Friday, January 29, 2010

ಬೌಷ್ಷ ಪುಟ್ಟಕ್ಕನ ಬಗ್ಗೆ ಹೆಚ್ಚಿನ ವಿವರ ಬೇಕಾಗ.
ನಮ್ಮದೇ ಬೈಲಿಲಿ, ಪ್ರೀತಿಲಿ ಇಪ್ಪಂತಾ ಪುಟ್ಟ ಅಕ್ಕ, ಈ ಪುಟ್ಟಕ್ಕ.
ಒಳ್ಳೆತ ಅನುಭವ ಇದ್ದು. ಮಡಿಕೇರಿಂದ ಹಿಡುದು ಕೊಡೆಯಾಲದ ಒರೆಗೆ – ಇಡೀ ಅನುಭವ ಇದ್ದು.
ಲೋಕಾರೂಢಿ ಕತೆ ಹೇಳುದು ಹೇಳಿರೆ ಈ ಅಕ್ಕಂಗೆ ಬಾರೀ ಇಷ್ಟ. ಪುಸ್ತಕವುದೇ ಬರಗು, ಪೇಪರುದೇ ಓದುಗು.
ಹಾಂಗೆಯೇ, ಆರುದೇ ನೋಡ್ತವಿಲ್ಲೇ ಹೇಳಿ ಆದರೆ ಡೇನ್ಸುದೇ ಮಾಡುಗು..!
ರಜ್ಜ ಪರಂಚುಗು, ರಜ್ಜ ಬೈಗು, ರಜ್ಜ ಗಲಾಟೆ ಮಾಡುಗು – ಎಂತದೇ ಇದ್ದರುದೇ ಪುಟ್ಟಕ್ಕಂಗೆ ಪ್ರೀತಿ ಇರ್ತು.
ಜಗಳವುದೇ ಮಾಡುಗು, ಪ್ರೀತಿಯುದೇ ಮಾಡುಗು. ಗಳಿಗೆಗೊಂದು ಭಾವನೆ – ಹೇಳಿ ಆಚಕರೆಮಾಣಿ ಪರಂಚುಗು..

ಮಕ್ಕಳತ್ರೆ ಅಂತೂ ತುಂಬ ಕುಶೀಲಿ ಮಾತಾಡುಗು.
ಕತೆ ಹೇಳಿದಹಾಂಗೆ ಪಾಟಮಾಡುದೋ, ಪಾಟ ಮಾಡಿದ ಹಾಂಗೆ ಕತೆ ಹೇಳಿದ್ದೋ – ಕನುಪ್ಯೂಸು ಬಪ್ಪಷ್ಟು ಚೆಂದಕೆ!
ಕನ್ನಡಲ್ಲಿ ಮಾತಾಡುದು ಜಾಸ್ತಿ ಆದ ಕಾರಣ ಮಾತಾಡುವಗ ಎಡೇಡೆಲಿ ಕನ್ನಡ ಶಬ್ದಂಗೊ ಬಕ್ಕು – ಆದರೆಂತಾತು, ಕೇಳುಲೆ ಚೆಂದವೇ..
ಎಲ್ಲೊರತ್ರುದೇ ನೆಗೆನೆಗೆ ಮಾಡಿ ಮಾತಾಡ್ತ ಪುಟ್ಟಕ್ಕಂಗೊ ಒಂದು ವೀಕುನೆಸ್ಸು.
ಎಂತರ? ನಮ್ಮ ಆಚಕರೆಮಾಣಿ ಹಲ್ಲುಕಿರುದರೆ ಬೆಶಿ ಏರುಗು, ಒಳ್ಳೆತ ಪರಂಚುಗು.
ಪುಟ್ಟಕ್ಕ ಪರಂಚಿದಷ್ಟೂ ಅವ° ನೆಗೆ ಮಾಡುಗು..
ಅವ ನೆಗೆ ಮಾಡಿದಷ್ಟೂ ಪುಟ್ಟಕ್ಕಂಗೆ ಬೆಶಿ ಏರುಗು ;-) – ಅವಿಬ್ರು ಎದುರೆದುರು ಸಿಕ್ಕಿರೆ ಒಪ್ಪಕ್ಕ ಹತ್ತಿ ತಂದು ಮಡಿಕ್ಕೊಂಗು!!
ಪರಸ್ಪರ ನೆಗೆದೇ, ಪರಂಚಾಣದೇ ಏರಿಗೊಂಡೇ ಹೋಪದಿದಾ! ಇಳಿವದು ಮಾಷ್ಟ್ರುಮಾವ ಕೋಲುತೆಕ್ಕೊಂಡು ಬಂದ ಮತ್ತೆಯೇ!!

ಈ ಪುಟ್ಟಕ್ಕ ಬೈಲಿನವಕ್ಕೆ ಕತೆ ಹೇಳ್ತಡ.
ಬನ್ನಿ, ಎಲ್ಲೊರುದೇ ಕೇಳುವೊ°!
ಏ°?
~

ಪುಟ್ಟಕ್ಕನ ಕತೆಗೊ ಸದ್ಯಲ್ಲೇ, ಇದೇ ಅಂಕಣಲ್ಲಿ..!!

ವಾಸ್ತವ(ವ್ಯ)

ಅಮ್ಮ ಹೇಳಿದಾಗಿಂದ ತಲೇಲಿ ಹುಳ ಕೊರವಲೆ ಶುರು ಆಯ್ದು. ನಾಡಿದ್ದು ಅಪ್ಪ ಬಂದರೆ ಅಪ್ಪನ ಕೈಯ್ಯಿಂದ ಮಾತು ತೆಕ್ಕೊಳ್ಳೆಕ್ಕು. ಇಲ್ಲೇ ಹೇಳಿ ಆದರೆ ಅಪ್ಪನ ವಯಿವಾಟಿಲಿ ಈಗ ಸದ್ಯಕ್ಕೆ ನಮ್ಮದು ಹೇಳಿ ಇಪ್ಪ ಮನೆಯೂ ಕೈ ತಪ್ಪಿ ಹೋಕು. ಹೇಳುಲೆಡಿಯ.
‘ ಇದ, ಅಪ್ಪಂಗೆ ಶುಕ್ರದೆಶೆ ಇಪ್ಪದೆನೋ ಅಪ್ಪು. ಆದರೆ ಬಪ್ಪ ಪೈಸೆಯೂ ಸರಿಯಾಗಿ ಕೈಗೆ ದಕ್ಕುತ್ತಿಲ್ಲೆ ಹೇಳಿರೆ ಇವು ಪೂಜೆ ಸರಿಗಟ್ಟು ಮಾಡ್ತವಿಲ್ಲೆ ಹೇಳಿ ಅರ್ತ ಅಲ್ಲದೋ?.. ಅದ .. ಮೊನ್ನೆ ಜೋಯಿಷ ಹೇಳಿದ.. ಇನ್ನೆರಡು ವರ್ಶಲ್ಲಿ ಮನೆ ಮಾರಾಟ ಮಾಡುವ ಗ್ರಾಚಾರ ಇದ್ದಡ.. ನಿನಗೊಂತಿದ್ದಾ..?ಪುಟ್ಟಂಗೆ ಹೇಳಿಕೊಂಡಿತ್ತಿದ್ದವಡ..ಸಾಕು ಇದು, ಮಾರಾಟ ಮಾಡಿ ಸಣ್ಣ ಹಿತ್ತಿಲು ಮನೆ ತೆಕ್ಕೊಂಬ ಹೇಳಿ. ಅಲ್ಲದ್ದೆ ಕಂಡಕಂಡವರ ಹತ್ರ ಎಲ್ಲಾ ಮನೆ ಕೊಡುಲೆ ಇದ್ದು ಹೇಳಿ ಸಾರಿಕೊಂಡು ಬತ್ತಾ ಇದ್ದವಡ. . ಏನೋ ಎನ್ನ ಗ್ರಹಗತಿ ಪಲಂದ ಮನೆ ಒಳಿವ ಯೋಗ ಇದ್ದು ಹೇಳುದೇ ಸಮಾದಾನ..’

ಹೀಂಗೆ ಅಮ್ಮ ಮೊನ್ನೆ ಪೋನಿಲಿ, ಅಷ್ಟೆಂತಗೆ ಮನೆಗೆ ಹೋದಪಾಗಲೂ ಞಂಕ್ಕುಞ ಮಾಡುವಾಗ ಎಂತ ಹೇಳೆಕ್ಕೋ ಹೇಳಿ ಅಂದಾಜಿಯೇ ಆಯಿದಿಲ್ಲೆ.
‘ನೀನು ಒಂದರಿ ಸುಮ್ಮನಿಪ್ಪಲೆ ಎಡಿಗಾ’ ಹೇಳಿ ಪರಂಚಿದೆ.’
‘ಎಲ್ಲಾರು ಎನ್ನ ಹೀಂಗೆ ಮಾಡುದು. ಮೂಲೆಗುಂಪು ಎಷ್ಟು ಮಾಡುವಿ.. ಹೇಳಿರೆ ಕೇಳ.. ಯಾರಿಂಗೂ ಗೇನ ಹೇಳಿ ಇಲ್ಲೆ.’ ಹೇಳಿ ದುಮುದುಮು ಹೇಳಿ ಹೋಗಿ ಮನುಗುವಾಗ ‘ಶ್ಶೆ’ ಹೇಳಿ ಕಂಡತ್ತು.

ಅಲ್ಲಾರಡೆ, ಈ ಅಪ್ಪಂಗೆ ಹೀಂಗಿಪ್ಪ ಬುದ್ದಿ ಎಂತಾಗಾರೂ ಬತ್ತೋ..
ವಾಚು, ಉಂಗುರ, ಗಡಿಯಾರ, ಹರಳು ಎಕ್ಸ್ಚೇಂಜ್ ಮಾಡುವ ಹಾಂಗೆ ಮನೆಯನ್ನೂ.. ಎಲ್ಲಿಗೆ ಹೋಪದು ಹೇಳಿ ಬೇಡದೋ?
ಎಂತ ಆ ಹಳೇ ಕುಂಬಾಟು ಬಿಡಾರದ ಹಾಂಗಿಪ್ಪ ಮನೆಗೆ ಹೋಪದ..! ಯಾರಾರು ನೆಂಟರಿಷ್ಟರು ಬಂದರೆ ಮುಸುಡು ಹೇಂಗೆ ತೋರ್ಸುದು? ನಾಚಿಕೆಯಾವ್ತಿಲ್ಯಾ?
ಈ ಸಾಲಸೋಲ ಮಾಡಿ ತೆಕ್ಕೊಂಡರೂ ದೊಡ್ಡ ಮನೆ ಹೇಳಿ ಆದ ಮೇಲೆ ಮೋರೆ ತೋರ್ಸುಲಾದರೂ ದೈರ್ಯ ಬಂಯಿದು.
ಸಾಲ ಜಾಸ್ತಿ ಆತು ಹೇಳಿರೆ ತೆಕ್ಕೊಂಡ ಮನೆಯ ಮಾರುದು ಪರಿಹಾರವಾ?
ಇನ್ನೊಂದು ಮನೆ ಸಿಕ್ಕುವಲ್ಲಿವರೆಗೆ ಎಂತ ಬೀದಿಲಿ ಟಿಕಾಣಿ ಹೂಡುದಾ?
ಆತಪ್ಪಾ.. ಮಾರುದು ಹೇಳಿ ಮಡಿಕ್ಕೊಂಡರೂ ‘ಕ್ರಯ ೧೦ ಲಕ್ಷ, ಆದರೆ ೭ ಲಕ್ಷಕ್ಕೆ ಸಿಕ್ಕಿರೂ ಕೊಡ್ತೆ’ ಹೇಳಿ ಎಂಗಳತ್ರ ಹೇಳಿದ ಹಾಂಗೆ ಊರಿಲಿಡೀ ಟಾಂಟಾಂ ಮಾಡಿರೆ ಯೇವ ಪ್ರಾಣಿ ೧೦ ಲಕ್ಷಕ್ಕೆ ತೆಕ್ಕೊಳ್ತೆಯೋ ಹೇಳಿ ಬಕ್ಕು ಹೇಳಿ ಬೇಕನ್ನೆ?
ಸಾಲ ಜಾಸ್ತಿ ಆವ್ತಪ್ಪ.. ಒಂಚೂರು ಕೈ ಬಿಗಿತ ಮಾಡೆಕ್ಕು.
ಕಂಡಕಂಡವಕ್ಕೆಲ್ಲಾ ಉಪಕಾರ ಮಾಡುದು ಹೇಳಿ ದುಂದು ಮಾಡಿರೆ ಅಕ್ಕಾ.. ಒಂದು ಸೇರು ಹಾಕುವಲ್ಲಿ ೪ ಸೇರು ಹಾಕಿರೆ, ೧೦ ರೂಪಾಯಿ ಕೊಡುವಲ್ಲಿ ‘ ಇಟ್ಟುಕೊಳ್ಳಿ, ನಿಮಗೂ ಮನೆ ಮಕ್ಳು ಇದ್ದಾರಲ್ವಾ’ ಹೇಳಿ ಕೊಟ್ಟರೆ ಏಂವ ಮನುಷ್ಯ ಬಕ್ಕು ನಾಳೆ ನಾವು ಸಂಕಟಲ್ಲಿಪ್ಪಾಗ..
ತಲೆ ಕುರೂಡು ಆತು.
ಮೊನ್ನೆ ಆ ಗೌಡನ ಹೆಂಡತ್ತಿ ಕೇಳಿತ್ತಿದ್ದವು.
‘ ಎಂತ ಹುಡ್ಗಿ, ನಿನ್ನ ಅಪ್ಪ ಮನೆ ಮಾರ್ತಾರಂತೆ ಹೌದಾ? ಆ ವಕೀಲರ ಆಳಿನ ಹತ್ರ ಹೇಳ್ತಿದ್ರಂತೆ! ಮೊನೆ ಮೊನ್ನೆ ಒಕ್ಕಲಾಗಿ ಈಗ ಮಾರುದು ಅಂದರೆ ಅರ್ತ ಉಂಟಾ?’ ಕಣ್ಣರಳಿಸಿ ಕೇಳುವಾಗ ಎಂತ ಹೇಳೆಕ್ಕೋ ಅರಡಿದ್ದಿಲ್ಲೆ.

‘ ಇಲ್ವಲ್ಲಾ… ಒಕ್ಕಲಾಗಿ ವರ್ಷ ಆಗ್ಲಿಲ್ಲ. ಅದೆಂತಗೆ ಮಾರ್ತಾರೆ ಹೇಳೀ.. ಸುಮ್ಮಗೆ..’ ಹೇಳಿ ವಿರಾಮ ಹಾಕಿತ್ತಿದ್ದೆ..’ ಹೌದು ಬಿಡು..ಆ ಬಿಡಾರದಲ್ಲಿ ನೀವು ಅನುಭವಿಸಿದ ಕಷ್ಟಕ್ಕೆ ಲೆಕ್ಕ ಉಂಟಾ. ಅಂತೂ ದೇವರು ಒಳ್ಳೆದು ಮಾಡಿದ. ಚೆಂದ ಇದೆ ಎರಡು ಅಂತಸ್ತು.. ನಿಮ್ಮ ಪುಣ್ಯ.ಅಡಕೆಗೆ ರೇಟು ಇಳಿದ ಕಾರಣ ನಿಮಗೆ ೬ ಲಕ್ಷಕ್ಕೆ ಕೊಟ್ಟ. ಇಲ್ಲವಾದ್ರೆ ಹತ್ತೋ, ಹನ್ನಂದೋ ಹೇಳ್ತಿದ್ನೇನೋ?’ ಕನಿಕರ ಪಟ್ಟುಕೊಂಡು ಹೇಳಿತ್ತು ಗೌಡನ ಮನೆ ಹೆಮ್ಮಕ್ಕೊ..

ಪೂಜೆ ಮಾಡುವ ಬಟ್ಟಂಗೆ ಮಕ್ಕಳ ಓದುಸುದೇ ಕಷ್ಟ..
ಹಾಂಗಿಪ್ಪಾಗ ದಕ್ಷಿಣೆ ಅಲ್ಲಲ್ಲಿಗೆ ಸಿಕ್ಕುದು ಬಿಟ್ಟರೆ ಮನೆ ಸಿಕ್ಕುಗಾ ಹೇಳಿ ಒಂದು ಆಶೆ, ಅನಾತ ಬಾವ ಎರಡೂ ಒಟ್ಟಿಂಗೆ ಬಂದುಕೊಂಡಿಕ್ಕು.
ಹಾಂಗೆ ನೋಡಿರೆ ಅಪ್ಪ ಕೆಲಸ ಮಾಡುವ ದೇವಸ್ತಾನದ ಒತ್ತಟ್ಟಿಂಗೆ ಇಪ್ಪ ಮನೆಯ ತೆಕ್ಕೊಳ್ಳೆಕ್ಕು ಹೇಳಿ ತುಂಬಾ ದಿನಂದ ಆಶೆ ಇತ್ತು.
ಅದಕ್ಕೆ ತಕ್ಕ ಹಾಂಗೆ ದೊಡ್ಡಮ್ಮನ ಒಬ್ಬ ದರ್ವೇಶಿ ಮಗನೂದೇ ಕೂಡಿಕೊಂಡು ಪೈಸೆ ಹಾಕಿ ಮನೆ ಮಾಡುವ ಆಶೆ ತೋರ್ಸಿದ ಕಾರಣ, ಅಪ್ಪ ಎಂತೆಂತದೋ ಬವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡು ಇತ್ತಿದ್ದವು..
ಕೆಲಸಕ್ಕೆ ಹೊಗಿ ಬಪ್ಪಲೂ ಅನುಕೂಲ ಆವ್ತು, ಶೆಡ್ಡಿಲಿ ಅಂಗಡಿ ಮಡುಗುಲಕ್ಕುಹೇಳಿ ಅಪ್ಪನ ಲೆಕ್ಕಾಚಾರ. ಹೇಂಗೂ ನಾವು ಅನ್ನ ಹಾಕಿ ನೋಡಿಗೊಂಡ ಕುಟುಂಬ ಸಹಕಾರ ಕೊಡುಗು ಹೇಳಿ.. ಹಾಂಗಾಗಿ ಆ ಮನೆಯ ಯೆಜಮಾನ ಹದಿನೈದು ಲಕ್ಷ ಹೇಳಿರೂ ಆರಾಮಲ್ಲೇ ಇತ್ತಿದ್ದವು. ಹೇಂಗೂ ಜೊತೆಗೆ ಪೈಸೆ ಹಾಕಿ ಮಾಡುದಲ್ದಾ? ಆದರೆ ಆ ಅಣ್ಣ ‘ತಾರಮ್ಮಯ್ಯ’ ಹೇಳಿ ಯೇವಗ ಕೈ ಆಡಿಸಿದನೋ ಅಪ್ಪ ಪೆಚ್ಚ ಆದವು.. ಪೈಚಾರಿಲಿ ಹಿತ್ತಿಲು ಮನೆ ತೆಕ್ಕೊಂಬಗಲೂದೇ ಹೀಂಗೆ ಮಾಡಿದ್ದು ಅಪ್ಪಂಗೆ ಮರತ್ತು ಹೋದ್ದೋ, ನಂಬಿಕೆ ಹೆಚ್ಚು ಮಡುಗಿದ್ದೋ ಎಂತದೋ ಒಟ್ಟಿಲಿ ನೋಡ್ತನೋಡ್ತ ಹಾಂಗೆ ಆ ಮನೆ ಕೈ ತಪ್ಪಿ ಹೋತು. ಮತ್ತೆಂತ ಮಾಡುದು.. ಮನೆಯ ಯೊಗ ಇಲ್ಲೆ ಹೇಳಿಕೊಂಡು ಇಪ್ಪಾಗಲೇ ಈಗಿಪ್ಪ ಮನೆಯ ಮಾತುಕತೆ ಬಂದದ್ದು. ಅಪ್ಪನಲ್ಲಿಗೆ ಪಂಚಾಂಗದಿನ ಕೇಳುಲೆ ಬಂದವು ಮನೆ ಮಾರುವ ಆಲೋಚನೆಲಿ ಇದ್ದವು ಹೇಳಿ ಗೊಂತಾದದ್ದೇ ತಡ, ಹೇಂಗೂ ಮನೆ ಮಾಡುವ ಅಡಾವುಡಿಲಿದ್ದ ಅಪ್ಪ ಒಪ್ಪಿಗೆ ಕೊಟ್ಟೂ ಆತು. ಆ ಲೆಕ್ಕಲ್ಲಿ ಪೈಚಾರಿಲಿ ಇದ್ದ ನಾಕು ತೆಂಗಿನ ಸೆಸಿ ಇದ್ದ ಸಣ್ಣ ಹಿತ್ತಿಲು ಮನೆ, ಒಂದು ಸೈಟಿನ ಅಂಬೇರ್ಪಿಲಿ ಅರ್ದ ರೇಟಿಂಗೆ ಕೊಟ್ಟಿಕ್ಕಿ ಒಂದು ತಿಂಗಳಿಲೇ ಅಶ್ವತ್ತಮರದ ಮೇಲಾಣ ರೋಡಿನ ಮನೆಯ ತೆಕ್ಕೊಂಡೂ ಆತು. ಒಕ್ಕಲೂ ಆತು..ಅಮ್ಮಂಗೂ ಕುಶಿ. .. ಎಲ್ಲಾ ವೆವಸ್ತೆ ಇದ್ದು..ಎಲ್ಲದಕ್ಕೂ ಹತ್ತಿರ ಹೇಳಿ..ಎನಗೂ ಕುಶಿ.. ಆನು ಅಂಗನವಾಡಿಗೆ ಹೋಯಿಕ್ಕೊಂಡಿಪ್ಪಾಗ ದಾರಿಕರೆಲಿ ಬಾರೀ ಲಾಯ್ಕ ಕಂಡುಕೊಂಡಿದ ಮನೆ ಈಗ ನಮ್ಮದು ಹೇಳಿ..
ಮತ್ತೆಯೂದೇ ಕುಶಿ…’ ಅಲ್ಲ ಮಾರಾಯ್ತೀ..
ಆ ಹಳೇ ಬಿಡಾರ ದೇವಸ್ತಾನದ ಎದುರಿಲಿ ಇಪ್ಪ ಕಾರಣ ದೇವರ್ಕಳ ದೃಷ್ಟಿ ಹೇಳಿ ಸರಿಯಾಗಿ ಉಂಬಲೂ, ತಿಂಬಲೂ ಅಯ್ಕೊಂಡಿತ್ತಿಲ್ಲೆ..
ಯೇವಗ ನೋಡಿರೂ ಉಷಾರಿಲ್ಲೆ…ಮನೆಲೂ ನೆಮ್ಮದಿ ಇಲ್ಲೆ. ಜೆಗಳವೋ ಜೆಗಳ..ಮನುಗುವ ಕೋಣೆಲೇ ಹಿಡಿಹಿಡಿ ಒರಳೆ ಬಂದುಕೊಂಡಿತ್ತು. ಪೂಂಚ ಕಟ್ಟುಗು..
ಎಷ್ಟು ಸರ್ತಿ ಚಿಮಣೆಣ್ಣೆ ಎರೆದು ಓಡ್ಸಿದ್ದಿಲ್ಲೆ.. ಆ ಅಡಿಗೆ ಮನೆ ಲಾಗಾಯ್ತು ಮುರುದು ಬೀಳುವ ಹಾಂಗಿತ್ತು. ಕರಿ ಉದುರುತ್ತು ಹೇಳಿ ಪ್ರತೀವರ್ಶ ಹಂಚು ಬದಲುಸುದು.
ಪೈಸೆ ಬೇರೆ ಹಾಳು..ಲೇಟ್ರಿನ್ನೋ ಮಾರುಮೈಲು ದೂರ.. ಬ್ರಾಮ್ಮರಿಂಗೂ, ಶೂದ್ರಕ್ಕೊಗೂ ಒಂದೇ..ಇದ್ದ ಎರಡು ರೂಮಿಂಗೆ ತಗಡು ಇಳುಶಿ ಕಟ್ಟಿ ಎಲ್ಲಿ ಹರುದು ಬೀಳುಗೋ ಹೇಳಿಕೊಂಡಿತ್ತಿದ್ದ ರೂಮಿಲಿ ಅಡಿಗೆ ಮಾಡಿ ಮಾಡಿ ಸಾಕಾಗಿತ್ತು..
ಕೂಪಲೂ, ಉಂಬಲೂ, ಮನುಗುಲೂ ಒಂದೇ ರೂಮು…ಅದೇ ಇಲ್ಲಿಗೆ ಬಂದ ಮೇಲೆ ಕೊಚುಲಕ್ಕಿ ಉಂಡುಕೊಂಡಿದ್ದ ಎನಗೆ ಬೆಳ್ತಿಗೆಯನ್ನೂ ತಿಂಬ ಮಟ್ಟಿಂಗೆ ಆರೋಗ್ಯ ಸುದಾರ್ಸಿದ್ದು..’ ಹೇಳಿ ದೊಡ್ಡ ಉಸುರು ತೆಗದು ಅಮ್ಮ ಹೇಳುವಾಗ ಸಾರ್ತಕ ಅತು ಹೇಳಿ ಕಾಂಗು.
ಹೀಂಗೆಲ್ಲಾ ಹೇಳಿದ ಅಮ್ಮ ಕಳುದ ಸರ್ತಿ ಹೋಗಿಪ್ಪಾಗ ಮೆಲ್ಲಂಗೆ ರಾಗ ಎಳವಲೆ ಸುರು ಮಾಡಿಕೊಂಡಿತ್ತು..’
ಆನು ಮೊನ್ನೆ ಜೋಯಿಶರ ಹತ್ರ ಹೋಗಿಪ್ಪಾಗ ಹೇಳಿದವು. ಮನೆ ಕೆಳಂಗೆ ನಾಗನ ಕಟ್ಟೆಯೂದೇ ಅಶ್ವತ್ತ ಮರವೂದೇ ಇದ್ದಲ್ಲದಾ? ಯೆಜಮಾನ್ರು ಸರಿಗಟ್ಟು ಪೂಜೆ ಮಾಡ್ತವಿಲ್ಲೆ..ಅಲ್ಲದೋ?ಜೊತೆಗೆ ಸಂಚಾರ ಬೇರೆ ಇದ್ದು. ಹಾಂಗಾಗಿ ಯೆಜಮಾನ್ರಿಂಗೆ ಮನೆ ಮಾರುಲೆ ಪ್ರೇರಣೆ ಬತ್ತಾ ಇಪ್ಪದು’’..
ಅಪ್ಪೋ ಮಿನಿಯಾ…ಹೇಳುಲೆಡಿಯ.. ನಂಬುದಾ?
ಇಕ್ಕೇನೋ..ಇಲ್ಲದ್ರೆ ಮೇಲಾಣ ಅಂತಸ್ತಿಂಗೆ ಬಾಡಿಗೆಗೆ ಸರೀ ಜೆನ ಬಂದರೆ ಸಾಲ ತೀರ್ಸುಲಕ್ಕು ಹೇಳಿದ ಅಪ್ಪ, ಬಾಡಿಗೆಗೂ ಮನೆ ಕೊಡದ್ದೆ ಮನೆ ಮಾರುವ ನಿರ್ದಾರ ತೆಕ್ಕೊಂಡದೆಂತಗೆ ಅಂಬಗ…!
ಈ ದೊಡ್ಡಮ್ಮ ಇದ್ದನ್ನೆ.. ಅದೂದೇ ಓರೆಗೆ ನೆಗೆ ಮಾಡುಗು..’ ಎಂತ ಕೂಸೆ..ನಿನ್ನ ಅಮ್ಮ ಬಾರೀ ಹೇಳಿಕೊಂಡಿತ್ತು ಹೊಸತ್ತಿಲಿ.. ಈಗೆಂತಾತು? ಅಪ್ಪ ಅಮ್ಮನೊಟ್ಟಿಂಗೆ ಜೆಗಳ ಮಾಡುದು ಕಡಮ್ಮೆ ಮಾಡಿದನಾ?’ ಎಂತ ಹೇಳಿ ಹೇಳುದು.. ಮನೆ ಬದಲು ಮಾಡಿದ ತಕ್ಷಣ ಮನಸ್ಸು ಬದಲಾವ್ತಾ ಹೇಳುದಕ್ಕೆ ಎನ್ನತ್ರ ಉತ್ತರ ಇಲ್ಲ್ಯೇ !

ಪುಟ್ಟಂಗೂ ದುಕ್ಕ ಬಕ್ಕು..’ ಇವಿಬ್ರಿಂಗೂ ಹೇಳಿರೂ ಅರ್ತ ಅವ್ತಿಲ್ಲೆ.. ಒಬ್ಬಂಗೆ ಮನೆ ಮಾರದ್ರೆ ಸಾಲ ತೀರ್ಸುಲೆ ಎಡಿಯ. ಇನ್ನೊಬ್ಬಂಗೆ ಮನೆಲಿ ಬೇಕಾದ ಹಾಂಗೆ ದೇವರ ಮೂರ್ತಿ, ಲಿಂಗ-ಸಾಲಿಗ್ರಾಮ ಸಂಗ್ರಹಿಸುವ ಹವ್ಯಾಸ ಹೇಳಿ ಪೇರ್ಸಿ ಪೂಜೆ ಮಾಡದ್ರೆ ದೋಷ, ಅದಕ್ಕೆ ಹೀಂಗಪ್ಪದೂ ಹೇಳೀ, ದೇವಸ್ತಾನಲ್ಲಿ ಹೋಗಿ ಮಡುಗೆಕ್ಕು ಹೇಳುವ ಹಟ. ಒಂದು ರಚ್ಚೆಂದ ಬಿಡ. ಒಂದು ಗೂಂಜೆಂದ ಬಿಡ ಹೇಳ್ತವಿಲ್ಯಾ ಹಾಂಗೆ..ಇಬ್ರಿಂಗೂ ವಿಮರ್ಶೆ ಮಾಡೆಕ್ಕೂ ಹೇಳಿಯೇ ಇಲ್ಲೆ..ಆ ಅಣ್ಣ ಬಂದವನೂದೇ ಅಮ್ಮಂಗೆ ಗುಟ್ಟಿಲಿ ಕೆಮಿ ಊದಿಕ್ಕಿ ಹೋದ..ಎಂತ ಅಕ್ಕಾ..ಹಾಂಗೆ ಹವ್ಯಾಸ ಇದ್ದರೆ ಸಮಸ್ಯೆ ಆವ್ತಾ’ ?
ಅವನ ಪ್ರಶ್ನೆಗೆ ಮೌನದ ಉತ್ತರವೇ ಎನ್ನ ಮುಕ್ತಾಯ..
ಅಪ್ಪ ಮಾಡುದು ಹಾಂಗೆ.. ಪೈಸೆ ಕೊಟ್ಟು ಎಲ್ಲಿಂದೆಲ್ಲಾ ತರುಶಿಕೊಂಡು ಕುಶಿ ಪಡುವ ಅಪ್ಪನ ವಿಶಿಷ್ಟ ಹವ್ಯಾಸಂದ ಅಮ್ಮನ ಚೆರ್ಪಿರಿ ದಿನಾಲೂ ಇಕ್ಕು. ಹಾಂಗಾಗಿ ಕೊನೆಗೊಂದು ದಿನ ಇದ್ದಬದ್ದ ಲಿಂಗ, ಸಾಲಿಗ್ರಾಮಂಗಳೆಲ್ಲದರನ್ನೂ ದೇವಸ್ತಾನಕ್ಕೆ ಕೊಟ್ಟು ಬಂದಿತ್ತಿದ್ದವು. ಆದರೂ ಎನಗೋ ಆಶೆ..ಹಾಂಗಾಗಿ ಅದರ ಪುನಾ ಕಲೆ ಹಾಕಿ ಈ ಮನೆಗೆ ಬಂದ ಮೇಲೆ ಮನೆ ಶೋಕೇಸಿಲಿ ಒಪ್ಪಲ್ಲಿ ಜೋಡಿಸಿ ಲಾಯ್ಕ ಮಡುಗಿತ್ತಿದ್ದೆ. ಅಷ್ಟಕ್ಕೆ ಮನೆ ಮಾರುವ ಪ್ರೇರಣೆ ಬತ್ತಾ?
ಎಂದಿನ ಹಾಂಗೆ ಇಂದೂ ಅಪ್ಪಂದು ಎನಗೆ ಪೋನು.’ ಬಿಪಿ ಜಾಸ್ತಿಯಾಗಿ ಕಾಲು ಬಾತಿದು..’
‘ಛೆ’ ಹೇಳಿ ಕಂಡತ್ತು.ಒಟ್ಟಿಂಗೆ ಕೋಪವೂ ಬಂತು. ‘ ಎಂತ ನಿಂಗೊ..ಸಾಲ ಮಾಡಿಕ್ಕಿ, ತೀರ್ಸುವ ಮೊದಲೇ ಕಂಡಕಂಡ ಹಾಂಗೆಲ್ಲಾ ಕರ್ಚು ಮಾಡಿ, ತಲೆಬೆಶಿ ಮಾಡಿರೆ ಬಿಪಿಯೂ ಬಕ್ಕು.. ಮತ್ತೊಂದೂ ಬಕ್ಕು..ಮೊದಲೇ ಯೊಚನೆ ಮಾಡಿರೆ ಹೀಂಗಾವ್ತಾ’ ರೇಗಿದೆ.
ಎಂತ ಕಂಡತ್ತೋ ಗೊಂತಿಲ್ಲೆ. ‘ ನೀನಾರೂ ಅರ್ತ ಮಾಡಿಕೊಂಬೆ ಹೇಳಿಗ್ರೆಶಿರೆ ನೀನೂ ಹೀಂಗೆ ಮಾತಾಡ್ತೆನ್ನೆ.. ನಿನ್ನ ಅಮ್ಮ ಚರಿಪಿರಿ ಮಾಡಿದ್ದಕ್ಕೆ ಅಲ್ಲದಾ ಮನೆ ತೆಕ್ಕೊಂಡದು..ಅದಕ್ಕೂ ಹಾಂಗೆ ಕಾಂಬದರ್ಲಿ ದೋಶ ಇಲ್ಲೆ..ಊರಿಂಗೆ ಬಂದು ಮೂವತ್ತು ವರ್ಶ ಕಳುದರೂ ‘ಇವಂಗೊಂದು ಮನೆ ಮಾಡುವ ಯೊಗ್ಯತೆ ಇಲ್ಲೆ’ ಹೇಳಿ ಆಡಿಕೊಂಡು ನೆಗೆ ಮಾಡುವಾಗ ಎನಗೂ ಕಾಣುಗು. ಒಂದು ಮನೆ ಮಾಡಿ ತೋರ್ಸೆಕ್ಕು ಹೇಳಿ..ಆದರೆ ನಮ್ಮತ್ರ ಪೈಸೆ ಎಲ್ಲಿದ್ದು ಹೇಳಿ ಬೇಕನ್ನೆ.. ಈ ಬಟ್ಟತ್ತಿಗೆಲಿ ನಾಕು ಕಾಸು ಸಿಕ್ಕುದೂ ನಿಂಗಳ ಓದಿಂಗೆ, ಅಮ್ಮನ ಮದ್ದಿಂಗೆ ಹೇಳಿ ಹೋವ್ತು..’ಅಂದವು.
ಅಪ್ಪನ್ನೆ..ಎಷ್ಟೋ ಸರ್ತಿ ಅಪ್ಪ ದೇವರ ಗರ್ಬಗುಡಿಲಿ ನಿಂತು ಕಣ್ಣೀರು ಹಾಕುಗಡ..’ಒಂದು ಮನೆ ಕೊಡು’ ಹೇಳೀ. ಸರಿ ಮನೆ ಕೊಡುಲೆ ಕೊಟ್ಟ. ಅದೂ ಸಾಲಲ್ಲಿ.. ಅದು ಕಮ್ಮಿಯೋ..?ಎಷ್ಟೆಷ್ಟೋ ಬಡ್ಡಿಗೆ.ತೀರ್ಸುವ ಹೊತ್ತಿಂಗಪ್ಪಾಗ ಮತ್ತೊಂದು ಮನೆ ತೆಕ್ಕೊಂಬಷ್ಟು ಪೈಸೆ ಕಟ್ಟೆಕಕ್ಕು. ಎಲ್ಲಾ ಬಂಗಾರ, ಚೈನು,, ಉಂಗುರ ಬೇಂಕಿಲಿ ಅಡವು ಮಡುಗಿದ್ದೂ ಆಯಿದು. ಇನ್ನೂ ಏನಿಲ್ಲೆ ಹೇಳಿರೂ ಅಪ್ಪಚ್ಚಿಯತ್ರ ೮೦ ಸಾವಿರ, ಪುಟ್ಟಮಾವನ ಹತ್ರ ಒಂದಿಪ್ಪತ್ತೈದು, ಹಾಲಿಂಗೆ ಬಪ್ಪ ಸುಬ್ಬಣ್ಣನತ್ರ ಹದಿನೈದು, ಯೆಲ್ಲಪ್ಪನ ಬೇಂಕಿಲಿ ೬೦, ಕರ್ಣಾಟಕ ಬೇಂಕಿಲಿ ೩ ಲಕ್ಷ.. ಇನ್ನೂ ಕಟ್ಟುಲೆ ಇದ್ದೂ ಹೇಳಿರೆ, ಅದರೊಟ್ಟಿಂಗೆ ಮಕ್ಕಳ ಪೀಸು, ಹಾಸ್ಟೆಲ್ ಬಿಲ್ಲು…ಯಾರಿಂಗಾರೂ ತಲೆ ತಿರುಗದ್ದೆ ಇಕ್ಕಾ..
ಹಳೇ ಮನೆಯೇ ಒಳ್ಳೆದಿತ್ತು ಹೇಳಿ ಕಂಡತ್ತು… ಹೊಸಮನೆ ಹೇಳುವ ಉಮೇದು ಎಲ್ಲರಿಂಗಿದ್ದರೂ ಆನು ಮನೆ ಒಕ್ಕಲಾದ ಕಸ್ತಲೆಗೆ ಹೊಸ ಮನೆಗೆ ಬಾರದ್ದೆ ಅಲ್ಲೆ ಮನುಗಿತ್ತಿದ್ದೆ. ಆತು.. ಆ ಒರಳೆ ಹಿಡುದ್ದ ಗೋಡೆಗಳ ನೋಡಿ ಕಣ್ಣೀರು ಬಂದು ಒಪ್ಪ ಕೊಟ್ಟು ಬಂದಿತ್ತಿದ್ದೆ. ಸ್ವಂತದ್ದು ಅಲ್ಲ, ಕ್ವಾಟ್ರಸ್ಸು ಹೇಳಿ ಬಿಟ್ರೆ, ಬಟ್ಟತ್ತಿಗೆ ಮಾಡುವ ಕಾಲದ ವರೆಗೂ ಆ ಮನೆ ನಮ್ಮದೇ ಹೇಳಿ ಅದಕ್ಕೆ ಸುಣ್ಣ, ಬಣ್ಣ, ರಿಪೇರಿ… ಬಟ್ರು ಬಿಡಾರದಲ್ಲಿದವು ಹೇಳಿ ಅನುಕಂಪ, ಅಮ್ಮನ ಬಿಟ್ರೆ ಎಲ್ಲರಿಂಗೂ ನೆಮ್ಮದಿ, ಆರೋಗ್ಯ.. ಅಲ್ಲಿಯಾಣ ನೆಲ್ಲಿ, ಬಸಳೆ, ನೇರಳೆ, ಪೇರಳೆ, ನಕ್ಶತ್ರ ಹಣ್ಣು, ಮಾವಿನ ಕಾಯಿ ಹೇಳಿ ಹಿತ್ಲಿಲಿ ಬೆಳಶುದು, ತಿಂಬದು, ಕೊಡುದರ ಮರವಲೆಡಿಗಾ? ಅಲ್ಲಿಯಾಣ ಕಸ್ತಲೆ ಕೋಣೆಲಿಯೇ ಅಲ್ಲದಾ ಓದಿ ಬರದು ಎಷ್ಟೋ ಸರ್ತಿ ಕ್ಲಾಸಿಲಿ ಫಸ್ಟು ಬಂದದು!ಸಣ್ಣದಿಪ್ಪಾಗ ಕಳೆದ ದಿನಂಗಳ ಕುಶಿ.. ಎಲ್ಲವೂ ಅಲ್ಲೇ ಅಲ್ಲದಾ..? ಬಂದವಕ್ಕೆಲ್ಲಾ ಮದ್ಯಾನ್ನ ಊಟ, ರಾತ್ರೆ ಊಟ…’ ಚೆತ್ರವೋ ಇದು’ ಹೇಳಿ ಅಮ್ಮ ಪರಂಚಿರೂ, ದೇವಸ್ತಾನಕ್ಕೆ ಬಂದವಕ್ಕೆ ಅಪ್ಪ ಊಟ ಹಾಕದ್ದೆ ಇರ.
ಅಮ್ಮನ ಮೋರೆ ನೋಡಿಕ್ಕಿ ಇಲ್ಲಿಗೆ ಬಂದ ನಂತ್ರ ಆದರೂ ಉಷಾರಾಯ್ದಾ?
ಅಲ್ಲಿ ಇದ್ದ ಕಾಯಿಲೆ ಇಲ್ಲೂ ಇದ್ದು. ಒಟ್ಟಿಂಗೆ ಅಪ್ಪಂಗೆ ಬಿಪಿ ಏರುದು ಹೆಚ್ಚಿಗೆ.. ದೊಡ್ಡಮನೆ ಹೇಳಿಕೊಂಬದು ಬಿಟ್ಟರೆ ಬೇರೆಂತ ಕಾಣ್ತಿಲ್ಲೆ.
ನಲ್ಲಿ ನೀರು ಸರಿ ಬತ್ತಿಲ್ಲೆ ಹೇಳಿ ೫೦ ಅಡಿ ಉದ್ದದ ಬಾವಿ ಕೊರದು ನೀರು ತರ್ಸುಲೂ ಖರ್ಚೋ ಕರ್ಚು..
ಕಂಡ ಕಂಡ ದೇವ್ರಿಂಗೆಲ್ಲಾ ಹರಕ್ಕೆ ಹೇಳಿ ಅಂತೂ ನೀರು ಸಿಕ್ಕಿಯಪ್ಪಾಗ ಸಾಕು ಬೇಕಾಯ್ದು.
ಎಂತದೇ ಆಗಲಿ, ಈ ಮನೆಯ ಮಾರುಲೆ ಬಿಟ್ರೆ ಮುಂದೆ ಹೇಂಗೆ? ‘ಅಪ್ಪ ಎಂತ ಮಾಡಿದ್ದ’ ಹೇಳಿ ಕೇಳಿರೆ ಹೇಳುಲೆ, ತೋರುಸುಲೆ ಮನೆ ಇರೆಕ್ಕು ಹೇಳುದು ಎಲ್ಲರ ಆಶೆ.
ಅಪ್ಪಂಗೂ ಇದ್ದು.. ಆದರೆ ಈಗ ಮನೆ ಮಾರುವ ನಿರ್ಧಾರಕ್ಕೆ ಎಂತ ಮಾಡುದಪ್ಪಾ?
ಮತ್ತೆ ಎಂದಿನ ಹಾಂಗೆ ಪೋನು..’ ಮಗಾ..ಕೆಳಾಣ ಮನೆಯ ಗುಡಿಸಿ, ಸಾರಿಸಿ, ಒರೆಸಿದ್ದೆ..ಅಲಿಗೆ ಹೋಗಿ ಬಪ್ಪಂವಕ್ಕೆ ಪಂಚಾಂಗ, ಜೋತಿಶ್ಯ ಹೇಳುವಾ ಹೇಳಿ.
ಅಲ್ಲಿ ಮನುಗಿಪ್ಪಾಗ ಬಪ್ಪ ಒರಕ್ಕು ಇಲ್ಲಿ ಬತ್ತಿಲ್ಲೆ..ಚೆರಿಪಿರಿಯೂ ಕೇಳುಲಾವ್ತಿಲ್ಲೆ. ಕಸ್ತಲಪ್ಪಾಗ ಊಟಕ್ಕೆ ಬತ್ತೆ..ಹಾಂ.. ಸಾಲಕ್ಕೇ ಹೇಳಿ ಮೊನ್ನೆ ಯೆಲ್ಲಪ್ಪಂಗೆ ಎರಡು ಸಾವಿರ ಕೊಟ್ಟಿದೆ.
ಮನೆಗೆ ಹೊಸ ಚೇರ್ ಕೂಪಲೆ ಹೇಳಿ ತಂಯಿದೆ. ಹಳೇ ಮೇಜಿನ ಅಲ್ಲಿಗೆ ಸಾಗುಸುತ್ತೆ. ಅಕ್ಕಲ್ಲದಾ..?ನೆಗೆ ಮಾಡಿಕೊಂಡು ಹೇಳಿದವು ಅಪ್ಪ.
ಎನಗೆ ಎಂತ ಹೇಳೆಕ್ಕೋ ಅರಡಿದ್ದಿಲ್ಲೆ..
ಅಪ್ಪಂದ ಮತು ತೆಕ್ಕೊಳ್ಳೆಕ್ಕು ಹೇಳುದು ಎನ್ನ ದೊಂಡೆಲೇ ಇಳುದು ಹೋತು.
ಸುಮ್ಮನೆ ತಲೆಯಾಡಿಸಿದೆ..

1 comment:

ಗಣೇಶ ಮಾವ said...

ಊರಿಂದ ಊರಿ0ಗೆ ಹೋಪದು, ಮನೆoದ ಮನೆ ಬದಲಸುವುದು ಬಾಡಿಗೆಯವಕ್ಕೆ , ವರ್ಗಾವಣೆಯ ಸರ್ಕಾರಿ ಕೆಲಸ ಇಪ್ಪವಕ್ಕೆ ತಪ್ಪದ ಕರ್ಮ. ಆದರೆ ಅದರ್ಲೂ ಸ್ವಾರಸ್ಯ ಇದ್ದು ಪ್ರತಿ ಬಾಡಿಗೆ ಮನೆಯೂ ನಮ್ಮ ಸ್ವಂತ ಮನೆಯೇ, ಅದರ ಬಿಡುವವರೆಗೆ. ಇಂಥ ಅನುಭವoಗ ಪ್ರತಿಯೊಬ್ಬರದೂ ಒಂದಲ್ಲ ಒಂದು ದಿನ ಆವ್ತು. ಮನೆ ಬದಲಸುವುದು ಸಾಮಾನು ಸರಂಜಾಮುಗಳ ಮೆರವಣಿಗೆ ಮಾತ್ರವಲ್ಲ, ನೆನಪುಗಳ ಮೆರವಣಿಗೆ. ಅಲ್ದಾ ಪುಟ್ಟಕ್ಕಾ???