Saturday, October 10, 2009

ಮಾಧ್ಯಮಗಳು ಮಾರಾಟಕ್ಕಿವೆ !
ರಿಯಾಲಿಟಿ ಶೋವಿನ Cruel Reality !


ರಾಮಾ-ಕೃಷ್ಣಾ ಅಂತ ಟಿವಿ ಮುಂದೆ ಕೈಮುಗಿದು ಕುಳಿತಿದ್ದ ಜಮಾನಾ ಚಾವಡಿಯಿಂದೆದ್ದು ಹೋಗಿ ವರ್ಷಾನುಗಟ್ಟಲೆ ಮನೆಯ ಹೆಂಗಸರು ದೇಶದ ತುಂಬೆಲ್ಲಾ ಅತ್ತೆ, ಸೊಸೆಯ ಸರಿ- ತಪ್ಪುಗಳನ್ನ ಮಾತಾಡಿಕೊಳ್ಳುತ್ತಾ, ಮೂಗೊರೆಸಿ ಅತ್ತುಕೊಂಡು ಕುಳಿತಿರುವಾಗಲೆ ಅದೆಲ್ಲೋ ಮೂಲೆಯಲ್ಲಿ ಮುಸಿಮುಸಿ ಅಳುತ್ತಿದ್ದ ಅಮಿತಾಬ್ ಬಚ್ಚನ್ ' ಲಾಕ್ ಕರ್ ದಿಯಾ ಜಾಯ್' ಅಂದಿದ್ದೇ ತಡ ಎಲ್ಲರೂ 'ಲಾಕ್' ಆಗಿದ್ದಂತೂ ಹೌದು ! ಹಾಗೆ ನೋಡಿದರೆ, 'ಕ್ಯೋಂ ಕಿ ಸಾಸ್ ಬಿ ಕಭೀ ಬಹೂ ಥೀ' ಅಂತ ಏಕ್ತಾ ಕಪೂರ್‌ನಂತವರು ಗಂಟೆಗೊಂದಾವರ್ತಿ ಕುಯ್ಯುವಾಗ ; ವನವಾಸ ೧೪ ವರ್ಷ, ಆದರೆ 'ರೀಲ್' ಬಿಡುವ ಸೀರಿಯಲ್‌ಗೆ ಅದರ ದುಪ್ಪಟ್ಟು ವರುಷ (ಹಾವಿನ ದ್ವೇಷ, ಹನ್ನೆರಡು ವರುಷ- ಎಲ್ಲಾ ಔಟ್‌ಡೇಟೆಡ್) ಅಂತೆಲ್ಲಾ ಮಾತಾಡಿಕೊಂಡಿರುವಾಗಲೇ ವಿ ಟಿವಿಯಲ್ಲಿ ಮೇಕಿಂಗ್ ಆಫ್ ದಿ ಬ್ಯಾಂಡ್ ಎಂಬ ರಿಯಾಲಿಟಿ ಷೋ ಮೆಲ್ಲನೆ ಪಡಸಾಲೆಗೆ ಬಂದು ಕುಳಿತಾಗಿತ್ತು. ಯಾವಾಗ ಟಿ ಆರ್ ಪಿ ಏರಿಸುವ ಸೂತ್ರಗಳ ಪೈಕಿ ಇದಕ್ಕೇ ಫಸ್ಟ್ ಪ್ರೈಜ್ ಅಂತ ಗೊತ್ತಾಯಿತೋ, ಪರಮಾತ್ಮ ಎಲ್ಲೆಲ್ಲೂ ಇದ್ದಾನೆ ಎನ್ನುವ ದಾಸ-ಸೂಫಿಗಳ ಮಾತಿನಂತೆ ಚಾನಲ್ ಚಾನಲ್ ಗೂ ರಿಯಾಲಿಟಿ ಶೋ ಸಂಸ್ಥೆಗಳು ಹುಟ್ಟಿಕೊಂದವು! ಬೇರೆ ದೇಶದವರ ಕಾಪಿ ಹೊಡೆದೂ ತೆಗೊಳ್ಳೋದು ಹೇಗೆ ಅನ್ನೋದಕ್ಕೂ ರಿಯಾಲಿಟಿ ಶೋ ಕಾನ್ಸೆಪ್ಟ್ ಮಾದರಿ ಆಯಿತು !
ಮೊದಲೆಲ್ಲಾ ರಿಯಾಲಿಟಿ ಷೋಗಳು ಪ್ರಾಮುಖ್ಯತೆ ಗಳಿಸಿಕೊಂಡಿದ್ದೇ ಸಮಾಜದ ವಾಸ್ತವಗಳನ್ನು ಕಿರುತೆರೆಯ ಮೇಲೆ ನಾಟಕೀಯವಾಗಿ ಅಥವಾ ಅಕರ್ಷಕವಾಗಿ ಪ್ರಸ್ತುತಪಡಿಸುವ ಮೂಲಕ ಜನತೆಗೆ ಸಂದೇಶವನ್ನು ತಲುಪಿಸುವುದಕ್ಕೆ ! ಅದರ ಪಾರದರ್ಶಕ ನಿಲುವಿನಿಂದಲೇ ಅದು ವ್ಯಾಪಕವಾದದ್ದು. ಹಾಗಾಗಿ ಕಥೆ ಆಧರಿತ ರಿಯಾಲಿಟಿ ಷೋಗಳ ಸಂಖ್ಯೆ ಜಾಸ್ತಿಯಿತ್ತು. ಅದೇ ಮಾದರಿಗೆ ಒಳಪಟ್ಟ ಗಾಯನ ನೃತ್ಯ ಕಾರ್ಯಕ್ರಮಗಳು ಸುಪ್ತ ಪ್ರತಿಭೆಗಳನ್ನು ಹೊರಸೂಸುವಲ್ಲಿ ಒಂದು ಪ್ರಯತ್ನ ಎಂದೂ ಭಾವಿಸಲಾಯಿತು. ಆದರೆ ಬರಬರುತ್ತಾ ರಾಯರ ಕುದುರೆ ಕತ್ತೆ ಎಂದು ಗೊತ್ತಾದದ್ದು ತೀರಾ ಇತ್ತೀಚೆಗೆ !


ರೆಹಮಾನ್ ಬರಲಿದ್ದಾರೆ ರಿಯಾಲಿಟಿ ಶೋನಲ್ಲಿ !
ದೇಶದ ಸಂಗೀತ ಪ್ರತಿಭೆಗಳನ್ನು ಹೆಕ್ಕಿ ತೆಗೆಯಲು ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಕಂಕಣ ತೊಟ್ಟಿರುವಂತೆ ಕಾಣುತ್ತದೆ ! ಡಿಸೆಂಬರ್ ಮೊದಲ ವಾರದಿಂದ ಎ.ಆರ್.ರೆಹಮಾನ್ ರ ರಿಯಾಲಿಟಿ ಷೋ ಪ್ರಸಾರವಾಗಲಿದೆ. ಅದೂ ದೂರದರ್ಶನದಲ್ಲಿ ! ಖಾಸಗಿ ದೂರದರ್ಶನ ಚಾನೆಲ್ ರಿಯಾಲಿಟಿ ಷೋಗಳ ಭರಟೆಯಲ್ಲಿ ಸರಕಾರಿ ದೂರದರ್ಶನದಲ್ಲಿ ಪ್ರಸಾರ ಮಾಡಲಿರುವ ರೆಹಮಾನ್ ರಿಯಾಲಿಟಿ ಷೋ ಪ್ರೇಕ್ಷಕರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸಿರುವುದಂತೂ ಸುಳ್ಳಲ್ಲ..

ದೂರದರ್ಶನದಲ್ಲಿ ಎ.ಆರ್.ರೆಹಮಾನ್ ನಿರ್ವಹಿಸುವ 'The Big Band' ಷೋಗಾಗಿ ಈಗಾಗಲೇ ಏಳು ದೇಶಗಳ ಬಹಳಷ್ಟು ವಾದ್ಯವೃಂದಗಳು ಆಯ್ಕೆಯಾಗಿವೆ. ವಿಶೇಷವೆಂದರೆ ಭಾರತದ ಸಂಗೀತ ಪ್ರತಿಭೆಗಳನ್ನು ಮಾತ್ರ ಈ ರಿಯಾಲಿಟಿ ಷೋಗಾಗಿ ಹೆಕ್ಕಿತೆಗೆದಿಲ್ಲ. ಭಾರತ ಉಪಖಂಡಕ್ಕೆ ಸೇರಿದ ನೇಪಾಳ, ಮಲೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ, ಸಿಂಗಪುರ ಮತ್ತ್ತು ಶ್ರೀಲಂಕಾದ ವಾದ್ಯವೃಂದಗಳು ಈಗಾಗಲೇ ಆಯ್ಕೆಯಾಗಿವೆ.
ಈ ರಿಯಾಲಿಟಿ ಷೋವನ್ನು ಪ್ರಸಿದ್ಧ ಮನರಂಜನೆ ಮತ್ತು ಸಂವಹನ ಸಂಸ್ಥೆ ಫಾತ್ ಫಿಶ್ ನಿರ್ಮಿಸುತ್ತಿದೆ. ಸಾಧಾರಣವಾಗಿ ಸಂಗೀತ ಆಧಾರಿತ ರಿಯಾಲಿಟಿ ಷೋಗಳಲ್ಲಿ ಏಕಮಾತ್ರ ಸ್ಪರ್ಧಿಗಳದ್ದೇ ಕಾರುಬಾರು. ಆದರೆ ಬಿಗ್ ಬ್ಯಾಂಡ್‌ನದ್ದು ಉತ್ತಮ ವಾದ್ಯವೃಂದಗಳ ನಡುವಿನ ಸ್ಪರ್ಧೆ. ಕಾರ್ಯಕ್ರಮದಲ್ಲಿ ಸ್ಪರ್ದಿಸುವ ವಾದ್ಯವೃಂದಗಳು ೨ ರಿಂದ ೧೦ ಸದಸ್ಯರನ್ನು ಹೊಂದಿದ್ದು, ಕನಿಷ್ಠ ಓರ್ವ ಪ್ರಧಾನ ಗಾಯಕರಿರುತ್ತಾರೆ. ಗೆದ್ದ ತಂಡ ಫಾತ್ ಫೇರ್ ರೆಕಾರ್ಡಿಂಗ್ ಸಂಸ್ಥೆಯೊಂದಿಗೆ ಮೂರು ವರ್ಷಗಳ ಕಾಲ ರೆಕಾರ್ಡಿಂಗ್ ಗುತ್ತಿಗೆ ಪಡೆಯುತ್ತದೆ. ಇದರಲ್ಲಿ ಮೂರು ಆಲ್ಬಂ ಹಾಗೂ ಆರು ಸಂಗೀತ ವಿಡಿಯೋಗಳನ್ನು ನಿರ್ವಹಿಸುವ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸ, ಸಂಗೀತ ಕಚೇರಿಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ೧೦ ದಶಲಕ್ಷ ನಗದು ಬಹುಮಾನ ನೀಡಲಾಗುತ್ತದೆ.


ಅಬ್ಬಾ, ನಾವೇ ವಾಸಿ !
ಭಾರತದಲ್ಲಿ 'ಕರೋಡ್ ಪತಿ' ಹಿಟ್ ಆಗಿದ್ದು ನೆನಪಿದೆಯಷ್ಟೇ ! ಈಗ 'ರೋಡ್ ಪತಿ' ಸರದಿ. 'ಬಿಗ್ ಬ್ರದರ್ಸ್' ನ ಜನಕ ಎಂಡಮಲ್ ಇದರ ಸೂತ್ರಧಾರ. ಸಂಬಳ ಕೊಡೋದಿಕ್ಕೆ ಕಾಸಿಲ್ಲ ಅಂತ ಕಂಪೆನಿಗಳ ಮಾಲೀಕರು ಒದ್ದಾಡುವಾಗ ಅಮೆರಿಕಾದ ಫಾಕ್ಸ್ ಟಿವಿ ರೆಸೆಷನ್‌ನನ್ನೇ ಆಧಾರ ಮಾಡಿಕೊಂಡು ರಂಜನೆ, ದುಡ್ಡು, ಜನರ ಸಮಯ ಎಲ್ಲವನ್ನೂ ಬಾಚಿಕೊಳ್ಳಲು ಹೊರಟಿದೆ. ಹೇಗಿದ್ದರೂ ಹಣದ ಮುಗ್ಗಟ್ಟಿನ ಸಮಯ, ನೋಡಿ. ಉದ್ಯೋಗ ಕಡಿತ ಸಾಮಾನ್ಯವಾಗಿ ಹೋಗಿದೆ. ಅದೇ ಕಡಿತವನ್ನ ಜನರೇ ಕೊಂಡಾಡುವಂತೆ ತೋರಿಸಿದರೆ ಹ್ಯಾಗೆ, ಎಂದು ಕಂಡಿದ್ದೇ ತಡ ; ಕಂಪನಿಯಲ್ಲಿರೋ ನೌಕರರೆಲ್ಲಾ ಟಿ ವಿ ಪರದೆಯ ಮೇಲೆ ! 'ಯಾರನ್ನ ಮನೆಗೆ ಕಳಿಸಬೇಕು ಅಂತ ಜನರೇ ಡಿಸೈಡ್ ಮಾಡಲಿ' ಅನ್ನೋದೇ ಷೋ ಹೈಲೈಟ್ ! ಒಂದರ್ಥದಲ್ಲಿ ಕೇರ್ ಆಫ್ ಫುಟ್ ಪಾತ್ ಮಾಡಲಿಕ್ಕೂ ಸ್ಪರ್ಧಾ ಕಾರ್ಯಕ್ರಮ. (ಒಂದುವೇಳೆ ತಾವೆಣಿಸಿದವರೇ ಮನೆಗೆ ಹೋದರೆ ವೀಕ್ಷಕರಿಗೂ ತಾವಂದುಕೊಂಡಂತೆ ಆಗಿದೆ ಎಂಬ ತೃಪ್ತಿ ಎಂಬುದೇ ಅಂದಾಜು!) ಹಾಗಾಗಿ ಮನೆಗೋಗೋವ್ರು ಯಾರು? ಕೆಲಸ ಕಳೆದುಕೊಳ್ಳೋವ್ರ್ಯಾರು ಅನ್ನೋದೂ ಒಂಥರಾ ಎಕ್ಸೈಟಿಂಗ್ ! ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಅಂತ ಇದನ್ನೇ ಹೇಳೋದಾ !
ಇಷ್ಟೇ ಅಲ್ಲ, 'ಚೀಟಿಂಗ್ ಸ್ಪೌಸಸ್ ಕಾಟ್ ಆನ್ ಟೇಪ್' ನಲ್ಲಿ ಗಂಡ ಹೆಂಡ್ತಿಯರು ಪರಸ್ಪರ ಹೇಗೆ ಮೋಸ ಮಾಡ್ತಾರೆ, ಬೇರೆಯವರ ಜೊತೆ ಯಾವ ಬೆಡ್ ರೂಂ ನಲ್ಲಿ ಇದ್ದರು ಎಂಬುದೊಂದು ರಿಯಾಲಿಟಿ ಷೋ ಅದರೆ, ಡೇಟಿಂಗ್ ಮಾಡುವವರ ಪೂರ್ವಾಪರಗಳನ್ನೆಲ್ಲಾ ರೆಕಾರ್ಡ್ ಮಾಡುವ 'ಬ್ಲೈಂಡ್ ಡೇಟ್' ಮತ್ತೊಂದು ಬಗೆಯದು ! ಇಬ್ಬರ ಜೊತೆ ಮಲಗಿದರೆ ಹೇಗಿರುತ್ತೆ ಅನ್ನುವುದರಿಂದ ಹಿಡಿದು 'ಬ್ಯಾಟಲ್ ಆಫ್ ದಿ ಬಾಡ್ಸ್' ನಲ್ಲಿ 'ಸೌಂದರ್ಯ' ದ ಮಾನದಂಡವೆಂಬಂತೆ ಹುಡುಗಿಯರು - ಹುಡುಗರಾದಿಯಾಗಿ ಎಲ್ಲಾ ಸ್ಪರ್ಧಿಗಳೂ ಬಟ್ಟೆ ಬಿಚ್ಚುವ ತನಕ ! ನೈಟ್ ಕ್ಲಬ್‌ನ ರಹಸ್ಯಗಳ ರಾಸಲೀಲೆಗೆ 'ನೈಟ್ ಕ್ಲಬ್ ಕನ್ಫೆಶನ್ಸ್' ಇದ್ದರೆ, 'ಶಾಕಿಂಗ್ ಬಿಹೇವಿಯರ್ ಕಾಟ್ ಆನ್ ಟೇಪ್', 'ಸೆಕ್ಸಿ ಕ್ಯಾಮ್' ರಿಯಾಲಿಟಿ ಷೋಗಳ ವಿವರಣೆ ಬೇಡವೇನೋ ! ಹೆಸರೇ ಎಲ್ಲಾ ತಿಳಿಸುತ್ತದೆಯಲ್ಲಾ!
ಸದ್ಯದ ಮಟ್ಟಿಗೆ ನಾವೇ ವಾಸಿ ! ಆದರೂ ಕೆಲವೇ ದಿನಗಳಲ್ಲಿ ನಮ್ಮಲ್ಲಿಗೂ ಬಂದರೆ ಆಶ್ಚರ್ಯವೇನಿಲ್ಲ !

ಮಾಧ್ಯಮಗಳು ನೀಡಬೇಕಾದದ್ದು ವಿನೋದವಲ್ಲ ; ವಿಕೃತ ಸಂತೋಷ ! : ವ್ಯಾಖ್ಯೆಗಳು ಬದಲಾಗುತ್ತಲಿದೆ.
********



'ಮದುವೆ ಅಂದ್ರೆ ಆಟ ಅಲ್ಲ' ಅಂತ ಗದರಿಸಿದವರ್ಯಾರು ಸ್ವಾಮೀ !
ಅಯ್ಯೋ ರಾಮಾ ! ಯಾರು ಇದಕ್ಕೆಲ್ಲಾ ಹೋಗ್ತಾರೆ ಅಂತೀರಾ?
ನಾವೇ !
ರಾಖಿ ಸಾವಂತ್ ಇಲೇಶ್‌ಗೆ ಉಂಗುರ ತೊಡಿಸಿಯಾಗಿದೆ ! ಅದಕ್ಕೂ ಮೊದಲೇ ಎನ್‌ಡಿಟಿವಿ ಇಮ್ಯಾಜಿನ್ ವಾಹಿನಿಗೆ ಕೇವಲ ೨೦ ದಿನದ ಅವಧಿಯಲ್ಲಿ ೧೮,೦೦೦ ಅರ್ಜಿ ಬಂದಿತ್ತು !
ಈ ಯಶಸ್ಸು (?) ನೋಡಿ ಅದಾಗಲೇ ರಾಹುಲ್ ಮಹಾಜನ್‌ಗೆ ಹುಡುಗಿಯರ ಕಾಲ್ ಬರಲಿಕ್ಕಾರಂಭವಾಗಿಯೂ ಆಯಿತು.
ಇನ್ನೇನು, ರಾಖಿ ಸ್ವಯಂವರದ ಫೈನಲಿಸ್ಟ್‌ಗಳಿಗೆ ಡಿಮ್ಯಾಂಡ್‌ನ ಕಾಲ !
ಮಾಲೆ ಹಿಡಿಯುವುದೊಂದು ಬಾಕಿ !
ಸರಿ ಬಿಡಿ, ಮದುವೆಯಾಗುವಷ್ಟೂ ಪುರುಸೊತ್ತಿಲ್ಲ. 'ಪತಿ ಪತ್ನಿ ಔರ್ ವೋ' ಶುರುವಾಗುವ ಹಂತದಲ್ಲಿದೆ. 'ಬೇಬಿ ಬಾರೋವರ್ಸ್' ಎಂಬ ಅಮೇರಿಕಾದ ತದ್ರೂಪು ಕೂಸು ಅದು ! ದಂಪತಿಗಳು ಮದುವೆ ನಂತರ ಎದುರಿಸುವ ಸವಾಲುಗಳ ಬಗ್ಗೆ ರಿಯಾಲಿಟಿ ಶೋ ! ಭಾಗವಹಿಸುವವರು ಯಾರು ಅಂತೀರಿ? ರಾಖಿ ಸಾವಂತ್ ಮತ್ತು ಇಲೇಶ್ !
'ಬಿಗ್ ಬ್ರದರ್ಸ್' ತಂಡದಲ್ಲಿ ಜನಾಂಗೀಯ ನಿಂದನೆ ಅಂತ ಊರೊಟ್ಟು ಮಾಡಿ ಭಾರತದಲ್ಲಿ ಗೂಡಿ ಖಳ ನಾಯಕಿ ಎಂದು ಮನೆಮಾತಾಗಿ, ಕೊನೆಗೆ ಆರಾಮವಾಗಿ ಸೆಲಬ್ರಿಟಿಗಳ ಸೆಲಬ್ರಿಟಿ ಅನ್ನಿಸಿಕೊಂಡವಳು ನಮ್ಮ ಊರಿನ ಶಿಲ್ಪಾ ಶೆಟ್ಟಿ. ಪಾಪ, ಮಾಧ್ಯಮಗಳು ಹುಯಿಲೆಬ್ಬಿಸಿಕೊಂಡದ್ದೇ ಬಂತು. ಮತ್ತೆ ನೋಡಿದರೆ ಪ್ರಕರಣ ಸುಖಾಂತ್ಯವಾಗಿ ತಣ್ಣಗೆ ಅವಳದ್ದೇ ಯೋಗ ಸಿ.ಡಿ., ಸೆಂಟು ! ಕೊನೆಗೆ ನಿಂದನೆ ಮಾಡಿದಳೆನ್ನಲಾದ ಜೇಡ್ ಗೂಡಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದೇ ತಡ, ಅವಳ ಸ್ಮರಣಾರ್ಥ ಹಪ್ಪಳ ಸೇರಿದಂತೆ ಇತರ ಕುರಕಲು ತಿಂಡಿಗಳು ಮತ್ತು ಊಟದೊಂದಿಗೆ ಬಳಸುವ ಕೆಲವು ಪದಾರ್ಥಗಳನ್ನು ಹೊಸ ಬ್ರ್ಯಾಂಡ್‌ನಡಿ ತರಲು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯೋಜಿಸಿಯೂ ಆಯಿತು ! ಆಹಾ ! ಎಂತ ಸ್ಮರಣೆ !

ಏನಾದರೂ ಆಗು ಮೊದಲು ಮಾನವನಾಗು : ಅಂದು..
ಹೇಗಾದರೂ ಸರಿ ! ಮೊದಲು ಫೇಮಸ್ ಆಗು : ಇಂದು...
ಸೆಲೆಬ್ರಿಟಿತ್ವ ಉಳಿಸಿಕೊಳ್ಳುವುದು : ಮುಂದುವರಿದ ಭಾಗ...
*****

ಭಾರತದ ಪ್ರಮುಖ ರಿಯಾಲಿಟಿ ಷೋಗಳು
ಇಂಡಿಯನ್ ಐಡಲ್
ಜೋಡಿ ನಂ ೧
ಝಲಕ್ ದಿಕ್ ಲಾಜಾ
ತೋಲ್ ವೋಲ್ ಕೇ ಬೋಲ್
ನಚ್ ಬಲ್ಲಿಯೇ
ಇಂಡಿಯನ್ ಲಾಫ್ಟರ್ ಚಾಲೆಂಜ್
ವಾಯ್ಸ್ ಆಫ್ ಇಂಡಿಯಾ

ವಿಶ್ವದ ವಿವಾದಿತ ರಿಯಾಲಿಟಿ ಶೋಗಳು
ದೇರ್ ಇಸ್ ಸಂಥಿಂಗ್ ಅಬೌಟ್ ಮಿರಿಯಂ-೨೦೦೪- ಸುಂದರ ಯುವತಿಯನ್ನು ಓಲೈಸಬೇಕದದ್ದು ಸ್ಪರ್ಧೆ. ಆದರೆ ಕೊನೆಗೆ ಯುವತಿ ಓರ್ವ ಹಿಜಡಾ ಎಂದು ತಿಳಿದು ವಿವಾದವಾಗಿತ್ತು.
ಸೀರಿಯಸ್ಲೀ ಡ್ಯೂಡ್ ಐಯಾಮ್ ಗೇ - ೨೦೦೪- ಅಮೇರಿಕಾ
ಸ್ಪೇಸ್ ಕೆಡೆಟ್ಸ್- ೨೦೦೫- ಬ್ರಿಟನ್
ದ ಫಾರ್ಮ್- ೨೦೦೪- ಬ್ರಿಟನ್
ಬರ್ತ್ ನೈಟ್ ಅಲೈವ್- ೨೦೦೬- ಬ್ರಿಟನ್
ದ ಬಿಗ್ ಡೋನರ್ ಶೋ- ೨೦೦೭- ನೆದರ್‌ಲ್ಯಾಂಡ್
ಬಿಗ್ ಬ್ರದರ್ಸ್- ೨೦೦೭- ಬ್ರಿಟನ್

ವಿಶ್ವದ ಪ್ರಖ್ಯಾತ ರಿಯಾಲಿಟಿ ಶೋಗಳು
ದ ಬಿಗ್ ಲೂಸರ್
ಅಮೆರಿಕನ್ ಐಡಲ್
ಎಕ್ಸ್ ಟ್ರೀಮ್ ಮೇಕೌಟ್ ಹೋಮ್ ಎಡಿಷನ್
ಅಮೇರಿಕಸ್ ಟಫೆಸ್ಟ್ ಜಾಬ್
ಡೀಲ್ ಓರ್ ನೋಡಿಲ್
ಅಮೇರಿಕಸ್ ನೆಕ್ಸ್ಟ್ ಟಾಪ್ ಮಾಡೆಲ್
ಲಾಸ್ಟ್ ಕಾಮಿಕ್ ಸ್ಟ್ಯಾಂಡಿಂಗ್
ಕಿಚನ್ ನೈಟ್ ಮೇರ್
ಹೆಲ್ಸ್ ಕಿಚನ್

************

ಕಾಡಲ್ಲಿ ಕಳೆದುಹೋದರೆ ಹೇಗಿರುತ್ತದೆ ಅಂತ ಎಳೆಮಕ್ಕಳಿಗೂ ಗೊತ್ತಿರೋವಾಗ I am celebrity, get me out ಕಾಪಿ ಹೊಡೆದ ಕಾರ್ಯಕ್ರಮಕ್ಕೆ ಜೋತುಬಿದ್ದ ಇಮೇಜ್ ಟಿ‌ಆರ್‌ಪಿ ಇಲ್ಲದ ನಮ್ಮ ಬಾಲಿವುಡ್, ಸೀರಿಯಲ್‌ನ ಯುವಸಿಂಹಗಳು ತಾವಾಗೇ ಬಿದ್ದುಕೊಂಡು ಈಗ 'ಇಸ್ ಜಂಗಲ್ ಸೆ ಮುಜ್ಹೆ ಬಚಾವೋ ' ಅಂತಾ ಕೂಗುವುದಕ್ಕೆ ಶುರುಮಾಡಿದ್ದಾರೆ. ಹುಡುಗ-ಹುಡುಗಿಯರು ಒಟ್ಟಿಗೆ ಸ್ನಾನ ಮಾಡಬೇಕು, ಹುಳಹುಪ್ಪಟೆಗಳನ್ನು ಬಾಯಿಗೆ ಹಾಕಿಕೊಳ್ಳಬೇಕು, ವಿಷಜಂತುಗಳ ಜೊತೆ ಸರಸ ಮಾಡುವಷ್ಟು ಸಹನೆ ಇರಬೇಕು ಹೀಗೆ...! ಎಷ್ಟಾದರೂ ಭಾರತೀಯರು ಸಹನಶೀಲರಲ್ಲವೇ?
ಮತ್ತೊಂದೆಡೆ, ಸ್ಪರ್ಧಾರ್ಥಿಗಳನ್ನು ಬೀಚ್‌ಗೆ ಕಳುಹಿಸಿ ಅಲ್ಲಿನ ಜನರ ಒಳವಸ್ತ್ರಗಳನ್ನು ಶೇಖರಿಸಿ ತರುವ ಸ್ಪರ್ಧೆ- survivor ಎಂಟಿವಿಯಲ್ಲಿ 'ರೋಡೀಸ್' ಆದದ್ದು ಹೀಗೆ ! big brothers ಕಲರ್ಸ್ ಟಿವಿಯಲ್ಲಿ 'ಬಿಗ್ ಬಾಸ್' ಆದದ್ದೇ, ಕೆಲವೇ ದಿನಗಳಲ್ಲಿ ಮೊನಿಕಾ ಬೇಡಿ ಈಜುಡುಗೆ ಧರಿಸಿದ್ದು, ಮೊನಿಕಾ ಮತ್ತು ರಾಹುಲ್ ಮಹಾಜನ್‌ನ ವರ್ತನೆ ವ್ಯಾಪಕವಾಗಿ ಚರ್ಚೆಯಾಯಿತು. ಇದಲ್ಲದೆ ಅದೇ ಕಲರ್ಸ್ ಟಿವಿ 'ಬಾಲಿಕಾ ವಧು' ಎಂಬ ರಿಯಾಲಿಟಿ ಷೋ ಬಾಲ್ಯವಿವಾಹಕ್ಕೆ ಉತ್ತೇಜನ ನೀಡುವ ಮಾದರಿಯಲ್ಲಿ ರೂಪ ಪಡೆಯಿತು. 'ಪುರಾತನ ಸಂಸ್ಕೃತಿಯ ಪ್ರತಿಬಿಂಬವಂತೆ !' -ಇವರಿಗೆ ದೇಶದ ೨ ಪ್ರಮುಖ ಪಕ್ಷಗಳ ಸದಸ್ಯರೂ ಬೆಂಬಲ ಬೇರೆ ! ಸರ್ಕಾರವು ಈ ಕುರಿತು ಚರ್ಚೆಗೆ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಪೃಥ್ವಿರಾಜ್ ಚೌವಾಣ್ ಪ್ರತಿಕ್ರಿಯಿಸಿದ್ದು, ಕೆಲವೇ ಗಂಟೆಗಳಲ್ಲಿ ನೋಟೀಸು ನೀಡಿದ್ದು ಮತ್ತೆ ನಡೆದ ಬೆಳವಣಿಗೆ.
ಬಹುಷಃ ಕ್ರೈಮ್ ಮಾಡೋದು ಹೇಗೆ ಎಂದು ಸ್ಪರ್ಧೆಯಿಡುವುದು ಬಾಕಿ !
ಟಿವಿ ಭಾರತಕ್ಕೆ ಕಾಲಿಟ್ಟ ಹೊಸತರಲ್ಲಿ ನೇತಾರರು ಹುಯ್ಯಲಿಟ್ಟಿದ್ದರು - 'ನಮ್ಮ ಸಂಸ್ಕೃತಿಯನ್ನ ಕೊಲ್ಲುತ್ತದೆ'. ಕಾಲಕ್ರ್ರಮೇಣ ಜನಸಾಮಾನ್ಯರಾದಿಯಾಗಿ ಅದರ ಎಲ್ಲಾ ಮಾಯಾಜಾಲಕ್ಕೆ ಒಗ್ಗಿಕೊಂಡರು. ಈಗ ನೋಡಿದರೆ ವ್ಯಾಪಕ ರೀತಿಯಲ್ಲಿ ಮನರಂಜನೆಯ ಹೆಸರಲ್ಲಿ ಮನಬಂದಂತೆ ಬದಲಾಯಿಸುವ ವಿಕೃತಿ ನಿಧಾನವಾಗಿ ಅವರಿಸುತ್ತಿದೆ.
*********

ಸಂಗೀತ ಸ್ಪರ್ಧೆಯೆಂದರೆ ಅದೊಂದು ಯುದ್ಧವೇ ಸರಿ ! ವೇದಿಕೆಯೇ ಸಮರಾಂಗಣ. ಹಾಡಿಗಿಂತಲೂ ಹಾಡುಗಾರರ ವಸ್ತ್ರಾಲಂಕಾರ, ಮನೆಯ ಆರ್ಥಿಕ ಸ್ಥಿತಿ, ಅವರ ವೈಯಕ್ತಿಕ ಜೀವನ, ಹೆತ್ತವರ ಆತಂಕ, ಹಾರೈಕೆ, ಸ್ಪರ್ಧಿಗಳ ತುಮುಲಗಳ ಬಗೆಗೆ, ಸಂಗೀತಕ್ಕೆ, ಬೆಳಕಿನ ಅಬ್ಬರಕ್ಕೆ ತಕ್ಕಂತೆ ಕುಣಿಯುವುದರ ಮೇಲೆ ಕ್ಯಾಮೆರಾ ಕಣ್ಣು ! ಈ ರಿಯಾಲಿಟಿ ಕಾರ್ಯಕ್ರಮಗಳು ನೇರವಾಗಿ ರಿಕಾರ್ಡಿಂಗ್ ಆಗಿರುತ್ತವೆ. ಅಂತೆಯೇ ನೇರ ಸಂಕಲನ ಆಗಿರಬೇಕು ಎಂಬುದು ಸಾಮಾನ್ಯ ತಿಳಿವಳಿಕೆ.
ಆದರೆ ಈ ಷೋಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ಅಥವಾ ಅಭ್ಯರ್ಥಿಗಳು ಕ್ಯಾಮೆರಾಗಳ ಮುಂದೆ ನಿಂತಾಗ ಅವರ ವ್ಯಕ್ತಿತ್ವವನ್ನೇ ನಿರ್ವಹಿಸುವ ಸೂತ್ರಧಾರನಿರುತ್ತಾನೆ. ಅಷ್ಟೇ ಅಲ್ಲದೆ, ಸಂಕಲನ ಮಾಡುವ ಹಂತದಲ್ಲಿಯೂ ಅನೇಕ ಬದಲಾವಣೆಗಳನ್ನು ಮಾಡಲಾಗುತ್ತದೆ. ಈ ಬದಲಾವಣೆಗಳು, ನೇತ್ಯಾತ್ಮಕವಾದರೂ, ಸಹಿಸಿಕೊಳ್ಳಬೇಕು. ಬೇರೆ ಉಪಾಯವಿಲ್ಲ; ಕಾರಣ, ಅಲ್ಪ ಅವಧಿಯಲ್ಲೇ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಅವಕಾಶ, ಅಪಾರ ಹಣ ಸಂಪಾದಿಸಬಹುದು, ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಳ್ಳಬಹುದು, ಅವಕಾಶವೂ ದಂಡಿಯಾಗಿ ಮನೆ ಬಾಗಿಲಿಗೆ ಬಂದು ಬೀಳಬಹುದು ! ಹಾಗಾಗಿ, ತೀರ್ಪುಗಾರ-ಸ್ಪರ್ಧಿಗಳ ವಾಗ್ವಿವಾದ, ಪರದೆಯ ಹಿಂದಿನ ಅರಚಾಟ, ಭಾವೋತ್ಕರ್ಷಗಳೆಡೆಗೂ, ಆಕಳಿಸಿ ತೂಕಡಿಸುವವರೆಗೂ ಒಂದು ಕಣ್ಣು ಇದ್ದೇ ಇರುತ್ತದೆ. ಇದರೊಂದಿಗೆ ತೀರ್ಪುಗಾರರ ಪಕ್ಷಪಾತ ಧೋರಣೆ ಮತ್ತು ವೈಯ್ಯಕ್ತಿಕ ಇಷ್ಟಾನಿಷ್ಟಗಳೂ ಸೇರಿದರಂತೂ ಪ್ರತಿಭಾವಂತರು ಮತ್ತಷ್ಟು ಮಂಕಾಗಬೇಕಾಗುತ್ತದೆ.
ಆಶಾಭಾವನೆಯೇ ಕೊನೆಗೆ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತಿದೆ ಎಂಬುದಕ್ಕೆ ರಿಯಾಲಿಟಿ ಶೋ ಒಳ್ಳೆಯ ಉದಾಹರಣೆ. ಒಂದು ಸುತ್ತಿನಲ್ಲಿ ಸೋತ ಸ್ಪರ್ಧಿಗಳನ್ನು ಎಲಿಮಿನೇಷನ್ ರೌಂಡ್ ಮೂಲಕ ಉಚ್ಚಾಟಿಸುವ ಪ್ರಕ್ರಿಯೆ ನಾಟಕೀಯ ಮಾತ್ರವಲ್ಲ ಒಂದು ಬಗೆಯಲ್ಲಿ ಶೊಷಣೆಯೇ ಹೌದು. ಭಾವನೆಗಳನ್ನು ಬಿಕರಿ ಮಾಡುವುದು ಎಂದರೆ ಹೀಗೆಯೇ ! ಪೋಷಕರು ಅಳುವುದು, ತೀರ್ಪುಗಾರರು ಸಂತೈಸುವುದು, ಅಪ್ಪಿ ಮುದ್ದಾಡುವುದು, ಅವರೊಂದಿಗೆ ತಾವೂ ಅಳುವುದು..ಹೀಗೆ, ಸೋಲಿನ ಭಾವನೆಗಳನ್ನು ವೈಭವೀಕರಿಸಿ, ನೋಡುಗರನ್ನು ರಂಜಿಸುವ ಮೂಲಕ, ಗೆಲುವನ್ನು ಅತಿರಂಜಿತವನ್ನಾಗಿಸುವುದಕ್ಕೆ ಏನೆಲ್ಲಾ ಕ್ರೌರ್ಯ ಮಾಡಬೇಕೋ ಅಷ್ಟೂ ಸಿದ್ಧ.. ಅನೇಕ ಬಾರಿ ಸ್ಪರ್ಧಿಗಳು ವೇದಿಕೆಯ ಮೇಲೆ ತಲೆ ಸುತ್ತಿ ಬಿದ್ದಿರುವ, ಮಾನಸಿಕವಾಗಿ ನೊಂದು ಹೋದ, ವೈಕಲ್ಯಕ್ಕೆ ತುತ್ತಾದ ಪ್ರಕರಣಗಳೂ ನಡೆದಿವೆ. ಮಕ್ಕಳ ಬಾಲ್ಯವನ್ನೇ ಬೇಟೆಯಾಡುವ ಇಂತಹ ವಿಕೃತಿಗಳು ಮಕ್ಕಳ ಭವಿಷ್ಯವನ್ನೇ ಬಲಿ ತೆಗೆದುಕೊಂಡಿವೆ ! ಉತ್ತರ ಭಾರತದ ರಿಯಾಲಿಟಿ ಷೋವಿಗೆ ಶಿಂಜಿನಿ ಎನ್ನುವ ಬಾಲಕಿಯ ಇಡೀ ಜೀವನವೇ ಬಲಿಯಾದದ್ದು ಹೀಗೆಯೇ !
ಇನ್ನೂ ಇದೆ ತಂತ್ರ ! : ಹೊಸ ಚಲನಚಿತ್ರ ಬಿಡುಗಡೆಗೆ ಬಂದಿದ್ದಲ್ಲಿ ಆ ಚಿತ್ರದ ನಟ/ನಟಿ/ನಿರ್ದೇಶಕ ಮಹಾಶಯರು ಅತಿಥಿ ಗಣ್ಯರಾಗಿ ಆಗಮನ ( ಸಂಗೀತದ ತಲೆಬುಡ ಗೊತ್ತಿಲ್ಲದಿದ್ದರೂ !) ಅಥವಾ ಈಗಾಗಲೇ ಇಮೇಜ್ ಕಡಿಮೆಯಿರುವ ಮುಖದರ್ಶನ ! ಒಟ್ಟಿನಲ್ಲಿ ಚಿತ್ರತಾರೆಯರಿಗೆ, ಚಿತ್ರಗಳಿಗೂ ರಿಯಾಲಿಟಿ ಶೋ ಗಳೊಂದು ಜಾಹೀರಾತು ತಂತ್ರಗಳಲ್ಲದೆ ಬೇರೇನಿಲ್ಲ ! ಕೊನೆಗೆ ಶ್ರೋತೃಗಳ ವೋಟುಗಳು ಬಹಳ ಮುಖ್ಯ ಎನ್ನುತ್ತಾ ಎಸ್‌ಎಂಎಸ್‌ಗಳಲ್ಲಿ ಅಂಗಾಲಾಚಿ ಭಿಕ್ಷೆ ಬೇಡುವುದು ಕುಡಾ ದುಡ್ಡು ಮಾಡುವ ಉಪಾಯಗಳಲ್ಲಿ ಬಹಳ ಮುಖ್ಯವಾದದ್ದು ! ಆದರೆ ಇದು ಉಂಟು ಮಾಡುವ ವರ್ಗ ತಾರತಮ್ಯ, ಜಾತಿ-ಮತದ ಅಧಾರದಲ್ಲಿ ವೋಟುಗಳ ಮಾರಾಟ ಮುಂದೊಂದು ದಿನಕ್ಕೆ ಬಹಳ ದೊಡ್ಡ ಕಂದರವನ್ನೇ ಸೃಜಿಸಿದರೂ ಆಶ್ಚರ್ಯವಿಲ್ಲ.
**********
ಕನ್ನಡವೇನೂ ಕಡಿಮೆಯಿಲ್ಲ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಮುಂದಾಳತ್ವದ ಈ ಟಿ ವಿಯ 'ಎದೆ ತುಂಬಿ ಹಾಡುವೆನು' ಭಿನ್ನ ಭಿನ್ನ ರೀತಿಯಿಂದ ಚೆಂದಗೆ ಯಶಸ್ವಿಯಾಗುವಷ್ಟರಲ್ಲಿಯೇ ಚಾನಲ್ ಪ್ರಪಂಚಕ್ಕೆ ಧುಮುಕಿದ ಎಲ್ಲಾ ರಿಯಾಲಿಟಿ ಮಹಾಶಯರು ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಅಜ್ಜಂದಿರ ವರೆಗೂ ಹಾಡಿಸುವುದಕ್ಕೆ, ಶುರು ಮಾಡಿ ವರುಷಗಳೇ ಕಳೆದಿವೆ. ಸಂಗೀತ ಕ್ಷೇತ್ರಕ್ಕೆ ಎಂತಹ ಪ್ರೋತ್ಸಾಹ ನೋಡಿ ! ಪರಿಣಾಮ, ಎಷ್ಟು ದಿನದಲ್ಲಿ ನನ್ನ ಮಗ/ಮಗಳು ಸಂಗೀತ ಕಲಿತು ಟಿ.ವಿ.ಯಲ್ಲಿ ಹಾಡಬಹುದು?" - ನೃತ್ಯ, ಸಂಗೀತ ತರಬೇತುದಾರರಿಗೆ ಒಂದು-ಎರಡು ಹಾಡಿಗೆ ಪ್ರಸಿದ್ಧಿ ಮಾಡಿಸಿ ಪ್ರೈಜ್ ಗಿಟ್ಟಿಸಿಕೊಳ್ಳಬೇಕೆಂಬ ಒತ್ತಾಸೆಗೆ ಕುರಿಗಳಾದವರು !
ಸರಿ, ಸೋತಿದ್ದಕ್ಕೆ ಸಹಜವಾಗಿ ಅಳು ಬಂದು ಮತ್ತೆ ಸಮಾಧಾನವಾದರೂ, ಅದನ್ನೆ ತಿರುಗಿಸಿ ಮುರುಗಿಸಿ ಮತ್ತೆ ಮತ್ತೆ ಅಳಿಸಿ, ವಿಷಾದಗೀತೆಯ ಪಿಟೀಲಿಗೆ ಏನನ್ನೋಣ !
ಒಂದಷ್ಟು ಜನರನ್ನು ಕುಣಿಸಿ ತಾವೂ ಕುಣಿದು ಕೊರತೆ ಕಂಡುಹಿಡಿಯುವುದು ಒಂದಾದರೆ, ಜನರನ್ನ 'ಕುರಿಗಳು ಸಾರ್ ಕುರಿಗಳು' ಅಂತ ಕುರಿ ಮಾಡಿ, ತಾವೂ ಕೋತಿಗಳಂತೆ ಆಡಿದ್ದೇ ತಡ, ಉಳಿದೆಲ್ಲಾ ಚಾನಲ್‌ಗಳದ್ದೂ (ಅದೇ ರೀತಿಯ ಹೆಸರಷ್ಟೇ ಬೇರೆ ಕಾಣುವ) ಟೋಪಿ ಇಡುವ ಕಾಯಕ ಕೈಲಾಸ ಸ್ವಲ್ಪ ಹಳತು ! ಸ್ವಾರಸ್ಯವೆಂದರೆ, ಈಗಿನ ಸರಿಗಮಪ ಹಾಡುವ ಕಾರ್ಯಕ್ರಮದ ಶೀರ್ಷಿಕೆಯಲ್ಲಿ ಇರುವ ಪದಗಳಲ್ಲಿ 'ಸರಿಗಮಪ'ದ ಐದು ಅಕ್ಷರ ಮಾತ್ರ ಕನ್ನಡ ! ಅದು ಇಂದಿನ ಟ್ರೆಂಡ್ ! ಸೀರೆಗೂ ಸವಾಲ್ ಹಾಕೋದು ಒಂದಾದರೆ, ಝಣಝಣ ಕಾಂಚಾಣ ಉದುರಿಸುವುದು ಮತ್ತೊಂದು ! ಫ್ರಿಡ್ಜ್-ವಾಶಿಂಗ್ ಮೆಷಿನ್ ಕೊಡೋದು ಒಂದಾದರೆ, ಟೂರ್‌ಗೆ ಕರ್ಕೊಂಡು ಹೋಗೋದು ಮತ್ತೊಂದು ! ಅಷ್ಟೇಕೆ ಅಡುಗೆಯಲ್ಲೂ ಯಾರು ಬೆಸ್ಟ್ ಅತ್ತೆ ಸೊಸೆ ಎಂದು ಕಂಡು ಹಿಡಿವ ಕೈ ಚಳಕ ! ಎಲ್ಲರ ಡ್ಯಾಡಿಗಳಿಗಿಂತ ಯಾರ ಡ್ಯಾಡಿ ಬೆಸ್ಟ್ ಅನ್ನೋದಕ್ಕೆ 'ಡ್ಯಾಡಿ ನಂಬರ್ ಒನ್' !
*************
Moment of truth ನ ನಕಲು ಸ್ಟಾರ್ ಟೀವಿಯ 'ಸಚ್ ಕೆ ಸಾಮ್ನಾ' ಸತ್ಯದ ಅಗ್ನಿಪರೀಕ್ಷೆ ನಡೆಸುವುದರಲ್ಲಿ ಬಹುಷ ನಮ್ಮ ಮಂಪರು ಪರೀಕ್ಷೆ ತಜ್ಞರಿಗೇ ಸವಾಲು ಹಾಕಿ ಕೋರ್ಟ್‌ಗಳ ವಾದ ಪರಿಶೀಲನೆ- ಜಡ್ಜ್ ಮೆಂಟ್‌ಗೇ ಸಡ್ಡು ಹೊಡೆಯ ಹೊರಟಿದೆ.
ಇದರಲ್ಲಿ ಭಾಗವಹಿಸಿದವರಿಗೆ ತಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕಿಗೆ ಸಂಬಂಧಿಸಿದಂತೆ ೨೧ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇವರು ನೀಡುವ ಉತ್ತರಗಳನ್ನು ಪಾಲಿಗ್ರಾಫ್ ಪರೀಕ್ಷೆಯ ಉತ್ತರಕ್ಕೆ ಹೋಲಿಸಲಾಗುತ್ತದೆ. ಕಾರ್ಯಕ್ರಮದ ರೆಕಾರ್ಡಿಂಗ್‌ಗೆ ಮುಂಚಿತವಾಗಿ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗುತ್ತದೆ. ಎಲ್ಲಾ ಪ್ರಶ್ನೆಗಳಿಗೂ ಸತ್ಯ ಉತ್ತರ ನೀಡಿದಲ್ಲಿ ಅವರು ಒಂದು ಕೋಟಿ ರೂಪಾಯಿ ಬಹುಮಾನ ಗೆಲ್ಲುತ್ತಾರೆ.
ಟಿವಿ ತಾರೆ ರಾಜೀವ್ ಖಾಂಡೇವಾಲ್ ನಡೆಸಿಕೊಡುವ ಈ ಕಾರ್ಯಕ್ರಮ ಪ್ರದರ್ಶನಗೊಂಡ ಪ್ರಥಮ ವಾರದಲ್ಲೇ ತನ್ನ ಟಿ‌ಆರ್‌ಪಿ ರೇಟನ್ನು ಹೆಚ್ಚಿಸಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕವೇ ಕ್ರಿಕೆಟಿಗ ವಿನೋದ್ ಕಾಂಬ್ಳಿ ತನ್ನ ಸ್ನೇಹಿತ ಸಚಿನ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ವಿವಾದ ಹುಟ್ಟಿಕೊಂಡಿತ್ತು. ಆದರೆ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ , 'ತೆಂಡೂಲ್ಕರ್ ವಿರುದ್ಧ ನಾನು ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಸಚಿನ್ ಕುಟುಂಬ ನನಗೆ ಬಾಲ್ಯದಿಂದಲೂ ಆಶ್ರಯ ನೀಡಿದೆ. ಅವರ ವಿರುದ್ಧ ನಾನು ಆರೋಪ ಮಾಡಿಲ್ಲ.ಆರೋಪಗಳು ಆಧಾರರಹಿತ' ಎಂದು ತಳ್ಳಿಹಾಕಿದ್ದರು.
ಆದರೆ, ಟೈಮ್ಸ್ ನ್ಯೂಸ್ ಚಾನೆಲ್ 'ಸಚಿನ್ ತಮಗೆ ಕಷ್ಟದ ಕಾಲದಲ್ಲಿ ಸಹಾಯ ಮಾಡಲಿಲ್ಲ' ಎನ್ನುವ ಕಾಂಬ್ಳಿಯವರ ಹೇಳಿಕೆಗಳ ವೀಡಿಯೋ ತುಣುಕುಗಳನ್ನು, ಪುನಃ ಬಿತ್ತರಿಸಿ ಮಾಡಿದ್ದು ಸಾಕ್ಷಿ ಹೇಳುವ ಕೆಲಸ !
ನೀವು ಗಂಡನ ಜೊತೆ ಮಲಗಿರುವಾಗ ಬೇರೆಯವರನ್ನ ನೆನಪಿಸಿಕೊಳ್ಳುತ್ತೀರಾ? ಅನ್ನೋ ಪ್ರಶ್ನೆ ಕುಟುಂಬ ಸಮೇತರಾಗಿ ಕೂತು ನೋಡುವ ನಮ್ಮ ಟಿ ವಿ ಪರದೆ ಮೇಲೆ ಬರುತ್ತೆ ಅಂತ ಯಾರೂ ಕಲ್ಪಿಸಿಕೊಂಡಿರಲೂ ಸಾಧ್ಯವಿಲ್ಲ.ಆದರೆ ಇವತ್ತು ಸಚ್ ಕಾ ಸಾಮ್ನಾ ನೀವು ಯಾವತ್ತಾದರೂ ವೇಶ್ಯೆಯ ಸಂಪರ್ಕ ಮಾಡಿದ್ದೀರಾ? ಮದುವೆ ಮಾಡಿಕೊಳ್ಳದೆ ಮಕ್ಕಳಾಗಿದೆಯಾ? ನಿಮ್ಮ ಗಂಡನಿಗೆ ಗೊತ್ತಾಗುವುದಿಲ್ಲ ಎನ್ನುವುದಾದರೆ ನೀವು ಇನ್ನೊಬ್ಬರ ಸಹವಾಸ ಮಾಡಲು ಸಿದ್ಧರಿದ್ದೀರಾ? ಅನ್ನೋ ಪ್ರಶ್ನೆ ಕೇಳುತ್ತಾ ಲೈ ಡಿಟೆಕ್ಟರ್ ಸುಳ್ಳಿನ ಪತ್ತೆಗೆ ಸಜ್ಜಾಗಿ ನಿಂತಿದೆ !
ಮಹಿಳೆಯೊಬ್ಬಳಿಗೆ ಆಕೆಯ ಪತಿಯ ಉಪಸ್ಥಿತಿಯಲ್ಲೇ, ನಿಮಗೆ ವಿವಾಹೇತರ ಸಂಬಂಧಗಳು ಇವೆಯೇ ಎಂದು ಪ್ರಶ್ನಿಸಲಾಗಿತ್ತು. ಪತಿಗೆ ತಿಳಿಯದೇ ಇದ್ದಲ್ಲಿ ಇನ್ನೊಬ್ಬರೊಂದಿಗೆ ಮಲಗುವಿರಾ ಎಂಬ ಪ್ರಶ್ನೆಗೆ ಆಕೆ ಇಲ್ಲ ಎಂದು ಹೇಳಿದಳು. ಆದರೆ, ಪಾಲಿಗ್ರಾಫ್ ಯಂತ್ರ ಆಕೆಯ ಉತ್ತರ ಸುಳ್ಳು ಎಂದು ತೀರ್ಪು ನೀಡಿತು. ಹಾಗಾದರೆ ಕಿರುತೆರೆಯ ಮೇಲೆ ತಮ್ಮ ಕೌಟುಂಬಿಕ, ವೈಯ್ಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಕಣ್ಣೀರು ಸುರಿಸುವುದು ನೋಡುಗರಿಗೆ ಒಂದು ರೀತಿಯ ವಿಚಿತ್ರ ಆನಂದವೇ !
ಸಂಸಾರದ ಗುಟ್ಟು ವ್ಯಾಧಿ ರಟ್ಟು !
"ಮನೆಮುರುಕ' ಸಚ್ ಕಾ ಸಾಮ್ನಾ ಶೋ ತನ್ನ ಮೊದಲ "ಬಲಿ' ತೆಗೆದುಕೊಂಡಿದೆ ! ಯುವಕನೊಬ್ಬ ಪತ್ನಿಯ ಮೇಲೆ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆಗಸ್ಟ್ ೧೧ರ ಎಪಿಸೋಡನ್ನು ವೀಕ್ಷಿಸಿ ಅದರಿಂದ ಪ್ರಭಾವಿತನಾದ ದೆಹಲಿ ಸಮೀಪದ ಗ್ರೇಟರ್ ನೋಯ್ಡಾದ ಶಾಪಿಂಗ್ ಮಾಲ್ ಒಂದರಲ್ಲಿ ಭದ್ರತಾ ಸಲಹೆಗಾರನಾಗಿ ಕೆಲಸ ಮಾಡುತಿದ್ದ ಸುರೀಂದರ್ ತನ್ನ ಪತ್ನಿಗೂ ಅದೇ ಮಾದರಿಯ ಪ್ರಶ್ನೆಗಳನ್ನು ಕೇಳಿದ. ಆಗ "ಬೇರೊಬ್ಬನ ಜತೆ ನಾನು ವಿವಾಹಪೂರ್ವ ಲೈಂಗಿಕ ಸಂಬಂಧ ಹೊಂದಿದ್ದೆ' ಎಂದು ಪತ್ನಿ ನೀಡಿದ ಉತ್ತರದಿಂದ ಆತ ನೊಂದು ಆತ ಆತ್ಮಹತ್ಯೆ ಮಾಡಿಕೊಂಡ.
ಸಚ್ ಕಾ ಸಾಮ್ನಾ ಕಾರ್ಯಕ್ರಮವು ೧೯೯೫ರ ಕೇಬಲ್ ಟಿವಿ ನೆಟ್‌ವರ್ಕ್ ಕಾಯ್ದೆಯ ಕಾರ್ಯಕ್ರಮ ಸಂಹಿತೆಯ ವಿಧಿಗಳಾದ ೬(೧) ಎ, ಡಿ, ಐ ಮತ್ತು ಒ ವನ್ನು ಉಲ್ಲಂಘಿಸುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ಹಿನ್ನೆಲೆಯಲ್ಲಿ ಶೋಕಾಸ್ ನೋಟೀಸು ನೀಡಲಾಗಿದೆ. ಈ ಕಾರ್ಯಕ್ರಮವು ಭಾರತೀಯ ಸಮಾಜದ ಮೌಲ್ಯಗಳಿಗೆ ವಿರುದ್ಧವಾದುದಾಗಿದೆ ಎಂಬುದಾಗಿ ದೀಪಕ್ ಮಿಯಾನಿ ಮತ್ತು ಪ್ರಭಾತ್ ಕುಮಾರ್ ಎಂಬಿಬ್ಬರು ಅರ್ಜಿದಾರರು ದೂರಿದ್ದು, ಈ ಕಾರ್ಯಕ್ರಮದ ಪ್ರಸಾರದ ರದ್ದತಿಗೆ ಮನವಿ ಮಾಡಿದ್ದರು ಕೂಡಾ !
ಆದರೆ ನ್ಯಾಯಮೂರ್ತಿಗಳಾದ ಎ.ಪಿ. ಶಾ ಮತ್ತು ಮನಮೋಹನ್ ಅವರುಗಳನ್ನು ಒಳಗೊಂಡಿದ್ದ ವಿಭಾಗೀಯ ಪೀಠವು ರಾಷ್ಟ್ರದ ಸಂಸ್ಕೃತಿಯು ಟಿವಿ ಕಾರ್ಯಕ್ರಮದಿಂದ ಒಡೆಯುವಷ್ಟು ದುರ್ಬಲವಲ್ಲ ಎಂದು ಹೇಳಿದೆ. "ಈ ಕಾರ್ಯಕ್ರಮವನ್ನು ನಿಷೇಧಿಸಬೇಕೇ ಬೇಡವೇ ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ. ಇದು ನ್ಯಾಯಾಲಯದ ಕೆಲಸವಲ್ಲ. ಇದಕ್ಕಿಂತಲೂ ಗಂಭೀರವಾದ ಸಮಸ್ಯೆಗಳನ್ನು ದೇಶ ಎದುರಿಸುತ್ತಿದ್ದು ಅದನ್ನು ಮೊದಲು ಪರಿಹರಿಸಬೇಕಿದೆ" ಎಂಬುದು ವಿಭಾಗೀಯ ಪೀಠದ ತೀರ್ಪು !
ಕಾರ್ಯಕ್ರಮವನ್ನು ನೋಡಲಾಗದಿದ್ದರೆ ಟಿವಿ ಬಂದ್ ಮಾಡಿ ಎಂಬುದಾಗಿ ದೆಹಲಿ ಹೈಕೋರ್ಟ್ ವೀಕ್ಷಕರಿಗೆ ಸಲಹೆ ಮಾಡಿದೆ. ನೈತಿಕತೆಯನ್ನು ಕಾಪಾಡುವುದು ತನ್ನ ಪಾತ್ರವಲ್ಲ ಎಂದು ಹೇಳಿದ ನ್ಯಾಯಾಲಯ, ಈ ಕಾರ್ಯಕ್ರಮದಿಂದ ನೋವನುಭವಿಸುವವರು ಅದರ ಪ್ರಸಾರದ ವೇಳೆಗೆ ಟಿವಿ ಬಂದ್ ಮಾಡಿ ಎಂದು ಹೇಳಿದೆ. ಜೊತೆಗೆ ಈ ಕುರಿತು ಅರ್ಜಿದಾರರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಬಹುದು ಎಂದಿದೆ.
ವಿವಾದಾತ್ಮಕ ಟಿವಿ ರಿಯಾಲಿಟಿ ಶೋ 'ಸಚ್ ಕಾ ಸಾಮ್ನಾ' ನಿರ್ಮಾಣ ಕಂಪನಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟೀಸ್ ನೀಡಲು ನಿರ್ಧರಿಸಿದೆ. ಕಾರ್ಯಕ್ರಮದ ವಿರುದ್ಧ ಆಯೋಗಕ್ಕೆ ಹಲವು ಮಹಿಳೆಯರು ದೂರು ಸಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ಕೋರಿ ರಿಯಾಲಿಟಿಶೋ ನಿರ್ಮಾಣ ಸಂಸ್ಥೆ ಬಿಗ್ ಸಿನರ್ಜಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಆಯೋಗದ ಅಧ್ಯಕ್ಷೆ ಗಿರಿಜಾ ವ್ಯಾಸ್ ತಿಳಿಸಿದ್ದರು.

ಸಾಮಾಜಿಕ, ವೈಯಕ್ತಿಕ ಮತ್ತು ವ್ಯಕ್ತಿಗತ ಬದುಕಿನ ವ್ಯತ್ಯಾಸ ತಿಳಿಯಬಾರದು, ಬದಲಾಗಿ ಅವುಗಳಲ್ಲೆಲ್ಲಾ ಕ್ಯಾಮೆರಾ ಹಿಡಿದು ಕೈಯ್ಯಾಡಿಸಬೇಕು : ಮಾಧ್ಯಮಗಳ ಹೊಸ ನೀತಿ ಸಂಹಿತೆಯೇ ? !
*************

ಇಂದು ಟಿವಿ ಎಂದರೆ ಸಾವಿರಾರು ಕೋಟಿ ರುಪಾಯಿಗಳ ವಹಿವಾಟು. ಅದರಲ್ಲೂ ಪ್ರೈಮ್ ಟೈಂ (೭ರಿಂದ ೧೦ಗಂಟೆ) ವರೆಗಿನ ಸಮಯ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕಾದ ಜೊತೆಗೆ ದುಡ್ಡು ಮಾಡುವ ಸಮಯ. ಹಾಗೆ ನೋಡಿದಲ್ಲಿ ರಿಯಾಲಿಟಿ ಷೋ, ಜಾಹಿರಾತುಗಳಿಂದ ಬರುವ ಲಾಭವೇ ೬೦೦೦ ಕೋಟಿ ರುಪಾಯಿಗಳನ್ನು ಮೀರಿದೆ. ಲೆಕ್ಕಮಾಡಲು ಹೊರಟರೆ ಭಾರತದಲ್ಲಿ ಸುಮಾರು ೫೦೦ಕ್ಕಿಂತಲೂ ಹೆಚ್ಚಿನ ರಿಯಾಲಿಟಿ ಶೋಗಳಿವೆ. ಮಾತ್ರವಲ್ಲ, ಈಗಾಗಲೇ ಸರ್ಕಾರ ೪೧೦ ಹೊಸ ಚಾನಲ್‌ಗಳಿಗೆ ಒಪ್ಪಿಗೆ ಕೊಟ್ಟಿದೆ. ೭೩ ಹೊಸ ವಿದೇಶಿ ಚಾನಲ್‌ಗಳ ಪ್ರಸಾರಕ್ಕೂ ಗ್ರೀನ್ ಸಿಗ್ನಲ್ ತೋರಿಸಿಯಾಗಿದೆ. ಈಗ ಠಸ್ಸೆ ಒತ್ತುವ ಸರದಿಗೆ ಕಾದು ನಿಂತಿರುವುದು ೧೪೩ ಭಾರತೀಯ ಮತ್ತು ೨೦ ವಿದೇಶೀ ಚಾನಲ್ ! ಹಾಗಾದರೆ ಅಂದಾಜು ಮಾಡೋಣ. ಇವುಗಳಲ್ಲಿ ಇನ್ನೆಷ್ಟು ಚಾನಲ್ ಗಳಲ್ಲಿ ರಿಯಾಲಿಟಿಗಳ ಹಸಿಬಿಸಿಗಳಿರಬಹುದು ! ?
ಹೀಗೆಂದು ಬರುವ ಎಲ್ಲರೂ ಇದೇ ರೀತಿಯೇ? ಅಲ್ಲ. ಮರಳುಗಾಡಿನ ಮಧ್ಯೆ ಅಲ್ಲಲ್ಲಿ ಓಯೆಸಿಸ್‌ಗಳಿವೆ. ಬಲು ಸೊಗಸಾಗಿ ಹಾಡುವ, ನರ್ತಿಸುವ, ಕಲೆಯನ್ನೇ ಜೀವನ ಎಂದುಕೊಂಡ ಪ್ರತಿಭಾವಂತರೂ ಇದ್ದಾರೆ. ಅಂತೆಯೆ ರಿಯಾಲಿಟಿ ಷೋಗಳ ಇತ್ಯಾತ್ಮಕ ಮುಖಗಳೂ ಕಣ್ಣೆದುರಿಗಿದೆ.
ಒಮ್ಮೆ ನಮ್ಮ ಪಕ್ಕದ ಮಲಯಾಳಂ ಚಾನಲ್‌ಗಳನ್ನ ನೋಡೋಣ ! ಏಷ್ಯಾನೆಟ್ ನಲ್ಲಿ 'ಸಿಟಿಜನ್ ಜರ್ನಲಿಸ್ಟ್' ಅಂತ ರಿಯಾಲಿಟಿ ಷೋ ಇದೆ. ಇನ್ನೊಂದೆಡೆ ಮಮ್ಮುಟ್ಟಿ ಪ್ರತಿಭೆ ಹೊರಗೆಳೆದು ತರುತ್ತಿದ್ದಾರೆ. ಕ್ಯಾಮೆರಾ ಮೈಕ್ ಹಿಡಿದು ಬೀದಿ ಬೀದಿಗೆ ಹೋಗುವ ಮಂದಿ ಕಷ್ಟದ ಕಥೆ, ಸಂತೋಷದ ಸುದ್ದಿಗಳೆರಡನ್ನೂ ವೀಕ್ಷಕರಿಗೆ ದಯಪಾಲಿಸುತ್ತಾರೆ. ಅಮೃತಾಟಿವಿಯಲ್ಲಿ ಪ್ರಸಾರವಾಗುತ್ತಿರುವ ಸ್ಟಾರ್ ಸೂಪರ್ ಸಿಂಗರ್ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಾಗಿಯೆ ಮೀಸಲಾದ ಒಂದು ಕಾರ್ಯಕ್ರಮವಾಗಿ ಪ್ರಸಾರವಾಗುತ್ತಿರುವುದು ಸಂಗೀತ ಪ್ರೇಮಿಗಳ ಹೆಮ್ಮೆ.
ಅಂತೆಯೇ ಝೀ ಮರಾಠಿಯಲ್ಲಿ ಪ್ರಸಾರವಾಗುವ "ಐಡಿಯಾ ಸ ರೆ ಗ ಮ ಪ", ಕನ್ನಡದ 'ಎದೆ ತುಂಬಿ ಹಾಡುವೆನು', ಮೊದಲ ಆವೃತ್ತಿಯ "ಲಿಟ್ಲ್ ಚಾಂಪ್ಸ್" ! ಹಿಂದಿಯ ಫರಾ ಕಾನ್, ಅನು ಮಲ್ಲಿಕ್ ನಡೆಸಿಕೊಡುವ ರಾಷ್ಟ್ರೀಯ ಮಟ್ಟದ ಟ್ಯಾಲೆಂಟ್ ಶೋ ! ಉದಾಹರಣೆಗಳು ಇಲ್ಲದಿಲ್ಲ.
ಅಷ್ಟೇಕೆ, ತಮಿಳು ಚಾನಲ್ ಗಳಿಂದ ಪ್ರವರ್ಧಮಾನಕ್ಕೆ ಬಂದ ಬದುಕ ಸರಣಿಗಳ ಮೆಲುಕು ಒಂದು ಮಿತಿಯ ವರೆಗೆ ಓಕೆ. ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ ಅಂತ ವೇದಾಂತ ಹೇಳುವ ಕಾಲ ಹೋಗಿ ಜೀವನ ಕಥೆ ಮಾತ್ರ ಅಲ್ಲ ಥ್ರಿಲ್, ಷಾಕ್ ಕೂಡಾ ಇರುತ್ತೆ ಅಂತ ಮತ್ತೊಂದು ಕಥೆ ಹೇಳುವ ಆದರ್ಶವೂ(?) ಜೊತೆಗಿದೆ.

**********
ಥ್ರಿಲ್ ಕೊಡುತ್ತೆ ಎಂದರೆ ಏನೂ ಮಾಡಲು ಸಿದ್ಧರಿದ್ದಾರೆ ಇಂದಿನ ಟಿವಿ ಮಂದಿ ! ಜೊತೆಗೆ ಟಿ‌ಆರ್‌ಪಿ ಕೊಡುತ್ತದೆ ಎಂದರೆ ಬಿಟ್ಟಾರೆಯೇ ! ಕೊನೆಗೆ ಧನಾರ್ಜನೆ, ಪ್ರಸಿದ್ಧಿ- ಗಳ ಭರಾಟೆಯಲ್ಲಿ ಮಾಡುವುದು ಮಾನವೀಯ ಮೌಲ್ಯಗಳ ಮಾರಾಟವಾದರೂ ಅಡ್ಡಿಯಿಲ್ಲ. ಒಂದು ರೀತಿಯ ಕಮರ್ಷಿಯಲ್ ಭಯೋತ್ಪಾದನೆ ! ; ಇದು ಖಂಡನಾರ್ಹವಷ್ಟೇ ಅಲ್ಲ ಶಿಕ್ಷಾರ್ಹವೂ ಹೌದು ಎಂದು ತಿಳಿದಿದ್ದರೂ, ನಾಗರಿಕ ಪ್ರಜ್ಞೆ ಮತ್ತು ಸಾಮಾಜಿಕ ಕಳಕಳಿಗಳು, ಸಾರ್ವಜನಿಕ ಹೊಣೆಗಾರಿಕೆ, ಸಮಷ್ಟಿ ನಿಲುವಗಳು ದಿನದಿಂದ ದಿನಕ್ಕೆ ನಲುಗುತ್ತಿವೆ. !

ಮಾಧ್ಯಮಗಳಿಗೆ ಮಾಹಿತಿ, ಶಿಕ್ಷಣ, ಮನರಂಜನೆ- ಈ ಮೂರು ಮುಖ್ಯ ವಿಭಾಗಗಳನ್ನು ಅರ್ಥ ಮಾಡಿಕೊಂಡು ವ್ಯತ್ಯಾಸ ಕಂಡುಕೊಳ್ಳಲಿಕ್ಕೆ ಬಂದರೂ ಸಾಕು, ತಾವು ನಿರ್ವಹಿಸಬೇಕಾದ ಜವಾಬ್ದಾರಿ ಅರ್ಥವಾಗುತ್ತದೆ. ಅದನ್ನು ಬಿಟ್ಟು 'ಜನರು ಚೇಂಜ್ ಕೇಳುತ್ತಾರೆ'ಎಂದು ಮನಸೋ ಇಚ್ಚೆ ಕೊಡುತ್ತ ಹೋದರೆ ಯಾವುದು ಆರೋಗ್ಯದ ಅಗತ್ಯವೋ ಅದು ಮರೆಯಾಗುತ್ತವೆ. ಬರೀ ಜಂಕ್ ಫುಡ್ ಗಳಾಗಬೇಕೆ ಮಾಧ್ಯಮ ????

*************

1 comment:

Pramod P T said...

ನಿಮ್ಮೆಲ್ಲಾ ಬರಹಗಳನ್ನ ಓದೊಕೆ time ಬೇಕಿನ್ನು. ಆದ್ರೆ ಆ ಗೆಜ್ಜೆ ಚಿತ್ರ ಮಾತ್ರ ಸೂಪರ್!

ಪ್ರಮೋದ್