Tuesday, February 9, 2010




ಮಹಾಪುಂಜ

‘ಅಪ್ಪಯ್ಯ, ಅದು ಏವ ನಕ್ಷತ್ರ?’ ಬಿಡುಗಣ್ಣಿಂದ ಆಕಾಶವನ್ನೇ ನೋಡ್ತಾ ಬೆರಳು ಬೊಟ್ಟು ಮಾಡಿ ತೋರ್ಸಿತ್ತು ಕೂಸು.
‘ಅದಾ..ವೃಶ್ಚಿಕ. ಕೂಸೇ!. ನೋಡು. ಅದು ಹೇಂಗಿದ್ದು ಹೇಳಿ. ಕೊಂಬಚ್ಚಿಹುಳದ ಹಾಂಗೆ ಕಾಣ್ತಿಲ್ಯಾ?’ ಅದರ ಅಪ್ಪ ಮಗಳ ಕುತೂಹಲ ತಣುಶುವ ಉತ್ತರ ಆಗಿತ್ತಿದ್ದ. ಜಾಲಿಲಿ ತಿಂಗಳ ಬೆಣ್ಚಿ. ಅದರ ಮಧ್ಯೆ ಪುಟ್ಟ ಮಗಳು ಪದ್ದಿಯ ಮೊಟ್ಟೆಲಿ ಕೂರಿಶಿಕೊಂಡು ಕೈಗೆ ಸಿಕ್ಕದ ಆಕಾಶದ ಕಡೆಂಗೆ ಹಾಂಗೇ ನೋಡ್ತಾ ಇತ್ತಿದ್ದ ಅಪ್ಪ. ಮಗಳಿಂಗೆ ಜೋಯ್ಶೆತ್ತಿಕೆ ಕಲಿಶುವ ಅಂದಾಜೋ ಎಂತದೋ !
‘ಅದಾ..ಅದು ಒಟ್ಟಿಂಗಿದ್ದಲ್ದಾ..ಅದೆಂತರ?’ ಮತ್ತೆ ಬೆರಳು ತೋರ್ಸಿ ಕೇಳಿತ್ತು ಕೂಸು.
‘ಅದರ ಹೆಸರು ಸಪ್ತರ್ಶಿ ಮಂಡಲ ಹೇಳಿ. ಅಲ್ಲಿ ಏಳು ಋಷಿಗೊ ಒಟ್ಟಿಂಗೆ ಇಪ್ಪದಡ. ಹಾಂಗಾಗಿ ಏಳು ನಕ್ಷತ್ರಂಗೊ.’
ಕಣ್ಣು ಕುಂಞ ಮಾಡಿ ಹುಡುಕಿತ್ತು ಕೂಸು. ‘ಆದರೆ ಆರೇ ಕಾಣ್ತನ್ನೆ ! ಏಳೆಲ್ಲಿ?’ ಕಂಡತ್ತಿಲ್ಲೆ ಅದಕ್ಕೆ.
‘ಓ..ಅದಾ ಮಗಳಿಂಗೆ ಕಂಡದೇ..ಉಷಾರು. ಸಾಮಾನ್ಯವಾಗಿ ನವಗೆ ಆರೇ ಕಾಂಬದು ಕೂಸೇ.. ಮಧ್ಯಲ್ಲಿ ಅರುಂಧತಿ ಹೇಳುವ ನಕ್ಷತ್ರ ಇರ್ತಡ. ನೋಡಿರೆ ಬಾಳ ಒಳ್ಳೇದು ಹೇಳಿ ಹೇಳ್ತವು…’ ಹೇಳುವಷ್ಟೂ ಪುರ್ಸೊತ್ತಿಲ್ಲೆ. ಪದ್ದಿಯ ಕಣ್ಣು ಮತ್ತೂ ಸ್ಪಷ್ಟಕ್ಕೆ ಹುಡುಕುಲೆ ಶುರು ಮಾಡಿತ್ತು.
‘ಉಮ್ಮ..ಉಹುಂ..ಕಾಣ್ತಿಲ್ಲೆ.. ಅಲ್ಲಾ..ಏಳೂದೇ ಕಂಡರೆ ಎಂತ ಒಳ್ಳೆದಾವ್ತು?’
‘ಒಳ್ಳೇದಾವ್ತು ಹೇಳಿರೆ ತುಂಬಾ ಪೈಸೆ ಸಿಕ್ಕುಗು. ಉಂಬಲೆ ತಿಂಬಲೆ ಕೊರೆ ಇರ್ತಿಲ್ಲೆ. ಲಾಯ್ಕಿಲಿ ಇಪ್ಪಲಕ್ಕು.’
‘ಹಾಂ..ಅಪ್ಪಾ ಅಪ್ಪ? ‘ಕೂತಲ್ಲಿಗೇ ಅದರ ಬಾಯಿ ಹಿಡಿಗಾತ್ರ ಆತು. ಕೂತಲ್ಲಿಂದಲೇ ಒಂದರಿ ಅಪ್ಪನ ಮೋರೆ ನೋಡಿತ್ತು ಕೂಸು. ಆಕಾಶ ನೋಡ್ತಾ ಇತ್ತಿದ್ದ ಅಪ್ಪನ ಮೋರೆಲಿ ಒಂದು ಬಗೆ ಶಾಂತಬಾವ. ಕಂಡೂ ಕಾಣದ ಕಿರುನೆಗೆ. ಹೊಳೆತ್ತಾ ಇಪ್ಪ ಕಣ್ಣುಗೊ ನಕ್ಷತ್ರಂಗಳನ್ನೇ ತನ್ನೊಳಗೆ ಇರಿಶಿಕೊಂಡ ಹಾಂಗೆ. ಮಗಳ ಮೋರೆ ನೋಡಿ ಕಣ್ಣು ಪಿಳಿಪಿಳಿ ಮಾಡಿದ.
ಕೂಸಿಂಗೆ ನೆಗೆ ಬಂತು.’ಅದದ…ಅಪ್ಪ..ಅದೆಂತದೋ ನಕ್ಷತ್ರ ಓಡ್ತಾ ಇದ್ದು..ನೋಡದ.’
ಮಗಳ ಬೊಬ್ಬೆಗೆ ಬಗ್ಗಿ ನೋಡಿರೆ ಅದು ನಕ್ಷತ್ರ ಆಗಿತ್ತಿದ್ದಿಲ್ಲೆ. ‘ಇದಾ.. ಅದು ನಕ್ಷತ್ರ ಅಲ್ಲ ಚುಬ್ಬೀ. ಏವುದೋ ಇಮಾನ ಹೋಪದೋ, ಉಲ್ಕೆ ಹೇಳುವ ಸಂಗತಿಯೋ ಆಗಿರೆಕ್ಕು. ನಕ್ಷತ್ರ ಹಾಂಗೆಲ್ಲಾ ಅತ್ಲಾಗಿಂದಿತ್ಲಾಗೆ, ಇತ್ಲಾಗಿದಿಂತ್ಲಾಗೆ ಹೋವ್ತಿಲ್ಲೆ. ಆದರೆ ಒಂದೊಂದು ಸಲ ನಕ್ಷತ್ರಂಗೊ ಉರುಳಿ ಕೆಳಂಗೆ ಭೂಮಿಗೆ ಬೀಳ್ತು. ಆದರೆ ಕಾಂಬದೇ ಅಪರೂಪ. ಸತ್ತವೆಲ್ಲವೂ ನಕ್ಷತ್ರ ಆವ್ತವಡ. ಬಿದ್ದ ನಕ್ಷತ್ರಂಗೊ ಮಕ್ಕಳಾಗಿ ಹುಟ್ಟುತ್ತವಡ, ಅಜ್ಜ ಹೇಳುಗು.’
‘ಹಾಂಗಾರೆ ಆನೂದೇ ಹಾಂಗೆ ಹುಟ್ಟಿದ್ದಾ?’
ಮಗಳ ಪ್ರಶ್ನೆಗೆ ಅಪ್ಪಂಗೆ ಎಂತ ಹೇಳೆಕ್ಕೋ ಅರಡಿದ್ದಿಲ್ಲೆ.
ಉತ್ತರಕ್ಕೂ ಕಾಯದ್ದ ಕೂಸಿನ ಕುತೂಹಲದ ಪ್ರಶ್ನೆಗೊ ಮುಂದುವರದುಕೊಂಡಿದ್ದತ್ತು.
’ ಅಪ್ಪಾ..ಅದ್ಯಾವುದೋ ?’
‘ಓ ಅದಾ…ಅದರ ಹೆಸರು ಮಹಾವ್ಯಾಧ ಹೇಳಿ. ಅದಾ…ಅಲ್ಲಿ ಹಾಂಗೆ ಕಾಣ್ತಾ…’... ಅಶ್ಟಪ್ಪಗ ಗೇಟಿನ ಚಿಲಕದ ಸದ್ದಾತು.
ಕತ್ತಲಿಂಗೆ ಯಾರು ಬಂದದೂ ಹೇಳಿ ಸ್ಪಶ್ಟ ಆತಿಲ್ಲೆ. ಜಾಲಿನ ಹತ್ತರದ ದೀಪದ ಬೆಣ್ಚಿಗೆ ಕಂಡಪ್ಪಗ ‘ ಓ..ಅದು ಚಟ್ನಳ್ಳಿ ಮಾವ’ ಬೊಬ್ಬೆ ಹೊಡೆದತ್ತು ಪದ್ದಿ. ಅಂವ ತಂದುಕೊಡುವ ಉಂಡೆ ಚಾಕ್ಲೇಟು, ಕಟ್ಲೀಸು ಪದ್ದಿಗೂ, ಅದರ ತಮ್ಮಂಗೂ ಬಾರೀಪ್ರೀತಿ. ಮಾಂವ, ಮಾಂವ ಹೇಳಿ ಬೊಬ್ಬೆ ಹೊಡದು ಅವನ ಹತ್ರ ಓಡಿ ನಿಂತತ್ತು ಪದ್ದಿ. ಪುಟ್ಟನೂ ಓಡಿಕೊಂಡು ಬಂದ. ಅಪ್ಪಂಗೆ ಏನೋ ಹೇಳೆಕ್ಕೂ ಹೇಳಿ ಜಾನಿಸಿ ಬಾಯಿ ತೆಗದವು ಅಲ್ಲಿಗೇ ಸುಮ್ಮಂಗಾಗಿ ಮೀಸೆ ಕೊಡಿಲಿ ನೆಗೆ ಮಾಡಿದವು.
‘ಮಾಂವ, ನಿನ್ನ ಕಂತುವ ಗೆಡ್ಡ ತೆಗೆಸುದು ಏವಗ’ ಕಟ್ಲೀಸು ತಿಂತಾ ಕೇಳಿತ್ತು ಪದ್ದಿ. ಮಾಂವನ ಗೆಡ್ಡ, ಹಲ್ಲು ಅದಕ್ಕೆ ಒಂದು ಬಗೆ ವಿಚಿತ್ರ ಕಾಂಬದು. ಅದರಪ್ಪಂಗಿಂತಲೂ ಸುಮಾರು ಇಪ್ಪತ್ತು ವರುಷ ಕಡಮ್ಮೆ ಇಕ್ಕು ಅವಂಗೆ. ಆದರೆ ಅವನ ಬಾಯಿಲಿ ಹಲ್ಲೇ ಇಲ್ಲೆ. ಎಣಿಶಿರೂ ಹತ್ತಿಕ್ಕೇನೋ.. ಆದರೂ ಚೂರು ಬಂಙ ಇಲ್ಲದ್ದ ಹಾಂಗೆ ಗೆಡ್ಡ ಬಿಟ್ಟಿದ ! ಆದರೆ ಆ ಗೆಡ್ಡಕ್ಕೂ, ಅಪ್ಪನ ಗೆಡ್ಡಕ್ಕೂ ವೆತ್ಯಾಸ ಎಂತ ಹೇಳಿರೆ ಅದು ಕುತ್ತುತ್ತು, ಇದು ಇಲ್ಲೆ, ಅದು ಕರಿ ಇದ್ದು, ಇದು ಬೆಳಿ-ಕರಿ ಮಿಶ್ರ. ಪರಬ್ಬ ಅಲ್ಲದ ‘ಪರಬ್ಬ ಮಾಂವ’; ಬಾಯಿಬಿಟ್ಟು ಹ್ಹ..ಹ್ಹಾ..ಹ್ಹಾ.. ಹೇಳಿ ನಿಮಿಶಕ್ಕೊಂದರಿ ನೆಗೆ ಮಾಡುವಾಗ ಬ್ರಹ್ಮಾಂಡ ಪ್ರದರ್ಶನ ಅಕ್ಕದಾ ! ಆ ಬೊಚ್ಚು ಬಾಯಗಲ ಮಾಡಿ ನಿಂತರ ಪದ್ದಿಗೆ ಒಳಂಗೆ ಎಂತ ಇಕ್ಕು ಹೇಳೀ ಬಾರೀ ಆಶ್ಚರ್ಯ ಅಪ್ಪದಿದ್ದ್ದು.
ವರ್ಶಲ್ಲಿ ಅಪ್ಪಂದ ಸಣ್ಣ ಆದರೂ ಅಪ್ಪ ದಿನಿಗೇಳುದು ‘ಬಾವಾ’ ಹೇಳಿಯೇ ! ದೂರಲ್ಲೇಲ್ಲೋ ಬಾದರಾಯಣ ನೆಂಟಸ್ತಿಕೆ ಇಪ್ಪ, ಬಾಯಗಲ ಮಾಡಿ ನೆಗೆ ಮಾಡುವ ಚಟ್ನಳ್ಳಿ ಮಾಂವ ಮನೆಗೆ ನಿತ್ಯವೂ ‘ಚಾ’ ಗಿರಾಕಿ. ಅದೂ ಮನೆಂದ ಇಪ್ಪತ್ತು ಮೈಲಿ ದೂರದ ಅವನ ಮನೆಂದ ಪೇಟೆಗೆ ಬಪ್ಪ ಲೆಕ್ಕಲ್ಲಿ ನಿತ್ಯ ಬಂದು ಹೋಕು. ನಾಲ್ಕು-ನಾಲ್ಕುವರೆಗೆ ಪ್ರತ್ಯಕ್ಷ ಅಕ್ಕು. ಆದರೆ ಇಂದು ರಾತ್ರಿಲಿ ! ‘ಎನಗೊಂದು ಕಟ್ಲೀಸು ಸಿಕ್ಕಿತ್ತನ್ನೆ’- ಪದ್ದಿಗೆ ಪೆರ್ಚಿ ಕಟ್ಟುಲೆ ಸಾಕು.
‘ಇದೆಂತ ಮಾರಾಯಾ. ಇಷ್ಟೊತ್ತಿಲಿ ನಿನ್ನ ಸವಾರಿ ಇತ್ಲಾಗಂಗೆ’ ಅಪ್ಪ ಹೇಳುದಕ್ಕೂ, ಅಮ್ಮ ಒಳಂಗಿಂದ ‘ ಬಂತು.. ಇಂದು ಬತ್ತಿಲ್ಲೆ ಹೇಳಿ ನೆನ್ನೆ ಹೇಳಿದ್ದಷ್ಟೇ.. ಪುನಾ ಒಕ್ಕರ್ಸಿತ್ತು. ಶ್..ಶ್..’ ಹೇಳಿ ಎಲಿ ಓಡಿಸಿಕೊಂಡು ಪರಂಚುದಕ್ಕೂ ಸರೀ ಹೋತು.
‘ ಅದೆಂತ ಇಲ್ಲೆ ಮಾರಾಯ. ಎಲಿಗೊ ಜೋರಿದ್ದವಿದ. ಹಾಂಗೆ ಅಷ್ಟೇ ! ನೀನೆಂತ ಗ್ರೇಶಿಕ್ಕೆಡ.’ ಹೇಳಿ ಅಪ್ಪ ಸಮಾದಾನ ಮಾಡಿದವು.
ಮಾಂವಂಗೆ ಮೋರೆಲಿ ಚೋಲಿ ಇಪ್ಪದು-ಹೋಪದು ಹೇಳಿ ಎಲ್ಲಾ ಇಲ್ಲೆ ಇದಾ ಹೇಳಿರೆ ಪದ್ದಿಗೆ ಎಂತದೂ ಅರ್ತ ಆಗ. ‘ಇರಲಿ. ಅದೆಲ್ಲಾ ಎಂತರ ಹೇಳಿ ಬೇಜಾರು ಮಾಡ್ದುಲಿದ್ದು? ಅಕ್ಕ ಎನಗೆ ಬಯ್ದರೂ ಆನು ಬಪ್ಪದು ನಿಲ್ಸುದಿದ್ದಾ? ಇಲ್ಲೆನ್ನೆ ! ಅಂದ ಹಾಂಗೆ ಇವರ ಗೊಂತಿದ್ದಾ? ಹೊಳೆಕರೆ ಶಾಸ್ತ್ರಿಗೊ ಹೇಳಿ..’ ಪರಿಚಯ ಮಾಡಿದ ಮಾಂವ.. ಅಷ್ಟಪ್ಪಗಲೇ ಪದ್ದಿಗೆ ಗೊಂತಾದ್ದು..ಬೇರೊಂದು ಜನವೂ ಇದ್ದು ಹೇಳಿ.
‘ಎಂತದೂ ಇಲ್ಲೆ ಬಾವಾ. ನಿನ್ನೆ ಹೇಳಿದೆನ್ನೆ. ಜಾಗೆ ತೆಕ್ಕೊಂಬ ವಿಚಾರ. ಅದೂ ಆನು-ನೀನು ಒಟ್ಟಿಂಗೇ ಹೇಳಿ. ಇವರದ್ದೇ ಜಾಗೆ ಅದು. ರೆಕಾರ್ಡುಗೊ ಎಲ್ಲಾ ಸರೀ ಇದ್ದಡ. ಮತ್ತೆ ದಿನ ಹೋದರೆ ಇವು ತುಂಬಾ ಬಿಜಿ ಆವ್ತವು. ಸಿಕ್ಕುದು ಕಷ್ಟ ಹೇಳಿ ಸಿಕ್ಕಿಯಪ್ಪಾಗಲೇ ಕರಕ್ಕೊಂಡು ಬಂದೆ.’ ಮಾಂವ ಹೇಳಿದ್ದು ಪದ್ದಿಗೆ ಎಷ್ಟು ಅರ್ತ ಆತೋ, ಬಿಟ್ಟತ್ತೋ ಒಟ್ಟಿಲಿ ಅದರ ನಕ್ಷತ್ರ ನೋಡುವ ಕಾರ್ಯಕ್ರಮಕ್ಕೆ ತಡೆ ಬಿದ್ದತ್ತನ್ನೇ ಹೇಳಿ ಕಂಡತ್ತು.’ ಅಪ್ಪಾ.. ನಕ್ಷತ್ರದ ಕತೆಏಏಏಏಏ..’ರಾಗ ಎಳತ್ತು ಕೂಸು.
‘ಇರು ಮಗಳೇ..ಒಂಚೂರು ಹೊತ್ತು. ಇವರೊಟ್ಟಿಂಗೆ ಮಾತಾಡಿಕ್ಕಿ ಬತ್ತೆ.’ ಹೇಳಿದವನೇ ಅಪ್ಪ; ‘ ಇಲ್ಲಿ ಬೇಡ, ಚಳಿ ಇದ್ದು. ಒಳಂಗೆ ಕೂದು ಮಾತಾಡುವ. ಆಗದಾ’ ಹೇಳಿ ಒಳ ನಡದವು ; ಒಟ್ಟಿಂಗೆ ‘ಬೆಶಿಬೆಶಿ ಎಂತಾರು ಕುಡಿವಲೆ ಮಾಡು’ ಹೇಳಿ ಅಮ್ಮಂಗೆ ಅಪ್ಪಣೆ ಕೊಡಿಶಿಯೂ ಆತು.
ಪದ್ದಿ ಒಳಂಗೆ ಬಗ್ಗಿ ನೊಡಿತ್ತು. ರೆಕಾರ್ಡ್, ನಾಳಿದ್ದು ಮಾಡುವ, ಐವತ್ತು ಸಾವಿರ ಫಸ್ಟಿಂಗೆ, ಶುಭಸ್ಯ ಶೀಘ್ರಂ’ ಹೇಳಿ ಮಾಅತಾಡಿಕೊಂಡದ್ದೆಲ್ಲಾ ಕೆಮಿಗೆ ಬಿತ್ತು. ಆದರೆ ಅರ್ತ ಆಯೆಕ್ಕೇ? ಇದಕಿಂತ ಪುಟ್ಟನೊಟ್ಟಿಂಗೆ ಅವಲಕ್ಕಿದವಲಕ್ಕಿ ಆಡುದೇ ಪಶ್ಟ್ಳಾಸು ಹೇಳಿ ಗ್ರೇಶಿಕೊಂಡು ಆಟ ಆಡುಲೆ ಶುರು !
ಪದ್ದಿಗೋ ಅಪ್ಪಂಗೆ ಹೇಳಿ ಕಾದೂ ಕಾದೂ ಸಾಕುಸಾಕಾತು. ಈಗ ಬತ್ತೆ ಹೇಳಿದ ಅಪ್ಪ ಗಂಟೆ ಆದರೂ ಬಾರದ್ದೇ ಒಳಂಗೇ ಮಾತಾಡಿಕೊಂಡು ಕೂದ್ದಕ್ಕೆ ಬೇಜಾರು. ಪುನಾ ರಾಗ ಎಳತ್ತಾದರೂ ಅಪ್ಪ ಫುಲ್ ಬಿಜಿ. ಇನ್ನು ಕಾವದು ಎಂತಗೆ ಹೇಳಿ ಕಂಡತ್ತೋ ಮಿನಿಯಾ, ಅಟ್ಟುಂಬಳಕ್ಕೆ ಓಡಿ ಅಮ್ಮನ ಸೆರಗು ಹಿಡುದು ನಿಂತು ಪರಪರ ಮಾಡುಲೆ ಶುರು ಮಾಡಿತ್ತು. ಆದರೆ ಅಮ್ಮಂದೇ ‘ಎಂತ ಕೂಸೆ. ಬಿಡು ನೊಡಾ. ಎನಗೆ ಕೆಲಸ ಇದ್ದು, ಎನಗೆ ಎಡಿತ್ತಿಲ್ಲೆ’ ಹೇಳಿ ಜೋರು ಮಾಡಿಯಪ್ಪಗ ಮೋರೆ ಚಪ್ಪೆ ಆತು ಕೂಸಿಂಗೆ.
********
ಇತ್ಲಾಗಿ ಹತ್ತು-ಹದಿನೈದು ದಿನಂದ ಪದ್ದಿಯ ಆಕಾಶ-ನಕ್ಷತ್ರ ನೋಡುವ ಕಾರ್ಯಕ್ರಮಕ್ಕೆ ಮುಹೂರ್ತವೇ ಇಲ್ಲದ್ದ ಹಾಂಗಾಗಿತ್ತು. ಪದ್ದಿಗೂ, ಅದರ ತಮ್ಮಂಗೂ ಬಾರೀ ಬೇಜಾರು. ‘ ಅಪ್ಪ ಅದೂ ಇದೂ ಹೇಳಿ ಮಾಡಿಕ್ಕೊಂಡೇ ಇಪ್ಪದು. ಎಂಗಳ ಒಟ್ಟಿಂಗೆ ಆಟ ಆಡುಲೆ ಬತ್ತವಿಲ್ಲೆ.’ ಅದರ ಗುರುತರ ಆರೋಪ. ಒಂದರಿ ಕೇಳಿಯೂ ಆಗಿತ್ತು. ಅದಕ್ಕೆ ಒತ್ತಡಂಗಳ ಮಕ್ಕಳ ಮೇಲೆ ತೋರುಸುಲೆ ಎಡಿಯದ್ದೆ ಅಮ್ಮನ ಮೇಲೆ ಬೊಬ್ಬೆ ಹೊಡೆದಿತ್ತಿದ್ದ.
‘ಎಂತ ನಿನಗೆ, ಇವರ ನೋಡಿಕೊಂಬಲೆ ಎಡಿತ್ತಿಲ್ಯಾ? ಎನ್ನ ವಯಿವಾಟಿಲಿ ಆನಿದ್ದೆ. ಆ ಬಾಂವ ಪೈಸೆ ಕೊಡೆಕ್ಕು ಹೇಳಿ ಪ್ರಾಣ ತಿಂತ. ‘ಐವತ್ತು’ ಈಗಾಗಳೇ ಕೊಟ್ಟಾಯ್ದು. ಇನ್ನು ಆನೆಲ್ಲಿಂದ ತಪ್ಪದು? ರೆಕಾರ್ಡು ಎಲ್ಲಾ ಮೋಸಡ. ಆ ಜಾಗೆ ಸರಿಯಿಲ್ಲೆಡ. ಕುಂಞ ಬ್ಯಾರಿಯೂ ‘ನಿಮ್ಗೆ ಯಾಕೆ ಭಟ್ರೇ ಆ ಜಾಗ’ ಹೇಳೀ ಕೇಳಿತ್ತು. ಆ ಶಾಸ್ತ್ರಿಯ ತಮ್ಮಂದು ತಕರಾರು ಇದ್ದಡ ಆ ಜಾಗೆ ಮಾರುಲೆ. ಅವನೂ ಎನಗೆ ಪಾಲಿದ್ದು ಹೇಳಿ ಗಲಾಟೆ ಮಾಡ್ತಾ ಇದ್ದಡ. ಅದಕ್ಕೆ ಅಂವ ಮೆಲ್ಲಂಗೆ ಜಾಗೆಯ ದಾಟುಸುಲೆ ನೋಡುದಡ.’ ಎಂತೆಂತದೋ ದಡಬಡ ಹೇಳಿ ಹೇಳಿಕ್ಕಿ ಉಗ್ರಾವತಾರ ತೋರ್ಸಿದ. ಪದ್ದಿಗೆ ಇದರೆಲ್ಲಾ ನೋಡಿ, ಪುಟ್ಟನೊಟ್ಟಿಂಗೆ ಬಾಗಿಲ ಸಂದಿಗೆ ನಿಂತು ಪಿಳಿಪಿಳಿ ಕಣ್ಣು ಬಿಟ್ಟತ್ತು.
ಅದಕ್ಕೆ ಒಂದು ಆಶ್ಚರ್ಯ ಏವಾಗ್ಲೂ ಬಪ್ಪ ಮಾಂವ ಎಂತಗೆ ಈಗೀಗ ಬತ್ತನೇ ಇಲ್ಲೆ? ಎಂತ ಕತೆ? ಕಟ್ಲೀಸು, ಚಾಕ್ಲೇಟು ಎಲ್ಲದಕ್ಕೂ ಕಷ್ಟ ಆತನ್ನೆ ! ಜೋಲು ಮೋರೆ ಹಾಕಿಯೊಂಡು ಗಿಳಿಬಾಗಿಲ ಹತ್ತರ ಬಂದು ಕೂತತ್ತ್ತು.
**********
‘ಇದೆಂತ. ಅಪ್ಪನ ಚರಿಪಿರಿ.. ಶಾಲೆಗೆ ಹೋಪಲಿದ್ದೋ ಹೇಂಗೆ? ಬಾಯಿಪಾಟ ಮಾಡುದೆಂತಗೆ’ ಪದ್ದಿಯ ಪ್ರಶ್ನೆ ಪುನಾ ! ಶಾಲೆಯ ‘ಮನೆಗೆಲಸ’ ಮಾಡುವಲ್ಲಿಂದಲೇ ಎದ್ದು ಬಾಗಿಲ ಕಂಡಿಲಿ ಬಂದು ನೋಡಿತ್ತು.
ಒಳಂಗೆ ಇತ್ತಿದ್ದ ಅಪ್ಪ ಬಾಯಿಪಾಟ ಮಾಡ್ಲೆ ಶುರು ಮಾಡಿತ್ತಿದ್ದ. ‘ ಶಾಸ್ತ್ರಿ ಬಂದ ದಿನಾಂಕ ಇಪ್ಪತ್ತು ಒಂದು ಎರಡು ಸಾವಿರದ ನಾಲ್ಕು. ಜಾಗೆಯ ಅಳತೆ ಒಂದೂವರೆ ಎಕರೆ, ಕೋರ್ಟಿಂಗೆ ಹೋದದ್ದು ಐದು ನಾಲ್ಕು ಎರಡು ಸಾವಿರದ ಐದು. ಚಟ್ನಳ್ಳಿ ರಾಮಭಟ್ಟರಿಗೆ ಸಾಲ ಕೊಡಲಿರುವುದು…’ ಪದ್ದಿಗೆ ಒಂದೂ ಅರ್ತ ಆಯಿದಿಲ್ಲೆ. ಈ ಅಪ್ಪಂಗೆ ಲೆಕ್ಕ ಮಾಡುಲೂ ಬತ್ತಿಲ್ಯಾ? ಇದೆಂತ ಮಗ್ಗಿ ಬಾಯಿಪಾಟ ಮಾಡುದು, ಆನು ಇದರಿಂದ ಲಾಯ್ಕಲ್ಲಿ ಹೇಳ್ತೆ, ಬೇಕರೆ ಕೇಳಲಿ ಹೇಳಿ ಅಪ್ಪಂದಲೂ ಜೋರಿಂಗೆ ಸ್ವರ ತೆಗದು ಹೇಳುಲೆ ಶುರು ಮಾಡಿತ್ತು. ಅಶ್ಟಪ್ಪಗ ಹಿಂದೆಂದ ಬಂದ ಅಮ್ಮ ಪದ್ದಿಯ ಮೋರೆ ನೋಡಿ ‘ ಅದೆಂತ ಬೊಬ್ಬೆ ಹೊಡವದು ನೀನು. ಅಪ್ಪಂಗೆ ಮರತ್ತು ಹೋಪದು ಜಾಸ್ತಿ ಅಲ್ಲದಾ? ನಿನಗೆ ಹೇಳಿ ಕೊಡುದಾದರೆ ಅವಕ್ಕೆ ಬಾಯಿಪಾಟ ಮಾಡುದು ಬೇಡದಾ? ಹೋಗಿ ಓದು..’ಹೇಳಿತ್ತು.
‘ಇದಾ. ನಾಳೆ ವಕೀಲ ಬಪ್ಪಲೆ ಹೇಳಿದ್ದ. ಬಾಂವ ಹೇಳಿದ ಹೇಳಿ ಇಂವ ಎರಡನೇ ವಕೀಲ. ತಿಂಗಳು ಆರು ಕಳುತ್ತು. ಇನ್ನೂ ವ್ಯಾಜ್ಯ ಮುಗುದ್ದಿಲ್ಲೆ. ದೇವರು ಏವಗ ನಡೆಶಿಕೊಡ್ತನೋ’ -ಅಪ್ಪನ ಮಾತಿಂಗೆ ಅಮ್ಮನ ಕಣ್ಣ್ಲಿ ತುಂಬಿದ ನೀರು ಇನ್ನೂ ಕೆಳಂಗಿಳುತ್ತು.
‘ಆನು ಅಂದೇ ಹೇಳಿದ್ದಲ್ದಾ? ಅವಂಗೆ ಎಂತಾಯೆಕ್ಕು? ಬೇಕಾಷ್ಟು ಕೂದು ತಿಂಬಲೆ ಇದ್ದು. ಒಂದರಲ್ಲಿ ಹೋದ ಪೈಸೆಯ ಇನ್ನೊಂದರಲ್ಲಿ ತುಂಬುತ್ತ. ಆದರೆ ನಾವು?’ ಅರ್ಧಕ್ಕೆ ನಿಲ್ಲಿಸಿದ ಅಮ್ಮಂಗೆ ಗಂಟಲುಬ್ಬಿ ಬಂತು. ’ನಿಂಗೊ ನಾಕು ಮನೆ ಪೌರೋಹಿತ್ಯ ಮಾಡಿ ಅವನ ಬಾಯಿಗೆ ಹಾಕಿದ ಹಾಂಗಾತು. ನಾವು ಹತ್ತಿಪ್ಪತ್ತು ವರ್ಶಲ್ಲಿ ಇಪ್ಪಾಂಗೆ ಇದ್ದು. ಅದೇ ಅಂವ ಮೊನ್ನೆ ಮೊನ್ನೆ ನಮ್ಮ ಆಶ್ರಯ ಕೇಳಿಕೊಂಡು ಬಂದು ಇಂದು ನಮ್ಮನ್ನೇ ಮಾರಿ ತಿಂಬ ಹಾಂಗಾತು. ಅವಂಗೆ ಇದ್ದನ್ನೇ..’ –ಅಮ್ಮನ ಬಾಯಲ್ಲ್ಲಿ ಶಾಪವೂ ಸರೀ ಬಾರ. ನಿಟ್ಟುಸಿರ ಹ್ಯಾಪು ನೆಗೆ ಬಂತಷ್ಟೇ..
ಪದ್ದಿಗೆ ಈಗಲೂ ಅರ್ತ ಆಯಿದಿಲ್ಲೆ. ಎಂತ ಮಾತಾಡಿಕೊಳ್ತವೋ..? ಅದೂ ಎನಗೆ ಅರ್ತ ಆಗದ್ದು. ಪಾಟವೋ, ಪದ್ಯವೋ, ಮಗ್ಗಿಯೋ, ನಕ್ಷತ್ರವೋ ಅರ್ತ ಅಕ್ಕು. ಈ ಅಪ್ಪಂಗೆ ಎನ್ನ ಒಟ್ಟಿಂಗೆ ಕೂದು ನಕ್ಷತ್ರ ಎಣುಶುಲೆ ಎಂತ? ಅದ್ಯಾವುದೋ ಲೆಕ್ಕ ಮಾಡಿಕೊಂಡೇ ಕೂರ್ತ, ಕೂದಲ್ಲಿಂದ ಅಲ್ಲಾಡುಲೇ ಇಲ್ಲೆ. ದಿನಿಗೇಳಿ, ದಿನಿಗೇಳಿ ಸಾಕು ಸಾಕಾವ್ತು. ಛೆ..ಹೇಳಿ ಕಂಡತ್ತು ಕೂಸಿಂಗೆ.
*****

ಈಗ ಪದ್ದಿಗೆ ಅಪ್ಪ ಬಾರದ್ದರೂ ಬೇಜಾರಾವ್ತಿಲ್ಲೆ. ಅಬ್ಯಾಸ ಆಗಿ ಹೋಯ್ದು.ಇಂದು ಸ್ಪರ್ದೆಗೆ ನಿಂದ ಹಾಂಗೆ ತಮ್ಮನೊಟ್ಟಿಂಗೆ ಜಾಲಿಲಿ ಕೂದು ನಕ್ಷತ್ರ ಲೆಕ್ಕ ಹಾಕುದರಲ್ಲೇ ಮಗ್ನ ಆಗಿದ್ದತ್ತು. ಅಷ್ಟಪ್ಪಗ ಗೇಟಿನ ಚಿಲಕದ ಸೌಂಡಾತು. ನೋಡಿರೆ ಅಪ್ಪ. ಏವಾಗ್ಲೂ ಮೂರ್ಸಂದ್ಯಪ್ಪಾಗ ಬಪ್ಪ ಅಪ್ಪ ಇಂದು ಕಸ್ತಲೆ ಆದ ಮೇಲೆ ಬಂಯಿದವು. ಪದ್ದಿಗೆ ಎಂತದೂ ವಿಶೇಷ ಹೇಳೀ ಕಂಡತ್ತಿಲ್ಲೆ. ಓಡಿ ಹತ್ತರಕ್ಕೆ ಬಂತು. ‘ ಅಪ್ಪಾ, ನಿಂಗೊ ಹೇಳದ್ರೆ ಬೇಡ. ಆನೇ ಹೇಳ್ತೆ. ಅದಾ. ಅಲ್ಲಿ ಕಾಂಬದು ಮಹಾವ್ಯಾಧ. ಅದು ತಲೆ. ಇದು ಕಾಲು. ಪಕ್ಕಲ್ಲಿ ಇನ್ನೊಂದು ನಕ್ಷತ್ರದ ಹಾಂಗೆ ಇದ್ದನ್ನೆ ; ಅದು ಕತ್ತಿ. ತಲೆಯ ಹೆಸರು ಬಿಟಲ್ಗೀಸ್ ಹೇಳಿಯಡ. ಅದಾ.. ಅಲ್ಲಿ.. ಕೆಂಪು ಹೊಳೆತ್ತಾ ಇದ್ದಲ್ದಾ ಅದು. ಕೆಳಂಗೆ ಕಾಂಬ ಕಾಲಿನ ನಕ್ಷತ್ರದ ಹೆಸರು ರೀಗಲ್ ಹೇಳಿ ! ನೀಲಿ ಇದ್ದಿದಾ… ಗೊಂತಾತಾ? ಎಷ್ಟು ಚೆಂದ ಕಾಣ್ತಲ್ಲದಾ? ಮನುಷ್ಯಂಗೆ ಗೊಂತಾದ ಮೊದಲ ನಕ್ಷತ್ರಂಗಳ ಗುಂಪಿನದ್ದಡ. ನಮ್ಮ ಭೂಮಿಂದ ಬರೀ ಕಣ್ಣಿಲಿ ಕಾಂಬಲಕ್ಕಾದ ಗುಂಪಡ. ಭೂಮಿಂಗೆ ಹತ್ತರ ಇಪ್ಪ ಅದರಲ್ಲಿ ಹೆಚ್ಚು ನಕ್ಷತ್ರಂಗೊ ಹುಟ್ಟುತ್ತವಡ. ನಿಂಗೊ ಹೇಳದ್ರೆ ಎನಗೆಂತ ಟೀಚರ್ ಹೇಳ್ತವಿಲ್ಯಾ? ಆನು ಕಲ್ತೆ. ಪಾಟಲ್ಲಿದ್ದು’.
ಅಪ್ಪ ಮಗಳ ಮೋರೆ ನೊಡಿದ. ಅದಕ್ಕೆ ಉತ್ತರ ದಕ್ಸಿಕೊಂಡ ಕುಶಿ ಇತ್ತು. ಮೆಲ್ಲಂಗೆ ಜಾಲಿಂಗೆ ಬಂದು ತೊಳಶಿಕಟ್ಟೆ ಬುಡದ ಮೆಟ್ಟಿಲ ಹತ್ತರ ಬಂದು ಆಕಾಶವ ಒಂದರಿ ನೋಡಿದ. ಬೀದಿ ದೀಪದ ಬೆಣ್ಚಿ ಜಾಲಿಂಗೆ ಬಪ್ಪಲೆ ವ್ಯರ್ತ ಪ್ರಯತ್ನ ಮಾಡಿಕೊಂಡಿತ್ತು.
ಮನೆಯ ಮೆಟ್ಟಿಲಿಂಗೆ ಕಾಲ್ ಮಡುಗಿದ್ದೇ ನಕ್ಷತ್ರದ ಹತ್ರ ಕಣ್ ಹಾಯ್ಸಿದ. ಪದ್ದಿಗೆ ಅಪ್ಪನ ಮೋರೆಲಿ ಎಂತ ಇದ್ದು ಹೇಳಿಯೇ ಅರ್ತ ಆತಿಲ್ಲೆ. ; ಸಣ್ಣ ನೆಗೆ, ಕಣ್ಣಿಲಿ ಕಂಡ ಹೊಳಪು ಬಿಟ್ಟರೆ !
ಮೇಲೆ ನೋಡಿಕೊಂಡಿದ್ದ ಪದ್ದಿಗೆ ಅಪ್ಪ ಒಳ ಹೋದ್ದು ಗೊಂತಾತಿಲ್ಲೆ ಕಾಣೆಕ್ಕು. ಇನ್ನೂ ಹೇಳುಲೆ ಇತ್ತೂ ಹೇಳಿ ಕಾಣೆಕ್ಕು ! ಪಕ್ಕಲ್ಲೇ ಇದ್ದ ಪುಟ್ಟ ನಕ್ಷತ್ರ ಎಣ್ಸುವ ಕೆಲಸಲ್ಲಿ ಬಿಜಿಯಾಗಿತ್ತಿದ್ದ. ಕೈಯ್ಯ ಬೆರಳು ಸಾಕಾಗದ್ದೆ ಕಾಲನ್ನೂ ಮುಂದೆ ಮಾಡಿ ಮಡುಗಿ ಬೆರಳುಗಳ ಅಗಲ ಮಾಡಿ ಬೆರಳಿಂಗೆ ಎರಡರ ಹಾಂಗೆ ಲೆಕ್ಕ ಹಾಕಿಯೊಂಡಿತ್ತಿದ್ದ. ಅವನ ವಿಚಿತ್ರ ಬಂಗಿಗೆ, ಜೊತೇಲಿ ಅವನ ಬಾಯಿಯ ಲೆಕ್ಕ ಒಟ್ಟಿಗೆ ಸೇರಿಕೊಂಡು ಅವನ ತಲೆಯೂ ಮೇಲಿಂದ ಕೆಳಂಗೆ, ಕೆಳಂದ ಮೇಲಕ್ಕೆ ಏರಿಳುಕೊಂಡಿತ್ತು. ಒಂದರಿ ನಕ್ಷತ್ರ, ಮತ್ತೊಂದರಿ ಲೆಕ್ಕ.
ಪದ್ದಿಗೆ ನೆಗೆ ಬಂತು. ‘ಅಪ್ಪಾ.. ಇದಾ. ಇವನ ಲೆಕ್ಕ ನೋಡಿ.‘ ಹೇಳಿಕೊಂಡೇ ಹೊಸ್ತಿಲಿಂಗೆ ಹೆಜ್ಜೆ ಮಡುಗಿ ಒಳಂಗೋಡಿತ್ತು..

No comments: