ಲಿ ಸಂಭ್ರಮದ ಮೂರನೇ ವರ್ಷದ ಆಚರಣೆಗೆ ಅಡಿಯಿಡುವ ಮುನ್ನ ಹೊರೆಯೆನಿಸದ ಹೊಣೆಗಾರಿಕೆಯ ಪ್ರೀತಿ ಹೆಗಲನ್ನು ತಟ್ಟಿದೆ. ಇನ್ನೊಂದಷ್ಟು ಖುಷಿಯ ಕ್ಷಣಗಳನ್ನು ಮುಂದಿನ ದಿನಗಳಲ್ಲಿ ಬರಮಾಡಿಕೊಳ್ಳುವ ನಿರೀಕ್ಷೆಗಳೂ ಇವೆ !

ಹಾಗೆ ನೋಡಿದರೆ, ಪ್ರಾರಂಭದ ದಿನಗಳಲ್ಲಿ ಮೂದಲಿಕೆಯ ಮಾತುಗಳೇ ಸುತ್ತಲಿನಿಂದ ಪ್ರತಿಧ್ವನಿಸಿತ್ತು. ‘ಲಾಭದ ಲವಲೇಶ ಆಶೆಗೂ ಬಗ್ಗದೆ ಅದ್ ಹೇಗೆ ಪತ್ರಿಕೆ ನಡೆಸುವಿರಿ ? ಸಾಕಷ್ಟು ದೂರಗಾಮಿ ಚಿಂತನೆಗಳಿರಬೇಕು. ಪತ್ರಿಕೆ ನಡೆಸುವುದು ಅಂದರೆ ಬೆಂಕಿಯ ಜೊತೆಗಿನ ಬದುಕು. ಮೂರೇ ದಿನದಲ್ಲಿ ಮುಚ್ಚಿ ಹೋಗುತ್ತದೆ’ ಎಂಬ ಹಾರೈಕೆ(?), ಪ್ರಶ್ನೆಗಳು ಇದಿರು ನಿಂತು ಅಣಕಿಸಿದ್ದವು. ಹಾದಿ ನಿಚ್ಚಳವಾಗತೊಡಗಿದಾಗ ಗಮ್ಯದೆಡೆಗೆ ಗಮನ ಸಹಜವಾಗಲೇಬೇಕಲ್ಲವೇ? ಅಡಿ ಮುಂದಿಟ್ಟದ್ದನ್ನು ಹಿಂದೆಗೆಯುವ ಪ್ರಶ್ನೆಯೇ ಇರಲಿಲ್ಲ. ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮತ್ತು ಅದರ ಮಟ್ಟವನ್ನು ವರ್ಷದಿಂದ ವರ್ಷಕ್ಕೆ ಎತ್ತರಕ್ಕೇರಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಆದ್ದರಿಂದ ಪ್ರಶೆಗಳನ್ನೇ ಸವಾಲುಗಳಾಗಿ ಮಾಡಿಕೊಂಡು ಬೆಂಕಿಯೆಂಬ ಉರಿಯ ಕಲ್ಪನೆಯಿದ್ದರೂ ಅದರಿಂದಲೂ ಸ್ವಾದಿಷ್ಟ, ಆರೋಗ್ಯಕರ ಅಡುಗೆಯನ್ನೂ ಸಾಧಿಸಿ ಉಣಿಸಬಹುದಾದರೆ ಯಾಕಾಗಬಾರದು ಎಂದು ಹೊರಟಿದ್ದೇ ; ಈವರೆಗೆ ಸಂಗ್ರಹಿಸುವ ಪದಾರ್ಥಗಳಲ್ಲೇ ಪಾಕವೈವಿಧ್ಯವನ್ನು ಸಮಗ್ರವಾಗಿ ಉಣಬಡಿಸುತ್ತಲಿದ್ದೇವೆ. ಇದು ದಣಿದು ಬಂದವರಿಗೆ ನೆರಳಾಗಿದೆ ; ಬಾಯಾರಿದವರಿಗೆ ನೀರುಣಿಸಿದೆ ; ತಂಬೆಲರಾಗಿ ಗಾಳಿ ಬೀಸಿದೆ ; ಬೆಳೆಯುವ ಸಸಿಗಳಿಗೆ ಪೋಷಣೆಯನ್ನೀಯುತ್ತಿದೆ; ಆರೋಗ್ಯವಾದ ಆಹಾರದ ಮಾದರಿಗಳನ್ನು ನೀಡುತ್ತಲಿದೆ ; ಶಕ್ತಿಯನ್ನು ರೂಢಿಸುತ್ತಲಿದೆ ; ಹಳತಿನ ಆಸರೆಯಲ್ಲಿ ಹೊಸ ದಿಕ್ಕಿನೆಡೆಗೆ ನಡೆವ ಸ್ಫೂರ್ತಿಯನ್ನೀಯುತ್ತಿದೆ ; ಹಂಚಿಕೊಳ್ಳುವ ವೇದಿಕೆಯಾಗಿದೆ ಎಂಬುದು ನಮ್ಮ ನೆಮ್ಮದಿ.

ಪತ್ರಿಕೆಯ ಜೊತೆಗಿನ ಪಯಣ ಅಷ್ಟೊಂದು ಸುಲಭವೇ? ನಿರಂತರ ಬದ್ಧತೆಯನ್ನು ಬೇಡುವ ಮತ್ತು ಸವಾಲು, ಸ್ಪರ್ಧೆಗಳನ್ನು ನೀಡುವ ರಂಗವಿದು. ಹಾಗಾಗಿ ಸಂಬಂಧ, ಚಿಂತನೆಗಳ ಗುಣಾಕರ ಭಾಗಾಕಾರಗಳು ನಿರಂತರ ನಡೆದೇ ಇವೆ. ಇಂದಿನ ಖರ್ಚುವೆಚ್ಚಗಳ ನಡುವಿನಲ್ಲೂ ಕಲಾರಸಿಕ ಓದುಗರ ಸಹಕಾರದಿಂದ ಮುನ್ನಡೆದಿದ್ದೇವೆ. ಗೆಳೆಯರ ಬಳಗದ ಅದ್ಭುತ ಸಹಕಾರದ ನಡುವೆಯೂ ಟೀಕೆಗಳು ತಿವಿದಿವೆ; ಎಚ್ಚರಿಸಿವೆ; ವಿರೋಧಾಭಾಸಗಳು, ಮೇಲಾಟಗಳು ಬೆನ್ನು ಬಿಡದೆ ಹಿಂಬಾಲಿಸಿವೆ ; ಒಳಿತು ಕೆಡುಕುಗಳ ದರ್ಶನ ಆಗಿದೆ ; ಒತ್ತಾಸೆ ಬೇಡಿವೆ. ಅಷ್ಟೇ ಅಲ್ಲ; ಇದು ಜೀವನಕ್ಕೊಂದು ನಿಶ್ಚಿತ ಶಿಸ್ತನ್ನು ಕೊಟ್ಟಿದೆ. ಆ ಶಿಸ್ತು ನಮ್ಮ ಕಡಲತಡಿಯ ಮುತ್ತಿನಂತಾದರೂ ; ಮತ್ತಷ್ಟು ಮಣಿಗಳನ್ನು ಪೋಣಿಸುವೆಡೆಗೆ ಹೆಜ್ಜೆ ಹೊರಟಿದೆ. ನಮ್ಮೆಲ್ಲಾ ಪ್ರಯತ್ನಗಳಿಗೂ ನೂತನ ಭಾಷ್ಯ ಬರೆದಿದೆ.

ಇದೆಲ್ಲವೂ ಸಾಧ್ಯವಾದದ್ದು ನೂಪುರದಿಂದ. ನಮ್ಮೆಲ್ಲರಿಂದ ಬೆಳೆದು, ಇದೀಗ ನಮ್ಮನ್ನು ಬೆಳೆಸುತ್ತಿರುವ ನೂಪುರವೆಂಬ ಪ್ರೀತಿಗೆ ನಾವು ಋಣಿಗಳೇ ಹೌದು ! ಜೊತೆಗೆ ಬೆಳೆಸಿದ ಓದುಗರಾದ ನಿಮಗೂ ಋಣಿ. ‘ಯೋಚನೆಗಳಿಗೆ ಕಾಲುಗಳಿದ್ದರೆ ಆದರ್ಶಗಳಿಗೆ ರೆಕ್ಕೆಗಳಿರುತ್ತವೆ.’ ಆದರ್ಶವೂ ಒಂದು ಭ್ರಮೆಯೇನೋ ಎಂಬುದು ಕಾಡುತ್ತಲಿದ್ದರೂ ; ಅದರ ಉತ್ಪನ್ನ ವಿಚಾರಧಾರೆಗಳ ಬೆಂಬಲದ ನಡೆಗೆ ತಿರುವು-ಮುರುವುಗಳು, ಕಲ್ಲುಕೊರಕುಗಳು ಅಗಾಧವೆನಿಸಿದರೂ ; ದೀರ್ಘಕಾಲಕ್ಕೆ ಅವೇ ವಿಚಾರಗಳು ನಿತ್ಯವಿನೂತನವಾಗಿ, ಉತ್ಕೃಷ್ಟವೆನಿಸಿ ಬಾಳುತ್ತವೆ. ಅದಕ್ಕೆ ಉದಾಹರಣೆ, ಕಟ್ಟಿದ ಪುಟ್ಟ ಪುಟ್ಟ ಕನಸುಗಳು ನಡೆಸಿದ ಹೆಜ್ಜೆಗಳು ಅಗಾಧ ಸಾಧ್ಯತೆಗಳ ಮಹಾಪೂರವನ್ನೇ ಇಂದಿಗೆ ತೋರಿಸಿಕೊಡುತ್ತಿರುವುದು. ನೃತ್ಯ ವಲಯದಲ್ಲಿ ಈಗಾಗಲೇ ಮನ್ನಣೆ, ಪ್ರೋತ್ಸಾಹಗಳ ದಿಂಡು ಬೆನ್ನು ತಟ್ಟುತ್ತಿದೆ. ಕೆಲವೆಲ್ಲಾ ಅಚ್ಚರಿಯೆಂಬಂತೆ ಒದಗಿಬಂದಿವೆ. ಹಾಗಾಗಿ ಒದಗಿದ, ಒದಗುವ, ದುಡಿದ, ದುಡಿಯುವ ಕೈಗಳಿಗೆಲ್ಲರಿಗೂ ಅಭಿವಂದನೆಗಳಿವೆ, ಅನಂತ ಅರ್ಪಣೆಗಳಿವೆ.

ಆದರೆ ಗುರಿಯೆಂಬುದು ತಾಣವಲ್ಲ. ಅದು ನಡೆದಷ್ಟೂ ಸವೆಯದ ಹಾದಿ. ಹಾಗಾಗಿ ಕೂಡಿ ಮುನ್ನಡೆಯುವ ಬಲವಿದ್ದರೆ ದಾರಿಯ ಆಯಾಸ, ಏರು ತಗ್ಗುಗಳು ಅಷ್ಟಾಗಿ ನಮ್ಮನ್ನು ಕಾಡದು. ಇನ್ನೂ ಮುಂದಕ್ಕೂ ಹೆಜ್ಜೆಗಳ ಬವಳಿಕೆ ಗೊತ್ತಾಗದಂತೆ ನೀವು ಬೇಕು. ಕಾಳಜಿ, ಅನುಸರಣೆ, ಜೊತೆಗಿರುವ ಹುಮ್ಮಸ್ಸು, ಒಮ್ಮನಸ್ಸು ಬೇಕು. ನೋವು, ಸಂಕಟ ಬಿಗುಮಾನಗಳ ಬಿಮ್ಮಗಿನ ಮುಖ ಹೊತ್ತು ಕೂರದೆ, ಪ್ರೀತಿ-ಕಕ್ಕುಲತೆಗಳನ್ನು ಬರಮಾಡಿಕೊಳ್ಳಬೇಕು. ನಿಮ್ಮ ಸಹಕಾರ, ಆಶೀರ್ವಾದ ಎಂದೆಂದಿಗೂ ನೂಪುರವನ್ನು ಹರಸಬೇಕು. ಈ ಬೆಳವಣಿಗೆಯ ನಿರಂತರ ಅಭೀಪ್ಸೆಗೆ ಜೊತೆಗೆ ಇರುತ್ತೀರಲ್ವಾ? ನೂಪುರ ನಮ್ಮೆಲ್ಲರದು.. ನೆನಪಿರಲಿ.. ಮೂರನೇ ವಸಂತದಲ್ಲೂ ನೂಪುರದ ದನಿ ಮಾರ್ದನಿಸಲಿ, ನಿನಾದ ಗುನುಗುನಿಸುವಂತಾಗಲಿ. ಗುಣಾತ್ಮಕ ಸುಧಾರಣೆಗಳ ಶಕೆ ಬರೆಯಲಿ..

ಪ್ರತೀ ವರ್ಷದ ಮಹಾಶಿವರಾತ್ರಿಯ ಆಸುಪಾಸಿಗೆ ನೂಪುರದ ವರ್ಷದ ಹಬ್ಬ ನಮ್ಮ ಸಂಪ್ರದಾಯ. ನರ್ತನದ ಅಧಿದೇವನಿಗೆ ಒಂದರ್ಥದಲ್ಲಿ ಅರ್ಪಿಸುವ ಅಂಜಲಿಯಿದು ಎಂದೇ ನಮ್ಮೆಲ್ಲರ ಭಾವನೆ. ನಟರಾಜನ ಅನಂತ ಕೃಪೆ, ಕಾರುಣ್ಯ ಎಲ್ಲರನ್ನೂ, ಎಲ್ಲವನ್ನೂ ಕಾಪಿಡಲಿ.

Tuesday, February 9, 2010
ಮಹಾಪುಂಜ

‘ಅಪ್ಪಯ್ಯ, ಅದು ಏವ ನಕ್ಷತ್ರ?’ ಬಿಡುಗಣ್ಣಿಂದ ಆಕಾಶವನ್ನೇ ನೋಡ್ತಾ ಬೆರಳು ಬೊಟ್ಟು ಮಾಡಿ ತೋರ್ಸಿತ್ತು ಕೂಸು.
‘ಅದಾ..ವೃಶ್ಚಿಕ. ಕೂಸೇ!. ನೋಡು. ಅದು ಹೇಂಗಿದ್ದು ಹೇಳಿ. ಕೊಂಬಚ್ಚಿಹುಳದ ಹಾಂಗೆ ಕಾಣ್ತಿಲ್ಯಾ?’ ಅದರ ಅಪ್ಪ ಮಗಳ ಕುತೂಹಲ ತಣುಶುವ ಉತ್ತರ ಆಗಿತ್ತಿದ್ದ. ಜಾಲಿಲಿ ತಿಂಗಳ ಬೆಣ್ಚಿ. ಅದರ ಮಧ್ಯೆ ಪುಟ್ಟ ಮಗಳು ಪದ್ದಿಯ ಮೊಟ್ಟೆಲಿ ಕೂರಿಶಿಕೊಂಡು ಕೈಗೆ ಸಿಕ್ಕದ ಆಕಾಶದ ಕಡೆಂಗೆ ಹಾಂಗೇ ನೋಡ್ತಾ ಇತ್ತಿದ್ದ ಅಪ್ಪ. ಮಗಳಿಂಗೆ ಜೋಯ್ಶೆತ್ತಿಕೆ ಕಲಿಶುವ ಅಂದಾಜೋ ಎಂತದೋ !
‘ಅದಾ..ಅದು ಒಟ್ಟಿಂಗಿದ್ದಲ್ದಾ..ಅದೆಂತರ?’ ಮತ್ತೆ ಬೆರಳು ತೋರ್ಸಿ ಕೇಳಿತ್ತು ಕೂಸು.
‘ಅದರ ಹೆಸರು ಸಪ್ತರ್ಶಿ ಮಂಡಲ ಹೇಳಿ. ಅಲ್ಲಿ ಏಳು ಋಷಿಗೊ ಒಟ್ಟಿಂಗೆ ಇಪ್ಪದಡ. ಹಾಂಗಾಗಿ ಏಳು ನಕ್ಷತ್ರಂಗೊ.’
ಕಣ್ಣು ಕುಂಞ ಮಾಡಿ ಹುಡುಕಿತ್ತು ಕೂಸು. ‘ಆದರೆ ಆರೇ ಕಾಣ್ತನ್ನೆ ! ಏಳೆಲ್ಲಿ?’ ಕಂಡತ್ತಿಲ್ಲೆ ಅದಕ್ಕೆ.
‘ಓ..ಅದಾ ಮಗಳಿಂಗೆ ಕಂಡದೇ..ಉಷಾರು. ಸಾಮಾನ್ಯವಾಗಿ ನವಗೆ ಆರೇ ಕಾಂಬದು ಕೂಸೇ.. ಮಧ್ಯಲ್ಲಿ ಅರುಂಧತಿ ಹೇಳುವ ನಕ್ಷತ್ರ ಇರ್ತಡ. ನೋಡಿರೆ ಬಾಳ ಒಳ್ಳೇದು ಹೇಳಿ ಹೇಳ್ತವು…’ ಹೇಳುವಷ್ಟೂ ಪುರ್ಸೊತ್ತಿಲ್ಲೆ. ಪದ್ದಿಯ ಕಣ್ಣು ಮತ್ತೂ ಸ್ಪಷ್ಟಕ್ಕೆ ಹುಡುಕುಲೆ ಶುರು ಮಾಡಿತ್ತು.
‘ಉಮ್ಮ..ಉಹುಂ..ಕಾಣ್ತಿಲ್ಲೆ.. ಅಲ್ಲಾ..ಏಳೂದೇ ಕಂಡರೆ ಎಂತ ಒಳ್ಳೆದಾವ್ತು?’
‘ಒಳ್ಳೇದಾವ್ತು ಹೇಳಿರೆ ತುಂಬಾ ಪೈಸೆ ಸಿಕ್ಕುಗು. ಉಂಬಲೆ ತಿಂಬಲೆ ಕೊರೆ ಇರ್ತಿಲ್ಲೆ. ಲಾಯ್ಕಿಲಿ ಇಪ್ಪಲಕ್ಕು.’
‘ಹಾಂ..ಅಪ್ಪಾ ಅಪ್ಪ? ‘ಕೂತಲ್ಲಿಗೇ ಅದರ ಬಾಯಿ ಹಿಡಿಗಾತ್ರ ಆತು. ಕೂತಲ್ಲಿಂದಲೇ ಒಂದರಿ ಅಪ್ಪನ ಮೋರೆ ನೋಡಿತ್ತು ಕೂಸು. ಆಕಾಶ ನೋಡ್ತಾ ಇತ್ತಿದ್ದ ಅಪ್ಪನ ಮೋರೆಲಿ ಒಂದು ಬಗೆ ಶಾಂತಬಾವ. ಕಂಡೂ ಕಾಣದ ಕಿರುನೆಗೆ. ಹೊಳೆತ್ತಾ ಇಪ್ಪ ಕಣ್ಣುಗೊ ನಕ್ಷತ್ರಂಗಳನ್ನೇ ತನ್ನೊಳಗೆ ಇರಿಶಿಕೊಂಡ ಹಾಂಗೆ. ಮಗಳ ಮೋರೆ ನೋಡಿ ಕಣ್ಣು ಪಿಳಿಪಿಳಿ ಮಾಡಿದ.
ಕೂಸಿಂಗೆ ನೆಗೆ ಬಂತು.’ಅದದ…ಅಪ್ಪ..ಅದೆಂತದೋ ನಕ್ಷತ್ರ ಓಡ್ತಾ ಇದ್ದು..ನೋಡದ.’
ಮಗಳ ಬೊಬ್ಬೆಗೆ ಬಗ್ಗಿ ನೋಡಿರೆ ಅದು ನಕ್ಷತ್ರ ಆಗಿತ್ತಿದ್ದಿಲ್ಲೆ. ‘ಇದಾ.. ಅದು ನಕ್ಷತ್ರ ಅಲ್ಲ ಚುಬ್ಬೀ. ಏವುದೋ ಇಮಾನ ಹೋಪದೋ, ಉಲ್ಕೆ ಹೇಳುವ ಸಂಗತಿಯೋ ಆಗಿರೆಕ್ಕು. ನಕ್ಷತ್ರ ಹಾಂಗೆಲ್ಲಾ ಅತ್ಲಾಗಿಂದಿತ್ಲಾಗೆ, ಇತ್ಲಾಗಿದಿಂತ್ಲಾಗೆ ಹೋವ್ತಿಲ್ಲೆ. ಆದರೆ ಒಂದೊಂದು ಸಲ ನಕ್ಷತ್ರಂಗೊ ಉರುಳಿ ಕೆಳಂಗೆ ಭೂಮಿಗೆ ಬೀಳ್ತು. ಆದರೆ ಕಾಂಬದೇ ಅಪರೂಪ. ಸತ್ತವೆಲ್ಲವೂ ನಕ್ಷತ್ರ ಆವ್ತವಡ. ಬಿದ್ದ ನಕ್ಷತ್ರಂಗೊ ಮಕ್ಕಳಾಗಿ ಹುಟ್ಟುತ್ತವಡ, ಅಜ್ಜ ಹೇಳುಗು.’
‘ಹಾಂಗಾರೆ ಆನೂದೇ ಹಾಂಗೆ ಹುಟ್ಟಿದ್ದಾ?’
ಮಗಳ ಪ್ರಶ್ನೆಗೆ ಅಪ್ಪಂಗೆ ಎಂತ ಹೇಳೆಕ್ಕೋ ಅರಡಿದ್ದಿಲ್ಲೆ.
ಉತ್ತರಕ್ಕೂ ಕಾಯದ್ದ ಕೂಸಿನ ಕುತೂಹಲದ ಪ್ರಶ್ನೆಗೊ ಮುಂದುವರದುಕೊಂಡಿದ್ದತ್ತು.
’ ಅಪ್ಪಾ..ಅದ್ಯಾವುದೋ ?’
‘ಓ ಅದಾ…ಅದರ ಹೆಸರು ಮಹಾವ್ಯಾಧ ಹೇಳಿ. ಅದಾ…ಅಲ್ಲಿ ಹಾಂಗೆ ಕಾಣ್ತಾ…’... ಅಶ್ಟಪ್ಪಗ ಗೇಟಿನ ಚಿಲಕದ ಸದ್ದಾತು.
ಕತ್ತಲಿಂಗೆ ಯಾರು ಬಂದದೂ ಹೇಳಿ ಸ್ಪಶ್ಟ ಆತಿಲ್ಲೆ. ಜಾಲಿನ ಹತ್ತರದ ದೀಪದ ಬೆಣ್ಚಿಗೆ ಕಂಡಪ್ಪಗ ‘ ಓ..ಅದು ಚಟ್ನಳ್ಳಿ ಮಾವ’ ಬೊಬ್ಬೆ ಹೊಡೆದತ್ತು ಪದ್ದಿ. ಅಂವ ತಂದುಕೊಡುವ ಉಂಡೆ ಚಾಕ್ಲೇಟು, ಕಟ್ಲೀಸು ಪದ್ದಿಗೂ, ಅದರ ತಮ್ಮಂಗೂ ಬಾರೀಪ್ರೀತಿ. ಮಾಂವ, ಮಾಂವ ಹೇಳಿ ಬೊಬ್ಬೆ ಹೊಡದು ಅವನ ಹತ್ರ ಓಡಿ ನಿಂತತ್ತು ಪದ್ದಿ. ಪುಟ್ಟನೂ ಓಡಿಕೊಂಡು ಬಂದ. ಅಪ್ಪಂಗೆ ಏನೋ ಹೇಳೆಕ್ಕೂ ಹೇಳಿ ಜಾನಿಸಿ ಬಾಯಿ ತೆಗದವು ಅಲ್ಲಿಗೇ ಸುಮ್ಮಂಗಾಗಿ ಮೀಸೆ ಕೊಡಿಲಿ ನೆಗೆ ಮಾಡಿದವು.
‘ಮಾಂವ, ನಿನ್ನ ಕಂತುವ ಗೆಡ್ಡ ತೆಗೆಸುದು ಏವಗ’ ಕಟ್ಲೀಸು ತಿಂತಾ ಕೇಳಿತ್ತು ಪದ್ದಿ. ಮಾಂವನ ಗೆಡ್ಡ, ಹಲ್ಲು ಅದಕ್ಕೆ ಒಂದು ಬಗೆ ವಿಚಿತ್ರ ಕಾಂಬದು. ಅದರಪ್ಪಂಗಿಂತಲೂ ಸುಮಾರು ಇಪ್ಪತ್ತು ವರುಷ ಕಡಮ್ಮೆ ಇಕ್ಕು ಅವಂಗೆ. ಆದರೆ ಅವನ ಬಾಯಿಲಿ ಹಲ್ಲೇ ಇಲ್ಲೆ. ಎಣಿಶಿರೂ ಹತ್ತಿಕ್ಕೇನೋ.. ಆದರೂ ಚೂರು ಬಂಙ ಇಲ್ಲದ್ದ ಹಾಂಗೆ ಗೆಡ್ಡ ಬಿಟ್ಟಿದ ! ಆದರೆ ಆ ಗೆಡ್ಡಕ್ಕೂ, ಅಪ್ಪನ ಗೆಡ್ಡಕ್ಕೂ ವೆತ್ಯಾಸ ಎಂತ ಹೇಳಿರೆ ಅದು ಕುತ್ತುತ್ತು, ಇದು ಇಲ್ಲೆ, ಅದು ಕರಿ ಇದ್ದು, ಇದು ಬೆಳಿ-ಕರಿ ಮಿಶ್ರ. ಪರಬ್ಬ ಅಲ್ಲದ ‘ಪರಬ್ಬ ಮಾಂವ’; ಬಾಯಿಬಿಟ್ಟು ಹ್ಹ..ಹ್ಹಾ..ಹ್ಹಾ.. ಹೇಳಿ ನಿಮಿಶಕ್ಕೊಂದರಿ ನೆಗೆ ಮಾಡುವಾಗ ಬ್ರಹ್ಮಾಂಡ ಪ್ರದರ್ಶನ ಅಕ್ಕದಾ ! ಆ ಬೊಚ್ಚು ಬಾಯಗಲ ಮಾಡಿ ನಿಂತರ ಪದ್ದಿಗೆ ಒಳಂಗೆ ಎಂತ ಇಕ್ಕು ಹೇಳೀ ಬಾರೀ ಆಶ್ಚರ್ಯ ಅಪ್ಪದಿದ್ದ್ದು.
ವರ್ಶಲ್ಲಿ ಅಪ್ಪಂದ ಸಣ್ಣ ಆದರೂ ಅಪ್ಪ ದಿನಿಗೇಳುದು ‘ಬಾವಾ’ ಹೇಳಿಯೇ ! ದೂರಲ್ಲೇಲ್ಲೋ ಬಾದರಾಯಣ ನೆಂಟಸ್ತಿಕೆ ಇಪ್ಪ, ಬಾಯಗಲ ಮಾಡಿ ನೆಗೆ ಮಾಡುವ ಚಟ್ನಳ್ಳಿ ಮಾಂವ ಮನೆಗೆ ನಿತ್ಯವೂ ‘ಚಾ’ ಗಿರಾಕಿ. ಅದೂ ಮನೆಂದ ಇಪ್ಪತ್ತು ಮೈಲಿ ದೂರದ ಅವನ ಮನೆಂದ ಪೇಟೆಗೆ ಬಪ್ಪ ಲೆಕ್ಕಲ್ಲಿ ನಿತ್ಯ ಬಂದು ಹೋಕು. ನಾಲ್ಕು-ನಾಲ್ಕುವರೆಗೆ ಪ್ರತ್ಯಕ್ಷ ಅಕ್ಕು. ಆದರೆ ಇಂದು ರಾತ್ರಿಲಿ ! ‘ಎನಗೊಂದು ಕಟ್ಲೀಸು ಸಿಕ್ಕಿತ್ತನ್ನೆ’- ಪದ್ದಿಗೆ ಪೆರ್ಚಿ ಕಟ್ಟುಲೆ ಸಾಕು.
‘ಇದೆಂತ ಮಾರಾಯಾ. ಇಷ್ಟೊತ್ತಿಲಿ ನಿನ್ನ ಸವಾರಿ ಇತ್ಲಾಗಂಗೆ’ ಅಪ್ಪ ಹೇಳುದಕ್ಕೂ, ಅಮ್ಮ ಒಳಂಗಿಂದ ‘ ಬಂತು.. ಇಂದು ಬತ್ತಿಲ್ಲೆ ಹೇಳಿ ನೆನ್ನೆ ಹೇಳಿದ್ದಷ್ಟೇ.. ಪುನಾ ಒಕ್ಕರ್ಸಿತ್ತು. ಶ್..ಶ್..’ ಹೇಳಿ ಎಲಿ ಓಡಿಸಿಕೊಂಡು ಪರಂಚುದಕ್ಕೂ ಸರೀ ಹೋತು.
‘ ಅದೆಂತ ಇಲ್ಲೆ ಮಾರಾಯ. ಎಲಿಗೊ ಜೋರಿದ್ದವಿದ. ಹಾಂಗೆ ಅಷ್ಟೇ ! ನೀನೆಂತ ಗ್ರೇಶಿಕ್ಕೆಡ.’ ಹೇಳಿ ಅಪ್ಪ ಸಮಾದಾನ ಮಾಡಿದವು.
ಮಾಂವಂಗೆ ಮೋರೆಲಿ ಚೋಲಿ ಇಪ್ಪದು-ಹೋಪದು ಹೇಳಿ ಎಲ್ಲಾ ಇಲ್ಲೆ ಇದಾ ಹೇಳಿರೆ ಪದ್ದಿಗೆ ಎಂತದೂ ಅರ್ತ ಆಗ. ‘ಇರಲಿ. ಅದೆಲ್ಲಾ ಎಂತರ ಹೇಳಿ ಬೇಜಾರು ಮಾಡ್ದುಲಿದ್ದು? ಅಕ್ಕ ಎನಗೆ ಬಯ್ದರೂ ಆನು ಬಪ್ಪದು ನಿಲ್ಸುದಿದ್ದಾ? ಇಲ್ಲೆನ್ನೆ ! ಅಂದ ಹಾಂಗೆ ಇವರ ಗೊಂತಿದ್ದಾ? ಹೊಳೆಕರೆ ಶಾಸ್ತ್ರಿಗೊ ಹೇಳಿ..’ ಪರಿಚಯ ಮಾಡಿದ ಮಾಂವ.. ಅಷ್ಟಪ್ಪಗಲೇ ಪದ್ದಿಗೆ ಗೊಂತಾದ್ದು..ಬೇರೊಂದು ಜನವೂ ಇದ್ದು ಹೇಳಿ.
‘ಎಂತದೂ ಇಲ್ಲೆ ಬಾವಾ. ನಿನ್ನೆ ಹೇಳಿದೆನ್ನೆ. ಜಾಗೆ ತೆಕ್ಕೊಂಬ ವಿಚಾರ. ಅದೂ ಆನು-ನೀನು ಒಟ್ಟಿಂಗೇ ಹೇಳಿ. ಇವರದ್ದೇ ಜಾಗೆ ಅದು. ರೆಕಾರ್ಡುಗೊ ಎಲ್ಲಾ ಸರೀ ಇದ್ದಡ. ಮತ್ತೆ ದಿನ ಹೋದರೆ ಇವು ತುಂಬಾ ಬಿಜಿ ಆವ್ತವು. ಸಿಕ್ಕುದು ಕಷ್ಟ ಹೇಳಿ ಸಿಕ್ಕಿಯಪ್ಪಾಗಲೇ ಕರಕ್ಕೊಂಡು ಬಂದೆ.’ ಮಾಂವ ಹೇಳಿದ್ದು ಪದ್ದಿಗೆ ಎಷ್ಟು ಅರ್ತ ಆತೋ, ಬಿಟ್ಟತ್ತೋ ಒಟ್ಟಿಲಿ ಅದರ ನಕ್ಷತ್ರ ನೋಡುವ ಕಾರ್ಯಕ್ರಮಕ್ಕೆ ತಡೆ ಬಿದ್ದತ್ತನ್ನೇ ಹೇಳಿ ಕಂಡತ್ತು.’ ಅಪ್ಪಾ.. ನಕ್ಷತ್ರದ ಕತೆಏಏಏಏಏ..’ರಾಗ ಎಳತ್ತು ಕೂಸು.
‘ಇರು ಮಗಳೇ..ಒಂಚೂರು ಹೊತ್ತು. ಇವರೊಟ್ಟಿಂಗೆ ಮಾತಾಡಿಕ್ಕಿ ಬತ್ತೆ.’ ಹೇಳಿದವನೇ ಅಪ್ಪ; ‘ ಇಲ್ಲಿ ಬೇಡ, ಚಳಿ ಇದ್ದು. ಒಳಂಗೆ ಕೂದು ಮಾತಾಡುವ. ಆಗದಾ’ ಹೇಳಿ ಒಳ ನಡದವು ; ಒಟ್ಟಿಂಗೆ ‘ಬೆಶಿಬೆಶಿ ಎಂತಾರು ಕುಡಿವಲೆ ಮಾಡು’ ಹೇಳಿ ಅಮ್ಮಂಗೆ ಅಪ್ಪಣೆ ಕೊಡಿಶಿಯೂ ಆತು.
ಪದ್ದಿ ಒಳಂಗೆ ಬಗ್ಗಿ ನೊಡಿತ್ತು. ರೆಕಾರ್ಡ್, ನಾಳಿದ್ದು ಮಾಡುವ, ಐವತ್ತು ಸಾವಿರ ಫಸ್ಟಿಂಗೆ, ಶುಭಸ್ಯ ಶೀಘ್ರಂ’ ಹೇಳಿ ಮಾಅತಾಡಿಕೊಂಡದ್ದೆಲ್ಲಾ ಕೆಮಿಗೆ ಬಿತ್ತು. ಆದರೆ ಅರ್ತ ಆಯೆಕ್ಕೇ? ಇದಕಿಂತ ಪುಟ್ಟನೊಟ್ಟಿಂಗೆ ಅವಲಕ್ಕಿದವಲಕ್ಕಿ ಆಡುದೇ ಪಶ್ಟ್ಳಾಸು ಹೇಳಿ ಗ್ರೇಶಿಕೊಂಡು ಆಟ ಆಡುಲೆ ಶುರು !
ಪದ್ದಿಗೋ ಅಪ್ಪಂಗೆ ಹೇಳಿ ಕಾದೂ ಕಾದೂ ಸಾಕುಸಾಕಾತು. ಈಗ ಬತ್ತೆ ಹೇಳಿದ ಅಪ್ಪ ಗಂಟೆ ಆದರೂ ಬಾರದ್ದೇ ಒಳಂಗೇ ಮಾತಾಡಿಕೊಂಡು ಕೂದ್ದಕ್ಕೆ ಬೇಜಾರು. ಪುನಾ ರಾಗ ಎಳತ್ತಾದರೂ ಅಪ್ಪ ಫುಲ್ ಬಿಜಿ. ಇನ್ನು ಕಾವದು ಎಂತಗೆ ಹೇಳಿ ಕಂಡತ್ತೋ ಮಿನಿಯಾ, ಅಟ್ಟುಂಬಳಕ್ಕೆ ಓಡಿ ಅಮ್ಮನ ಸೆರಗು ಹಿಡುದು ನಿಂತು ಪರಪರ ಮಾಡುಲೆ ಶುರು ಮಾಡಿತ್ತು. ಆದರೆ ಅಮ್ಮಂದೇ ‘ಎಂತ ಕೂಸೆ. ಬಿಡು ನೊಡಾ. ಎನಗೆ ಕೆಲಸ ಇದ್ದು, ಎನಗೆ ಎಡಿತ್ತಿಲ್ಲೆ’ ಹೇಳಿ ಜೋರು ಮಾಡಿಯಪ್ಪಗ ಮೋರೆ ಚಪ್ಪೆ ಆತು ಕೂಸಿಂಗೆ.
********
ಇತ್ಲಾಗಿ ಹತ್ತು-ಹದಿನೈದು ದಿನಂದ ಪದ್ದಿಯ ಆಕಾಶ-ನಕ್ಷತ್ರ ನೋಡುವ ಕಾರ್ಯಕ್ರಮಕ್ಕೆ ಮುಹೂರ್ತವೇ ಇಲ್ಲದ್ದ ಹಾಂಗಾಗಿತ್ತು. ಪದ್ದಿಗೂ, ಅದರ ತಮ್ಮಂಗೂ ಬಾರೀ ಬೇಜಾರು. ‘ ಅಪ್ಪ ಅದೂ ಇದೂ ಹೇಳಿ ಮಾಡಿಕ್ಕೊಂಡೇ ಇಪ್ಪದು. ಎಂಗಳ ಒಟ್ಟಿಂಗೆ ಆಟ ಆಡುಲೆ ಬತ್ತವಿಲ್ಲೆ.’ ಅದರ ಗುರುತರ ಆರೋಪ. ಒಂದರಿ ಕೇಳಿಯೂ ಆಗಿತ್ತು. ಅದಕ್ಕೆ ಒತ್ತಡಂಗಳ ಮಕ್ಕಳ ಮೇಲೆ ತೋರುಸುಲೆ ಎಡಿಯದ್ದೆ ಅಮ್ಮನ ಮೇಲೆ ಬೊಬ್ಬೆ ಹೊಡೆದಿತ್ತಿದ್ದ.
‘ಎಂತ ನಿನಗೆ, ಇವರ ನೋಡಿಕೊಂಬಲೆ ಎಡಿತ್ತಿಲ್ಯಾ? ಎನ್ನ ವಯಿವಾಟಿಲಿ ಆನಿದ್ದೆ. ಆ ಬಾಂವ ಪೈಸೆ ಕೊಡೆಕ್ಕು ಹೇಳಿ ಪ್ರಾಣ ತಿಂತ. ‘ಐವತ್ತು’ ಈಗಾಗಳೇ ಕೊಟ್ಟಾಯ್ದು. ಇನ್ನು ಆನೆಲ್ಲಿಂದ ತಪ್ಪದು? ರೆಕಾರ್ಡು ಎಲ್ಲಾ ಮೋಸಡ. ಆ ಜಾಗೆ ಸರಿಯಿಲ್ಲೆಡ. ಕುಂಞ ಬ್ಯಾರಿಯೂ ‘ನಿಮ್ಗೆ ಯಾಕೆ ಭಟ್ರೇ ಆ ಜಾಗ’ ಹೇಳೀ ಕೇಳಿತ್ತು. ಆ ಶಾಸ್ತ್ರಿಯ ತಮ್ಮಂದು ತಕರಾರು ಇದ್ದಡ ಆ ಜಾಗೆ ಮಾರುಲೆ. ಅವನೂ ಎನಗೆ ಪಾಲಿದ್ದು ಹೇಳಿ ಗಲಾಟೆ ಮಾಡ್ತಾ ಇದ್ದಡ. ಅದಕ್ಕೆ ಅಂವ ಮೆಲ್ಲಂಗೆ ಜಾಗೆಯ ದಾಟುಸುಲೆ ನೋಡುದಡ.’ ಎಂತೆಂತದೋ ದಡಬಡ ಹೇಳಿ ಹೇಳಿಕ್ಕಿ ಉಗ್ರಾವತಾರ ತೋರ್ಸಿದ. ಪದ್ದಿಗೆ ಇದರೆಲ್ಲಾ ನೋಡಿ, ಪುಟ್ಟನೊಟ್ಟಿಂಗೆ ಬಾಗಿಲ ಸಂದಿಗೆ ನಿಂತು ಪಿಳಿಪಿಳಿ ಕಣ್ಣು ಬಿಟ್ಟತ್ತು.
ಅದಕ್ಕೆ ಒಂದು ಆಶ್ಚರ್ಯ ಏವಾಗ್ಲೂ ಬಪ್ಪ ಮಾಂವ ಎಂತಗೆ ಈಗೀಗ ಬತ್ತನೇ ಇಲ್ಲೆ? ಎಂತ ಕತೆ? ಕಟ್ಲೀಸು, ಚಾಕ್ಲೇಟು ಎಲ್ಲದಕ್ಕೂ ಕಷ್ಟ ಆತನ್ನೆ ! ಜೋಲು ಮೋರೆ ಹಾಕಿಯೊಂಡು ಗಿಳಿಬಾಗಿಲ ಹತ್ತರ ಬಂದು ಕೂತತ್ತ್ತು.
**********
‘ಇದೆಂತ. ಅಪ್ಪನ ಚರಿಪಿರಿ.. ಶಾಲೆಗೆ ಹೋಪಲಿದ್ದೋ ಹೇಂಗೆ? ಬಾಯಿಪಾಟ ಮಾಡುದೆಂತಗೆ’ ಪದ್ದಿಯ ಪ್ರಶ್ನೆ ಪುನಾ ! ಶಾಲೆಯ ‘ಮನೆಗೆಲಸ’ ಮಾಡುವಲ್ಲಿಂದಲೇ ಎದ್ದು ಬಾಗಿಲ ಕಂಡಿಲಿ ಬಂದು ನೋಡಿತ್ತು.
ಒಳಂಗೆ ಇತ್ತಿದ್ದ ಅಪ್ಪ ಬಾಯಿಪಾಟ ಮಾಡ್ಲೆ ಶುರು ಮಾಡಿತ್ತಿದ್ದ. ‘ ಶಾಸ್ತ್ರಿ ಬಂದ ದಿನಾಂಕ ಇಪ್ಪತ್ತು ಒಂದು ಎರಡು ಸಾವಿರದ ನಾಲ್ಕು. ಜಾಗೆಯ ಅಳತೆ ಒಂದೂವರೆ ಎಕರೆ, ಕೋರ್ಟಿಂಗೆ ಹೋದದ್ದು ಐದು ನಾಲ್ಕು ಎರಡು ಸಾವಿರದ ಐದು. ಚಟ್ನಳ್ಳಿ ರಾಮಭಟ್ಟರಿಗೆ ಸಾಲ ಕೊಡಲಿರುವುದು…’ ಪದ್ದಿಗೆ ಒಂದೂ ಅರ್ತ ಆಯಿದಿಲ್ಲೆ. ಈ ಅಪ್ಪಂಗೆ ಲೆಕ್ಕ ಮಾಡುಲೂ ಬತ್ತಿಲ್ಯಾ? ಇದೆಂತ ಮಗ್ಗಿ ಬಾಯಿಪಾಟ ಮಾಡುದು, ಆನು ಇದರಿಂದ ಲಾಯ್ಕಲ್ಲಿ ಹೇಳ್ತೆ, ಬೇಕರೆ ಕೇಳಲಿ ಹೇಳಿ ಅಪ್ಪಂದಲೂ ಜೋರಿಂಗೆ ಸ್ವರ ತೆಗದು ಹೇಳುಲೆ ಶುರು ಮಾಡಿತ್ತು. ಅಶ್ಟಪ್ಪಗ ಹಿಂದೆಂದ ಬಂದ ಅಮ್ಮ ಪದ್ದಿಯ ಮೋರೆ ನೋಡಿ ‘ ಅದೆಂತ ಬೊಬ್ಬೆ ಹೊಡವದು ನೀನು. ಅಪ್ಪಂಗೆ ಮರತ್ತು ಹೋಪದು ಜಾಸ್ತಿ ಅಲ್ಲದಾ? ನಿನಗೆ ಹೇಳಿ ಕೊಡುದಾದರೆ ಅವಕ್ಕೆ ಬಾಯಿಪಾಟ ಮಾಡುದು ಬೇಡದಾ? ಹೋಗಿ ಓದು..’ಹೇಳಿತ್ತು.
‘ಇದಾ. ನಾಳೆ ವಕೀಲ ಬಪ್ಪಲೆ ಹೇಳಿದ್ದ. ಬಾಂವ ಹೇಳಿದ ಹೇಳಿ ಇಂವ ಎರಡನೇ ವಕೀಲ. ತಿಂಗಳು ಆರು ಕಳುತ್ತು. ಇನ್ನೂ ವ್ಯಾಜ್ಯ ಮುಗುದ್ದಿಲ್ಲೆ. ದೇವರು ಏವಗ ನಡೆಶಿಕೊಡ್ತನೋ’ -ಅಪ್ಪನ ಮಾತಿಂಗೆ ಅಮ್ಮನ ಕಣ್ಣ್ಲಿ ತುಂಬಿದ ನೀರು ಇನ್ನೂ ಕೆಳಂಗಿಳುತ್ತು.
‘ಆನು ಅಂದೇ ಹೇಳಿದ್ದಲ್ದಾ? ಅವಂಗೆ ಎಂತಾಯೆಕ್ಕು? ಬೇಕಾಷ್ಟು ಕೂದು ತಿಂಬಲೆ ಇದ್ದು. ಒಂದರಲ್ಲಿ ಹೋದ ಪೈಸೆಯ ಇನ್ನೊಂದರಲ್ಲಿ ತುಂಬುತ್ತ. ಆದರೆ ನಾವು?’ ಅರ್ಧಕ್ಕೆ ನಿಲ್ಲಿಸಿದ ಅಮ್ಮಂಗೆ ಗಂಟಲುಬ್ಬಿ ಬಂತು. ’ನಿಂಗೊ ನಾಕು ಮನೆ ಪೌರೋಹಿತ್ಯ ಮಾಡಿ ಅವನ ಬಾಯಿಗೆ ಹಾಕಿದ ಹಾಂಗಾತು. ನಾವು ಹತ್ತಿಪ್ಪತ್ತು ವರ್ಶಲ್ಲಿ ಇಪ್ಪಾಂಗೆ ಇದ್ದು. ಅದೇ ಅಂವ ಮೊನ್ನೆ ಮೊನ್ನೆ ನಮ್ಮ ಆಶ್ರಯ ಕೇಳಿಕೊಂಡು ಬಂದು ಇಂದು ನಮ್ಮನ್ನೇ ಮಾರಿ ತಿಂಬ ಹಾಂಗಾತು. ಅವಂಗೆ ಇದ್ದನ್ನೇ..’ –ಅಮ್ಮನ ಬಾಯಲ್ಲ್ಲಿ ಶಾಪವೂ ಸರೀ ಬಾರ. ನಿಟ್ಟುಸಿರ ಹ್ಯಾಪು ನೆಗೆ ಬಂತಷ್ಟೇ..
ಪದ್ದಿಗೆ ಈಗಲೂ ಅರ್ತ ಆಯಿದಿಲ್ಲೆ. ಎಂತ ಮಾತಾಡಿಕೊಳ್ತವೋ..? ಅದೂ ಎನಗೆ ಅರ್ತ ಆಗದ್ದು. ಪಾಟವೋ, ಪದ್ಯವೋ, ಮಗ್ಗಿಯೋ, ನಕ್ಷತ್ರವೋ ಅರ್ತ ಅಕ್ಕು. ಈ ಅಪ್ಪಂಗೆ ಎನ್ನ ಒಟ್ಟಿಂಗೆ ಕೂದು ನಕ್ಷತ್ರ ಎಣುಶುಲೆ ಎಂತ? ಅದ್ಯಾವುದೋ ಲೆಕ್ಕ ಮಾಡಿಕೊಂಡೇ ಕೂರ್ತ, ಕೂದಲ್ಲಿಂದ ಅಲ್ಲಾಡುಲೇ ಇಲ್ಲೆ. ದಿನಿಗೇಳಿ, ದಿನಿಗೇಳಿ ಸಾಕು ಸಾಕಾವ್ತು. ಛೆ..ಹೇಳಿ ಕಂಡತ್ತು ಕೂಸಿಂಗೆ.
*****

ಈಗ ಪದ್ದಿಗೆ ಅಪ್ಪ ಬಾರದ್ದರೂ ಬೇಜಾರಾವ್ತಿಲ್ಲೆ. ಅಬ್ಯಾಸ ಆಗಿ ಹೋಯ್ದು.ಇಂದು ಸ್ಪರ್ದೆಗೆ ನಿಂದ ಹಾಂಗೆ ತಮ್ಮನೊಟ್ಟಿಂಗೆ ಜಾಲಿಲಿ ಕೂದು ನಕ್ಷತ್ರ ಲೆಕ್ಕ ಹಾಕುದರಲ್ಲೇ ಮಗ್ನ ಆಗಿದ್ದತ್ತು. ಅಷ್ಟಪ್ಪಗ ಗೇಟಿನ ಚಿಲಕದ ಸೌಂಡಾತು. ನೋಡಿರೆ ಅಪ್ಪ. ಏವಾಗ್ಲೂ ಮೂರ್ಸಂದ್ಯಪ್ಪಾಗ ಬಪ್ಪ ಅಪ್ಪ ಇಂದು ಕಸ್ತಲೆ ಆದ ಮೇಲೆ ಬಂಯಿದವು. ಪದ್ದಿಗೆ ಎಂತದೂ ವಿಶೇಷ ಹೇಳೀ ಕಂಡತ್ತಿಲ್ಲೆ. ಓಡಿ ಹತ್ತರಕ್ಕೆ ಬಂತು. ‘ ಅಪ್ಪಾ, ನಿಂಗೊ ಹೇಳದ್ರೆ ಬೇಡ. ಆನೇ ಹೇಳ್ತೆ. ಅದಾ. ಅಲ್ಲಿ ಕಾಂಬದು ಮಹಾವ್ಯಾಧ. ಅದು ತಲೆ. ಇದು ಕಾಲು. ಪಕ್ಕಲ್ಲಿ ಇನ್ನೊಂದು ನಕ್ಷತ್ರದ ಹಾಂಗೆ ಇದ್ದನ್ನೆ ; ಅದು ಕತ್ತಿ. ತಲೆಯ ಹೆಸರು ಬಿಟಲ್ಗೀಸ್ ಹೇಳಿಯಡ. ಅದಾ.. ಅಲ್ಲಿ.. ಕೆಂಪು ಹೊಳೆತ್ತಾ ಇದ್ದಲ್ದಾ ಅದು. ಕೆಳಂಗೆ ಕಾಂಬ ಕಾಲಿನ ನಕ್ಷತ್ರದ ಹೆಸರು ರೀಗಲ್ ಹೇಳಿ ! ನೀಲಿ ಇದ್ದಿದಾ… ಗೊಂತಾತಾ? ಎಷ್ಟು ಚೆಂದ ಕಾಣ್ತಲ್ಲದಾ? ಮನುಷ್ಯಂಗೆ ಗೊಂತಾದ ಮೊದಲ ನಕ್ಷತ್ರಂಗಳ ಗುಂಪಿನದ್ದಡ. ನಮ್ಮ ಭೂಮಿಂದ ಬರೀ ಕಣ್ಣಿಲಿ ಕಾಂಬಲಕ್ಕಾದ ಗುಂಪಡ. ಭೂಮಿಂಗೆ ಹತ್ತರ ಇಪ್ಪ ಅದರಲ್ಲಿ ಹೆಚ್ಚು ನಕ್ಷತ್ರಂಗೊ ಹುಟ್ಟುತ್ತವಡ. ನಿಂಗೊ ಹೇಳದ್ರೆ ಎನಗೆಂತ ಟೀಚರ್ ಹೇಳ್ತವಿಲ್ಯಾ? ಆನು ಕಲ್ತೆ. ಪಾಟಲ್ಲಿದ್ದು’.
ಅಪ್ಪ ಮಗಳ ಮೋರೆ ನೊಡಿದ. ಅದಕ್ಕೆ ಉತ್ತರ ದಕ್ಸಿಕೊಂಡ ಕುಶಿ ಇತ್ತು. ಮೆಲ್ಲಂಗೆ ಜಾಲಿಂಗೆ ಬಂದು ತೊಳಶಿಕಟ್ಟೆ ಬುಡದ ಮೆಟ್ಟಿಲ ಹತ್ತರ ಬಂದು ಆಕಾಶವ ಒಂದರಿ ನೋಡಿದ. ಬೀದಿ ದೀಪದ ಬೆಣ್ಚಿ ಜಾಲಿಂಗೆ ಬಪ್ಪಲೆ ವ್ಯರ್ತ ಪ್ರಯತ್ನ ಮಾಡಿಕೊಂಡಿತ್ತು.
ಮನೆಯ ಮೆಟ್ಟಿಲಿಂಗೆ ಕಾಲ್ ಮಡುಗಿದ್ದೇ ನಕ್ಷತ್ರದ ಹತ್ರ ಕಣ್ ಹಾಯ್ಸಿದ. ಪದ್ದಿಗೆ ಅಪ್ಪನ ಮೋರೆಲಿ ಎಂತ ಇದ್ದು ಹೇಳಿಯೇ ಅರ್ತ ಆತಿಲ್ಲೆ. ; ಸಣ್ಣ ನೆಗೆ, ಕಣ್ಣಿಲಿ ಕಂಡ ಹೊಳಪು ಬಿಟ್ಟರೆ !
ಮೇಲೆ ನೋಡಿಕೊಂಡಿದ್ದ ಪದ್ದಿಗೆ ಅಪ್ಪ ಒಳ ಹೋದ್ದು ಗೊಂತಾತಿಲ್ಲೆ ಕಾಣೆಕ್ಕು. ಇನ್ನೂ ಹೇಳುಲೆ ಇತ್ತೂ ಹೇಳಿ ಕಾಣೆಕ್ಕು ! ಪಕ್ಕಲ್ಲೇ ಇದ್ದ ಪುಟ್ಟ ನಕ್ಷತ್ರ ಎಣ್ಸುವ ಕೆಲಸಲ್ಲಿ ಬಿಜಿಯಾಗಿತ್ತಿದ್ದ. ಕೈಯ್ಯ ಬೆರಳು ಸಾಕಾಗದ್ದೆ ಕಾಲನ್ನೂ ಮುಂದೆ ಮಾಡಿ ಮಡುಗಿ ಬೆರಳುಗಳ ಅಗಲ ಮಾಡಿ ಬೆರಳಿಂಗೆ ಎರಡರ ಹಾಂಗೆ ಲೆಕ್ಕ ಹಾಕಿಯೊಂಡಿತ್ತಿದ್ದ. ಅವನ ವಿಚಿತ್ರ ಬಂಗಿಗೆ, ಜೊತೇಲಿ ಅವನ ಬಾಯಿಯ ಲೆಕ್ಕ ಒಟ್ಟಿಗೆ ಸೇರಿಕೊಂಡು ಅವನ ತಲೆಯೂ ಮೇಲಿಂದ ಕೆಳಂಗೆ, ಕೆಳಂದ ಮೇಲಕ್ಕೆ ಏರಿಳುಕೊಂಡಿತ್ತು. ಒಂದರಿ ನಕ್ಷತ್ರ, ಮತ್ತೊಂದರಿ ಲೆಕ್ಕ.
ಪದ್ದಿಗೆ ನೆಗೆ ಬಂತು. ‘ಅಪ್ಪಾ.. ಇದಾ. ಇವನ ಲೆಕ್ಕ ನೋಡಿ.‘ ಹೇಳಿಕೊಂಡೇ ಹೊಸ್ತಿಲಿಂಗೆ ಹೆಜ್ಜೆ ಮಡುಗಿ ಒಳಂಗೋಡಿತ್ತು..

Friday, January 29, 2010

ಬೌಷ್ಷ ಪುಟ್ಟಕ್ಕನ ಬಗ್ಗೆ ಹೆಚ್ಚಿನ ವಿವರ ಬೇಕಾಗ.
ನಮ್ಮದೇ ಬೈಲಿಲಿ, ಪ್ರೀತಿಲಿ ಇಪ್ಪಂತಾ ಪುಟ್ಟ ಅಕ್ಕ, ಈ ಪುಟ್ಟಕ್ಕ.
ಒಳ್ಳೆತ ಅನುಭವ ಇದ್ದು. ಮಡಿಕೇರಿಂದ ಹಿಡುದು ಕೊಡೆಯಾಲದ ಒರೆಗೆ – ಇಡೀ ಅನುಭವ ಇದ್ದು.
ಲೋಕಾರೂಢಿ ಕತೆ ಹೇಳುದು ಹೇಳಿರೆ ಈ ಅಕ್ಕಂಗೆ ಬಾರೀ ಇಷ್ಟ. ಪುಸ್ತಕವುದೇ ಬರಗು, ಪೇಪರುದೇ ಓದುಗು.
ಹಾಂಗೆಯೇ, ಆರುದೇ ನೋಡ್ತವಿಲ್ಲೇ ಹೇಳಿ ಆದರೆ ಡೇನ್ಸುದೇ ಮಾಡುಗು..!
ರಜ್ಜ ಪರಂಚುಗು, ರಜ್ಜ ಬೈಗು, ರಜ್ಜ ಗಲಾಟೆ ಮಾಡುಗು – ಎಂತದೇ ಇದ್ದರುದೇ ಪುಟ್ಟಕ್ಕಂಗೆ ಪ್ರೀತಿ ಇರ್ತು.
ಜಗಳವುದೇ ಮಾಡುಗು, ಪ್ರೀತಿಯುದೇ ಮಾಡುಗು. ಗಳಿಗೆಗೊಂದು ಭಾವನೆ – ಹೇಳಿ ಆಚಕರೆಮಾಣಿ ಪರಂಚುಗು..

ಮಕ್ಕಳತ್ರೆ ಅಂತೂ ತುಂಬ ಕುಶೀಲಿ ಮಾತಾಡುಗು.
ಕತೆ ಹೇಳಿದಹಾಂಗೆ ಪಾಟಮಾಡುದೋ, ಪಾಟ ಮಾಡಿದ ಹಾಂಗೆ ಕತೆ ಹೇಳಿದ್ದೋ – ಕನುಪ್ಯೂಸು ಬಪ್ಪಷ್ಟು ಚೆಂದಕೆ!
ಕನ್ನಡಲ್ಲಿ ಮಾತಾಡುದು ಜಾಸ್ತಿ ಆದ ಕಾರಣ ಮಾತಾಡುವಗ ಎಡೇಡೆಲಿ ಕನ್ನಡ ಶಬ್ದಂಗೊ ಬಕ್ಕು – ಆದರೆಂತಾತು, ಕೇಳುಲೆ ಚೆಂದವೇ..
ಎಲ್ಲೊರತ್ರುದೇ ನೆಗೆನೆಗೆ ಮಾಡಿ ಮಾತಾಡ್ತ ಪುಟ್ಟಕ್ಕಂಗೊ ಒಂದು ವೀಕುನೆಸ್ಸು.
ಎಂತರ? ನಮ್ಮ ಆಚಕರೆಮಾಣಿ ಹಲ್ಲುಕಿರುದರೆ ಬೆಶಿ ಏರುಗು, ಒಳ್ಳೆತ ಪರಂಚುಗು.
ಪುಟ್ಟಕ್ಕ ಪರಂಚಿದಷ್ಟೂ ಅವ° ನೆಗೆ ಮಾಡುಗು..
ಅವ ನೆಗೆ ಮಾಡಿದಷ್ಟೂ ಪುಟ್ಟಕ್ಕಂಗೆ ಬೆಶಿ ಏರುಗು ;-) – ಅವಿಬ್ರು ಎದುರೆದುರು ಸಿಕ್ಕಿರೆ ಒಪ್ಪಕ್ಕ ಹತ್ತಿ ತಂದು ಮಡಿಕ್ಕೊಂಗು!!
ಪರಸ್ಪರ ನೆಗೆದೇ, ಪರಂಚಾಣದೇ ಏರಿಗೊಂಡೇ ಹೋಪದಿದಾ! ಇಳಿವದು ಮಾಷ್ಟ್ರುಮಾವ ಕೋಲುತೆಕ್ಕೊಂಡು ಬಂದ ಮತ್ತೆಯೇ!!

ಈ ಪುಟ್ಟಕ್ಕ ಬೈಲಿನವಕ್ಕೆ ಕತೆ ಹೇಳ್ತಡ.
ಬನ್ನಿ, ಎಲ್ಲೊರುದೇ ಕೇಳುವೊ°!
ಏ°?
~

ಪುಟ್ಟಕ್ಕನ ಕತೆಗೊ ಸದ್ಯಲ್ಲೇ, ಇದೇ ಅಂಕಣಲ್ಲಿ..!!

ವಾಸ್ತವ(ವ್ಯ)

ಅಮ್ಮ ಹೇಳಿದಾಗಿಂದ ತಲೇಲಿ ಹುಳ ಕೊರವಲೆ ಶುರು ಆಯ್ದು. ನಾಡಿದ್ದು ಅಪ್ಪ ಬಂದರೆ ಅಪ್ಪನ ಕೈಯ್ಯಿಂದ ಮಾತು ತೆಕ್ಕೊಳ್ಳೆಕ್ಕು. ಇಲ್ಲೇ ಹೇಳಿ ಆದರೆ ಅಪ್ಪನ ವಯಿವಾಟಿಲಿ ಈಗ ಸದ್ಯಕ್ಕೆ ನಮ್ಮದು ಹೇಳಿ ಇಪ್ಪ ಮನೆಯೂ ಕೈ ತಪ್ಪಿ ಹೋಕು. ಹೇಳುಲೆಡಿಯ.
‘ ಇದ, ಅಪ್ಪಂಗೆ ಶುಕ್ರದೆಶೆ ಇಪ್ಪದೆನೋ ಅಪ್ಪು. ಆದರೆ ಬಪ್ಪ ಪೈಸೆಯೂ ಸರಿಯಾಗಿ ಕೈಗೆ ದಕ್ಕುತ್ತಿಲ್ಲೆ ಹೇಳಿರೆ ಇವು ಪೂಜೆ ಸರಿಗಟ್ಟು ಮಾಡ್ತವಿಲ್ಲೆ ಹೇಳಿ ಅರ್ತ ಅಲ್ಲದೋ?.. ಅದ .. ಮೊನ್ನೆ ಜೋಯಿಷ ಹೇಳಿದ.. ಇನ್ನೆರಡು ವರ್ಶಲ್ಲಿ ಮನೆ ಮಾರಾಟ ಮಾಡುವ ಗ್ರಾಚಾರ ಇದ್ದಡ.. ನಿನಗೊಂತಿದ್ದಾ..?ಪುಟ್ಟಂಗೆ ಹೇಳಿಕೊಂಡಿತ್ತಿದ್ದವಡ..ಸಾಕು ಇದು, ಮಾರಾಟ ಮಾಡಿ ಸಣ್ಣ ಹಿತ್ತಿಲು ಮನೆ ತೆಕ್ಕೊಂಬ ಹೇಳಿ. ಅಲ್ಲದ್ದೆ ಕಂಡಕಂಡವರ ಹತ್ರ ಎಲ್ಲಾ ಮನೆ ಕೊಡುಲೆ ಇದ್ದು ಹೇಳಿ ಸಾರಿಕೊಂಡು ಬತ್ತಾ ಇದ್ದವಡ. . ಏನೋ ಎನ್ನ ಗ್ರಹಗತಿ ಪಲಂದ ಮನೆ ಒಳಿವ ಯೋಗ ಇದ್ದು ಹೇಳುದೇ ಸಮಾದಾನ..’

ಹೀಂಗೆ ಅಮ್ಮ ಮೊನ್ನೆ ಪೋನಿಲಿ, ಅಷ್ಟೆಂತಗೆ ಮನೆಗೆ ಹೋದಪಾಗಲೂ ಞಂಕ್ಕುಞ ಮಾಡುವಾಗ ಎಂತ ಹೇಳೆಕ್ಕೋ ಹೇಳಿ ಅಂದಾಜಿಯೇ ಆಯಿದಿಲ್ಲೆ.
‘ನೀನು ಒಂದರಿ ಸುಮ್ಮನಿಪ್ಪಲೆ ಎಡಿಗಾ’ ಹೇಳಿ ಪರಂಚಿದೆ.’
‘ಎಲ್ಲಾರು ಎನ್ನ ಹೀಂಗೆ ಮಾಡುದು. ಮೂಲೆಗುಂಪು ಎಷ್ಟು ಮಾಡುವಿ.. ಹೇಳಿರೆ ಕೇಳ.. ಯಾರಿಂಗೂ ಗೇನ ಹೇಳಿ ಇಲ್ಲೆ.’ ಹೇಳಿ ದುಮುದುಮು ಹೇಳಿ ಹೋಗಿ ಮನುಗುವಾಗ ‘ಶ್ಶೆ’ ಹೇಳಿ ಕಂಡತ್ತು.

ಅಲ್ಲಾರಡೆ, ಈ ಅಪ್ಪಂಗೆ ಹೀಂಗಿಪ್ಪ ಬುದ್ದಿ ಎಂತಾಗಾರೂ ಬತ್ತೋ..
ವಾಚು, ಉಂಗುರ, ಗಡಿಯಾರ, ಹರಳು ಎಕ್ಸ್ಚೇಂಜ್ ಮಾಡುವ ಹಾಂಗೆ ಮನೆಯನ್ನೂ.. ಎಲ್ಲಿಗೆ ಹೋಪದು ಹೇಳಿ ಬೇಡದೋ?
ಎಂತ ಆ ಹಳೇ ಕುಂಬಾಟು ಬಿಡಾರದ ಹಾಂಗಿಪ್ಪ ಮನೆಗೆ ಹೋಪದ..! ಯಾರಾರು ನೆಂಟರಿಷ್ಟರು ಬಂದರೆ ಮುಸುಡು ಹೇಂಗೆ ತೋರ್ಸುದು? ನಾಚಿಕೆಯಾವ್ತಿಲ್ಯಾ?
ಈ ಸಾಲಸೋಲ ಮಾಡಿ ತೆಕ್ಕೊಂಡರೂ ದೊಡ್ಡ ಮನೆ ಹೇಳಿ ಆದ ಮೇಲೆ ಮೋರೆ ತೋರ್ಸುಲಾದರೂ ದೈರ್ಯ ಬಂಯಿದು.
ಸಾಲ ಜಾಸ್ತಿ ಆತು ಹೇಳಿರೆ ತೆಕ್ಕೊಂಡ ಮನೆಯ ಮಾರುದು ಪರಿಹಾರವಾ?
ಇನ್ನೊಂದು ಮನೆ ಸಿಕ್ಕುವಲ್ಲಿವರೆಗೆ ಎಂತ ಬೀದಿಲಿ ಟಿಕಾಣಿ ಹೂಡುದಾ?
ಆತಪ್ಪಾ.. ಮಾರುದು ಹೇಳಿ ಮಡಿಕ್ಕೊಂಡರೂ ‘ಕ್ರಯ ೧೦ ಲಕ್ಷ, ಆದರೆ ೭ ಲಕ್ಷಕ್ಕೆ ಸಿಕ್ಕಿರೂ ಕೊಡ್ತೆ’ ಹೇಳಿ ಎಂಗಳತ್ರ ಹೇಳಿದ ಹಾಂಗೆ ಊರಿಲಿಡೀ ಟಾಂಟಾಂ ಮಾಡಿರೆ ಯೇವ ಪ್ರಾಣಿ ೧೦ ಲಕ್ಷಕ್ಕೆ ತೆಕ್ಕೊಳ್ತೆಯೋ ಹೇಳಿ ಬಕ್ಕು ಹೇಳಿ ಬೇಕನ್ನೆ?
ಸಾಲ ಜಾಸ್ತಿ ಆವ್ತಪ್ಪ.. ಒಂಚೂರು ಕೈ ಬಿಗಿತ ಮಾಡೆಕ್ಕು.
ಕಂಡಕಂಡವಕ್ಕೆಲ್ಲಾ ಉಪಕಾರ ಮಾಡುದು ಹೇಳಿ ದುಂದು ಮಾಡಿರೆ ಅಕ್ಕಾ.. ಒಂದು ಸೇರು ಹಾಕುವಲ್ಲಿ ೪ ಸೇರು ಹಾಕಿರೆ, ೧೦ ರೂಪಾಯಿ ಕೊಡುವಲ್ಲಿ ‘ ಇಟ್ಟುಕೊಳ್ಳಿ, ನಿಮಗೂ ಮನೆ ಮಕ್ಳು ಇದ್ದಾರಲ್ವಾ’ ಹೇಳಿ ಕೊಟ್ಟರೆ ಏಂವ ಮನುಷ್ಯ ಬಕ್ಕು ನಾಳೆ ನಾವು ಸಂಕಟಲ್ಲಿಪ್ಪಾಗ..
ತಲೆ ಕುರೂಡು ಆತು.
ಮೊನ್ನೆ ಆ ಗೌಡನ ಹೆಂಡತ್ತಿ ಕೇಳಿತ್ತಿದ್ದವು.
‘ ಎಂತ ಹುಡ್ಗಿ, ನಿನ್ನ ಅಪ್ಪ ಮನೆ ಮಾರ್ತಾರಂತೆ ಹೌದಾ? ಆ ವಕೀಲರ ಆಳಿನ ಹತ್ರ ಹೇಳ್ತಿದ್ರಂತೆ! ಮೊನೆ ಮೊನ್ನೆ ಒಕ್ಕಲಾಗಿ ಈಗ ಮಾರುದು ಅಂದರೆ ಅರ್ತ ಉಂಟಾ?’ ಕಣ್ಣರಳಿಸಿ ಕೇಳುವಾಗ ಎಂತ ಹೇಳೆಕ್ಕೋ ಅರಡಿದ್ದಿಲ್ಲೆ.

‘ ಇಲ್ವಲ್ಲಾ… ಒಕ್ಕಲಾಗಿ ವರ್ಷ ಆಗ್ಲಿಲ್ಲ. ಅದೆಂತಗೆ ಮಾರ್ತಾರೆ ಹೇಳೀ.. ಸುಮ್ಮಗೆ..’ ಹೇಳಿ ವಿರಾಮ ಹಾಕಿತ್ತಿದ್ದೆ..’ ಹೌದು ಬಿಡು..ಆ ಬಿಡಾರದಲ್ಲಿ ನೀವು ಅನುಭವಿಸಿದ ಕಷ್ಟಕ್ಕೆ ಲೆಕ್ಕ ಉಂಟಾ. ಅಂತೂ ದೇವರು ಒಳ್ಳೆದು ಮಾಡಿದ. ಚೆಂದ ಇದೆ ಎರಡು ಅಂತಸ್ತು.. ನಿಮ್ಮ ಪುಣ್ಯ.ಅಡಕೆಗೆ ರೇಟು ಇಳಿದ ಕಾರಣ ನಿಮಗೆ ೬ ಲಕ್ಷಕ್ಕೆ ಕೊಟ್ಟ. ಇಲ್ಲವಾದ್ರೆ ಹತ್ತೋ, ಹನ್ನಂದೋ ಹೇಳ್ತಿದ್ನೇನೋ?’ ಕನಿಕರ ಪಟ್ಟುಕೊಂಡು ಹೇಳಿತ್ತು ಗೌಡನ ಮನೆ ಹೆಮ್ಮಕ್ಕೊ..

ಪೂಜೆ ಮಾಡುವ ಬಟ್ಟಂಗೆ ಮಕ್ಕಳ ಓದುಸುದೇ ಕಷ್ಟ..
ಹಾಂಗಿಪ್ಪಾಗ ದಕ್ಷಿಣೆ ಅಲ್ಲಲ್ಲಿಗೆ ಸಿಕ್ಕುದು ಬಿಟ್ಟರೆ ಮನೆ ಸಿಕ್ಕುಗಾ ಹೇಳಿ ಒಂದು ಆಶೆ, ಅನಾತ ಬಾವ ಎರಡೂ ಒಟ್ಟಿಂಗೆ ಬಂದುಕೊಂಡಿಕ್ಕು.
ಹಾಂಗೆ ನೋಡಿರೆ ಅಪ್ಪ ಕೆಲಸ ಮಾಡುವ ದೇವಸ್ತಾನದ ಒತ್ತಟ್ಟಿಂಗೆ ಇಪ್ಪ ಮನೆಯ ತೆಕ್ಕೊಳ್ಳೆಕ್ಕು ಹೇಳಿ ತುಂಬಾ ದಿನಂದ ಆಶೆ ಇತ್ತು.
ಅದಕ್ಕೆ ತಕ್ಕ ಹಾಂಗೆ ದೊಡ್ಡಮ್ಮನ ಒಬ್ಬ ದರ್ವೇಶಿ ಮಗನೂದೇ ಕೂಡಿಕೊಂಡು ಪೈಸೆ ಹಾಕಿ ಮನೆ ಮಾಡುವ ಆಶೆ ತೋರ್ಸಿದ ಕಾರಣ, ಅಪ್ಪ ಎಂತೆಂತದೋ ಬವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡು ಇತ್ತಿದ್ದವು..
ಕೆಲಸಕ್ಕೆ ಹೊಗಿ ಬಪ್ಪಲೂ ಅನುಕೂಲ ಆವ್ತು, ಶೆಡ್ಡಿಲಿ ಅಂಗಡಿ ಮಡುಗುಲಕ್ಕುಹೇಳಿ ಅಪ್ಪನ ಲೆಕ್ಕಾಚಾರ. ಹೇಂಗೂ ನಾವು ಅನ್ನ ಹಾಕಿ ನೋಡಿಗೊಂಡ ಕುಟುಂಬ ಸಹಕಾರ ಕೊಡುಗು ಹೇಳಿ.. ಹಾಂಗಾಗಿ ಆ ಮನೆಯ ಯೆಜಮಾನ ಹದಿನೈದು ಲಕ್ಷ ಹೇಳಿರೂ ಆರಾಮಲ್ಲೇ ಇತ್ತಿದ್ದವು. ಹೇಂಗೂ ಜೊತೆಗೆ ಪೈಸೆ ಹಾಕಿ ಮಾಡುದಲ್ದಾ? ಆದರೆ ಆ ಅಣ್ಣ ‘ತಾರಮ್ಮಯ್ಯ’ ಹೇಳಿ ಯೇವಗ ಕೈ ಆಡಿಸಿದನೋ ಅಪ್ಪ ಪೆಚ್ಚ ಆದವು.. ಪೈಚಾರಿಲಿ ಹಿತ್ತಿಲು ಮನೆ ತೆಕ್ಕೊಂಬಗಲೂದೇ ಹೀಂಗೆ ಮಾಡಿದ್ದು ಅಪ್ಪಂಗೆ ಮರತ್ತು ಹೋದ್ದೋ, ನಂಬಿಕೆ ಹೆಚ್ಚು ಮಡುಗಿದ್ದೋ ಎಂತದೋ ಒಟ್ಟಿಲಿ ನೋಡ್ತನೋಡ್ತ ಹಾಂಗೆ ಆ ಮನೆ ಕೈ ತಪ್ಪಿ ಹೋತು. ಮತ್ತೆಂತ ಮಾಡುದು.. ಮನೆಯ ಯೊಗ ಇಲ್ಲೆ ಹೇಳಿಕೊಂಡು ಇಪ್ಪಾಗಲೇ ಈಗಿಪ್ಪ ಮನೆಯ ಮಾತುಕತೆ ಬಂದದ್ದು. ಅಪ್ಪನಲ್ಲಿಗೆ ಪಂಚಾಂಗದಿನ ಕೇಳುಲೆ ಬಂದವು ಮನೆ ಮಾರುವ ಆಲೋಚನೆಲಿ ಇದ್ದವು ಹೇಳಿ ಗೊಂತಾದದ್ದೇ ತಡ, ಹೇಂಗೂ ಮನೆ ಮಾಡುವ ಅಡಾವುಡಿಲಿದ್ದ ಅಪ್ಪ ಒಪ್ಪಿಗೆ ಕೊಟ್ಟೂ ಆತು. ಆ ಲೆಕ್ಕಲ್ಲಿ ಪೈಚಾರಿಲಿ ಇದ್ದ ನಾಕು ತೆಂಗಿನ ಸೆಸಿ ಇದ್ದ ಸಣ್ಣ ಹಿತ್ತಿಲು ಮನೆ, ಒಂದು ಸೈಟಿನ ಅಂಬೇರ್ಪಿಲಿ ಅರ್ದ ರೇಟಿಂಗೆ ಕೊಟ್ಟಿಕ್ಕಿ ಒಂದು ತಿಂಗಳಿಲೇ ಅಶ್ವತ್ತಮರದ ಮೇಲಾಣ ರೋಡಿನ ಮನೆಯ ತೆಕ್ಕೊಂಡೂ ಆತು. ಒಕ್ಕಲೂ ಆತು..ಅಮ್ಮಂಗೂ ಕುಶಿ. .. ಎಲ್ಲಾ ವೆವಸ್ತೆ ಇದ್ದು..ಎಲ್ಲದಕ್ಕೂ ಹತ್ತಿರ ಹೇಳಿ..ಎನಗೂ ಕುಶಿ.. ಆನು ಅಂಗನವಾಡಿಗೆ ಹೋಯಿಕ್ಕೊಂಡಿಪ್ಪಾಗ ದಾರಿಕರೆಲಿ ಬಾರೀ ಲಾಯ್ಕ ಕಂಡುಕೊಂಡಿದ ಮನೆ ಈಗ ನಮ್ಮದು ಹೇಳಿ..
ಮತ್ತೆಯೂದೇ ಕುಶಿ…’ ಅಲ್ಲ ಮಾರಾಯ್ತೀ..
ಆ ಹಳೇ ಬಿಡಾರ ದೇವಸ್ತಾನದ ಎದುರಿಲಿ ಇಪ್ಪ ಕಾರಣ ದೇವರ್ಕಳ ದೃಷ್ಟಿ ಹೇಳಿ ಸರಿಯಾಗಿ ಉಂಬಲೂ, ತಿಂಬಲೂ ಅಯ್ಕೊಂಡಿತ್ತಿಲ್ಲೆ..
ಯೇವಗ ನೋಡಿರೂ ಉಷಾರಿಲ್ಲೆ…ಮನೆಲೂ ನೆಮ್ಮದಿ ಇಲ್ಲೆ. ಜೆಗಳವೋ ಜೆಗಳ..ಮನುಗುವ ಕೋಣೆಲೇ ಹಿಡಿಹಿಡಿ ಒರಳೆ ಬಂದುಕೊಂಡಿತ್ತು. ಪೂಂಚ ಕಟ್ಟುಗು..
ಎಷ್ಟು ಸರ್ತಿ ಚಿಮಣೆಣ್ಣೆ ಎರೆದು ಓಡ್ಸಿದ್ದಿಲ್ಲೆ.. ಆ ಅಡಿಗೆ ಮನೆ ಲಾಗಾಯ್ತು ಮುರುದು ಬೀಳುವ ಹಾಂಗಿತ್ತು. ಕರಿ ಉದುರುತ್ತು ಹೇಳಿ ಪ್ರತೀವರ್ಶ ಹಂಚು ಬದಲುಸುದು.
ಪೈಸೆ ಬೇರೆ ಹಾಳು..ಲೇಟ್ರಿನ್ನೋ ಮಾರುಮೈಲು ದೂರ.. ಬ್ರಾಮ್ಮರಿಂಗೂ, ಶೂದ್ರಕ್ಕೊಗೂ ಒಂದೇ..ಇದ್ದ ಎರಡು ರೂಮಿಂಗೆ ತಗಡು ಇಳುಶಿ ಕಟ್ಟಿ ಎಲ್ಲಿ ಹರುದು ಬೀಳುಗೋ ಹೇಳಿಕೊಂಡಿತ್ತಿದ್ದ ರೂಮಿಲಿ ಅಡಿಗೆ ಮಾಡಿ ಮಾಡಿ ಸಾಕಾಗಿತ್ತು..
ಕೂಪಲೂ, ಉಂಬಲೂ, ಮನುಗುಲೂ ಒಂದೇ ರೂಮು…ಅದೇ ಇಲ್ಲಿಗೆ ಬಂದ ಮೇಲೆ ಕೊಚುಲಕ್ಕಿ ಉಂಡುಕೊಂಡಿದ್ದ ಎನಗೆ ಬೆಳ್ತಿಗೆಯನ್ನೂ ತಿಂಬ ಮಟ್ಟಿಂಗೆ ಆರೋಗ್ಯ ಸುದಾರ್ಸಿದ್ದು..’ ಹೇಳಿ ದೊಡ್ಡ ಉಸುರು ತೆಗದು ಅಮ್ಮ ಹೇಳುವಾಗ ಸಾರ್ತಕ ಅತು ಹೇಳಿ ಕಾಂಗು.
ಹೀಂಗೆಲ್ಲಾ ಹೇಳಿದ ಅಮ್ಮ ಕಳುದ ಸರ್ತಿ ಹೋಗಿಪ್ಪಾಗ ಮೆಲ್ಲಂಗೆ ರಾಗ ಎಳವಲೆ ಸುರು ಮಾಡಿಕೊಂಡಿತ್ತು..’
ಆನು ಮೊನ್ನೆ ಜೋಯಿಶರ ಹತ್ರ ಹೋಗಿಪ್ಪಾಗ ಹೇಳಿದವು. ಮನೆ ಕೆಳಂಗೆ ನಾಗನ ಕಟ್ಟೆಯೂದೇ ಅಶ್ವತ್ತ ಮರವೂದೇ ಇದ್ದಲ್ಲದಾ? ಯೆಜಮಾನ್ರು ಸರಿಗಟ್ಟು ಪೂಜೆ ಮಾಡ್ತವಿಲ್ಲೆ..ಅಲ್ಲದೋ?ಜೊತೆಗೆ ಸಂಚಾರ ಬೇರೆ ಇದ್ದು. ಹಾಂಗಾಗಿ ಯೆಜಮಾನ್ರಿಂಗೆ ಮನೆ ಮಾರುಲೆ ಪ್ರೇರಣೆ ಬತ್ತಾ ಇಪ್ಪದು’’..
ಅಪ್ಪೋ ಮಿನಿಯಾ…ಹೇಳುಲೆಡಿಯ.. ನಂಬುದಾ?
ಇಕ್ಕೇನೋ..ಇಲ್ಲದ್ರೆ ಮೇಲಾಣ ಅಂತಸ್ತಿಂಗೆ ಬಾಡಿಗೆಗೆ ಸರೀ ಜೆನ ಬಂದರೆ ಸಾಲ ತೀರ್ಸುಲಕ್ಕು ಹೇಳಿದ ಅಪ್ಪ, ಬಾಡಿಗೆಗೂ ಮನೆ ಕೊಡದ್ದೆ ಮನೆ ಮಾರುವ ನಿರ್ದಾರ ತೆಕ್ಕೊಂಡದೆಂತಗೆ ಅಂಬಗ…!
ಈ ದೊಡ್ಡಮ್ಮ ಇದ್ದನ್ನೆ.. ಅದೂದೇ ಓರೆಗೆ ನೆಗೆ ಮಾಡುಗು..’ ಎಂತ ಕೂಸೆ..ನಿನ್ನ ಅಮ್ಮ ಬಾರೀ ಹೇಳಿಕೊಂಡಿತ್ತು ಹೊಸತ್ತಿಲಿ.. ಈಗೆಂತಾತು? ಅಪ್ಪ ಅಮ್ಮನೊಟ್ಟಿಂಗೆ ಜೆಗಳ ಮಾಡುದು ಕಡಮ್ಮೆ ಮಾಡಿದನಾ?’ ಎಂತ ಹೇಳಿ ಹೇಳುದು.. ಮನೆ ಬದಲು ಮಾಡಿದ ತಕ್ಷಣ ಮನಸ್ಸು ಬದಲಾವ್ತಾ ಹೇಳುದಕ್ಕೆ ಎನ್ನತ್ರ ಉತ್ತರ ಇಲ್ಲ್ಯೇ !

ಪುಟ್ಟಂಗೂ ದುಕ್ಕ ಬಕ್ಕು..’ ಇವಿಬ್ರಿಂಗೂ ಹೇಳಿರೂ ಅರ್ತ ಅವ್ತಿಲ್ಲೆ.. ಒಬ್ಬಂಗೆ ಮನೆ ಮಾರದ್ರೆ ಸಾಲ ತೀರ್ಸುಲೆ ಎಡಿಯ. ಇನ್ನೊಬ್ಬಂಗೆ ಮನೆಲಿ ಬೇಕಾದ ಹಾಂಗೆ ದೇವರ ಮೂರ್ತಿ, ಲಿಂಗ-ಸಾಲಿಗ್ರಾಮ ಸಂಗ್ರಹಿಸುವ ಹವ್ಯಾಸ ಹೇಳಿ ಪೇರ್ಸಿ ಪೂಜೆ ಮಾಡದ್ರೆ ದೋಷ, ಅದಕ್ಕೆ ಹೀಂಗಪ್ಪದೂ ಹೇಳೀ, ದೇವಸ್ತಾನಲ್ಲಿ ಹೋಗಿ ಮಡುಗೆಕ್ಕು ಹೇಳುವ ಹಟ. ಒಂದು ರಚ್ಚೆಂದ ಬಿಡ. ಒಂದು ಗೂಂಜೆಂದ ಬಿಡ ಹೇಳ್ತವಿಲ್ಯಾ ಹಾಂಗೆ..ಇಬ್ರಿಂಗೂ ವಿಮರ್ಶೆ ಮಾಡೆಕ್ಕೂ ಹೇಳಿಯೇ ಇಲ್ಲೆ..ಆ ಅಣ್ಣ ಬಂದವನೂದೇ ಅಮ್ಮಂಗೆ ಗುಟ್ಟಿಲಿ ಕೆಮಿ ಊದಿಕ್ಕಿ ಹೋದ..ಎಂತ ಅಕ್ಕಾ..ಹಾಂಗೆ ಹವ್ಯಾಸ ಇದ್ದರೆ ಸಮಸ್ಯೆ ಆವ್ತಾ’ ?
ಅವನ ಪ್ರಶ್ನೆಗೆ ಮೌನದ ಉತ್ತರವೇ ಎನ್ನ ಮುಕ್ತಾಯ..
ಅಪ್ಪ ಮಾಡುದು ಹಾಂಗೆ.. ಪೈಸೆ ಕೊಟ್ಟು ಎಲ್ಲಿಂದೆಲ್ಲಾ ತರುಶಿಕೊಂಡು ಕುಶಿ ಪಡುವ ಅಪ್ಪನ ವಿಶಿಷ್ಟ ಹವ್ಯಾಸಂದ ಅಮ್ಮನ ಚೆರ್ಪಿರಿ ದಿನಾಲೂ ಇಕ್ಕು. ಹಾಂಗಾಗಿ ಕೊನೆಗೊಂದು ದಿನ ಇದ್ದಬದ್ದ ಲಿಂಗ, ಸಾಲಿಗ್ರಾಮಂಗಳೆಲ್ಲದರನ್ನೂ ದೇವಸ್ತಾನಕ್ಕೆ ಕೊಟ್ಟು ಬಂದಿತ್ತಿದ್ದವು. ಆದರೂ ಎನಗೋ ಆಶೆ..ಹಾಂಗಾಗಿ ಅದರ ಪುನಾ ಕಲೆ ಹಾಕಿ ಈ ಮನೆಗೆ ಬಂದ ಮೇಲೆ ಮನೆ ಶೋಕೇಸಿಲಿ ಒಪ್ಪಲ್ಲಿ ಜೋಡಿಸಿ ಲಾಯ್ಕ ಮಡುಗಿತ್ತಿದ್ದೆ. ಅಷ್ಟಕ್ಕೆ ಮನೆ ಮಾರುವ ಪ್ರೇರಣೆ ಬತ್ತಾ?
ಎಂದಿನ ಹಾಂಗೆ ಇಂದೂ ಅಪ್ಪಂದು ಎನಗೆ ಪೋನು.’ ಬಿಪಿ ಜಾಸ್ತಿಯಾಗಿ ಕಾಲು ಬಾತಿದು..’
‘ಛೆ’ ಹೇಳಿ ಕಂಡತ್ತು.ಒಟ್ಟಿಂಗೆ ಕೋಪವೂ ಬಂತು. ‘ ಎಂತ ನಿಂಗೊ..ಸಾಲ ಮಾಡಿಕ್ಕಿ, ತೀರ್ಸುವ ಮೊದಲೇ ಕಂಡಕಂಡ ಹಾಂಗೆಲ್ಲಾ ಕರ್ಚು ಮಾಡಿ, ತಲೆಬೆಶಿ ಮಾಡಿರೆ ಬಿಪಿಯೂ ಬಕ್ಕು.. ಮತ್ತೊಂದೂ ಬಕ್ಕು..ಮೊದಲೇ ಯೊಚನೆ ಮಾಡಿರೆ ಹೀಂಗಾವ್ತಾ’ ರೇಗಿದೆ.
ಎಂತ ಕಂಡತ್ತೋ ಗೊಂತಿಲ್ಲೆ. ‘ ನೀನಾರೂ ಅರ್ತ ಮಾಡಿಕೊಂಬೆ ಹೇಳಿಗ್ರೆಶಿರೆ ನೀನೂ ಹೀಂಗೆ ಮಾತಾಡ್ತೆನ್ನೆ.. ನಿನ್ನ ಅಮ್ಮ ಚರಿಪಿರಿ ಮಾಡಿದ್ದಕ್ಕೆ ಅಲ್ಲದಾ ಮನೆ ತೆಕ್ಕೊಂಡದು..ಅದಕ್ಕೂ ಹಾಂಗೆ ಕಾಂಬದರ್ಲಿ ದೋಶ ಇಲ್ಲೆ..ಊರಿಂಗೆ ಬಂದು ಮೂವತ್ತು ವರ್ಶ ಕಳುದರೂ ‘ಇವಂಗೊಂದು ಮನೆ ಮಾಡುವ ಯೊಗ್ಯತೆ ಇಲ್ಲೆ’ ಹೇಳಿ ಆಡಿಕೊಂಡು ನೆಗೆ ಮಾಡುವಾಗ ಎನಗೂ ಕಾಣುಗು. ಒಂದು ಮನೆ ಮಾಡಿ ತೋರ್ಸೆಕ್ಕು ಹೇಳಿ..ಆದರೆ ನಮ್ಮತ್ರ ಪೈಸೆ ಎಲ್ಲಿದ್ದು ಹೇಳಿ ಬೇಕನ್ನೆ.. ಈ ಬಟ್ಟತ್ತಿಗೆಲಿ ನಾಕು ಕಾಸು ಸಿಕ್ಕುದೂ ನಿಂಗಳ ಓದಿಂಗೆ, ಅಮ್ಮನ ಮದ್ದಿಂಗೆ ಹೇಳಿ ಹೋವ್ತು..’ಅಂದವು.
ಅಪ್ಪನ್ನೆ..ಎಷ್ಟೋ ಸರ್ತಿ ಅಪ್ಪ ದೇವರ ಗರ್ಬಗುಡಿಲಿ ನಿಂತು ಕಣ್ಣೀರು ಹಾಕುಗಡ..’ಒಂದು ಮನೆ ಕೊಡು’ ಹೇಳೀ. ಸರಿ ಮನೆ ಕೊಡುಲೆ ಕೊಟ್ಟ. ಅದೂ ಸಾಲಲ್ಲಿ.. ಅದು ಕಮ್ಮಿಯೋ..?ಎಷ್ಟೆಷ್ಟೋ ಬಡ್ಡಿಗೆ.ತೀರ್ಸುವ ಹೊತ್ತಿಂಗಪ್ಪಾಗ ಮತ್ತೊಂದು ಮನೆ ತೆಕ್ಕೊಂಬಷ್ಟು ಪೈಸೆ ಕಟ್ಟೆಕಕ್ಕು. ಎಲ್ಲಾ ಬಂಗಾರ, ಚೈನು,, ಉಂಗುರ ಬೇಂಕಿಲಿ ಅಡವು ಮಡುಗಿದ್ದೂ ಆಯಿದು. ಇನ್ನೂ ಏನಿಲ್ಲೆ ಹೇಳಿರೂ ಅಪ್ಪಚ್ಚಿಯತ್ರ ೮೦ ಸಾವಿರ, ಪುಟ್ಟಮಾವನ ಹತ್ರ ಒಂದಿಪ್ಪತ್ತೈದು, ಹಾಲಿಂಗೆ ಬಪ್ಪ ಸುಬ್ಬಣ್ಣನತ್ರ ಹದಿನೈದು, ಯೆಲ್ಲಪ್ಪನ ಬೇಂಕಿಲಿ ೬೦, ಕರ್ಣಾಟಕ ಬೇಂಕಿಲಿ ೩ ಲಕ್ಷ.. ಇನ್ನೂ ಕಟ್ಟುಲೆ ಇದ್ದೂ ಹೇಳಿರೆ, ಅದರೊಟ್ಟಿಂಗೆ ಮಕ್ಕಳ ಪೀಸು, ಹಾಸ್ಟೆಲ್ ಬಿಲ್ಲು…ಯಾರಿಂಗಾರೂ ತಲೆ ತಿರುಗದ್ದೆ ಇಕ್ಕಾ..
ಹಳೇ ಮನೆಯೇ ಒಳ್ಳೆದಿತ್ತು ಹೇಳಿ ಕಂಡತ್ತು… ಹೊಸಮನೆ ಹೇಳುವ ಉಮೇದು ಎಲ್ಲರಿಂಗಿದ್ದರೂ ಆನು ಮನೆ ಒಕ್ಕಲಾದ ಕಸ್ತಲೆಗೆ ಹೊಸ ಮನೆಗೆ ಬಾರದ್ದೆ ಅಲ್ಲೆ ಮನುಗಿತ್ತಿದ್ದೆ. ಆತು.. ಆ ಒರಳೆ ಹಿಡುದ್ದ ಗೋಡೆಗಳ ನೋಡಿ ಕಣ್ಣೀರು ಬಂದು ಒಪ್ಪ ಕೊಟ್ಟು ಬಂದಿತ್ತಿದ್ದೆ. ಸ್ವಂತದ್ದು ಅಲ್ಲ, ಕ್ವಾಟ್ರಸ್ಸು ಹೇಳಿ ಬಿಟ್ರೆ, ಬಟ್ಟತ್ತಿಗೆ ಮಾಡುವ ಕಾಲದ ವರೆಗೂ ಆ ಮನೆ ನಮ್ಮದೇ ಹೇಳಿ ಅದಕ್ಕೆ ಸುಣ್ಣ, ಬಣ್ಣ, ರಿಪೇರಿ… ಬಟ್ರು ಬಿಡಾರದಲ್ಲಿದವು ಹೇಳಿ ಅನುಕಂಪ, ಅಮ್ಮನ ಬಿಟ್ರೆ ಎಲ್ಲರಿಂಗೂ ನೆಮ್ಮದಿ, ಆರೋಗ್ಯ.. ಅಲ್ಲಿಯಾಣ ನೆಲ್ಲಿ, ಬಸಳೆ, ನೇರಳೆ, ಪೇರಳೆ, ನಕ್ಶತ್ರ ಹಣ್ಣು, ಮಾವಿನ ಕಾಯಿ ಹೇಳಿ ಹಿತ್ಲಿಲಿ ಬೆಳಶುದು, ತಿಂಬದು, ಕೊಡುದರ ಮರವಲೆಡಿಗಾ? ಅಲ್ಲಿಯಾಣ ಕಸ್ತಲೆ ಕೋಣೆಲಿಯೇ ಅಲ್ಲದಾ ಓದಿ ಬರದು ಎಷ್ಟೋ ಸರ್ತಿ ಕ್ಲಾಸಿಲಿ ಫಸ್ಟು ಬಂದದು!ಸಣ್ಣದಿಪ್ಪಾಗ ಕಳೆದ ದಿನಂಗಳ ಕುಶಿ.. ಎಲ್ಲವೂ ಅಲ್ಲೇ ಅಲ್ಲದಾ..? ಬಂದವಕ್ಕೆಲ್ಲಾ ಮದ್ಯಾನ್ನ ಊಟ, ರಾತ್ರೆ ಊಟ…’ ಚೆತ್ರವೋ ಇದು’ ಹೇಳಿ ಅಮ್ಮ ಪರಂಚಿರೂ, ದೇವಸ್ತಾನಕ್ಕೆ ಬಂದವಕ್ಕೆ ಅಪ್ಪ ಊಟ ಹಾಕದ್ದೆ ಇರ.
ಅಮ್ಮನ ಮೋರೆ ನೋಡಿಕ್ಕಿ ಇಲ್ಲಿಗೆ ಬಂದ ನಂತ್ರ ಆದರೂ ಉಷಾರಾಯ್ದಾ?
ಅಲ್ಲಿ ಇದ್ದ ಕಾಯಿಲೆ ಇಲ್ಲೂ ಇದ್ದು. ಒಟ್ಟಿಂಗೆ ಅಪ್ಪಂಗೆ ಬಿಪಿ ಏರುದು ಹೆಚ್ಚಿಗೆ.. ದೊಡ್ಡಮನೆ ಹೇಳಿಕೊಂಬದು ಬಿಟ್ಟರೆ ಬೇರೆಂತ ಕಾಣ್ತಿಲ್ಲೆ.
ನಲ್ಲಿ ನೀರು ಸರಿ ಬತ್ತಿಲ್ಲೆ ಹೇಳಿ ೫೦ ಅಡಿ ಉದ್ದದ ಬಾವಿ ಕೊರದು ನೀರು ತರ್ಸುಲೂ ಖರ್ಚೋ ಕರ್ಚು..
ಕಂಡ ಕಂಡ ದೇವ್ರಿಂಗೆಲ್ಲಾ ಹರಕ್ಕೆ ಹೇಳಿ ಅಂತೂ ನೀರು ಸಿಕ್ಕಿಯಪ್ಪಾಗ ಸಾಕು ಬೇಕಾಯ್ದು.
ಎಂತದೇ ಆಗಲಿ, ಈ ಮನೆಯ ಮಾರುಲೆ ಬಿಟ್ರೆ ಮುಂದೆ ಹೇಂಗೆ? ‘ಅಪ್ಪ ಎಂತ ಮಾಡಿದ್ದ’ ಹೇಳಿ ಕೇಳಿರೆ ಹೇಳುಲೆ, ತೋರುಸುಲೆ ಮನೆ ಇರೆಕ್ಕು ಹೇಳುದು ಎಲ್ಲರ ಆಶೆ.
ಅಪ್ಪಂಗೂ ಇದ್ದು.. ಆದರೆ ಈಗ ಮನೆ ಮಾರುವ ನಿರ್ಧಾರಕ್ಕೆ ಎಂತ ಮಾಡುದಪ್ಪಾ?
ಮತ್ತೆ ಎಂದಿನ ಹಾಂಗೆ ಪೋನು..’ ಮಗಾ..ಕೆಳಾಣ ಮನೆಯ ಗುಡಿಸಿ, ಸಾರಿಸಿ, ಒರೆಸಿದ್ದೆ..ಅಲಿಗೆ ಹೋಗಿ ಬಪ್ಪಂವಕ್ಕೆ ಪಂಚಾಂಗ, ಜೋತಿಶ್ಯ ಹೇಳುವಾ ಹೇಳಿ.
ಅಲ್ಲಿ ಮನುಗಿಪ್ಪಾಗ ಬಪ್ಪ ಒರಕ್ಕು ಇಲ್ಲಿ ಬತ್ತಿಲ್ಲೆ..ಚೆರಿಪಿರಿಯೂ ಕೇಳುಲಾವ್ತಿಲ್ಲೆ. ಕಸ್ತಲಪ್ಪಾಗ ಊಟಕ್ಕೆ ಬತ್ತೆ..ಹಾಂ.. ಸಾಲಕ್ಕೇ ಹೇಳಿ ಮೊನ್ನೆ ಯೆಲ್ಲಪ್ಪಂಗೆ ಎರಡು ಸಾವಿರ ಕೊಟ್ಟಿದೆ.
ಮನೆಗೆ ಹೊಸ ಚೇರ್ ಕೂಪಲೆ ಹೇಳಿ ತಂಯಿದೆ. ಹಳೇ ಮೇಜಿನ ಅಲ್ಲಿಗೆ ಸಾಗುಸುತ್ತೆ. ಅಕ್ಕಲ್ಲದಾ..?ನೆಗೆ ಮಾಡಿಕೊಂಡು ಹೇಳಿದವು ಅಪ್ಪ.
ಎನಗೆ ಎಂತ ಹೇಳೆಕ್ಕೋ ಅರಡಿದ್ದಿಲ್ಲೆ..
ಅಪ್ಪಂದ ಮತು ತೆಕ್ಕೊಳ್ಳೆಕ್ಕು ಹೇಳುದು ಎನ್ನ ದೊಂಡೆಲೇ ಇಳುದು ಹೋತು.
ಸುಮ್ಮನೆ ತಲೆಯಾಡಿಸಿದೆ..

Friday, December 25, 2009


‘ಮುದ್ರಾರ್ಣವ’
ನೂಪುರ ಭ್ರಮರಿ’-ನರ್ತನ ಜಗತ್ತಿನ ಸಂವೇದನೆ,ಅಭಿರುಚಿಗಳ ಕುರಿತ ವಿಶಿಷ್ಟ ಬಗೆಯ ದ್ವೈಮಾಸಿಕದ ಸಂಪಾದಕಿ, ಪತ್ರಿಕೋದ್ಯಮ ಪ್ರಾಧ್ಯಾಪಕಿ, ಕಲಾವಿದೆ ಕು. ಮನೋರಮಾ ಬಿ.ಎನ್ ರಚಿತ ಹಸ್ತ-ಮುದ್ರೆಗಳ ಕುರಿತಾದ ಸಂಶೋಧನಾ ಕೃತಿ ‘z ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ರಾಮಕೃಷ್ಣ ಸಭಾಂಗಣದ ಅದ್ಧೂರಿ ವೇದಿಕೆಯಲ್ಲಿ ಅನಾವರಣಗೊಂಡಿತು.

ಕೃತಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅನಾವರಣಗೊಳಿಸಿದರು. ಸಭಾಧ್ಯಕ್ಷತೆಯನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಟಿ.ಶಾಮ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ.ಸಾ.ಪಾ ಪೂರ್ವಾಧ್ಯಕ್ಷ ಶ್ರೀ ಹರಿಕೃಷ್ಣ ಪುನರೂರು, ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸಿದ್ದರು.

ಕೃತಿಯನ್ನು ವಿಮರ್ಶಿಸುತ್ತಾ ಮಾತನಾಡಿದ ಬಹುಶ್ರುತ ವಿದ್ವಾಂಸ, ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ ; ಇಂದಿನ ದಿನಗಳಲ್ಲಿ ಸಂಶೋಧನೆಗಳು ನೀರಸವಾಗುತ್ತಾ ಬಂದಿದ್ದು ; ಅಧ್ಯಯನಶೀಲತೆ ನಿಂತ ನೀರಾಗುತ್ತಲಿದೆ. ಸಂಶೋಧನೆಗಳು ಸಮಾಜಕ್ಕೆ ಪ್ರಸ್ತುತ, ಉಪಯೋಗವೆನಿಸುವ ಸಂದರ್ಭಗಳೇ ಕಾಣೆಯಾಗುತ್ತಲಿದೆ. ಅದು ಕೇವಲ ಗ್ರಂಥಾಲಯದಲ್ಲಷ್ಟೇ ಉಳಿಯದೆ ಉಪಯುಕ್ತ ಚರ್ಚೆಗಳನ್ನು, ವಿಚಾರಗಳನ್ನು ವಿಷಯಕ್ಕೆ ಸಂಬಂಧಿಸಿದಂತೆ ಬೆಳೆಸಬೇಕು. ಇಂತಹ ಸಂದರ್ಭದಲ್ಲಿ ಮುದ್ರಾರ್ಣವವು ಹೊಸ ಆಶಯಗಳೆಡೆಗೆ ಬೆಳಕು ಚೆಲ್ಲಿದ್ದು, ಓದುಗರು ಅಗತ್ಯ ಪರಾಮರ್ಶಿಸಲೇಬೇಕಾದ ಕೃತಿಯಾಗಿ ಹೊರಹೊಮ್ಮಿದೆ. ವಿಷಯದ ಆಳ ಮುಟ್ಟುವಲ್ಲಿ ಸಾಕಷ್ಟು ಪರಿಶ್ರಮ ಹೊಂದಿದೆ ಎಂದರು.

ಈ ಸಂದರ್ಭದಲ್ಲಿ ಖ್ಯಾತ ಬರಹಗಾರ ಪ.ರಾ. ಶಾಸ್ತ್ರಿ ಅವರಿಗೆ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣಾ ಪ್ರಶಸ್ತಿ ಮತ್ತು ನೀರ್ಪಾಜೆ ಭೀಮ ಭಟ್ಟ ಸಂಸ್ಮರಣಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರೂ, ಕುರಿಯ ವಿಠಲಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಗೌರವಾಧ್ಯಕ್ಷರೂ ಆದ ಶ್ರೀ ವಿಜಯರಾಘವ ಪಡ್ವೆಟ್ನಾಯ, ಮನೋರಮಾ ಅವರ ಹೆತ್ತವರಾದ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಪುರೋಹಿತ ವೇದಮೂರ್ತಿ ಬಿ.ಜಿ.ನಾರಾಯಣ ಭಟ್, ಮತ್ತು ಸಾವಿತ್ರಿ ಭಟ್, ಸಾಹಿತಿಗಳಾದ ವಿ.ಬಿ.ಅರ್ತಿಕಜೆ, ಕು.ಗೋಪಾಲ ಭಟ್ ಭಾಗವಹಿಸಿದ್ದರು.

ಸ್ವಾಗತ ಮತ್ತು ಪ್ರಸ್ತಾವನೆಯನ್ನು ಉಜಿರೆ ಅಶೋಕ್ ಭಟ್ ನಿರ್ವಹಿಸಿದರೆ, ಮನೋರಮಾ ಬಿ.ಎನ್ ವಂದಿಸಿದರು. ಉಪನ್ಯಾಸಕ, ಕಲಾವಿದ ಶ್ರುತಕೀರ್ತಿರಾಜ್ ವಂದಿಸಿದರು. ಇದೇ ಸಂದರ್ಭ ಹೊಸನಗರ ಯಕ್ಷಗಾನ ಮೇಳದವರಿಂದ ಯಕ್ಷ ಸಪ್ತಾಹ ಅದ್ಧೂರಿಯಿಂದ ಜರುಗಿ ಭಾರೀ ಜನಸ್ತೋಮದ ಮೆಚ್ಚುಗೆಗೆ ಪಾತ್ರವಾಯಿತು.

‘ಮುದ್ರಾರ್ಣವ’- ನಾಟ್ಯಶಾಸ್ತ್ರ, ಅಭಿನಯದರ್ಪಣ, ಹಸ್ತಲಕ್ಷಣದೀಪಿಕಾ, ಹಸ್ತಮುಕ್ತಾವಳಿ, ಹಠಯೋಗಪ್ರದೀಪಿಕಾ ಮುಂತಾಗಿ ಸುಮಾರು ನೂರಕ್ಕೂ ಮಿಕ್ಕಿದ ಗ್ರಂಥಾವಲೋಕನ, ಗುಣಾತ್ಮಕ ಪರಿಶೀಲನೆ, ವಿದ್ವಾಂಸರ ಸಂದರ್ಶನ, ನೃತ್ಯ ಪ್ರದರ್ಶನಗಳ ಸಮೀಕ್ಷೆಗಳನ್ನೊಳಗೊಂಡ ; ಸಂಗೀತ, ನೃತ್ತ-ನೃತ್ಯ-ನಾಟ್ಯ, ಯೋಗ, ತಂತ್ರ-ಮಂತ್ರ, ಧಾರ್ಮಿಕ ಪೂಜಾ ವಿಧಿ, ವೇದ-ಶಾಸ್ತ್ರ-ಪುರಾಣ, ಸಾಮಾನ್ಯ ಜೀವನಪದ್ಧತಿ, ಮುದ್ರಾ ವಿಜ್ಞಾನ, ಪ್ರತಿಮಾಶಾಸ್ತ್ರ ಮುಂತಾದವುಗಳಲ್ಲಿ ಉಪಯೋಗಿಸುವ ಸಾವಿರಕ್ಕೂ ಹೆಚ್ಚು ಅಸಂಯುತ, ಸಂಯುತ ಹಸ್ತ-ಮುದ್ರೆಗಳ ಸಂವಹನದ ಬಹು ಆಯಾಮಿ ಅಧ್ಯಯನವಾಗಿದೆ.

ಕೃತಿಯ ಲೇಖಕಿ ಮನೋರಮಾ ಬಿ.ಎನ್ ಭರತನಾಟ್ಯ, ಯಕ್ಷಗಾನ, ರಂಗಭೂಮಿ, ಸಾಹಿತ್ಯ, ಪತ್ರಿಕೋದ್ಯಮ, ಸಂಶೋಧನೆಯಲ್ಲಿ ತೊಡಗಿಸಿಕೊಂಡ ಬಹುಮುಖ ಪ್ರತಿಭೆಯವರಾಗಿದ್ದು, ಆಕಾಶವಾಣಿ, ದೂರದರ್ಶನಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಈಗಾಗಲೇ ಇವರ ಸಂಪಾದಕ್ತ್ವದಲ್ಲಿ ನೂಪುರ ಭಮರಿ ಎಂಬ ಪತ್ರಿಕೆ ಪ್ರಕಟವಾಗಿದ್ದು, ವಿದ್ವಜ್ಜನರ ಅಭಿಮಾನ ಗಳಿಸಿದೆ. ಕಳೆದ ವರ್ಷ ‘ಅಕ್ಕ’-ಹೊರನಾಡ ಕನ್ನಡಿಗರ ಒಕ್ಕೂಟ, ಯುಎಸ್ಎ ಇವರು ಏರ್ಪಡಿಸಿದ ಅಂತಾರಾಷ್ಟ್ರೀಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ತಮ್ಮ ‘ಪ್ರದರ್ಶಕ ಕಲೆಗಳಲ್ಲಿ ಫ್ಯೂಷನ್ ಪರಂಪರೆ’ ಎಂಬ ಪ್ರಬಂಧಕ್ಕೆ ಪ್ರಥಮ ಬಹುಮಾನ ಪಡೆದಿದ್ದರು. ಕೃತಿಯೊಂದರ ತರುವಾಯ ; ಮುದ್ರಾರ್ಣವ ಲೇಖಕಿಯ ಎರಡನೆಯ ಕೃತಿಯಾಗಿ ಹೊರಹೊಮ್ಮಿದೆ.

ಮುದ್ರಾರ್ಣವ;- ಈ ಕೃತಿಯನ್ನು ಯಕ್ಷಗಾನದ ಅಗ್ರಮಾನ್ಯ ಕಲಾವಿದ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣಾರ್ಥವಾಗಿ ರೂಪುಗೊಂಡ ಯಕ್ಷಗಾನ ಪ್ರತಿಷ್ಠಾನವು ಪ್ರಕಾಶಿಸಿದ್ದು, ಪ್ರತಿಷ್ಠಾನದ ಸಂಚಾಲಕರಾಗಿ ಹೊಸನಗರ ಶ್ರೀರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮೇಳದ ಸಂಚಾಲಕ, ಯಕ್ಷಗಾನ ಕಲಾವಿದ ಶ್ರೀ ಉಜಿರೆ ಅಶೋಕ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಪುಸ್ತಕದ ಬೆಲೆ ರೂ. ೨೫೦/- ಆಗಿದ್ದು ; ಪ್ರತಿಗಳಿಗಾಗಿ ದೂರವಾಣಿ ೯೯೬೪೧೪೦೯೨೭, ೯೪೪೯೨೫೫೬೬೬ ಸಂಪರ್ಕಿಸಬಹುದು.ಹುರ್ರೇ...
ಈಗ ನೂಪುರ ಭ್ರಮರಿ ನ್ಯೂಸ್ ಪೇಪರ್ಸ್ ರಿಜಿಸ್ಟ್ರೇಶನ್ ಆಫ್ ಇಂಡಿಯಾದಿಂದ ( ಆರ್ ಎನ್ ಐ) ರಿಜಿಸ್ಟರ್ಡ್ ಆದ ಪತ್ರಿಕೆ...ಅಂತೂ ಮೂರು ವರ್ಷದ ಶ್ರಮಕ್ಕೆ ಸಾರ್ಥಕತೆ ಒದಗಿದೆ. ಜೊತೆಗೆ ನಮ್ಮದೇ ಆದ ಶ್ರೀ ಸಾನ್ನಿಧ್ಯ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಎಂಬ ಸಂಸ್ಥೆಯೂ ಜೊತೆಗೆ ತಲೆ ಎತ್ತಿ ನಿಂತಿದೆ. ಅಪಾರ ಪ್ರಮಾಣದ ಓದುಗರೂ ಕೈಜೊಡಿಸಿದ್ದಾರೆ.
ಯಶಸ್ವೀ ಮೂರನೇ ವರ್ಷದ ಆರಂಭಕ್ಕೆ 'ಮುದ್ರಾರ್ಣವ'ವೂ ತೆರೆ ಕಂಡಿದೆ.
ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

Wednesday, November 18, 2009

ಆತ್ಮೀಯರೇ,
ಸಂವಹನ ಮಾಧ್ಯಮವಾಗಿ, ಶಾಸ್ತ್ರೀಯ ಪರಿಭಾಷೆಯಾಗಿ ಹಸ್ತಮುದ್ರೆಗಳ ಪಾತ್ರ ಹಿರಿದಿದ್ದರೂ, ಇವುಗಳ ಕುರಿತಂತೆ ನಡೆದ ಅಧ್ಯಯನಗಳು ಬಹಳ ವಿರಳ. ಅದರಲ್ಲೂ ಸಂಹವನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತಂತೆ ಆಳವಾದ ಪರಿಶೋಧನೆಗಳು ಜರುಗಿಲ್ಲ. ಸಾಮಾನ್ಯವಾಗಿ ಈ ಮುದ್ರೆಗಳನ್ನು ಸೌಂದರ್ಯ ಸೂಚಕಗಳಾಗಿ ಪರಿಗಣಿಸುತ್ತಾರೆಯೇ ವಿನಃ, ಸಾಮಾಜಿಕ ಅಥವಾ ಸಂವಹನದ ದೃಷ್ಟಿಯಲ್ಲಿ ಚಿಂತಿಸಲ್ಪಡುವುದಿಲ್ಲ. ಹಸ್ತವಿನ್ಯಾಸಗಳ ಬಗೆಗೆ ವಿವರಣೆಯಿರುವ ಪುಸ್ತಕಗಳಿವೆಯೇ ಹೊರತು ಸಂಶೋಧನಾತ್ಮಕ ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಒಂದು ನೆಲೆಗಟ್ಟಿನಿಂದ ನೋಡಿದಾಗ `ಸಂವಹನ ಮಾಧ್ಯಮವಾಗಿ ಹಸ್ತಮುದ್ರೆಗಳು' ಎಂಬ ವಿಷಯ ಸಂಶೋಧಕರ ಗಮನ ಸೆಳೆದಿಲ್ಲವೆಂದೇ ಹೇಳಬೇಕು. (ಈ ನಿಟ್ಟಿನಲ್ಲಿ ಪತ್ರಿಕೆಯೂ 'ಹಸ್ತಮಯೂರಿ' ಯ ಮೂಲಕ ಗಮನಾರ್ಹ ರೀತಿಯಿಂದ ಪ್ರಯತ್ನ ಮಾಡುತ್ತಿರುವುದು ನಿಮಗೆ ತಿಳಿದ ವಿಷಯವೇ !) ಆದ್ದರಿಂದ ಹಸ್ತ ಮುದ್ರೆಗಳ ಭಾವ, ಉಪಯೋಗ, ಸಂವಹನದ ಸಾಧ್ಯತೆಗಳನ್ನು ಗಮನದಲ್ಲಿರಿಸಿ ಅವುಗಳ ಬಗೆಗೆ ವಿಸ್ತೃತ ಅಧ್ಯಯನ ಮಾಡಿದ ಫಲ ;
ಇದೇ ಬರುವ ನವೆಂಬರ್ ೨೨ ಆದಿತ್ಯವಾರದಂದು, ಸಂಜೆ ೪ ಗಂಟೆಗೆ ಧರ್ಮಸ್ಥಳದ ಬಳಿ ಇರುವ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನ ರಾಮಕೃಷ್ಣ ಸಭಾ ಮಂಟಪದಲ್ಲಿ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಪ್ರಕಾಶನದೊಂದಿಗೆ ಯಕ್ಷಸಪ್ತಾಹದ ಜೊತೆಗೆ ಭವ್ಯವೇದಿಕೆಯಲ್ಲಿ ಲೋಕಾರ್ಪಣಗೊಳ್ಳುತ್ತಿದೆ.

ಅಧ್ಯಕ್ಷತೆ : ಶ್ರೀ ಟಿ. ಶಾಮ ಭಟ್, ಭಾ.ಸೇ.ಆ,
ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಕೆ.ಐ.ಡಿ.ಬಿ., ಕರ್ನಾಟಕ
ಗ್ರಂಥ ಲೋಕಾರ್ಪಣೆ : ಡಾ. ಡಿ. ಬಿ. ಯಶೋವರ್ಮ, ಕಾರ್ಯದರ್ಶಿಗಳು, ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳು
ಗ್ರಂಥ ಪರಿಚಯ : ಡಾ. ಎಂ. ಪ್ರಭಾಕರ ಜೋಷಿ, ಬಹುಶ್ರುತ ವಿದ್ವಾಂಸರು
ಮುಖ್ಯ ಅಭ್ಯಾಗತ : ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, ಪೂರ್ವಾಧ್ಯಕ್ಷರು, ಕ.ಸಾ.ಪ, ಬೆಂಗಳೂರು.

ತಮ್ಮೆಲ್ಲರ ಉಪಸ್ಥಿತಿಯೇ ನಮಗೆ ದೊಡ್ಡ ಸಂತೋಷ ಮತ್ತು ಹೆಮ್ಮೆ.

ಪ್ರೀತಿಯಿಂದ,
-ಮನೋರಮಾ ಬಿ.ಎನ್ ಮತ್ತು ನೂಪರ ಭ್ರಮರಿ ಬಳಗ
ಮೊಬೈಲ್ : +೯೧ ೯೯೬೪೧೪೦೯೨೭

---------------------- ******************
ಪುಸ್ತಕದಲ್ಲಿ ನಿರೂಪಿತವಾದ ಅಂಶಗಳೆಡೆಗೆ ಒಂದು ಕ್ಷ-ಕಿರಣ
  • ಸಂಶೋಧನಾ ಅಧ್ಯಯನ ; ಸುಮಾರು ೪೦೦ ಪುಟಗಳ ಗ್ರಂಥ.
  • ಭರತನಾಟ್ಯದಲ್ಲಿ ಉಪಯೋಗಿಸಲಾಗುತ್ತಿರುವ ಹಸ್ತಗಳನ್ನು ಪ್ರಧಾನವಾಗಿರಿಸಿಕೊಂಡು ಇತರೆ ಮರೆಯಾಗಿರುವ ಹಸ್ತಗಳ ಕುರಿತ ಅವಲೋಕನ ಮತ್ತು ಅವುಗಳ ಸಂವಹನ ಪ್ರಕ್ರಿಯೆ ಎಷ್ಟರ ಪಟ್ಟಿಗೆ ಮಹತ್ವಪೂರ್ಣವಾಗಿದೆ ಎಂಬುದು ಸಂಶೋಧನೆಯ ಮೂಲ ಉದ್ದೇಶ. ಜೊತೆಗೆ ಇತರೆ ನೃತ್ಯಪದ್ಧತಿ (ಉದಾ: ಕಥಕ್ಕಳಿ, ಮಣಿಪುರಿ, ಒಡಿಸ್ಸಿ, ಯಕ್ಷಗಾನ)ಗಳಲ್ಲಿ ಬಳಕೆಯಾಗುತ್ತಿರುವ ಹಸ್ತಗಳು ಮತ್ತು ಅವುಗಳಲ್ಲಿ ಎಷ್ಟು ನಾವು ದಿನನಿತ್ಯದ ಜೀವನದಲ್ಲಿ ಬಳಸಿಕೊಳ್ಳುತ್ತೇವೆ ಎಂಬ ಅವಲೋಕನ. ಮತ್ತು ಅವುಗಳಲ್ಲಿನ ಸಮಾನ ಮತ್ತು ವ್ಯತ್ಯಾಸ ಅಂಶಗಳೆಡೆಗೆ ದೃಷ್ಟಿ.
  • ಅಭಿನಯದರ್ಪಣದ ಅಂಶಗಳನ್ನೇ ಪ್ರಧಾನವಾಗಿ ಬಳಸಿಕೊಂಡು ಅಧ್ಯಯನ ನಡೆದರೂ ಉಳಿದಂತೆ ನಾಟ್ಯಶಾಸ್ತ್ರ, ಹಸ್ತ ಮುಕ್ತಾವಳಿ, ಹಸ್ತ ಲಕ್ಷಣ ದೀಪಿಕಾ, ಭರತಸಾರ, ಭರತಕಲ್ಪಲತಾ ಮಂಜರಿ, ಸಾರಸಂಗ್ರಹ, ಲಾಸ್ಯರಂಜನ, ಸಂಗೀತ ರತ್ನಾಕರ, ನರ್ತನನಿರ್ಣಯ, ಬಾಲರಾಮ ಭರತ, ಪುರಾಣಗಳು, ಸಂಹಿತೆಗಳು, ಪ್ರಣೀತಗಳು, - ಹೀಗೆ ಹಲವಾರು ಗ್ರಂಥಗಳಲ್ಲಿ ಪ್ರಸ್ತಾಪಿಸಿದ ಹಸ್ತಗಳು, ಅವುಗಳ ವಿನಿಯೋಗ, ಮಹತ್ವ, ಪ್ರಚಲಿತದಲ್ಲಿ ಉಪಯೋಗವಾಗುತ್ತಿರುವ ಹಸ್ತಗಳು, ಅವುಗಳ ಮೂಲ, ಧಾರ್ಮಿಕ, ಸಾಮಾಜಿಕ, ರಾಜಕೀಯ, ಗ್ರಾಂಥಿಕ ಹಿನ್ನಲೆಗಳು.
  • ಹಸ್ತ ಮುದ್ರೆಗಳು ಮುದ್ರಾವಿಜ್ಞಾನದಲ್ಲಿ, ಹಠಯೋಗ ಪ್ರದೀಪಿಕಾ ಮುಂತಾಗಿ ಯೋಗಶಾಸ್ತ್ರದಲ್ಲಿ, ಮುದ್ರಾ ಶಾಸ್ತ್ರ, ಧಾರ್ಮಿಕ ಪೂಜಾ ವಿಧಿ, ಪ್ರತಿಮಾಶಾಸ್ತ್ರ, ತಂತ್ರ-ಮಂತ್ರ-ಹಸ್ತಸಾಮುದ್ರಿಕಾಗಳಲಿ ಹೇಗೆ ಬಳಕೆಯಾಗುತ್ತಿವೆ ಮತ್ತು ಅವುಗಳ ಉಪಯೋಗ. ಮುಖ್ಯವಾಗಿ ಮುದ್ರೆಗಳ ಬಳಕೆಯಿಂದಾಗುವ ಆರೋಗ್ಯಕರ ಆಯಾಮಗಳ ತುಲನೆ.
  • ಅಧ್ಯಯನಕ್ಕೆ ಅವಶ್ಯವಿರುವ ಇತಿಹಾಸ, ಗುಣಾತ್ಮಕ ಪರಿಶೀಲನೆ, ವಿದ್ವಾಂಸರಿಂದ ಆಳ ಸಚಿದರ್ಶನ, ಪ್ರದರ್ಶನಗಳ ಸಮೀಕ್ಷೆ, ಗ್ರಂಥ ಅಧ್ಯಯನ.
-ತಮ್ಮ ಪ್ರತಿಗಳನ್ನು ಕಾಯ್ದಿರಿಸಿ-

Saturday, October 10, 2009

ಮಾಧ್ಯಮಗಳು ಮಾರಾಟಕ್ಕಿವೆ !
ರಿಯಾಲಿಟಿ ಶೋವಿನ Cruel Reality !


ರಾಮಾ-ಕೃಷ್ಣಾ ಅಂತ ಟಿವಿ ಮುಂದೆ ಕೈಮುಗಿದು ಕುಳಿತಿದ್ದ ಜಮಾನಾ ಚಾವಡಿಯಿಂದೆದ್ದು ಹೋಗಿ ವರ್ಷಾನುಗಟ್ಟಲೆ ಮನೆಯ ಹೆಂಗಸರು ದೇಶದ ತುಂಬೆಲ್ಲಾ ಅತ್ತೆ, ಸೊಸೆಯ ಸರಿ- ತಪ್ಪುಗಳನ್ನ ಮಾತಾಡಿಕೊಳ್ಳುತ್ತಾ, ಮೂಗೊರೆಸಿ ಅತ್ತುಕೊಂಡು ಕುಳಿತಿರುವಾಗಲೆ ಅದೆಲ್ಲೋ ಮೂಲೆಯಲ್ಲಿ ಮುಸಿಮುಸಿ ಅಳುತ್ತಿದ್ದ ಅಮಿತಾಬ್ ಬಚ್ಚನ್ ' ಲಾಕ್ ಕರ್ ದಿಯಾ ಜಾಯ್' ಅಂದಿದ್ದೇ ತಡ ಎಲ್ಲರೂ 'ಲಾಕ್' ಆಗಿದ್ದಂತೂ ಹೌದು ! ಹಾಗೆ ನೋಡಿದರೆ, 'ಕ್ಯೋಂ ಕಿ ಸಾಸ್ ಬಿ ಕಭೀ ಬಹೂ ಥೀ' ಅಂತ ಏಕ್ತಾ ಕಪೂರ್‌ನಂತವರು ಗಂಟೆಗೊಂದಾವರ್ತಿ ಕುಯ್ಯುವಾಗ ; ವನವಾಸ ೧೪ ವರ್ಷ, ಆದರೆ 'ರೀಲ್' ಬಿಡುವ ಸೀರಿಯಲ್‌ಗೆ ಅದರ ದುಪ್ಪಟ್ಟು ವರುಷ (ಹಾವಿನ ದ್ವೇಷ, ಹನ್ನೆರಡು ವರುಷ- ಎಲ್ಲಾ ಔಟ್‌ಡೇಟೆಡ್) ಅಂತೆಲ್ಲಾ ಮಾತಾಡಿಕೊಂಡಿರುವಾಗಲೇ ವಿ ಟಿವಿಯಲ್ಲಿ ಮೇಕಿಂಗ್ ಆಫ್ ದಿ ಬ್ಯಾಂಡ್ ಎಂಬ ರಿಯಾಲಿಟಿ ಷೋ ಮೆಲ್ಲನೆ ಪಡಸಾಲೆಗೆ ಬಂದು ಕುಳಿತಾಗಿತ್ತು. ಯಾವಾಗ ಟಿ ಆರ್ ಪಿ ಏರಿಸುವ ಸೂತ್ರಗಳ ಪೈಕಿ ಇದಕ್ಕೇ ಫಸ್ಟ್ ಪ್ರೈಜ್ ಅಂತ ಗೊತ್ತಾಯಿತೋ, ಪರಮಾತ್ಮ ಎಲ್ಲೆಲ್ಲೂ ಇದ್ದಾನೆ ಎನ್ನುವ ದಾಸ-ಸೂಫಿಗಳ ಮಾತಿನಂತೆ ಚಾನಲ್ ಚಾನಲ್ ಗೂ ರಿಯಾಲಿಟಿ ಶೋ ಸಂಸ್ಥೆಗಳು ಹುಟ್ಟಿಕೊಂದವು! ಬೇರೆ ದೇಶದವರ ಕಾಪಿ ಹೊಡೆದೂ ತೆಗೊಳ್ಳೋದು ಹೇಗೆ ಅನ್ನೋದಕ್ಕೂ ರಿಯಾಲಿಟಿ ಶೋ ಕಾನ್ಸೆಪ್ಟ್ ಮಾದರಿ ಆಯಿತು !
ಮೊದಲೆಲ್ಲಾ ರಿಯಾಲಿಟಿ ಷೋಗಳು ಪ್ರಾಮುಖ್ಯತೆ ಗಳಿಸಿಕೊಂಡಿದ್ದೇ ಸಮಾಜದ ವಾಸ್ತವಗಳನ್ನು ಕಿರುತೆರೆಯ ಮೇಲೆ ನಾಟಕೀಯವಾಗಿ ಅಥವಾ ಅಕರ್ಷಕವಾಗಿ ಪ್ರಸ್ತುತಪಡಿಸುವ ಮೂಲಕ ಜನತೆಗೆ ಸಂದೇಶವನ್ನು ತಲುಪಿಸುವುದಕ್ಕೆ ! ಅದರ ಪಾರದರ್ಶಕ ನಿಲುವಿನಿಂದಲೇ ಅದು ವ್ಯಾಪಕವಾದದ್ದು. ಹಾಗಾಗಿ ಕಥೆ ಆಧರಿತ ರಿಯಾಲಿಟಿ ಷೋಗಳ ಸಂಖ್ಯೆ ಜಾಸ್ತಿಯಿತ್ತು. ಅದೇ ಮಾದರಿಗೆ ಒಳಪಟ್ಟ ಗಾಯನ ನೃತ್ಯ ಕಾರ್ಯಕ್ರಮಗಳು ಸುಪ್ತ ಪ್ರತಿಭೆಗಳನ್ನು ಹೊರಸೂಸುವಲ್ಲಿ ಒಂದು ಪ್ರಯತ್ನ ಎಂದೂ ಭಾವಿಸಲಾಯಿತು. ಆದರೆ ಬರಬರುತ್ತಾ ರಾಯರ ಕುದುರೆ ಕತ್ತೆ ಎಂದು ಗೊತ್ತಾದದ್ದು ತೀರಾ ಇತ್ತೀಚೆಗೆ !


ರೆಹಮಾನ್ ಬರಲಿದ್ದಾರೆ ರಿಯಾಲಿಟಿ ಶೋನಲ್ಲಿ !
ದೇಶದ ಸಂಗೀತ ಪ್ರತಿಭೆಗಳನ್ನು ಹೆಕ್ಕಿ ತೆಗೆಯಲು ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಕಂಕಣ ತೊಟ್ಟಿರುವಂತೆ ಕಾಣುತ್ತದೆ ! ಡಿಸೆಂಬರ್ ಮೊದಲ ವಾರದಿಂದ ಎ.ಆರ್.ರೆಹಮಾನ್ ರ ರಿಯಾಲಿಟಿ ಷೋ ಪ್ರಸಾರವಾಗಲಿದೆ. ಅದೂ ದೂರದರ್ಶನದಲ್ಲಿ ! ಖಾಸಗಿ ದೂರದರ್ಶನ ಚಾನೆಲ್ ರಿಯಾಲಿಟಿ ಷೋಗಳ ಭರಟೆಯಲ್ಲಿ ಸರಕಾರಿ ದೂರದರ್ಶನದಲ್ಲಿ ಪ್ರಸಾರ ಮಾಡಲಿರುವ ರೆಹಮಾನ್ ರಿಯಾಲಿಟಿ ಷೋ ಪ್ರೇಕ್ಷಕರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸಿರುವುದಂತೂ ಸುಳ್ಳಲ್ಲ..

ದೂರದರ್ಶನದಲ್ಲಿ ಎ.ಆರ್.ರೆಹಮಾನ್ ನಿರ್ವಹಿಸುವ 'The Big Band' ಷೋಗಾಗಿ ಈಗಾಗಲೇ ಏಳು ದೇಶಗಳ ಬಹಳಷ್ಟು ವಾದ್ಯವೃಂದಗಳು ಆಯ್ಕೆಯಾಗಿವೆ. ವಿಶೇಷವೆಂದರೆ ಭಾರತದ ಸಂಗೀತ ಪ್ರತಿಭೆಗಳನ್ನು ಮಾತ್ರ ಈ ರಿಯಾಲಿಟಿ ಷೋಗಾಗಿ ಹೆಕ್ಕಿತೆಗೆದಿಲ್ಲ. ಭಾರತ ಉಪಖಂಡಕ್ಕೆ ಸೇರಿದ ನೇಪಾಳ, ಮಲೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ, ಸಿಂಗಪುರ ಮತ್ತ್ತು ಶ್ರೀಲಂಕಾದ ವಾದ್ಯವೃಂದಗಳು ಈಗಾಗಲೇ ಆಯ್ಕೆಯಾಗಿವೆ.
ಈ ರಿಯಾಲಿಟಿ ಷೋವನ್ನು ಪ್ರಸಿದ್ಧ ಮನರಂಜನೆ ಮತ್ತು ಸಂವಹನ ಸಂಸ್ಥೆ ಫಾತ್ ಫಿಶ್ ನಿರ್ಮಿಸುತ್ತಿದೆ. ಸಾಧಾರಣವಾಗಿ ಸಂಗೀತ ಆಧಾರಿತ ರಿಯಾಲಿಟಿ ಷೋಗಳಲ್ಲಿ ಏಕಮಾತ್ರ ಸ್ಪರ್ಧಿಗಳದ್ದೇ ಕಾರುಬಾರು. ಆದರೆ ಬಿಗ್ ಬ್ಯಾಂಡ್‌ನದ್ದು ಉತ್ತಮ ವಾದ್ಯವೃಂದಗಳ ನಡುವಿನ ಸ್ಪರ್ಧೆ. ಕಾರ್ಯಕ್ರಮದಲ್ಲಿ ಸ್ಪರ್ದಿಸುವ ವಾದ್ಯವೃಂದಗಳು ೨ ರಿಂದ ೧೦ ಸದಸ್ಯರನ್ನು ಹೊಂದಿದ್ದು, ಕನಿಷ್ಠ ಓರ್ವ ಪ್ರಧಾನ ಗಾಯಕರಿರುತ್ತಾರೆ. ಗೆದ್ದ ತಂಡ ಫಾತ್ ಫೇರ್ ರೆಕಾರ್ಡಿಂಗ್ ಸಂಸ್ಥೆಯೊಂದಿಗೆ ಮೂರು ವರ್ಷಗಳ ಕಾಲ ರೆಕಾರ್ಡಿಂಗ್ ಗುತ್ತಿಗೆ ಪಡೆಯುತ್ತದೆ. ಇದರಲ್ಲಿ ಮೂರು ಆಲ್ಬಂ ಹಾಗೂ ಆರು ಸಂಗೀತ ವಿಡಿಯೋಗಳನ್ನು ನಿರ್ವಹಿಸುವ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸ, ಸಂಗೀತ ಕಚೇರಿಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ೧೦ ದಶಲಕ್ಷ ನಗದು ಬಹುಮಾನ ನೀಡಲಾಗುತ್ತದೆ.


ಅಬ್ಬಾ, ನಾವೇ ವಾಸಿ !
ಭಾರತದಲ್ಲಿ 'ಕರೋಡ್ ಪತಿ' ಹಿಟ್ ಆಗಿದ್ದು ನೆನಪಿದೆಯಷ್ಟೇ ! ಈಗ 'ರೋಡ್ ಪತಿ' ಸರದಿ. 'ಬಿಗ್ ಬ್ರದರ್ಸ್' ನ ಜನಕ ಎಂಡಮಲ್ ಇದರ ಸೂತ್ರಧಾರ. ಸಂಬಳ ಕೊಡೋದಿಕ್ಕೆ ಕಾಸಿಲ್ಲ ಅಂತ ಕಂಪೆನಿಗಳ ಮಾಲೀಕರು ಒದ್ದಾಡುವಾಗ ಅಮೆರಿಕಾದ ಫಾಕ್ಸ್ ಟಿವಿ ರೆಸೆಷನ್‌ನನ್ನೇ ಆಧಾರ ಮಾಡಿಕೊಂಡು ರಂಜನೆ, ದುಡ್ಡು, ಜನರ ಸಮಯ ಎಲ್ಲವನ್ನೂ ಬಾಚಿಕೊಳ್ಳಲು ಹೊರಟಿದೆ. ಹೇಗಿದ್ದರೂ ಹಣದ ಮುಗ್ಗಟ್ಟಿನ ಸಮಯ, ನೋಡಿ. ಉದ್ಯೋಗ ಕಡಿತ ಸಾಮಾನ್ಯವಾಗಿ ಹೋಗಿದೆ. ಅದೇ ಕಡಿತವನ್ನ ಜನರೇ ಕೊಂಡಾಡುವಂತೆ ತೋರಿಸಿದರೆ ಹ್ಯಾಗೆ, ಎಂದು ಕಂಡಿದ್ದೇ ತಡ ; ಕಂಪನಿಯಲ್ಲಿರೋ ನೌಕರರೆಲ್ಲಾ ಟಿ ವಿ ಪರದೆಯ ಮೇಲೆ ! 'ಯಾರನ್ನ ಮನೆಗೆ ಕಳಿಸಬೇಕು ಅಂತ ಜನರೇ ಡಿಸೈಡ್ ಮಾಡಲಿ' ಅನ್ನೋದೇ ಷೋ ಹೈಲೈಟ್ ! ಒಂದರ್ಥದಲ್ಲಿ ಕೇರ್ ಆಫ್ ಫುಟ್ ಪಾತ್ ಮಾಡಲಿಕ್ಕೂ ಸ್ಪರ್ಧಾ ಕಾರ್ಯಕ್ರಮ. (ಒಂದುವೇಳೆ ತಾವೆಣಿಸಿದವರೇ ಮನೆಗೆ ಹೋದರೆ ವೀಕ್ಷಕರಿಗೂ ತಾವಂದುಕೊಂಡಂತೆ ಆಗಿದೆ ಎಂಬ ತೃಪ್ತಿ ಎಂಬುದೇ ಅಂದಾಜು!) ಹಾಗಾಗಿ ಮನೆಗೋಗೋವ್ರು ಯಾರು? ಕೆಲಸ ಕಳೆದುಕೊಳ್ಳೋವ್ರ್ಯಾರು ಅನ್ನೋದೂ ಒಂಥರಾ ಎಕ್ಸೈಟಿಂಗ್ ! ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಅಂತ ಇದನ್ನೇ ಹೇಳೋದಾ !
ಇಷ್ಟೇ ಅಲ್ಲ, 'ಚೀಟಿಂಗ್ ಸ್ಪೌಸಸ್ ಕಾಟ್ ಆನ್ ಟೇಪ್' ನಲ್ಲಿ ಗಂಡ ಹೆಂಡ್ತಿಯರು ಪರಸ್ಪರ ಹೇಗೆ ಮೋಸ ಮಾಡ್ತಾರೆ, ಬೇರೆಯವರ ಜೊತೆ ಯಾವ ಬೆಡ್ ರೂಂ ನಲ್ಲಿ ಇದ್ದರು ಎಂಬುದೊಂದು ರಿಯಾಲಿಟಿ ಷೋ ಅದರೆ, ಡೇಟಿಂಗ್ ಮಾಡುವವರ ಪೂರ್ವಾಪರಗಳನ್ನೆಲ್ಲಾ ರೆಕಾರ್ಡ್ ಮಾಡುವ 'ಬ್ಲೈಂಡ್ ಡೇಟ್' ಮತ್ತೊಂದು ಬಗೆಯದು ! ಇಬ್ಬರ ಜೊತೆ ಮಲಗಿದರೆ ಹೇಗಿರುತ್ತೆ ಅನ್ನುವುದರಿಂದ ಹಿಡಿದು 'ಬ್ಯಾಟಲ್ ಆಫ್ ದಿ ಬಾಡ್ಸ್' ನಲ್ಲಿ 'ಸೌಂದರ್ಯ' ದ ಮಾನದಂಡವೆಂಬಂತೆ ಹುಡುಗಿಯರು - ಹುಡುಗರಾದಿಯಾಗಿ ಎಲ್ಲಾ ಸ್ಪರ್ಧಿಗಳೂ ಬಟ್ಟೆ ಬಿಚ್ಚುವ ತನಕ ! ನೈಟ್ ಕ್ಲಬ್‌ನ ರಹಸ್ಯಗಳ ರಾಸಲೀಲೆಗೆ 'ನೈಟ್ ಕ್ಲಬ್ ಕನ್ಫೆಶನ್ಸ್' ಇದ್ದರೆ, 'ಶಾಕಿಂಗ್ ಬಿಹೇವಿಯರ್ ಕಾಟ್ ಆನ್ ಟೇಪ್', 'ಸೆಕ್ಸಿ ಕ್ಯಾಮ್' ರಿಯಾಲಿಟಿ ಷೋಗಳ ವಿವರಣೆ ಬೇಡವೇನೋ ! ಹೆಸರೇ ಎಲ್ಲಾ ತಿಳಿಸುತ್ತದೆಯಲ್ಲಾ!
ಸದ್ಯದ ಮಟ್ಟಿಗೆ ನಾವೇ ವಾಸಿ ! ಆದರೂ ಕೆಲವೇ ದಿನಗಳಲ್ಲಿ ನಮ್ಮಲ್ಲಿಗೂ ಬಂದರೆ ಆಶ್ಚರ್ಯವೇನಿಲ್ಲ !

ಮಾಧ್ಯಮಗಳು ನೀಡಬೇಕಾದದ್ದು ವಿನೋದವಲ್ಲ ; ವಿಕೃತ ಸಂತೋಷ ! : ವ್ಯಾಖ್ಯೆಗಳು ಬದಲಾಗುತ್ತಲಿದೆ.
********'ಮದುವೆ ಅಂದ್ರೆ ಆಟ ಅಲ್ಲ' ಅಂತ ಗದರಿಸಿದವರ್ಯಾರು ಸ್ವಾಮೀ !
ಅಯ್ಯೋ ರಾಮಾ ! ಯಾರು ಇದಕ್ಕೆಲ್ಲಾ ಹೋಗ್ತಾರೆ ಅಂತೀರಾ?
ನಾವೇ !
ರಾಖಿ ಸಾವಂತ್ ಇಲೇಶ್‌ಗೆ ಉಂಗುರ ತೊಡಿಸಿಯಾಗಿದೆ ! ಅದಕ್ಕೂ ಮೊದಲೇ ಎನ್‌ಡಿಟಿವಿ ಇಮ್ಯಾಜಿನ್ ವಾಹಿನಿಗೆ ಕೇವಲ ೨೦ ದಿನದ ಅವಧಿಯಲ್ಲಿ ೧೮,೦೦೦ ಅರ್ಜಿ ಬಂದಿತ್ತು !
ಈ ಯಶಸ್ಸು (?) ನೋಡಿ ಅದಾಗಲೇ ರಾಹುಲ್ ಮಹಾಜನ್‌ಗೆ ಹುಡುಗಿಯರ ಕಾಲ್ ಬರಲಿಕ್ಕಾರಂಭವಾಗಿಯೂ ಆಯಿತು.
ಇನ್ನೇನು, ರಾಖಿ ಸ್ವಯಂವರದ ಫೈನಲಿಸ್ಟ್‌ಗಳಿಗೆ ಡಿಮ್ಯಾಂಡ್‌ನ ಕಾಲ !
ಮಾಲೆ ಹಿಡಿಯುವುದೊಂದು ಬಾಕಿ !
ಸರಿ ಬಿಡಿ, ಮದುವೆಯಾಗುವಷ್ಟೂ ಪುರುಸೊತ್ತಿಲ್ಲ. 'ಪತಿ ಪತ್ನಿ ಔರ್ ವೋ' ಶುರುವಾಗುವ ಹಂತದಲ್ಲಿದೆ. 'ಬೇಬಿ ಬಾರೋವರ್ಸ್' ಎಂಬ ಅಮೇರಿಕಾದ ತದ್ರೂಪು ಕೂಸು ಅದು ! ದಂಪತಿಗಳು ಮದುವೆ ನಂತರ ಎದುರಿಸುವ ಸವಾಲುಗಳ ಬಗ್ಗೆ ರಿಯಾಲಿಟಿ ಶೋ ! ಭಾಗವಹಿಸುವವರು ಯಾರು ಅಂತೀರಿ? ರಾಖಿ ಸಾವಂತ್ ಮತ್ತು ಇಲೇಶ್ !
'ಬಿಗ್ ಬ್ರದರ್ಸ್' ತಂಡದಲ್ಲಿ ಜನಾಂಗೀಯ ನಿಂದನೆ ಅಂತ ಊರೊಟ್ಟು ಮಾಡಿ ಭಾರತದಲ್ಲಿ ಗೂಡಿ ಖಳ ನಾಯಕಿ ಎಂದು ಮನೆಮಾತಾಗಿ, ಕೊನೆಗೆ ಆರಾಮವಾಗಿ ಸೆಲಬ್ರಿಟಿಗಳ ಸೆಲಬ್ರಿಟಿ ಅನ್ನಿಸಿಕೊಂಡವಳು ನಮ್ಮ ಊರಿನ ಶಿಲ್ಪಾ ಶೆಟ್ಟಿ. ಪಾಪ, ಮಾಧ್ಯಮಗಳು ಹುಯಿಲೆಬ್ಬಿಸಿಕೊಂಡದ್ದೇ ಬಂತು. ಮತ್ತೆ ನೋಡಿದರೆ ಪ್ರಕರಣ ಸುಖಾಂತ್ಯವಾಗಿ ತಣ್ಣಗೆ ಅವಳದ್ದೇ ಯೋಗ ಸಿ.ಡಿ., ಸೆಂಟು ! ಕೊನೆಗೆ ನಿಂದನೆ ಮಾಡಿದಳೆನ್ನಲಾದ ಜೇಡ್ ಗೂಡಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದೇ ತಡ, ಅವಳ ಸ್ಮರಣಾರ್ಥ ಹಪ್ಪಳ ಸೇರಿದಂತೆ ಇತರ ಕುರಕಲು ತಿಂಡಿಗಳು ಮತ್ತು ಊಟದೊಂದಿಗೆ ಬಳಸುವ ಕೆಲವು ಪದಾರ್ಥಗಳನ್ನು ಹೊಸ ಬ್ರ್ಯಾಂಡ್‌ನಡಿ ತರಲು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯೋಜಿಸಿಯೂ ಆಯಿತು ! ಆಹಾ ! ಎಂತ ಸ್ಮರಣೆ !

ಏನಾದರೂ ಆಗು ಮೊದಲು ಮಾನವನಾಗು : ಅಂದು..
ಹೇಗಾದರೂ ಸರಿ ! ಮೊದಲು ಫೇಮಸ್ ಆಗು : ಇಂದು...
ಸೆಲೆಬ್ರಿಟಿತ್ವ ಉಳಿಸಿಕೊಳ್ಳುವುದು : ಮುಂದುವರಿದ ಭಾಗ...
*****

ಭಾರತದ ಪ್ರಮುಖ ರಿಯಾಲಿಟಿ ಷೋಗಳು
ಇಂಡಿಯನ್ ಐಡಲ್
ಜೋಡಿ ನಂ ೧
ಝಲಕ್ ದಿಕ್ ಲಾಜಾ
ತೋಲ್ ವೋಲ್ ಕೇ ಬೋಲ್
ನಚ್ ಬಲ್ಲಿಯೇ
ಇಂಡಿಯನ್ ಲಾಫ್ಟರ್ ಚಾಲೆಂಜ್
ವಾಯ್ಸ್ ಆಫ್ ಇಂಡಿಯಾ

ವಿಶ್ವದ ವಿವಾದಿತ ರಿಯಾಲಿಟಿ ಶೋಗಳು
ದೇರ್ ಇಸ್ ಸಂಥಿಂಗ್ ಅಬೌಟ್ ಮಿರಿಯಂ-೨೦೦೪- ಸುಂದರ ಯುವತಿಯನ್ನು ಓಲೈಸಬೇಕದದ್ದು ಸ್ಪರ್ಧೆ. ಆದರೆ ಕೊನೆಗೆ ಯುವತಿ ಓರ್ವ ಹಿಜಡಾ ಎಂದು ತಿಳಿದು ವಿವಾದವಾಗಿತ್ತು.
ಸೀರಿಯಸ್ಲೀ ಡ್ಯೂಡ್ ಐಯಾಮ್ ಗೇ - ೨೦೦೪- ಅಮೇರಿಕಾ
ಸ್ಪೇಸ್ ಕೆಡೆಟ್ಸ್- ೨೦೦೫- ಬ್ರಿಟನ್
ದ ಫಾರ್ಮ್- ೨೦೦೪- ಬ್ರಿಟನ್
ಬರ್ತ್ ನೈಟ್ ಅಲೈವ್- ೨೦೦೬- ಬ್ರಿಟನ್
ದ ಬಿಗ್ ಡೋನರ್ ಶೋ- ೨೦೦೭- ನೆದರ್‌ಲ್ಯಾಂಡ್
ಬಿಗ್ ಬ್ರದರ್ಸ್- ೨೦೦೭- ಬ್ರಿಟನ್

ವಿಶ್ವದ ಪ್ರಖ್ಯಾತ ರಿಯಾಲಿಟಿ ಶೋಗಳು
ದ ಬಿಗ್ ಲೂಸರ್
ಅಮೆರಿಕನ್ ಐಡಲ್
ಎಕ್ಸ್ ಟ್ರೀಮ್ ಮೇಕೌಟ್ ಹೋಮ್ ಎಡಿಷನ್
ಅಮೇರಿಕಸ್ ಟಫೆಸ್ಟ್ ಜಾಬ್
ಡೀಲ್ ಓರ್ ನೋಡಿಲ್
ಅಮೇರಿಕಸ್ ನೆಕ್ಸ್ಟ್ ಟಾಪ್ ಮಾಡೆಲ್
ಲಾಸ್ಟ್ ಕಾಮಿಕ್ ಸ್ಟ್ಯಾಂಡಿಂಗ್
ಕಿಚನ್ ನೈಟ್ ಮೇರ್
ಹೆಲ್ಸ್ ಕಿಚನ್

************

ಕಾಡಲ್ಲಿ ಕಳೆದುಹೋದರೆ ಹೇಗಿರುತ್ತದೆ ಅಂತ ಎಳೆಮಕ್ಕಳಿಗೂ ಗೊತ್ತಿರೋವಾಗ I am celebrity, get me out ಕಾಪಿ ಹೊಡೆದ ಕಾರ್ಯಕ್ರಮಕ್ಕೆ ಜೋತುಬಿದ್ದ ಇಮೇಜ್ ಟಿ‌ಆರ್‌ಪಿ ಇಲ್ಲದ ನಮ್ಮ ಬಾಲಿವುಡ್, ಸೀರಿಯಲ್‌ನ ಯುವಸಿಂಹಗಳು ತಾವಾಗೇ ಬಿದ್ದುಕೊಂಡು ಈಗ 'ಇಸ್ ಜಂಗಲ್ ಸೆ ಮುಜ್ಹೆ ಬಚಾವೋ ' ಅಂತಾ ಕೂಗುವುದಕ್ಕೆ ಶುರುಮಾಡಿದ್ದಾರೆ. ಹುಡುಗ-ಹುಡುಗಿಯರು ಒಟ್ಟಿಗೆ ಸ್ನಾನ ಮಾಡಬೇಕು, ಹುಳಹುಪ್ಪಟೆಗಳನ್ನು ಬಾಯಿಗೆ ಹಾಕಿಕೊಳ್ಳಬೇಕು, ವಿಷಜಂತುಗಳ ಜೊತೆ ಸರಸ ಮಾಡುವಷ್ಟು ಸಹನೆ ಇರಬೇಕು ಹೀಗೆ...! ಎಷ್ಟಾದರೂ ಭಾರತೀಯರು ಸಹನಶೀಲರಲ್ಲವೇ?
ಮತ್ತೊಂದೆಡೆ, ಸ್ಪರ್ಧಾರ್ಥಿಗಳನ್ನು ಬೀಚ್‌ಗೆ ಕಳುಹಿಸಿ ಅಲ್ಲಿನ ಜನರ ಒಳವಸ್ತ್ರಗಳನ್ನು ಶೇಖರಿಸಿ ತರುವ ಸ್ಪರ್ಧೆ- survivor ಎಂಟಿವಿಯಲ್ಲಿ 'ರೋಡೀಸ್' ಆದದ್ದು ಹೀಗೆ ! big brothers ಕಲರ್ಸ್ ಟಿವಿಯಲ್ಲಿ 'ಬಿಗ್ ಬಾಸ್' ಆದದ್ದೇ, ಕೆಲವೇ ದಿನಗಳಲ್ಲಿ ಮೊನಿಕಾ ಬೇಡಿ ಈಜುಡುಗೆ ಧರಿಸಿದ್ದು, ಮೊನಿಕಾ ಮತ್ತು ರಾಹುಲ್ ಮಹಾಜನ್‌ನ ವರ್ತನೆ ವ್ಯಾಪಕವಾಗಿ ಚರ್ಚೆಯಾಯಿತು. ಇದಲ್ಲದೆ ಅದೇ ಕಲರ್ಸ್ ಟಿವಿ 'ಬಾಲಿಕಾ ವಧು' ಎಂಬ ರಿಯಾಲಿಟಿ ಷೋ ಬಾಲ್ಯವಿವಾಹಕ್ಕೆ ಉತ್ತೇಜನ ನೀಡುವ ಮಾದರಿಯಲ್ಲಿ ರೂಪ ಪಡೆಯಿತು. 'ಪುರಾತನ ಸಂಸ್ಕೃತಿಯ ಪ್ರತಿಬಿಂಬವಂತೆ !' -ಇವರಿಗೆ ದೇಶದ ೨ ಪ್ರಮುಖ ಪಕ್ಷಗಳ ಸದಸ್ಯರೂ ಬೆಂಬಲ ಬೇರೆ ! ಸರ್ಕಾರವು ಈ ಕುರಿತು ಚರ್ಚೆಗೆ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಪೃಥ್ವಿರಾಜ್ ಚೌವಾಣ್ ಪ್ರತಿಕ್ರಿಯಿಸಿದ್ದು, ಕೆಲವೇ ಗಂಟೆಗಳಲ್ಲಿ ನೋಟೀಸು ನೀಡಿದ್ದು ಮತ್ತೆ ನಡೆದ ಬೆಳವಣಿಗೆ.
ಬಹುಷಃ ಕ್ರೈಮ್ ಮಾಡೋದು ಹೇಗೆ ಎಂದು ಸ್ಪರ್ಧೆಯಿಡುವುದು ಬಾಕಿ !
ಟಿವಿ ಭಾರತಕ್ಕೆ ಕಾಲಿಟ್ಟ ಹೊಸತರಲ್ಲಿ ನೇತಾರರು ಹುಯ್ಯಲಿಟ್ಟಿದ್ದರು - 'ನಮ್ಮ ಸಂಸ್ಕೃತಿಯನ್ನ ಕೊಲ್ಲುತ್ತದೆ'. ಕಾಲಕ್ರ್ರಮೇಣ ಜನಸಾಮಾನ್ಯರಾದಿಯಾಗಿ ಅದರ ಎಲ್ಲಾ ಮಾಯಾಜಾಲಕ್ಕೆ ಒಗ್ಗಿಕೊಂಡರು. ಈಗ ನೋಡಿದರೆ ವ್ಯಾಪಕ ರೀತಿಯಲ್ಲಿ ಮನರಂಜನೆಯ ಹೆಸರಲ್ಲಿ ಮನಬಂದಂತೆ ಬದಲಾಯಿಸುವ ವಿಕೃತಿ ನಿಧಾನವಾಗಿ ಅವರಿಸುತ್ತಿದೆ.
*********

ಸಂಗೀತ ಸ್ಪರ್ಧೆಯೆಂದರೆ ಅದೊಂದು ಯುದ್ಧವೇ ಸರಿ ! ವೇದಿಕೆಯೇ ಸಮರಾಂಗಣ. ಹಾಡಿಗಿಂತಲೂ ಹಾಡುಗಾರರ ವಸ್ತ್ರಾಲಂಕಾರ, ಮನೆಯ ಆರ್ಥಿಕ ಸ್ಥಿತಿ, ಅವರ ವೈಯಕ್ತಿಕ ಜೀವನ, ಹೆತ್ತವರ ಆತಂಕ, ಹಾರೈಕೆ, ಸ್ಪರ್ಧಿಗಳ ತುಮುಲಗಳ ಬಗೆಗೆ, ಸಂಗೀತಕ್ಕೆ, ಬೆಳಕಿನ ಅಬ್ಬರಕ್ಕೆ ತಕ್ಕಂತೆ ಕುಣಿಯುವುದರ ಮೇಲೆ ಕ್ಯಾಮೆರಾ ಕಣ್ಣು ! ಈ ರಿಯಾಲಿಟಿ ಕಾರ್ಯಕ್ರಮಗಳು ನೇರವಾಗಿ ರಿಕಾರ್ಡಿಂಗ್ ಆಗಿರುತ್ತವೆ. ಅಂತೆಯೇ ನೇರ ಸಂಕಲನ ಆಗಿರಬೇಕು ಎಂಬುದು ಸಾಮಾನ್ಯ ತಿಳಿವಳಿಕೆ.
ಆದರೆ ಈ ಷೋಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ಅಥವಾ ಅಭ್ಯರ್ಥಿಗಳು ಕ್ಯಾಮೆರಾಗಳ ಮುಂದೆ ನಿಂತಾಗ ಅವರ ವ್ಯಕ್ತಿತ್ವವನ್ನೇ ನಿರ್ವಹಿಸುವ ಸೂತ್ರಧಾರನಿರುತ್ತಾನೆ. ಅಷ್ಟೇ ಅಲ್ಲದೆ, ಸಂಕಲನ ಮಾಡುವ ಹಂತದಲ್ಲಿಯೂ ಅನೇಕ ಬದಲಾವಣೆಗಳನ್ನು ಮಾಡಲಾಗುತ್ತದೆ. ಈ ಬದಲಾವಣೆಗಳು, ನೇತ್ಯಾತ್ಮಕವಾದರೂ, ಸಹಿಸಿಕೊಳ್ಳಬೇಕು. ಬೇರೆ ಉಪಾಯವಿಲ್ಲ; ಕಾರಣ, ಅಲ್ಪ ಅವಧಿಯಲ್ಲೇ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಅವಕಾಶ, ಅಪಾರ ಹಣ ಸಂಪಾದಿಸಬಹುದು, ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಳ್ಳಬಹುದು, ಅವಕಾಶವೂ ದಂಡಿಯಾಗಿ ಮನೆ ಬಾಗಿಲಿಗೆ ಬಂದು ಬೀಳಬಹುದು ! ಹಾಗಾಗಿ, ತೀರ್ಪುಗಾರ-ಸ್ಪರ್ಧಿಗಳ ವಾಗ್ವಿವಾದ, ಪರದೆಯ ಹಿಂದಿನ ಅರಚಾಟ, ಭಾವೋತ್ಕರ್ಷಗಳೆಡೆಗೂ, ಆಕಳಿಸಿ ತೂಕಡಿಸುವವರೆಗೂ ಒಂದು ಕಣ್ಣು ಇದ್ದೇ ಇರುತ್ತದೆ. ಇದರೊಂದಿಗೆ ತೀರ್ಪುಗಾರರ ಪಕ್ಷಪಾತ ಧೋರಣೆ ಮತ್ತು ವೈಯ್ಯಕ್ತಿಕ ಇಷ್ಟಾನಿಷ್ಟಗಳೂ ಸೇರಿದರಂತೂ ಪ್ರತಿಭಾವಂತರು ಮತ್ತಷ್ಟು ಮಂಕಾಗಬೇಕಾಗುತ್ತದೆ.
ಆಶಾಭಾವನೆಯೇ ಕೊನೆಗೆ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತಿದೆ ಎಂಬುದಕ್ಕೆ ರಿಯಾಲಿಟಿ ಶೋ ಒಳ್ಳೆಯ ಉದಾಹರಣೆ. ಒಂದು ಸುತ್ತಿನಲ್ಲಿ ಸೋತ ಸ್ಪರ್ಧಿಗಳನ್ನು ಎಲಿಮಿನೇಷನ್ ರೌಂಡ್ ಮೂಲಕ ಉಚ್ಚಾಟಿಸುವ ಪ್ರಕ್ರಿಯೆ ನಾಟಕೀಯ ಮಾತ್ರವಲ್ಲ ಒಂದು ಬಗೆಯಲ್ಲಿ ಶೊಷಣೆಯೇ ಹೌದು. ಭಾವನೆಗಳನ್ನು ಬಿಕರಿ ಮಾಡುವುದು ಎಂದರೆ ಹೀಗೆಯೇ ! ಪೋಷಕರು ಅಳುವುದು, ತೀರ್ಪುಗಾರರು ಸಂತೈಸುವುದು, ಅಪ್ಪಿ ಮುದ್ದಾಡುವುದು, ಅವರೊಂದಿಗೆ ತಾವೂ ಅಳುವುದು..ಹೀಗೆ, ಸೋಲಿನ ಭಾವನೆಗಳನ್ನು ವೈಭವೀಕರಿಸಿ, ನೋಡುಗರನ್ನು ರಂಜಿಸುವ ಮೂಲಕ, ಗೆಲುವನ್ನು ಅತಿರಂಜಿತವನ್ನಾಗಿಸುವುದಕ್ಕೆ ಏನೆಲ್ಲಾ ಕ್ರೌರ್ಯ ಮಾಡಬೇಕೋ ಅಷ್ಟೂ ಸಿದ್ಧ.. ಅನೇಕ ಬಾರಿ ಸ್ಪರ್ಧಿಗಳು ವೇದಿಕೆಯ ಮೇಲೆ ತಲೆ ಸುತ್ತಿ ಬಿದ್ದಿರುವ, ಮಾನಸಿಕವಾಗಿ ನೊಂದು ಹೋದ, ವೈಕಲ್ಯಕ್ಕೆ ತುತ್ತಾದ ಪ್ರಕರಣಗಳೂ ನಡೆದಿವೆ. ಮಕ್ಕಳ ಬಾಲ್ಯವನ್ನೇ ಬೇಟೆಯಾಡುವ ಇಂತಹ ವಿಕೃತಿಗಳು ಮಕ್ಕಳ ಭವಿಷ್ಯವನ್ನೇ ಬಲಿ ತೆಗೆದುಕೊಂಡಿವೆ ! ಉತ್ತರ ಭಾರತದ ರಿಯಾಲಿಟಿ ಷೋವಿಗೆ ಶಿಂಜಿನಿ ಎನ್ನುವ ಬಾಲಕಿಯ ಇಡೀ ಜೀವನವೇ ಬಲಿಯಾದದ್ದು ಹೀಗೆಯೇ !
ಇನ್ನೂ ಇದೆ ತಂತ್ರ ! : ಹೊಸ ಚಲನಚಿತ್ರ ಬಿಡುಗಡೆಗೆ ಬಂದಿದ್ದಲ್ಲಿ ಆ ಚಿತ್ರದ ನಟ/ನಟಿ/ನಿರ್ದೇಶಕ ಮಹಾಶಯರು ಅತಿಥಿ ಗಣ್ಯರಾಗಿ ಆಗಮನ ( ಸಂಗೀತದ ತಲೆಬುಡ ಗೊತ್ತಿಲ್ಲದಿದ್ದರೂ !) ಅಥವಾ ಈಗಾಗಲೇ ಇಮೇಜ್ ಕಡಿಮೆಯಿರುವ ಮುಖದರ್ಶನ ! ಒಟ್ಟಿನಲ್ಲಿ ಚಿತ್ರತಾರೆಯರಿಗೆ, ಚಿತ್ರಗಳಿಗೂ ರಿಯಾಲಿಟಿ ಶೋ ಗಳೊಂದು ಜಾಹೀರಾತು ತಂತ್ರಗಳಲ್ಲದೆ ಬೇರೇನಿಲ್ಲ ! ಕೊನೆಗೆ ಶ್ರೋತೃಗಳ ವೋಟುಗಳು ಬಹಳ ಮುಖ್ಯ ಎನ್ನುತ್ತಾ ಎಸ್‌ಎಂಎಸ್‌ಗಳಲ್ಲಿ ಅಂಗಾಲಾಚಿ ಭಿಕ್ಷೆ ಬೇಡುವುದು ಕುಡಾ ದುಡ್ಡು ಮಾಡುವ ಉಪಾಯಗಳಲ್ಲಿ ಬಹಳ ಮುಖ್ಯವಾದದ್ದು ! ಆದರೆ ಇದು ಉಂಟು ಮಾಡುವ ವರ್ಗ ತಾರತಮ್ಯ, ಜಾತಿ-ಮತದ ಅಧಾರದಲ್ಲಿ ವೋಟುಗಳ ಮಾರಾಟ ಮುಂದೊಂದು ದಿನಕ್ಕೆ ಬಹಳ ದೊಡ್ಡ ಕಂದರವನ್ನೇ ಸೃಜಿಸಿದರೂ ಆಶ್ಚರ್ಯವಿಲ್ಲ.
**********
ಕನ್ನಡವೇನೂ ಕಡಿಮೆಯಿಲ್ಲ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಮುಂದಾಳತ್ವದ ಈ ಟಿ ವಿಯ 'ಎದೆ ತುಂಬಿ ಹಾಡುವೆನು' ಭಿನ್ನ ಭಿನ್ನ ರೀತಿಯಿಂದ ಚೆಂದಗೆ ಯಶಸ್ವಿಯಾಗುವಷ್ಟರಲ್ಲಿಯೇ ಚಾನಲ್ ಪ್ರಪಂಚಕ್ಕೆ ಧುಮುಕಿದ ಎಲ್ಲಾ ರಿಯಾಲಿಟಿ ಮಹಾಶಯರು ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಅಜ್ಜಂದಿರ ವರೆಗೂ ಹಾಡಿಸುವುದಕ್ಕೆ, ಶುರು ಮಾಡಿ ವರುಷಗಳೇ ಕಳೆದಿವೆ. ಸಂಗೀತ ಕ್ಷೇತ್ರಕ್ಕೆ ಎಂತಹ ಪ್ರೋತ್ಸಾಹ ನೋಡಿ ! ಪರಿಣಾಮ, ಎಷ್ಟು ದಿನದಲ್ಲಿ ನನ್ನ ಮಗ/ಮಗಳು ಸಂಗೀತ ಕಲಿತು ಟಿ.ವಿ.ಯಲ್ಲಿ ಹಾಡಬಹುದು?" - ನೃತ್ಯ, ಸಂಗೀತ ತರಬೇತುದಾರರಿಗೆ ಒಂದು-ಎರಡು ಹಾಡಿಗೆ ಪ್ರಸಿದ್ಧಿ ಮಾಡಿಸಿ ಪ್ರೈಜ್ ಗಿಟ್ಟಿಸಿಕೊಳ್ಳಬೇಕೆಂಬ ಒತ್ತಾಸೆಗೆ ಕುರಿಗಳಾದವರು !
ಸರಿ, ಸೋತಿದ್ದಕ್ಕೆ ಸಹಜವಾಗಿ ಅಳು ಬಂದು ಮತ್ತೆ ಸಮಾಧಾನವಾದರೂ, ಅದನ್ನೆ ತಿರುಗಿಸಿ ಮುರುಗಿಸಿ ಮತ್ತೆ ಮತ್ತೆ ಅಳಿಸಿ, ವಿಷಾದಗೀತೆಯ ಪಿಟೀಲಿಗೆ ಏನನ್ನೋಣ !
ಒಂದಷ್ಟು ಜನರನ್ನು ಕುಣಿಸಿ ತಾವೂ ಕುಣಿದು ಕೊರತೆ ಕಂಡುಹಿಡಿಯುವುದು ಒಂದಾದರೆ, ಜನರನ್ನ 'ಕುರಿಗಳು ಸಾರ್ ಕುರಿಗಳು' ಅಂತ ಕುರಿ ಮಾಡಿ, ತಾವೂ ಕೋತಿಗಳಂತೆ ಆಡಿದ್ದೇ ತಡ, ಉಳಿದೆಲ್ಲಾ ಚಾನಲ್‌ಗಳದ್ದೂ (ಅದೇ ರೀತಿಯ ಹೆಸರಷ್ಟೇ ಬೇರೆ ಕಾಣುವ) ಟೋಪಿ ಇಡುವ ಕಾಯಕ ಕೈಲಾಸ ಸ್ವಲ್ಪ ಹಳತು ! ಸ್ವಾರಸ್ಯವೆಂದರೆ, ಈಗಿನ ಸರಿಗಮಪ ಹಾಡುವ ಕಾರ್ಯಕ್ರಮದ ಶೀರ್ಷಿಕೆಯಲ್ಲಿ ಇರುವ ಪದಗಳಲ್ಲಿ 'ಸರಿಗಮಪ'ದ ಐದು ಅಕ್ಷರ ಮಾತ್ರ ಕನ್ನಡ ! ಅದು ಇಂದಿನ ಟ್ರೆಂಡ್ ! ಸೀರೆಗೂ ಸವಾಲ್ ಹಾಕೋದು ಒಂದಾದರೆ, ಝಣಝಣ ಕಾಂಚಾಣ ಉದುರಿಸುವುದು ಮತ್ತೊಂದು ! ಫ್ರಿಡ್ಜ್-ವಾಶಿಂಗ್ ಮೆಷಿನ್ ಕೊಡೋದು ಒಂದಾದರೆ, ಟೂರ್‌ಗೆ ಕರ್ಕೊಂಡು ಹೋಗೋದು ಮತ್ತೊಂದು ! ಅಷ್ಟೇಕೆ ಅಡುಗೆಯಲ್ಲೂ ಯಾರು ಬೆಸ್ಟ್ ಅತ್ತೆ ಸೊಸೆ ಎಂದು ಕಂಡು ಹಿಡಿವ ಕೈ ಚಳಕ ! ಎಲ್ಲರ ಡ್ಯಾಡಿಗಳಿಗಿಂತ ಯಾರ ಡ್ಯಾಡಿ ಬೆಸ್ಟ್ ಅನ್ನೋದಕ್ಕೆ 'ಡ್ಯಾಡಿ ನಂಬರ್ ಒನ್' !
*************
Moment of truth ನ ನಕಲು ಸ್ಟಾರ್ ಟೀವಿಯ 'ಸಚ್ ಕೆ ಸಾಮ್ನಾ' ಸತ್ಯದ ಅಗ್ನಿಪರೀಕ್ಷೆ ನಡೆಸುವುದರಲ್ಲಿ ಬಹುಷ ನಮ್ಮ ಮಂಪರು ಪರೀಕ್ಷೆ ತಜ್ಞರಿಗೇ ಸವಾಲು ಹಾಕಿ ಕೋರ್ಟ್‌ಗಳ ವಾದ ಪರಿಶೀಲನೆ- ಜಡ್ಜ್ ಮೆಂಟ್‌ಗೇ ಸಡ್ಡು ಹೊಡೆಯ ಹೊರಟಿದೆ.
ಇದರಲ್ಲಿ ಭಾಗವಹಿಸಿದವರಿಗೆ ತಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕಿಗೆ ಸಂಬಂಧಿಸಿದಂತೆ ೨೧ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇವರು ನೀಡುವ ಉತ್ತರಗಳನ್ನು ಪಾಲಿಗ್ರಾಫ್ ಪರೀಕ್ಷೆಯ ಉತ್ತರಕ್ಕೆ ಹೋಲಿಸಲಾಗುತ್ತದೆ. ಕಾರ್ಯಕ್ರಮದ ರೆಕಾರ್ಡಿಂಗ್‌ಗೆ ಮುಂಚಿತವಾಗಿ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗುತ್ತದೆ. ಎಲ್ಲಾ ಪ್ರಶ್ನೆಗಳಿಗೂ ಸತ್ಯ ಉತ್ತರ ನೀಡಿದಲ್ಲಿ ಅವರು ಒಂದು ಕೋಟಿ ರೂಪಾಯಿ ಬಹುಮಾನ ಗೆಲ್ಲುತ್ತಾರೆ.
ಟಿವಿ ತಾರೆ ರಾಜೀವ್ ಖಾಂಡೇವಾಲ್ ನಡೆಸಿಕೊಡುವ ಈ ಕಾರ್ಯಕ್ರಮ ಪ್ರದರ್ಶನಗೊಂಡ ಪ್ರಥಮ ವಾರದಲ್ಲೇ ತನ್ನ ಟಿ‌ಆರ್‌ಪಿ ರೇಟನ್ನು ಹೆಚ್ಚಿಸಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕವೇ ಕ್ರಿಕೆಟಿಗ ವಿನೋದ್ ಕಾಂಬ್ಳಿ ತನ್ನ ಸ್ನೇಹಿತ ಸಚಿನ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ವಿವಾದ ಹುಟ್ಟಿಕೊಂಡಿತ್ತು. ಆದರೆ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ , 'ತೆಂಡೂಲ್ಕರ್ ವಿರುದ್ಧ ನಾನು ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಸಚಿನ್ ಕುಟುಂಬ ನನಗೆ ಬಾಲ್ಯದಿಂದಲೂ ಆಶ್ರಯ ನೀಡಿದೆ. ಅವರ ವಿರುದ್ಧ ನಾನು ಆರೋಪ ಮಾಡಿಲ್ಲ.ಆರೋಪಗಳು ಆಧಾರರಹಿತ' ಎಂದು ತಳ್ಳಿಹಾಕಿದ್ದರು.
ಆದರೆ, ಟೈಮ್ಸ್ ನ್ಯೂಸ್ ಚಾನೆಲ್ 'ಸಚಿನ್ ತಮಗೆ ಕಷ್ಟದ ಕಾಲದಲ್ಲಿ ಸಹಾಯ ಮಾಡಲಿಲ್ಲ' ಎನ್ನುವ ಕಾಂಬ್ಳಿಯವರ ಹೇಳಿಕೆಗಳ ವೀಡಿಯೋ ತುಣುಕುಗಳನ್ನು, ಪುನಃ ಬಿತ್ತರಿಸಿ ಮಾಡಿದ್ದು ಸಾಕ್ಷಿ ಹೇಳುವ ಕೆಲಸ !
ನೀವು ಗಂಡನ ಜೊತೆ ಮಲಗಿರುವಾಗ ಬೇರೆಯವರನ್ನ ನೆನಪಿಸಿಕೊಳ್ಳುತ್ತೀರಾ? ಅನ್ನೋ ಪ್ರಶ್ನೆ ಕುಟುಂಬ ಸಮೇತರಾಗಿ ಕೂತು ನೋಡುವ ನಮ್ಮ ಟಿ ವಿ ಪರದೆ ಮೇಲೆ ಬರುತ್ತೆ ಅಂತ ಯಾರೂ ಕಲ್ಪಿಸಿಕೊಂಡಿರಲೂ ಸಾಧ್ಯವಿಲ್ಲ.ಆದರೆ ಇವತ್ತು ಸಚ್ ಕಾ ಸಾಮ್ನಾ ನೀವು ಯಾವತ್ತಾದರೂ ವೇಶ್ಯೆಯ ಸಂಪರ್ಕ ಮಾಡಿದ್ದೀರಾ? ಮದುವೆ ಮಾಡಿಕೊಳ್ಳದೆ ಮಕ್ಕಳಾಗಿದೆಯಾ? ನಿಮ್ಮ ಗಂಡನಿಗೆ ಗೊತ್ತಾಗುವುದಿಲ್ಲ ಎನ್ನುವುದಾದರೆ ನೀವು ಇನ್ನೊಬ್ಬರ ಸಹವಾಸ ಮಾಡಲು ಸಿದ್ಧರಿದ್ದೀರಾ? ಅನ್ನೋ ಪ್ರಶ್ನೆ ಕೇಳುತ್ತಾ ಲೈ ಡಿಟೆಕ್ಟರ್ ಸುಳ್ಳಿನ ಪತ್ತೆಗೆ ಸಜ್ಜಾಗಿ ನಿಂತಿದೆ !
ಮಹಿಳೆಯೊಬ್ಬಳಿಗೆ ಆಕೆಯ ಪತಿಯ ಉಪಸ್ಥಿತಿಯಲ್ಲೇ, ನಿಮಗೆ ವಿವಾಹೇತರ ಸಂಬಂಧಗಳು ಇವೆಯೇ ಎಂದು ಪ್ರಶ್ನಿಸಲಾಗಿತ್ತು. ಪತಿಗೆ ತಿಳಿಯದೇ ಇದ್ದಲ್ಲಿ ಇನ್ನೊಬ್ಬರೊಂದಿಗೆ ಮಲಗುವಿರಾ ಎಂಬ ಪ್ರಶ್ನೆಗೆ ಆಕೆ ಇಲ್ಲ ಎಂದು ಹೇಳಿದಳು. ಆದರೆ, ಪಾಲಿಗ್ರಾಫ್ ಯಂತ್ರ ಆಕೆಯ ಉತ್ತರ ಸುಳ್ಳು ಎಂದು ತೀರ್ಪು ನೀಡಿತು. ಹಾಗಾದರೆ ಕಿರುತೆರೆಯ ಮೇಲೆ ತಮ್ಮ ಕೌಟುಂಬಿಕ, ವೈಯ್ಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಕಣ್ಣೀರು ಸುರಿಸುವುದು ನೋಡುಗರಿಗೆ ಒಂದು ರೀತಿಯ ವಿಚಿತ್ರ ಆನಂದವೇ !
ಸಂಸಾರದ ಗುಟ್ಟು ವ್ಯಾಧಿ ರಟ್ಟು !
"ಮನೆಮುರುಕ' ಸಚ್ ಕಾ ಸಾಮ್ನಾ ಶೋ ತನ್ನ ಮೊದಲ "ಬಲಿ' ತೆಗೆದುಕೊಂಡಿದೆ ! ಯುವಕನೊಬ್ಬ ಪತ್ನಿಯ ಮೇಲೆ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆಗಸ್ಟ್ ೧೧ರ ಎಪಿಸೋಡನ್ನು ವೀಕ್ಷಿಸಿ ಅದರಿಂದ ಪ್ರಭಾವಿತನಾದ ದೆಹಲಿ ಸಮೀಪದ ಗ್ರೇಟರ್ ನೋಯ್ಡಾದ ಶಾಪಿಂಗ್ ಮಾಲ್ ಒಂದರಲ್ಲಿ ಭದ್ರತಾ ಸಲಹೆಗಾರನಾಗಿ ಕೆಲಸ ಮಾಡುತಿದ್ದ ಸುರೀಂದರ್ ತನ್ನ ಪತ್ನಿಗೂ ಅದೇ ಮಾದರಿಯ ಪ್ರಶ್ನೆಗಳನ್ನು ಕೇಳಿದ. ಆಗ "ಬೇರೊಬ್ಬನ ಜತೆ ನಾನು ವಿವಾಹಪೂರ್ವ ಲೈಂಗಿಕ ಸಂಬಂಧ ಹೊಂದಿದ್ದೆ' ಎಂದು ಪತ್ನಿ ನೀಡಿದ ಉತ್ತರದಿಂದ ಆತ ನೊಂದು ಆತ ಆತ್ಮಹತ್ಯೆ ಮಾಡಿಕೊಂಡ.
ಸಚ್ ಕಾ ಸಾಮ್ನಾ ಕಾರ್ಯಕ್ರಮವು ೧೯೯೫ರ ಕೇಬಲ್ ಟಿವಿ ನೆಟ್‌ವರ್ಕ್ ಕಾಯ್ದೆಯ ಕಾರ್ಯಕ್ರಮ ಸಂಹಿತೆಯ ವಿಧಿಗಳಾದ ೬(೧) ಎ, ಡಿ, ಐ ಮತ್ತು ಒ ವನ್ನು ಉಲ್ಲಂಘಿಸುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ಹಿನ್ನೆಲೆಯಲ್ಲಿ ಶೋಕಾಸ್ ನೋಟೀಸು ನೀಡಲಾಗಿದೆ. ಈ ಕಾರ್ಯಕ್ರಮವು ಭಾರತೀಯ ಸಮಾಜದ ಮೌಲ್ಯಗಳಿಗೆ ವಿರುದ್ಧವಾದುದಾಗಿದೆ ಎಂಬುದಾಗಿ ದೀಪಕ್ ಮಿಯಾನಿ ಮತ್ತು ಪ್ರಭಾತ್ ಕುಮಾರ್ ಎಂಬಿಬ್ಬರು ಅರ್ಜಿದಾರರು ದೂರಿದ್ದು, ಈ ಕಾರ್ಯಕ್ರಮದ ಪ್ರಸಾರದ ರದ್ದತಿಗೆ ಮನವಿ ಮಾಡಿದ್ದರು ಕೂಡಾ !
ಆದರೆ ನ್ಯಾಯಮೂರ್ತಿಗಳಾದ ಎ.ಪಿ. ಶಾ ಮತ್ತು ಮನಮೋಹನ್ ಅವರುಗಳನ್ನು ಒಳಗೊಂಡಿದ್ದ ವಿಭಾಗೀಯ ಪೀಠವು ರಾಷ್ಟ್ರದ ಸಂಸ್ಕೃತಿಯು ಟಿವಿ ಕಾರ್ಯಕ್ರಮದಿಂದ ಒಡೆಯುವಷ್ಟು ದುರ್ಬಲವಲ್ಲ ಎಂದು ಹೇಳಿದೆ. "ಈ ಕಾರ್ಯಕ್ರಮವನ್ನು ನಿಷೇಧಿಸಬೇಕೇ ಬೇಡವೇ ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ. ಇದು ನ್ಯಾಯಾಲಯದ ಕೆಲಸವಲ್ಲ. ಇದಕ್ಕಿಂತಲೂ ಗಂಭೀರವಾದ ಸಮಸ್ಯೆಗಳನ್ನು ದೇಶ ಎದುರಿಸುತ್ತಿದ್ದು ಅದನ್ನು ಮೊದಲು ಪರಿಹರಿಸಬೇಕಿದೆ" ಎಂಬುದು ವಿಭಾಗೀಯ ಪೀಠದ ತೀರ್ಪು !
ಕಾರ್ಯಕ್ರಮವನ್ನು ನೋಡಲಾಗದಿದ್ದರೆ ಟಿವಿ ಬಂದ್ ಮಾಡಿ ಎಂಬುದಾಗಿ ದೆಹಲಿ ಹೈಕೋರ್ಟ್ ವೀಕ್ಷಕರಿಗೆ ಸಲಹೆ ಮಾಡಿದೆ. ನೈತಿಕತೆಯನ್ನು ಕಾಪಾಡುವುದು ತನ್ನ ಪಾತ್ರವಲ್ಲ ಎಂದು ಹೇಳಿದ ನ್ಯಾಯಾಲಯ, ಈ ಕಾರ್ಯಕ್ರಮದಿಂದ ನೋವನುಭವಿಸುವವರು ಅದರ ಪ್ರಸಾರದ ವೇಳೆಗೆ ಟಿವಿ ಬಂದ್ ಮಾಡಿ ಎಂದು ಹೇಳಿದೆ. ಜೊತೆಗೆ ಈ ಕುರಿತು ಅರ್ಜಿದಾರರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಬಹುದು ಎಂದಿದೆ.
ವಿವಾದಾತ್ಮಕ ಟಿವಿ ರಿಯಾಲಿಟಿ ಶೋ 'ಸಚ್ ಕಾ ಸಾಮ್ನಾ' ನಿರ್ಮಾಣ ಕಂಪನಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟೀಸ್ ನೀಡಲು ನಿರ್ಧರಿಸಿದೆ. ಕಾರ್ಯಕ್ರಮದ ವಿರುದ್ಧ ಆಯೋಗಕ್ಕೆ ಹಲವು ಮಹಿಳೆಯರು ದೂರು ಸಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ಕೋರಿ ರಿಯಾಲಿಟಿಶೋ ನಿರ್ಮಾಣ ಸಂಸ್ಥೆ ಬಿಗ್ ಸಿನರ್ಜಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಆಯೋಗದ ಅಧ್ಯಕ್ಷೆ ಗಿರಿಜಾ ವ್ಯಾಸ್ ತಿಳಿಸಿದ್ದರು.

ಸಾಮಾಜಿಕ, ವೈಯಕ್ತಿಕ ಮತ್ತು ವ್ಯಕ್ತಿಗತ ಬದುಕಿನ ವ್ಯತ್ಯಾಸ ತಿಳಿಯಬಾರದು, ಬದಲಾಗಿ ಅವುಗಳಲ್ಲೆಲ್ಲಾ ಕ್ಯಾಮೆರಾ ಹಿಡಿದು ಕೈಯ್ಯಾಡಿಸಬೇಕು : ಮಾಧ್ಯಮಗಳ ಹೊಸ ನೀತಿ ಸಂಹಿತೆಯೇ ? !
*************

ಇಂದು ಟಿವಿ ಎಂದರೆ ಸಾವಿರಾರು ಕೋಟಿ ರುಪಾಯಿಗಳ ವಹಿವಾಟು. ಅದರಲ್ಲೂ ಪ್ರೈಮ್ ಟೈಂ (೭ರಿಂದ ೧೦ಗಂಟೆ) ವರೆಗಿನ ಸಮಯ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕಾದ ಜೊತೆಗೆ ದುಡ್ಡು ಮಾಡುವ ಸಮಯ. ಹಾಗೆ ನೋಡಿದಲ್ಲಿ ರಿಯಾಲಿಟಿ ಷೋ, ಜಾಹಿರಾತುಗಳಿಂದ ಬರುವ ಲಾಭವೇ ೬೦೦೦ ಕೋಟಿ ರುಪಾಯಿಗಳನ್ನು ಮೀರಿದೆ. ಲೆಕ್ಕಮಾಡಲು ಹೊರಟರೆ ಭಾರತದಲ್ಲಿ ಸುಮಾರು ೫೦೦ಕ್ಕಿಂತಲೂ ಹೆಚ್ಚಿನ ರಿಯಾಲಿಟಿ ಶೋಗಳಿವೆ. ಮಾತ್ರವಲ್ಲ, ಈಗಾಗಲೇ ಸರ್ಕಾರ ೪೧೦ ಹೊಸ ಚಾನಲ್‌ಗಳಿಗೆ ಒಪ್ಪಿಗೆ ಕೊಟ್ಟಿದೆ. ೭೩ ಹೊಸ ವಿದೇಶಿ ಚಾನಲ್‌ಗಳ ಪ್ರಸಾರಕ್ಕೂ ಗ್ರೀನ್ ಸಿಗ್ನಲ್ ತೋರಿಸಿಯಾಗಿದೆ. ಈಗ ಠಸ್ಸೆ ಒತ್ತುವ ಸರದಿಗೆ ಕಾದು ನಿಂತಿರುವುದು ೧೪೩ ಭಾರತೀಯ ಮತ್ತು ೨೦ ವಿದೇಶೀ ಚಾನಲ್ ! ಹಾಗಾದರೆ ಅಂದಾಜು ಮಾಡೋಣ. ಇವುಗಳಲ್ಲಿ ಇನ್ನೆಷ್ಟು ಚಾನಲ್ ಗಳಲ್ಲಿ ರಿಯಾಲಿಟಿಗಳ ಹಸಿಬಿಸಿಗಳಿರಬಹುದು ! ?
ಹೀಗೆಂದು ಬರುವ ಎಲ್ಲರೂ ಇದೇ ರೀತಿಯೇ? ಅಲ್ಲ. ಮರಳುಗಾಡಿನ ಮಧ್ಯೆ ಅಲ್ಲಲ್ಲಿ ಓಯೆಸಿಸ್‌ಗಳಿವೆ. ಬಲು ಸೊಗಸಾಗಿ ಹಾಡುವ, ನರ್ತಿಸುವ, ಕಲೆಯನ್ನೇ ಜೀವನ ಎಂದುಕೊಂಡ ಪ್ರತಿಭಾವಂತರೂ ಇದ್ದಾರೆ. ಅಂತೆಯೆ ರಿಯಾಲಿಟಿ ಷೋಗಳ ಇತ್ಯಾತ್ಮಕ ಮುಖಗಳೂ ಕಣ್ಣೆದುರಿಗಿದೆ.
ಒಮ್ಮೆ ನಮ್ಮ ಪಕ್ಕದ ಮಲಯಾಳಂ ಚಾನಲ್‌ಗಳನ್ನ ನೋಡೋಣ ! ಏಷ್ಯಾನೆಟ್ ನಲ್ಲಿ 'ಸಿಟಿಜನ್ ಜರ್ನಲಿಸ್ಟ್' ಅಂತ ರಿಯಾಲಿಟಿ ಷೋ ಇದೆ. ಇನ್ನೊಂದೆಡೆ ಮಮ್ಮುಟ್ಟಿ ಪ್ರತಿಭೆ ಹೊರಗೆಳೆದು ತರುತ್ತಿದ್ದಾರೆ. ಕ್ಯಾಮೆರಾ ಮೈಕ್ ಹಿಡಿದು ಬೀದಿ ಬೀದಿಗೆ ಹೋಗುವ ಮಂದಿ ಕಷ್ಟದ ಕಥೆ, ಸಂತೋಷದ ಸುದ್ದಿಗಳೆರಡನ್ನೂ ವೀಕ್ಷಕರಿಗೆ ದಯಪಾಲಿಸುತ್ತಾರೆ. ಅಮೃತಾಟಿವಿಯಲ್ಲಿ ಪ್ರಸಾರವಾಗುತ್ತಿರುವ ಸ್ಟಾರ್ ಸೂಪರ್ ಸಿಂಗರ್ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಾಗಿಯೆ ಮೀಸಲಾದ ಒಂದು ಕಾರ್ಯಕ್ರಮವಾಗಿ ಪ್ರಸಾರವಾಗುತ್ತಿರುವುದು ಸಂಗೀತ ಪ್ರೇಮಿಗಳ ಹೆಮ್ಮೆ.
ಅಂತೆಯೇ ಝೀ ಮರಾಠಿಯಲ್ಲಿ ಪ್ರಸಾರವಾಗುವ "ಐಡಿಯಾ ಸ ರೆ ಗ ಮ ಪ", ಕನ್ನಡದ 'ಎದೆ ತುಂಬಿ ಹಾಡುವೆನು', ಮೊದಲ ಆವೃತ್ತಿಯ "ಲಿಟ್ಲ್ ಚಾಂಪ್ಸ್" ! ಹಿಂದಿಯ ಫರಾ ಕಾನ್, ಅನು ಮಲ್ಲಿಕ್ ನಡೆಸಿಕೊಡುವ ರಾಷ್ಟ್ರೀಯ ಮಟ್ಟದ ಟ್ಯಾಲೆಂಟ್ ಶೋ ! ಉದಾಹರಣೆಗಳು ಇಲ್ಲದಿಲ್ಲ.
ಅಷ್ಟೇಕೆ, ತಮಿಳು ಚಾನಲ್ ಗಳಿಂದ ಪ್ರವರ್ಧಮಾನಕ್ಕೆ ಬಂದ ಬದುಕ ಸರಣಿಗಳ ಮೆಲುಕು ಒಂದು ಮಿತಿಯ ವರೆಗೆ ಓಕೆ. ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ ಅಂತ ವೇದಾಂತ ಹೇಳುವ ಕಾಲ ಹೋಗಿ ಜೀವನ ಕಥೆ ಮಾತ್ರ ಅಲ್ಲ ಥ್ರಿಲ್, ಷಾಕ್ ಕೂಡಾ ಇರುತ್ತೆ ಅಂತ ಮತ್ತೊಂದು ಕಥೆ ಹೇಳುವ ಆದರ್ಶವೂ(?) ಜೊತೆಗಿದೆ.

**********
ಥ್ರಿಲ್ ಕೊಡುತ್ತೆ ಎಂದರೆ ಏನೂ ಮಾಡಲು ಸಿದ್ಧರಿದ್ದಾರೆ ಇಂದಿನ ಟಿವಿ ಮಂದಿ ! ಜೊತೆಗೆ ಟಿ‌ಆರ್‌ಪಿ ಕೊಡುತ್ತದೆ ಎಂದರೆ ಬಿಟ್ಟಾರೆಯೇ ! ಕೊನೆಗೆ ಧನಾರ್ಜನೆ, ಪ್ರಸಿದ್ಧಿ- ಗಳ ಭರಾಟೆಯಲ್ಲಿ ಮಾಡುವುದು ಮಾನವೀಯ ಮೌಲ್ಯಗಳ ಮಾರಾಟವಾದರೂ ಅಡ್ಡಿಯಿಲ್ಲ. ಒಂದು ರೀತಿಯ ಕಮರ್ಷಿಯಲ್ ಭಯೋತ್ಪಾದನೆ ! ; ಇದು ಖಂಡನಾರ್ಹವಷ್ಟೇ ಅಲ್ಲ ಶಿಕ್ಷಾರ್ಹವೂ ಹೌದು ಎಂದು ತಿಳಿದಿದ್ದರೂ, ನಾಗರಿಕ ಪ್ರಜ್ಞೆ ಮತ್ತು ಸಾಮಾಜಿಕ ಕಳಕಳಿಗಳು, ಸಾರ್ವಜನಿಕ ಹೊಣೆಗಾರಿಕೆ, ಸಮಷ್ಟಿ ನಿಲುವಗಳು ದಿನದಿಂದ ದಿನಕ್ಕೆ ನಲುಗುತ್ತಿವೆ. !

ಮಾಧ್ಯಮಗಳಿಗೆ ಮಾಹಿತಿ, ಶಿಕ್ಷಣ, ಮನರಂಜನೆ- ಈ ಮೂರು ಮುಖ್ಯ ವಿಭಾಗಗಳನ್ನು ಅರ್ಥ ಮಾಡಿಕೊಂಡು ವ್ಯತ್ಯಾಸ ಕಂಡುಕೊಳ್ಳಲಿಕ್ಕೆ ಬಂದರೂ ಸಾಕು, ತಾವು ನಿರ್ವಹಿಸಬೇಕಾದ ಜವಾಬ್ದಾರಿ ಅರ್ಥವಾಗುತ್ತದೆ. ಅದನ್ನು ಬಿಟ್ಟು 'ಜನರು ಚೇಂಜ್ ಕೇಳುತ್ತಾರೆ'ಎಂದು ಮನಸೋ ಇಚ್ಚೆ ಕೊಡುತ್ತ ಹೋದರೆ ಯಾವುದು ಆರೋಗ್ಯದ ಅಗತ್ಯವೋ ಅದು ಮರೆಯಾಗುತ್ತವೆ. ಬರೀ ಜಂಕ್ ಫುಡ್ ಗಳಾಗಬೇಕೆ ಮಾಧ್ಯಮ ????

*************

Friday, June 5, 2009

ಭಾರತೀಯ ನೃತ್ಯಕಲೆಗಳಲ್ಲಿ ಜೀವನದ ಅನುಸಂಧಾನ

ಭಾರತೀಯನೃತ್ಯಕಲೆಗಳ ಅವಿಚ್ಛಿನ್ನ, ಅವಿನಾಶಿ ಪರಂಪರೆ ಜಗತ್ತಿನ ಉಳಿದೆಲ್ಲಾ ನೃತ್ಯಕಲೆಗಳಿಗೊಂದು ಆದರ್ಶ. ಅದು ಶಾಸ್ತ್ರೀಯವಾಗಿರಲಿ, ಅಥವಾ ಜಾನಪದವಾಗಿರಲಿ; ಜೀವನದ ಭಾರತೀಯ ಮುಖಗಳನ್ನು ಸುಂದರವಾಗಿ ನಿರೂಪಿಸುವುದರೊಂದಿಗೆ ಭಾವಪ್ರಚೋದಿಸುವ ಈ ನೃತ್ಯ ಮಾಧ್ಯಮ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗಷ್ಟೆ ಅಲ್ಲ, ಬದುಕಿನ ಹಲವು ಆಯಾಮಗಳಿಗೆ ತನ್ನನ್ನು ವಿಸ್ತರಿಸಿಕೊಂಡಿದೆ. ಭಾರತೀಯ ಶಾಸ್ತ್ರೀಯ ನೃತ್ಯದ ಪ್ರಸ್ತಾಪ ಋಗ್ವೇದದಲ್ಲಿ ಗುರುತಿಸಲಾಗಿದ್ದರೂ, ಋಗ್ವೇದಕ್ಕಿಂತಲೂ ಬಹಳಷ್ಟು ಪ್ರಾಚೀನವಾದುದು ಎಂಬುದನ್ನು ಕಂಡುಕೊಳ್ಳಬಹುದು. ಋಗ್ವೇದದಿಂದ ಪಠ್ಯವನ್ನು, ಯರ್ಜುವೇದದಿಂದ ಅಭಿನಯವನ್ನು, ಸಾಮವೇದದಿಂದ ಸಂಗೀತವನ್ನು, ಅಥರ್ವಣ ವೇದದಿಂದ ರಸವನ್ನು ತೆಗೆದು ಐದನೇಯ ವೇದವನ್ನಾಗಿ ನಾಟ್ಯವೇದವನ್ನು ರಚಿಸಲಾಯಿತು ಎಂದು ಪ್ರಾಚೀನ ಗ್ರಂಥಗಳು ಹೇಳಲ್ಪಟ್ಟಿವೆಯಾದರೂ, ಇಂತಹ ದೈವಿಕ ಸ್ಪರ್ಶ ಕೇವಲ ಪೂಜ್ಯತಾಭಾವನೆಗೆ ಮಾತ್ರ ಮೀಸಲಾಗಿರದೆ, ರಕ್ಷಣಾತ್ಮಕ ಚೌಕಟ್ಟನ್ನು, ಶಾಸ್ತ್ರೀಯ ಪರಂಪರೆಯನ್ನು ಕಾಯ್ದುಕೊಳ್ಳಲು ಮೂಡಿರಬಹುದೆಂದು ಇತಿಹಾಸತಜ್ಞರ ಅಭಿಪ್ರಾಯ. ಏನೇ ಇರಲಿ, ಭಾರತೀಯ ನೃತ್ಯಕಲೆಯು ಚಿತ್ರಕಲೆಯ ರೇಖಾವಿನ್ಯಾಸ, ವರ್ಣವೈಭವ, ಶಿಲ್ಪಕಲೆಯ ರೂಪ-ಲಾವಣ್ಯ, ನಟನ ದೇವನಾನುಕರಣ, ಸಂಗೀತ-ರಾಗ-ಲಯ-ಪದವಿನ್ಯಾಸ, ಕವಿಯ ಭಾವನಾವಿಲಾಸದ ಸಂಗಮವಷ್ಟೆ ಆಗಿರದೆ ಜೀವನದ ಜೊತೆಗಿನ ಅನುಸಂಧಾನವೂ ಹೌದು ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ. ಈ ಎಲ್ಲಾ ಭಾರತೀಯ ನೃತ್ಯಕಲೆಗಳಿಗೆ ಭರತಮುನಿಯ ಶಾಸ್ತ್ರವೇ ಆಧಾರವೆಂದೇ ನಂಬಲಾಗಿದ್ದರೂ, ಅದಕ್ಕೂ ಹಿಂದೆ ಶಿಲಾಲಿ, ಕೃಶಾಸ್ವರು ನಟಸೂತ್ರ ಗಳನ್ನೇ ರಚಿಸಿದ್ದರು ಎಂದು ಪಾಣಿನಿಯ ವ್ಯಾಕರಣ ತಿಳಿಸುತ್ತದೆ. ಆದರೆ ಲಭ್ಯವಿರುವ ಗ್ರಂಥಗಳ ಪೈಕಿ ಭರತನ ನಾಟ್ಯಶಾಸ್ತ್ರ ಅತೀ ಪ್ರಾಚೀನ ಮತ್ತು ಎಲ್ಲಾ ರಂಗ ಕಲೆಗಳಿಗೆ ಮಾತೃ ಗ್ರಂಥ ಎಂದೇ ನಿರ್ಧರಿಸಲ್ಪಟ್ಟಿದೆ. ಭರತ ಎನ್ನುವ ಐತಿಹಾಸಿಕ ವ್ಯಕ್ತಿ ಇದ್ದನೇ? ಇದ್ದರೆ ಯಾರು? ಎಂಬ ಜಿಜ್ಞಾಸೆ ಇಂದಿಗೂ ಸಿದ್ಧಾಂತಕ್ಕೆ ಸಿಲುಕಿಲ್ಲ. ಆದರೆ ಭರತಮುನಿಯ ಶಾಸ್ತ್ರವನ್ನು ಅವಲಂಬಿಸಿ ಬೆಳೆದು ಬಂದ ನಾಟ್ಯಸಂಪ್ರದಾಯಗಳೆಲ್ಲವೂ ಭರತನಾಟ್ಯವೇ ಆಗಿದೆ. ಹಾಗಾದರೆ ಕೇವಲ ಇಂದಿನ ಪ್ರಚಲಿತ, ಭರತನಾಟ್ಯ ಪದ್ಧತಿಯೊಂದೇ ಭರತನ ಕೊಡುಗೆ ಎನ್ನಲಾಗದು. (ಸಾದಿರ್, ದಾಸಿಆಟ್ಟಂ, ಕೇಲಿ, ನಿಲಂಬು, ದಾಸೀಕುಣಿತ ಎಂದು ಕರೆಯಲಾಗುತ್ತಿದ್ದ ನೃತ್ಯ ಪದ್ಧತಿ ಪುನರುಜ್ಜೀವನಗೊಂಡು ಭರತನಾಟ್ಯ ಎಂದು ಕರೆಸಿಕೊಂಡಿತಷ್ಟೆ ವಿನಃ; ಇಂದಿಗೂ ವಿಮರ್ಶಕರು ಭರತನೃತ್ಯ ಸಾದಿರ್ ಎಂದೇ ಕರೆಯಲು ಒತ್ತಾಯಿಸುತ್ತಿದ್ದಾರೆ, ಭರತನಾಟ್ಯವೆಂಬುದು ಶಾಸ್ತ್ರೀಯ ನೃತ್ಯದ ಒಂದು ಬಗೆ. ಅಷ್ಟೆ!)ಆದರೆ, ಇಂದಿನ ಹಲವು ಯುವ ಮನಸ್ಸುಗಳು, ಆಧುನಿಕ ಪ್ರೇರೇಪಿತ ನಿಲುವುಗಳು ಶಾಸ್ತ್ರೀಯ ನೃತ್ಯವನ್ನು ಅಸಡ್ಡೆಯಿಂದ ಕಾಣುವುದು, ಅದರಲ್ಲಿ ನವೀನವೆನಿಸುವ ಅತಿರೇಕದ ಬದಲಾವಣೆಗಳನ್ನು, ಪ್ರಯೋಗಗಳನ್ನು ಕಲ್ಪಿಸುವುದು ಶಾಸ್ತ್ರೀಯ ಲಕ್ಷಣಗಳಿಗೆ ಕೊಡಲಿ ಪೆಟ್ಟು ಕೊಡುತ್ತಿದೆ. ಈ ನಿಟ್ಟಿನಿಂದ ನಾವು ಅರ್ಥ ಮಾಡಿಕೊಳ್ಳಬೇಕಾದುದು ಒಂದೇ!... ಶಾಸ್ತ್ರೀಯವಾಗಿರುವುದರಿಂದಲೇ ಅದು ಶಾಸ್ತ್ರೀಯ ನೃತ್ಯ. ಆದರೆ ಅಷ್ಟು ಮಾತ್ರಕ್ಕೆ ಅದರ ವೈಭವೀಕರಣವೂ ಸಲ್ಲದು. ಹಾಗೆ ನೋಡಿದರೆ ಭಾರತೀಯ ನೃತ್ಯ ಪರಂಪರೆಗಳಲ್ಲಿ ಇಂದಿಗೂ ೧೫೦೦ರಷ್ಟು ಜಾನಪದ ನೃತ್ಯದ ಸಂಪತ್ತು ಇದೆ. ಅದರಲ್ಲಿನ ಧಾರ್ಮಿಕ ಅಂಶ ಕಡಿಮೆಯಾಗುತ್ತಿದ್ದರೂ, ಜಾನಪದದ ವರ್ಣವೈವಿಧ್ಯ, ಸರಳತೆ, ಸ್ಫೂರ್ತಿ, ಲಯ-ಗತಿ, ಸಾತ್ವಿಕ ಆನಂದದಿಂದಾಗಿ ತೇಜಸ್ಸು ಕಡಿಮೆಯಾಗಿಲ್ಲ. ಜನಜೀವನದ ಪ್ರಮುಖ ಅಂಗವಾಗಿ ಸಂಸ್ಕೃತಿಯ ಅವಿಭಾಜ್ಯ ಅಂಶವಾಗಿ, ಆಕರ್ಷಣೀಯವಾಗಿರುವ ಇಂತಹ ನೃತ್ಯಗಳು ವೈವಿಧ್ಯತೆ, ಭಿನ್ನತೆ, ವ್ಯತ್ಯಾಸಗಳನ್ನು ತನ್ನೊಡಲಲ್ಲಿ ಕಾಯ್ದುಕೊಂಡು ರಂಜನೀಯವಾಗಿದೆ. ಇಂತಹ ಭಿನ್ನತೆಗಳು ಭಾರತೀಯ ಸಂಸ್ಕೃತಿಯ ಏಕತೆಯ ಮೂಲರೂಪ. ಅಂತೆಯೇ ಒಂದೊಂದು ಪ್ರಾಂತ್ಯದ ಜನಜೀವನ, ಲಕ್ಷಣ, ಸ್ಥಳೀಯ ಸ್ಥಿತಿಗತಿ, ಅವಶ್ಯಕತೆಗಳ ಫಲವಾಗಿ ಆಯಾಯ ಪ್ರದೇಶದಲ್ಲಿ ಶಾಸ್ತ್ರೀಯ ನೃತ್ಯಗಳು ಮೈಗೂಡಿದವು. ಕೂಚಿಪುಡಿ, ಕಥಕ್ಕಳಿ, ಮೋಹಿನಿ ಆಟ್ಟಂ, ಮಣಿಪುರಿ, ಕಥಕ್, ಅಷ್ಟೇಕೆ ನಾಟ್ಯಶಾಸ್ತ್ರವನ್ನೇ ಅವಲಂಬಿಸಿರುವ ಕರ್ನಾಟಕದ ಯಕ್ಷಗಾನ, ಅಸ್ಸಾಮಿನ ಚೌ, ಸತ್ರಿಯಾ, ಕೊರವಂಜಿ, ಭಾಗವತಮೇಳ ನೃತ್ಯಗಳು ಶಾಸ್ತ್ರೀಯ ನೃತ್ಯಗಳೇ ಸರಿ! ಜೊತೆಗೆ ಸಾಮಾಜಿಕ, ಸಮಕಾಲೀನ ವಸ್ತು ನಿರೂಪಕಗಳು ನೃತ್ಯರೂಪಕವೆಂಬ ಆಕರ್ಷಕ ವಿಧಾನದ ಮೂಲಕ ಅಸ್ತಿತ್ವ ಪಡೆದುಕೊಂಡು ಶಾಸ್ತ್ರೀಯ ಶೈಲಿಯೆನಿಸಿದವು. ಹಾಗೆ ನೋಡಿದರೆ ಉತ್ತರ ಭಾರತಕ್ಕೆ ಪರರ ಆಕ್ರಮಣದ ಫಲವಾಗಿ ಅಲ್ಲಿನ ನೃತ್ಯಕಲೆಗಳು ಹೆಚ್ಚಾಗಿ ಪರಕೀಯರ ಪ್ರಭಾವ ಪಡೆದುಕೊಂಡಿವೆ. ದಕ್ಷಿಣ ಭಾರತದ ನೃತ್ಯಸಂಪ್ರದಾಯಗಳು ಸಾಕಷ್ಟು ಮೂಲ ಸಂಪ್ರದಾಯ ಪರಿಶುದ್ಧತೆಯನ್ನು ಉಳಿಸಿಕೊಂಡಿದೆ.ಮೋಕ್ಷಕ್ಕೆ ಸಾಧನ, ಪ್ರಾರ್ಥನಾ ಸ್ವರೂಪ ಎಂದೆನಿಸಿಕೊಂಡಿರುವ ಇಂತಹ ಶಾಸ್ತ್ರೀಯ, ಸಾಂಪ್ರದಾಯಿಕ ನೃತ್ಯಗಳು ಜೀವನ ಮೌಲ್ಯಗಳನ್ನು ಪುನರ್‌ವಿಮರ್ಶಿಸುವಂತವು. ಇಂದಿನ ಆಧುನಿಕ ಯುಗದಲ್ಲೂ ಎಲ್ಲಾ ದೃಷ್ಟಿಯಿಂದಲೂ ಜನಜೀವನಕ್ಕೆ ಅಗತ್ಯವೆನಿಸುವಂತವು, ಕೆಲವೊಂದು ನೃತ್ಯಗಳು ಆಯಾಕಾಲದ ಪ್ರಗತಿಗೆ ಸಾಕ್ಷಿಯಾಗಿ, ತನ್ನ ಬದುಕಿನ ಯುಗವನ್ನು ಬಿಂಬಿಸುತ್ತವೆ. ಉದಾ: ಏಕವ್ಯಕ್ತಿ ಯಕ್ಷಗಾನದ ಪ್ರಸ್ತುತತೆ. ಅಂತವು ಆಯಾಕಾಲದ ಅವಶ್ಯಕತೆ, ವೈವಿಧ್ಯತೆಗಳಿಗೆ ಅಗತ್ಯವೂ ಕೂಡಾ!..ಅಷ್ಟಕ್ಕೂ ಭಾರತೀಯ ಸಂಪ್ರದಾಯವೆಂಬುದು ಶಿಸ್ತಿನ ಕಟ್ಟುಪಾಡುಗಳಿಂದ ಕೂಡಿದ್ದಲ್ಲ ಸ್ವತಃ ಭರತಮುನಿಯೇ ತನ್ನ ಗ್ರಂಥದಲ್ಲಿ ಪಾಂಡಿತ್ಯ, ಅನುಭವ, ಲೋಕಜ್ಞಾನದಿಂದ ನೃತ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬಹುದು ಎಂದಿದ್ದಾನೆ. ಹಾಗಾಗಿ ಸ್ವಾತಂತ್ರ್ಯದ ಅಭಿವ್ಯಕ್ತಿ ಭಾರತೀಯ ಕಲೆಗಳ ಮೂಲಸ್ರೋತವೂ ಹೌದು. ಜೊತೆಗೆ ಪರಂಪರೆಯ ರಕ್ಷಣೆ, ಪ್ರಗತಿಯ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕಾದ್ದು ನಮ್ಮ ಕರ್ತವ್ಯವೂ ಕೂಡಾ. ಅಷ್ಟಕ್ಕೂ ಸ್ವಾತಂತ್ರ್ಯವೆಂದರೆ ಸ್ವ‌ೇಚ್ಛೆಯಲ್ಲವಲ್ಲ!ಭಾರತೀಯ ನೃತ್ಯಗಳೂ ಹಲವು ಸ್ಥಿತ್ಯಂತರಕ್ಕೆ ಒಳಪಟ್ಟಿವೆ. ಸ್ವಾತಂತ್ರ್ಯಾ ನಂತರವಂತೂ ಅಂಟಿದ್ದ ಕಳಂಕಗಳ ಬೇಡಿಯನ್ನು ಸ್ವಲ್ಪ ಸ್ವಲ್ಪವಾಗಿಯೇ ಬಿಡಿಸಿಕೊಳ್ಳುತ್ತಾ ಜನಾದರಣೆ, ಪ್ರೆತ್ಸಾಹವನ್ನು ಪಡೆದುಕೊಂಡಿವೆ. ಆದರೆ ನಾಗರೀಕತೆಯ, ಪರಕೀಯತೆಯ ಗಾಳಿಗೆ ಕಲುಷಿತಗೊಳ್ಳದಂತೆ ಪರಿಶುದ್ಧವಾಗಿ ಉಳಿಸಿಕೊಳ್ಳುವುದೂ ಸಂಸ್ಕೃತಿಯ ಬಗೆಗೆ ನಾವು ನಿರ್ವಹಿಸಬೇಕಾದ ಕರ್ತವ್ಯ.ಪ್ರಸ್ತುತ ಕಾಲದಲ್ಲಿ ನೃತ್ಯಶೈಲಿಯನ್ನು ಕರಗತ ಮಾಡಿಕೊಳ್ಳಲು ಬೇಕಾದ ಸಂಯಮ, ಶ್ರದ್ಧೆ, ನಿಷ್ಟೆ, ಏಕಾಗ್ರತೆ, ಅರ್ಪಣಾಭಾವಗಳು ಮರೆಯಾಗಿ ಅವಕಾಶವಾದಿಗಳು, ಅಪ್ರಬುದ್ಧರು ಅಟ್ಟಣಿಗೆ ಏರುತ್ತಾ ನೃತ್ಯಸಂಪ್ರದಾಯಕ್ಕೆ ಹೊಸತೆನಿಸುವ ಕಳಂಕವನ್ನು ಅಂಟಿಸುತ್ತಿದ್ದಾರೆ. ಎಲ್ಲಾ ನೃತ್ಯಶೈಲಿಗಳಲ್ಲೂ ನಿಪುಣರೆಂದು ತೋರಿಸಿಕೊಳ್ಳುವ ಆಶೆಯಲ್ಲಿ ಪರಂಪರೆಯನ್ನು ಮರೆಯುತ್ತಿರುವುದಲ್ಲದೆ, ಪೌರಾತ್ಯದ ಬೆರಕೆ, ವ್ಯಾಪಾರೀಕರಣ ನೃತ್ಯಶೈಲಿಯ ಪ್ರಮುಖ ಸಮಸ್ಯೆ ಮತ್ತು ಸವಾಲು.ಆದರೆ ಇಂತಹ ತಾಳ್ಮೆ ಎಲ್ಲದರಂತೆ ನೃತ್ಯರಂಗದಲ್ಲೂ, ಮುಂದುವರಿದರೆ ಶಾಸ್ತ್ರೀಯ-ಸಂಪ್ರದಾಯ-ಜನಪದಗಳ ಅಸ್ತಿತ್ವವಷ್ಟೆ ಅಲ್ಲ. ನಮ್ಮ ಅಸ್ತಿತ್ವವನ್ನು ಅದರೊಂದಿಗೆ ಕಳೆದುಕೊಳ್ಳಬೇಕಾದೀತು. ಕಲೆಯ ಪ್ರಗತಿ ಪರಂಪರೆಯ ಸುಭದ್ರ ಬುನಾದಿಯ ಮೇಲೆ ಭಾರತೀಯವಾಗಿ ಮುಂದುವರಿದರಷ್ಟೆ ಅದು ಅರ್ಥಪೂರ್ಣ, ಪರಿಪೂರ್ಣ, ಅವಿನಾಶಿ... ಅಲ್ಲವೇ?
(ಚೈತ್ರರಶ್ಮಿ ಪತ್ರಿಕೆಯ ೫೦ ನೆ ಸಂಚಿಕೆಯಲ್ಲಿ ಪ್ರಕಟವಾದ ಲೇಖನ )
ಉಪನ್ಯಾಸ

ನೂಪುರ ಭ್ರಮರಿಯ ಬಳಗವು ಭರತನಾಟ್ಯ, ನೃತ್ಯಶೈಲಿಗಳಿಗೆ ಸಂಬಂಧಿಸಿದಂತೆ ಅರಿವಿನ ವಿಸ್ತರಣೆಗಾಗಿ೧. ಭಾರತೀಯ ಶಾಸ್ತ್ರೀಯ ನೃತ್ಯಗಳು ಮತ್ತು ಜೀವನಾನುಸಂಧಾನ೨. ಭರತನಾಟ್ಯದ ಆಂಗಿಕಾಭಿನಯ೩. ನಾಯಿಕಾ-ನಾಯಕಾ ಭಾವ೪. ಹಸ್ತಮುದ್ರಾ ವಿನ್ಯಾಸಗಳು ಮತ್ತು ಸಂಶೋಧನೆ೫. ನೃತ್ಯ ಇತಿಹಾಸ ಮತ್ತು ಭರತನಾಟ್ಯದ ಪುನರುತ್ಥಾನ೬. ನೃತ್ಯ ಗ್ರಂಥಗಳು ಮತ್ತು ಅವುಗಳೆಡೆಗೆ ಸಮಗ್ರ ದೃಷ್ಠಿಮೇಲ್ಕಂಡ ವಿಚಾರಗಳನ್ನೂ ಒಳಗೊಂಡಂತೆ ವಿವಿಧ ವಿಷಯಗಳಲ್ಲಿ ಉಪನ್ಯಾಸಗಳನ್ನು ನೀಡುತ್ತಿದ್ದು, ಉಪನ್ಯಾಸ ಕಾರ್ಯಕ್ರಮಗಳಿಗಾಗಿ ಆಸಕ್ತರು ಪತ್ರಿಕೆಯ ಸಂಪಾದಕರನ್ನು ಸಂಪರ್ಕಿಸಬಹುದು. ದೂ : ೯೯೬೪೧೪೦೯೨೭
ಭಾರತೀಯ ನೃತ್ಯ ಕಲೆ : ಭವಿತವ್ಯಕ್ಕೊಂದು ಆಸರೆ

ದೇಶವೊಂದರ ಸಾಂಸ್ಕೃತಿಕ ಔನ್ನತ್ಯವನ್ನು, ನಾಗರೀಕತೆಯ ವ್ಯಾಪ್ತಿಯನ್ನು ಆ ದೇಶದ ಪ್ರದರ್ಶಿತ ಕಲೆಯಿಂದ ಅರಿತುಕೊಳ್ಳಬಹುದು. ಅಷ್ಟಕ್ಕೂ ದೇಶವೊಂದರ ಕಲೆಗಳು ಬೆಳೆಯುವುದೇ ಅಲ್ಲಿನ ಆಧ್ಯಾತ್ಮಿಕ, ನಾಗರೀಕ, ಸಾಂಸ್ಕೃತಿಕ ಅಗತ್ಯ ಮತ್ತು ಸತ್ಯಗಳನ್ನು ಕಂಡುಕೊಂಡು. ಹಾಗಾದ್ದರಿಂದಲೇ ಭಾರತದ ಭಾಷೆಗಳು ನಾಗರೀಕತೆಯ ಉಗಮದಿಂದ ಇಲ್ಲಿಯವರೆವಿಗೂ ಶಾಬ್ದಿಕವಾಗಿಯಷ್ಟೇ ಅಲ್ಲದೆ, ಅಶಾಬ್ದಿಕವಾಗಿಯೂ ಪ್ರಬಲವಾಗಿ ತನ್ನ ಅಸ್ತಿತ್ವವವನ್ನು ವಿವಿಧ ರೂಪಗಳಲ್ಲಿ ಉಳಿಸಿಕೊಂಡು ಬಂದಿದೆ. ಜೊತೆಗೆ ಭಾಷೆಯು ತನಗೆ ಬೇಕಾದ ಸನ್ನಿವೇಶಗಳನ್ನು, ಸಂಕೇತಗಳನ್ನು ಆವಾಹಿಸಿಕೊಂಡಿದ್ದರಿಂದಾಗಿ ಅದಕ್ಕೆ ಪೂರಕವಾದ ಅಪ್ರಜ್ಞಾಪೂರ್ವಕ ದೇಹಭಾಷೆಗಳ ಬೆಳವಣಿಗೆಯಾಯಿತು. ಅಂತಹ ಅಂಗಭಂಗಿಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿ ಅತ್ಯಾಕರ್ಷಕವಾಗಿ ಮನರಂಜನೆಯೊಂದಿಗೆ ಮಾಹಿತಿ, ಶಿಕ್ಷಣವನ್ನೂ ಕೊಂಡೊಯ್ಯುವ ಕಾರ್ಯ ನೃತ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಲೇ ಬಂದಿದೆ.
ನೃತ್ಯಕಲೆ ತಾಳ-ಅಭಿನಯ-ಅಂಗವಿನ್ಯಾಸಗಳ ಸಮ್ಮಿಳಿತ ಕಲೆ, ಆದ್ದರಿಂದ ಕೇವಲ ಶ್ರವ್ಯದಿಂದ ಮಾತ್ರವಲ್ಲದೆ ದೃಶ್ಯದಿಂದ ಮಾನವನ ಮನಸ್ಸಿನ ಮೇಲೆ ಆಳವಾಗಿ ಪರಿಣಾಮ ಬೀರಬಲ್ಲ ಕಲೆ ನೃತ್ಯ. ನೃತ್ಯ ಕಲೆಯು ಸಾಹಿತ್ಯಿಕವಾಗಿ, ಆಧ್ಯಾತ್ಮಿಕವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿ ಒಂದು ಆರೋಗ್ಯಯುತ ಮನಸ್ಸುಗಳನ್ನು ಸೃಷ್ಠಿ ಮಾಡಬಲ್ಲುದು. ಜಾತಿಮತಗಳ ಭೇದವಿಲ್ಲದೆ, ಮೇಲುಕೀಳು ಭಾವನೆಯಿಲ್ಲದೆ ಈ ಕಲೆಯನ್ನು ಕಲಿಯಲು, ನೋಡಲು ಸಾಧ್ಯ. ಅದರಲ್ಲೂ ಅದರ ಇತಿಹಾಸ, ಭವ್ಯತೆ, ಶಾಸ್ತ್ರೀಯ ಚೌಕಟ್ಟು, ಜಾನಪದೀಯ ಹಿನ್ನಲೆ, ವೇಷಭೂಷಣಗಳು ಆಯಾಯ ಸಮಾಜದ ಗುಣ-ಅವಗುಣಗಳನ್ನು ತಿಳಿಸುವ ಮಾರ್ಗಸೂಚಿಯೂ ಹೌದು. ಅದರ ತಾಳ, ಗಾನ, ಅಭಿನಯ, ಲಯ, ಮಾತು ಇತ್ಯಾದಿ..,ಒಂದೇ ಸಮಯದಲ್ಲಿ ಹಲವು ಭಾವಗಳನ್ನು ವಿಷಯಗಳನ್ನು ತಿಳಿಯಪಡಿಸುವ ಸಾಧನ. ಹಾಗೆಯೇ ಸರಳ ಸುಂದರ ರೀತಿಯಲ್ಲಿ ಸಮಾಜದ ಓರೆಕೋರೆಗಳ ಬಗ್ಗೆ ತಿಳಿವಳಿಕೆಯಿತ್ತು, ತಿದ್ದುವ ಕೆಲಸ ಈ ಕಲೆಯಿಂದ ಸಾಧ್ಯ.
ಹಾಗಾಗಿ ನೃತ್ಯವು ಮಾನವನ ನೀತಿ, ರೀತಿ, ತತ್ವ, ಸರಸ-ಸಂಭಾಷಣೆ, ಪ್ರಾರ್ಥನೆ, ನಿಲುವು…ಹೀಗೆ ಹತ್ತು ಹಲವು ವಿಷಯಗಳನ್ನು ಸರಳ-ಸುಂದರ ರೀತಿಯಲ್ಲಿ ಮನಸ್ಸಿಗೆ ತಲುಪಿಸಲು ಸಾಧ್ಯವಾಗಿದೆ. ಜೊತೆಗೆ ಭಾರತದ ಉದ್ದಗಲಕ್ಕೂ ಇರುವ ಪ್ರಾಚೀನ ದೇವಾಲಯಗಳಲ್ಲಿ ನೃತ್ಯಭಂಗಿಗಳ ಶಿಲ್ಪಗಳನ್ನು ಅಸಂಖ್ಯಾತವಾಗಿ ಕಾಣಬಹುದಾಗಿದೆ. ಶಿಲ್ಪದಲ್ಲಿನ ಸೂತ್ರಗಳಿಗೆ ಸಮವಾಗಿ ನಾಟ್ಯಭಂಗಿಗಳು ಪ್ರೇರಿತವಾಗಿವೆ ಎನ್ನಲಾಗಿದೆ. ಈ ಎಲ್ಲಾ ಶಿಲ್ಪಗಳು ಮಾನವ ಜೀವನದ ಸಾಮಾನ್ಯ ವಿಷಯಗಳೊಂದಿಗೆ ಹಲವು ಭಾವಗಳನ್ನು, ಅನುಭಾವಗಳನ್ನು, ವಿಷಯಗಳನ್ನು, ಲೌಕಿಕ ರೀತಿನೀತಿಗಳನ್ನು ಪ್ರತಿಪಾದಿಸಿರುವುದನ್ನು ಕಾಣುತ್ತೇವೆ.
ಜೀವನ ಸಂಸ್ಕೃತಿಯಲ್ಲಿ ಪ್ರತೀ ಸನ್ನಿವೇಶವೂ ಒಂದು ನಾಟ್ಯದ ವಸ್ತುವಾಗಿ ಕಾಣಿಸುವುದು ನಾಟ್ಯದ ಹೆಚ್ಚುಗಾರಿಕೆ. ಸಾಹಿತ್ಯ, ಶಿಲ್ಪಕಲೆ, ಪುರಾಣ, ಸಂಗೀತ, ರಾಜಮನೆತನ, ಸಾಮಾಜಿಕ ಜೀವನ ಹೀಗೆ ಪ್ರತಿಯೊಂದರಲ್ಲೂ ನಾಟ್ಯದ ಕೊಡುಗೆ ಮಹತ್ವ ಪೂರ್ಣವಾಗಿ ಗೋಚರಿಸುತ್ತದೆ. ಆ ಮೂಲಕ ನೃತ್ಯ ತಾನೊಂದು ಭಾಷಾ ಮಾಧ್ಯಮ ಎಂಬುದನ್ನೂ ದೃಢಪಡಿಸುತ್ತದೆ.
ಕ್ರಿ.ಪೂ. ೨ನೇ ಶತಮಾನದಲ್ಲಿ ರಚಿತವಾಯಿತೆನಿಸುವ ಭರತಮುನಿಯ ನಾಟ್ಯಶಾಸ್ತ್ರದ ಆಧಾರದಲ್ಲಿ ಭಾರತದಲ್ಲಿ ಅನೇಕ ನೃತ್ಯ ಪ್ರಕಾರಗಳು ರೂಪುಗೊಂಡಿತಾದರೂ, ಅದಕ್ಕೂ ಮುಂಚೆ ಪಾಣಿನಿ, ಕೃಶಾಶ್ವರು ಬರೆದ ಸೂತ್ರಗಳಿತ್ತೆನ್ನಲಾಗಿದೆ. ಆದರೆ ಅವೆಲ್ಲವನ್ನೂ ಒಂದೇ ಸೂತ್ರದಲ್ಲಿ ಹಿಡಿದಿಡುವ ಕೆಲಸ ಭರತಮುನಿಯಿಂದಾಯಿತೆನ್ನಬಹುದು. ನಾಲ್ಕು ವೇದಗಳಿಂದ ಪಠ್ಯ, ಗಾನ, ರಸ, ಲಯ ಮುಂತಾದವುಗಳನ್ನು ಆರಿಸಿಕೊಂಡು ಐದನೇಯ ವೇದ ನಾಟ್ಯವೇದವನ್ನು ರಚಿಸಿದನೆಂಬುದು ಐತಿಹ್ಯ.
ಕ್ರಮೇಣ ನಾಟ್ಯಶಾಸ್ತ್ರವನ್ನು ಆಧರಿಸಿ ಪ್ರಾಂತೀಯ ಜನಜೀವನ- ಸಂಸ್ಕೃತಿಯ ಪ್ರಭಾವದಿಂದ, ವಿವಿಧ ರೀತಿಯಲ್ಲಿ ನೃತ್ಯ ಪ್ರಕಾರಗಳು ಸೃಜನೆಯಾದವು. ಹಾಗಾಗಿ ನಾಟ್ಯಕಲೆ ಹರಿದುಬಂದ ಕಥೆಯಲ್ಲಿ ಭರತನು ಕಾವ್ಯದೃಷ್ಟಿ, ಧರ್ಮದೃಷ್ಟಿ ರಸದೃಷ್ಟಿಗಳನ್ನು ಕೊಡುವುದಷ್ಟೇ ಅಲ್ಲದೆ ಲೌಕಿಕ ಪ್ರಜ್ಞೆಯನ್ನು ನೀಡಿದ್ದಾನೆ. ಅಷ್ಟು ಮಾತ್ರವಲ್ಲದೆ, ಭಾರತೀಯ ಪರಿಭಾಷೆಯಲ್ಲಿ ಭರತನು ನೀಡಿದ ಕೊಡುಗೆಗಳ ಪೈಕಿ ಸಾಧಾರಣೀಕರಣ ಎನ್ನುವ ಸಂವಹನ ನೀತಿ ತತ್ವವು ಪ್ರಪಂಚದ ಸಂವಹನ ಕ್ಷೇತ್ರಕ್ಕಿತ್ತ ಮಹತ್ವದಕಾಣಿಕೆ. ವೈಯಕ್ತಿಕ ಸಾಧ್ಯತೆಗಳಿಂದ ಅನಂತತೆಗೆ, ವೈವಿಧ್ಯತೆಗಳಿಂದ ಏಕತೆಗೆ ಕೊಂಡೊಯ್ಯುವಲ್ಲಿ ಈ ಸಾಧಾರಣೀಕರಣ ಬಹು ಮುಖ್ಯ ಪಾತ್ರ ವಹಿಸುತ್ತದೆ.
ಕಾಲಾನಂತರದಲ್ಲಿ ಭರತನ ನಾಟ್ಯಶಾಸ್ತ್ರವಷ್ಟೇ ಅಲ್ಲದೆ ನಂದಿಕೇಶ್ವರನ ಅಭಿನಯ ದರ್ಪಣ, ಪುಂಡರೀಕ ವಿಠಲನ ನರ್ತನ ನಿರ್ಣಯ, ಸಾರಂಗಧರನ ಸಂಗೀತ ರತ್ನಾಕರ, ಭರತಾರ್ಣವ, ಹಸ್ತ ಲಕ್ಷಣ ದೀಪಿಕ.., ಹೀಗೆ ಹತ್ತು ಹಲವು ಗ್ರಂಥಗಳು ವಿವಿಧ ಬಗೆಯ ನೃತ್ಯ ಪದ್ಧತಿಗಳಿಗೆ ಆಕರವಾದವು. ಭರತನಾಟ್ಯವು ಅಭಿನಯ ದರ್ಪಣವನ್ನು ಮುಖ್ಯವಾಗಿ ಅವಲಂಬಿಸಿದರೆ ಮೋಹಿನಿಯಾಟ್ಟಂ, ಕಥಕ್ಕಳಿಂiiಂತಹ ನೃತ್ಯ ಪ್ರಕಾರಗಳು ಅವಲಂಬಿಸಿದ್ದು ಹಸ್ತಲಕ್ಷಣ ದೀಪಿಕಾವನ್ನು.
ಆರಂಭದಲ್ಲಿ ಜನಜೀವನದ ಮಾಮೂಲಿ ನೃತ್ಯಗಳಾಗಿದ್ದು, ಕಾಲಾಂತರದಲ್ಲಿ ಪರಿಷ್ಕರಣೆಗೊಳಪಟ್ಟವುಗಳೇ ಇಂದಿನ ಎಲ್ಲಾ ಬಗೆಯ ಶಾಸ್ತೀಯ ನೃತ್ಯಗಳು. ಇವುಗಳ ಬಳಕೆ, ಮತ್ತು ಪ್ರೋತ್ಸಾಹ ವಿವಿಧ ದೇಶ-ಕಾಲದಲ್ಲಿ ನಡೆದು ಅನೇಕ ಸ್ಥಿತ್ಯಂತರಗಳಿಗೆ, ಕಾಲಕ್ರಮೇಣ ಒಂದು ಸಂಪ್ರದಾಯದ ಚೌಕಟ್ಟಿಗೆ ಒಳಪಟ್ಟು ಶಾಸ್ತ್ರೀಯ-ಸಂಪ್ರದಾಯಯನ್ನು ಪಡೆದವು. ಸಮಾಜದ ಉನ್ನತಿಗೆ, ವ್ಯಕ್ತಿತ್ವ ವಿಕಸನೆಗೆ, ಸೌಂದರ್ಯಾನುಭವಕ್ಕೆ ರೂಪುಗೊಂಡ ಇಂತಹ ಪದ್ಧತಿಗಳಲ್ಲಿ ತಮಿಳುನಾಡಿನ ಭರತನಾಟ್ಯ, ಆಂಧ್ರದ ಕೂಚುಪುಡಿ, ಒರಿಸ್ಸಾದ ಒಡಿಸ್ಸಿ, ಕೇರಳದ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ, ಮಣಿಪುರದ ಮಣಿಪುರಿ, ಉತ್ತರಭಾರತದ ಕಥಕ್, ಅಸ್ಸಾಂನ ಸತ್ರಿಯಾ, ಕರ್ನಾಟಕದ ಯಕ್ಷಗಾನಗಳು ಕೂಡಾ ಒಂದೊಮ್ಮೆ ಜನಪದದ ಹರಿವಿನಿಂದ ಶಾಸ್ತ್ರೀಯ ನಡೆವಳಿಕೆಗಳಿಗೆ ಚಾಚಿಕೊಂಡಿರಬಹುದಾದ ಎಲ್ಲಾ ಸಾಧ್ಯತೆಗಳನ್ನು ಪ್ರಕಟಪಡಿಸಿವೆ. ಹೀಗೆ, ಕಲಾವಿದನ ಶಕ್ತಿಯು ಆಯಾಯ ದೇಶದ ಸ್ಥಿತಿಗತಿಗಳ, ರಾಜಕೀಯ, ಆರ್ಥಿಕ, ಮತ್ತು ಸಂಸ್ಕೃತಿಯನ್ನು ಅವಲಂಬಿಸಿರುತ್ತದೆ.
ಇಂದಿನ ಶಾಸ್ತ್ರೀಯ ನೃತ್ಯಗಳ ಒಂದೊಂದು ಅಂಶವೂ ಸೂಕ್ಷ್ಮಾವಲೋಕನದಿಂದ, ನಿಯಮ ವಿಧಿಗಳಿಗೆ ಬದ್ಧವಾಗಿ, ಶಾಸ್ತ್ರೀಯ ಸೂತ್ರಗಳನ್ನು ಹೊಂದಿದ ಪರಿಷ್ಕೃತ ಪದ್ಧತಿಯನು ಒಳಗೊಂಡಿದ್ದು; ಬಹಳಷ್ಟು ಹಿಂದಿನಿಂದಲೇ ಗೌರವಕ್ಕೆ ಅರ್ಹವಾದ ಕಲೆಗಳಾಗಿದ್ದವು ಎನ್ನುವುದು ಗಮನಾರ್ಹ. ಒಂದು ಕಾಲದಲ್ಲಿ ಸಾಮಾನ್ಯ ಜನರ ಅಭಿವ್ಯಕ್ತಿಯ ಸಾಧನವಾಗಿದ್ದು, ಜನಪದವೇ ಆಗಿದ್ದಿರಬಹುದೆನ್ನಲಾದ ಇಂದಿನ ಶಾಸ್ತ್ರೀಯ ನೃತ್ಯಗಳು, ಕಾಲಾನುಕ್ರಮದಲ್ಲಿ ಹಲವು ಪರಿಷ್ಕರಣೆಗೊಳಪಟ್ಟು, ಬದಲಾವಣೆಗಳಿಗೆ ಒಗ್ಗಿಸಿಕೊಂಡು ಒಂದು ಸಿದ್ಧ ಪರಂಪರೆಯ ರೂಪಕ್ಕೆ ಬಂದಿದ್ದೇ ಅವುಗಳ ಇಂದಿನ ಅಸ್ತಿತ್ವಕ್ಕೆ ಕಾರಣ. ಹಾಗಾಗಿ ನಾಟ್ಯಶಾಸ್ತ್ರದ ಹಿನ್ನಲೆಯಲ್ಲಿ ಬೆಳೆದು ಬಂದ ಕಲೆಗಳಾದ ನೃತ್ಯ ಪದ್ಧತಿಗಳನ್ನು ಕೇವಲ ಶಾಸ್ತ್ರೀಯ ಪರಿಭಾಷೆಯಾಗಿ ನೋಡದೆ ಅದರ ವ್ಯಾಪ್ತಿಯ ಬಗ್ಗೆ, ಸಾಧಾರಣೀಕರಣ ಪ್ರಸ್ತಾಪಿಸುವ ಅಂಶಗಳಿಗೆ ಎಷ್ಟು ಪೂರಕವಾಗಿ ನಡೆದುಕೊಳ್ಳುತ್ತದೆ ಎಂಬ ಬಗ್ಗೆ ಮತ್ತು ಈಗಾಗಲೇ ಅಸ್ತಿತ್ವದಲ್ಲಿದ್ದರೂ ತೆರೆಮರೆಗೆ ಸರಿಯುತ್ತಿರುವ ಅದರ ಸಂವಹನ ಅನುಕೂಲ ಅಂಶಗಳ ಕುರಿತಾಗಿ ಮತ್ತಷ್ಟು ಅಧ್ಯಯನಗಳು ನಡೆಯಬೇಕಾಗಿವೆ. ಬದಲಾವಣೆಯ ಕಾಲಘಟ್ಟಕ್ಕೆ ಪೂರಕವಾಗಿ ನಡೆಯಬೇಕೆಂಬ ಉದ್ದೇಶಗಳನ್ನಿಟ್ಟು ನಡೆದರೆ ಕಲೆಯು ಕೇವಲ ಸಾಂಪ್ರದಾಯಿಕ, ಸಾಂಸ್ಕೃತಿಕ ಅಗತ್ಯಗಳನ್ನಷ್ಟೇ ಪೂರೈಸುವುದಕ್ಕೆ ಸೀಮಿತವಾಗದೆ ಸಾಮಾಜಿಕ ಅಗತ್ಯ ಮತ್ತು ಪ್ರಜ್ಞೆಯನ್ನು ಪೂರೈಸಿಕೊಂಡು, ಪ್ರಸ್ತುತವೆನಿಸುತ್ತದೆ.
ಕಲೆ ನಿಂತ ನೀರಲ್ಲ. ನೃತ್ಯ ಪದ್ಧತಿಗಳು ಉಗಮವಾದಾಗಿನಿಂದಲೂ ಸಾಕಷ್ಟು ಚಲನೆಗಳಿಗೆ ಸಾಕ್ಷಿಯಾಗಿದೆ. ಕಲೆಯ ಮತ್ತು ಅದರೊಂದಿಗಿನ ಜೀವನಪ್ರೀತಿಯನ್ನು ಪೋಷಿಸುವ ಮತ್ತು ನಿತ್ಯ ನವೀಕರಿಸಿಕೊಳ್ಳುವ ದೃಷ್ಟಿಯಿಂದ ಮುನ್ನಡೆದರಷ್ಟೇ ಕಾರ್ಯಗಳು ಜೀವನಮುಖಿಯೆನಿಸಿಕೊಳ್ಳುತ್ತದೆ. ಭರತನೇ ತನ್ನ ನಾಟ್ಯಶಾಸ್ತ್ರದಲ್ಲಿ ಕಾಲಾನುಕೂಲಕ್ಕೆ ಅಗತ್ಯವಿದ್ದಂತೆ ಜನಜೀವನದ ಮಾರ್ಪಾಡುಗಳಿಗೆ ಅನುಗುಣವಾಗಿ ನೃತ್ಯ ಸಂಸ್ಕೃತಿಯಲ್ಲೂ ಬದಲಾವಣೆಗಳನ್ನು ತಂದುಕೊಳ್ಳಬಹುದಾಗಿದೆ ; ತಾನು ಪ್ರಸ್ತಾಪಿಸಿರುವ ಅಂಶಗಳೇ ಸಾರ್ವಕಾಲೀನ ಮಾನದಂಡವಲ್ಲ ಎಂದಿದ್ದಾನೆ. ಆದರೆ ಶತಶತಮಾನಗಳಿಂದಲೂ ಪೂಜಾ ಮಂದಿರ, ರಾಜರ ಆಶ್ರಯಗಳಲ್ಲಿ ಬೆಳೆದು ಬಂದು ಕ್ರಮೇಣ, ಸ್ವಹಿತಾಸಕ್ತಿಗಳಿಂದಾಗಿ ಕಳೆದ ಶತಮಾನದ ಪೂರ್ವ ಮತ್ತು ಮಧ್ಯಕಾಲದಲ್ಲಿ ಸೊರಗಿ ಹೋಯಿತು. ಪರಕೀಯರ ದಾಳಿ ಆಗುವವರೆಗೂ ರಾಜಶ್ರಯದಲ್ಲಿದ್ದ ಕಲೆಗಳು ಮತ್ತಷ್ಟು ಬಿಗಡಾಯಿಸಿದವು. ದೈವಿಕಭಾವದ ಕಲೆಗೆ ಕಾಮುಕತೆಯ ಲಕ್ಷಣಗಳು ಅಂಟಿಕೊಂಡು. ಕೀಳುಮಟ್ಟದ ಜೀವನಕ್ಕೆ ಸಾಕ್ಷಿಯಾಯಿತು. ಅಸಡ್ಡೆ, ತಿರಸ್ಕಾರ, ಮರ್ಯಾದೆಗೆ ಯೋಗ್ಯವಲ್ಲ ಎಂಬ ನೀತಿ ನೃತ್ಯಕ್ಷೇತ್ರದಲ್ಲಿ ವ್ಯಾಪಕವಾಗಿ ಹಬ್ಬಿತ್ತು.
ನಂತರ ಹಲವು ಸುಧಾರಕರ ಕರಕುಶಲತೆಗೆ ಕನ್ನಡಿಯಾಗಿ ಇಂದು ನಾವೇನು ಕಾಣುತ್ತಿದ್ದೇವೆಯೋ ಈ ಭವ್ಯ ಹೊಸಿಲಿಗೆ ಬಂದು ನಿಂತಿದೆ. ಉದಾ : ದೇವದಾಸಿಯರ ಕಳಪೆ, ನಿರ್ಲಕ್ಷಿತ ಜೀವನದಡಿ ಸಾದಿರ್, ಕೂತ್ತು ಎಂಬೆಲ್ಲಾ ಹೆಸರುಗಳಿಂದ ಕಳೆಗುಂದಿ ನಲುಗಿ ಹೋಗಿದ್ದ ದಕ್ಷಿಣ ಭಾರತದ ಸಾದಿರ್, ಕೂತ್ತು, ದಾಸಿ‌ಆಟ್ಟಂ ಎಂದು ಕರೆಸಿಕೊಳ್ಳುತ್ತಿದ್ದ ಮುಖ್ಯ ನೃತ್ಯ ಪ್ರಕಾರವೊಂದಕ್ಕೆ ೧೯೫೦ರ ದಶಕಗಳಲ್ಲಿ ರುಕ್ಮಿಣೀದೇವಿ ಅರುಂಡೇಲ್, ಕೃಷ್ಣ ಅಯ್ಯರ್ ಮುಂತಾದವರು ಭರತನಾಟ್ಯವೆಂಬ ಹೆಸರನ್ನಿತ್ತು, ಮರುಜ್ಜೀವ ಕೊಟ್ಟು ಸಾಕಷ್ಟು ಪರಿಷ್ಕರಿಸಿದರು.
ಕಾಲ ಬದಲಾಗಿದೆ., ಕಾಲ-ನೆಲೆಗಳಿಂದ ಮೊದಲ್ಗೊಂಡು ವೇಷಭೂಷಣ, ಸಂಗೀತ, ಪಠ್ಯಕ್ರಮ, ನರ್ತನ ಆಶಯಗಳ ಉದ್ದಗಲಕ್ಕೂ ಸಾಕಷ್ಟು ಮಾರ್ಪಾಡುಗಳು ಶಾಸ್ತ್ರೀಯ ನೃತ್ಯಗಳಲ್ಲಿ ಆಗುತ್ತಾ ಬಂದಿವೆ. ಇತರ ಮಾಧ್ಯಮಗಳ ಪ್ರಭಾವವೂ ಸಾಕಷ್ಟು ಆಗಿದೆ. ಇತ್ತೀಚಿನ ದಶಕಗಳಲ್ಲಿ ಈ ನೃತ್ಯ ಸಂಸ್ಕೃತಿಯ ಮೂಲ ಅಂಶಗಳನ್ನು ಉಳಿಸಿಕೊಂಡಂತೆ ಸಾಕಷ್ಟು ಫ್ಯೂಶನ್‌ಗಳು ಹರಡಿದ್ದು, ಸಮಕಾಲೀನ ಸಮಾಜಕ್ಕೆ ಪೂರಕವಾಗಿ ನಡೆದುಕೊಳ್ಳಬಲ್ಲ ಎಲ್ಲಾ ಅಂಶಗಳನ್ನು ತೋರಿಸಿಕೊಟ್ಟಿದೆ. ಅಂದು ನೃತ್ಯವೆಂಬುದು ಕಳಂಕ ; ಅದೇ ಇಂದು ಪ್ರತಿಷ್ಠೆಯ ವಿಷಯ. ನೃತ್ಯ ಕ್ಷೇತ್ರದ ವ್ಯಾಪಾರೀಕರಣ ಬಡವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವೆಚ್ಚದಾಯಕವೆಂಬ ಕಾರಣಕ್ಕೆ ನೃತ್ಯಕ್ಕೆಂದು ಹುಳಿದ್ರಾಕ್ಷಿಯೇ ಹೌದು ! ಅನಾರೋಗ್ಯಕರ ಸ್ಪರ್ಧೆಯಿಂದಾಗಿ ವಿದ್ಯೆಯೆಂಬುದು ಕೇವಲ ಗಿಳಿಪಾಠವೇ ಸರಿ ! ಮಾತ್ರವಲ್ಲ, ನೃತ್ಯ ಪರೀಕ್ಷೆಗಳ ಸಾಕಷ್ಟು ಲೋಪಗಳು ಅಕಾಡೆಮಿಕ್ ಮಾನ್ಯತೆಗೊಂದು ಕಪ್ಪುಚುಕ್ಕಿ. ಹಾಗಾಗಿ ಬರಬರುತ್ತಾ ಎಲ್ಲಾರೀತಿಯಿಂದಲೂ ಯೋಗ್ಯತೆ ಪಡೆದಿರುವ ನಾಟ್ಯಾಚಾರ್ಯರು ವಿರಳವಾಗುತ್ತಿದ್ದಾರೆ. ವಿವಿಧ ಸಂಪ್ರದಾಯಗಳ ಒಳಜಗಳಗಳು, ಪ್ರದರ್ಶನ-ರಂಗಪ್ರವೇಶಗಳೇ ಅರ್ಹತೆಯ ಮಾನದಂಡಗಳೆಂಬ ಕಪೋಲ ಕಲ್ಪಿತ ನಂಬಿಕೆಗಳು ರಸಾನುಭೂತಿಯನ್ನೇ ಮರೆಸಿ ನಿರ್ವಾತ ವಾತಾವರಣವನ್ನು ಸೃಷ್ಠಿಸುತ್ತಿವೆ.
ಇಷ್ಟೆಲ್ಲಾ ನೃತ್ಯಕ್ಷೇತ್ರದ ಹಲವು ವಿರೋಧಾಭಾಸಗಳ ಮಧ್ಯೆ ಪರಂಪರೆಯ ಜೊತೆಗೆ ವಿನೂತನ ನಡೆಯನ್ನು ಮುಕ್ತವಾಗಿ ಒಪ್ಪಿ, ತಿದ್ದಿ ನಡೆಯುವ ವಿಶಾಲ ಮತ್ತು ಪ್ರತಿಭಾಶೀಲ ಮನಸ್ಸುಗಳ ಅಗತ್ಯವಿದೆ. ಒಂದಷ್ಟು ಚಲನಶೀಲತೆ, ಗುಣಮಟ್ಟದ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇರುವವರೆಗೆ ಕಲೆಯ ಕಡೆಗೆ ನೋಡುವ ಪ್ರತೀ ದೃಷ್ಠಿಯೂ ಹೊಸತೆನಿಸುತ್ತದೆ. ಭಾರತದ ನೃತ್ಯಪರಂಪರೆ ಇಲ್ಲಿನ ಆತ್ಮಚರಿತ್ರೆ. ಆತ್ಮದ ಉನ್ನತಿಯೇ ಕಲೆಯ ಪರಮೋದ್ದೇಶ. ಅಂತಹ ಸಧಭಿರುಚಿಯ ಪ್ರಯತ್ನಗಳು ನಮ್ಮಿಂದ ಹರಿದುಬರಲಿ.
(ಅಸೀಮಾ ಮಾರ್ಚ್ ೨೦೦೯ ಪತ್ರಿಕೆಯಲ್ಲಿ ಪ್ರಕಟವಾದ ಮುಖಪುಟ ವಿಷಯ ಲೇಖನ )