ಕೃತಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅನಾವರಣಗೊಳಿಸಿದರು. ಸಭಾಧ್ಯಕ್ಷತೆಯನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಟಿ.ಶಾಮ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ.ಸಾ.ಪಾ ಪೂರ್ವಾಧ್ಯಕ್ಷ ಶ್ರೀ ಹರಿಕೃಷ್ಣ ಪುನರೂರು, ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸಿದ್ದರು.
ಕೃತಿಯನ್ನು ವಿಮರ್ಶಿಸುತ್ತಾ ಮಾತನಾಡಿದ ಬಹುಶ್ರುತ ವಿದ್ವಾಂಸ, ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ ; ಇಂದಿನ ದಿನಗಳಲ್ಲಿ ಸಂಶೋಧನೆಗಳು ನೀರಸವಾಗುತ್ತಾ ಬಂದಿದ್ದು ; ಅಧ್ಯಯನಶೀಲತೆ ನಿಂತ ನೀರಾಗುತ್ತಲಿದೆ. ಸಂಶೋಧನೆಗಳು ಸಮಾಜಕ್ಕೆ ಪ್ರಸ್ತುತ, ಉಪಯೋಗವೆನಿಸುವ ಸಂದರ್ಭಗಳೇ ಕಾಣೆಯಾಗುತ್ತಲಿದೆ. ಅದು ಕೇವಲ ಗ್ರಂಥಾಲಯದಲ್ಲಷ್ಟೇ ಉಳಿಯದೆ ಉಪಯುಕ್ತ ಚರ್ಚೆಗಳನ್ನು, ವಿಚಾರಗಳನ್ನು ವಿಷಯಕ್ಕೆ ಸಂಬಂಧಿಸಿದಂತೆ ಬೆಳೆಸಬೇಕು. ಇಂತಹ ಸಂದರ್ಭದಲ್ಲಿ ಮುದ್ರಾರ್ಣವವು ಹೊಸ ಆಶಯಗಳೆಡೆಗೆ ಬೆಳಕು ಚೆಲ್ಲಿದ್ದು, ಓದುಗರು ಅಗತ್ಯ ಪರಾಮರ್ಶಿಸಲೇಬೇಕಾದ ಕೃತಿಯಾಗಿ ಹೊರಹೊಮ್ಮಿದೆ. ವಿಷಯದ ಆಳ ಮುಟ್ಟುವಲ್ಲಿ ಸಾಕಷ್ಟು ಪರಿಶ್ರಮ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಖ್ಯಾತ ಬರಹಗಾರ ಪ.ರಾ. ಶಾಸ್ತ್ರಿ ಅವರಿಗೆ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣಾ ಪ್ರಶಸ್ತಿ ಮತ್ತು ನೀರ್ಪಾಜೆ ಭೀಮ ಭಟ್ಟ ಸಂಸ್ಮರಣಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರೂ, ಕುರಿಯ ವಿಠಲಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಗೌರವಾಧ್ಯಕ್ಷರೂ ಆದ ಶ್ರೀ ವಿಜಯರಾಘವ ಪಡ್ವೆಟ್ನಾಯ, ಮನೋರಮಾ ಅವರ ಹೆತ್ತವರಾದ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಪುರೋಹಿತ ವೇದಮೂರ್ತಿ ಬಿ.ಜಿ.ನಾರಾಯಣ ಭಟ್, ಮತ್ತು ಸಾವಿತ್ರಿ ಭಟ್, ಸಾಹಿತಿಗಳಾದ ವಿ.ಬಿ.ಅರ್ತಿಕಜೆ, ಕು.ಗೋಪಾಲ ಭಟ್ ಭಾಗವಹಿಸಿದ್ದರು.
ಸ್ವಾಗತ ಮತ್ತು ಪ್ರಸ್ತಾವನೆಯನ್ನು ಉಜಿರೆ ಅಶೋಕ್ ಭಟ್ ನಿರ್ವಹಿಸಿದರೆ, ಮನೋರಮಾ ಬಿ.ಎನ್ ವಂದಿಸಿದರು. ಉಪನ್ಯಾಸಕ, ಕಲಾವಿದ ಶ್ರುತಕೀರ್ತಿರಾಜ್ ವಂದಿಸಿದರು. ಇದೇ ಸಂದರ್ಭ ಹೊಸನಗರ ಯಕ್ಷಗಾನ ಮೇಳದವರಿಂದ ಯಕ್ಷ ಸಪ್ತಾಹ ಅದ್ಧೂರಿಯಿಂದ ಜರುಗಿ ಭಾರೀ ಜನಸ್ತೋಮದ ಮೆಚ್ಚುಗೆಗೆ ಪಾತ್ರವಾಯಿತು.
‘ಮುದ್ರಾರ್ಣವ’- ನಾಟ್ಯಶಾಸ್ತ್ರ, ಅಭಿನಯದರ್ಪಣ, ಹಸ್ತಲಕ್ಷಣದೀಪಿಕಾ, ಹಸ್ತಮುಕ್ತಾವಳಿ, ಹಠಯೋಗಪ್ರದೀಪಿಕಾ ಮುಂತಾಗಿ ಸುಮಾರು ನೂರಕ್ಕೂ ಮಿಕ್ಕಿದ ಗ್ರಂಥಾವಲೋಕನ, ಗುಣಾತ್ಮಕ ಪರಿಶೀಲನೆ, ವಿದ್ವಾಂಸರ ಸಂದರ್ಶನ, ನೃತ್ಯ ಪ್ರದರ್ಶನಗಳ ಸಮೀಕ್ಷೆಗಳನ್ನೊಳಗೊಂಡ ; ಸಂಗೀತ, ನೃತ್ತ-ನೃತ್ಯ-ನಾಟ್ಯ, ಯೋಗ, ತಂತ್ರ-ಮಂತ್ರ, ಧಾರ್ಮಿಕ ಪೂಜಾ ವಿಧಿ, ವೇದ-ಶಾಸ್ತ್ರ-ಪುರಾಣ, ಸಾಮಾನ್ಯ ಜೀವನಪದ್ಧತಿ, ಮುದ್ರಾ ವಿಜ್ಞಾನ, ಪ್ರತಿಮಾಶಾಸ್ತ್ರ ಮುಂತಾದವುಗಳಲ್ಲಿ ಉಪಯೋಗಿಸುವ ಸಾವಿರಕ್ಕೂ ಹೆಚ್ಚು ಅಸಂಯುತ, ಸಂಯುತ ಹಸ್ತ-ಮುದ್ರೆಗಳ ಸಂವಹನದ ಬಹು ಆಯಾಮಿ ಅಧ್ಯಯನವಾಗಿದೆ.
ಕೃತಿಯ ಲೇಖಕಿ ಮನೋರಮಾ ಬಿ.ಎನ್ ಭರತನಾಟ್ಯ, ಯಕ್ಷಗಾನ, ರಂಗಭೂಮಿ, ಸಾಹಿತ್ಯ, ಪತ್ರಿಕೋದ್ಯಮ, ಸಂಶೋಧನೆಯಲ್ಲಿ ತೊಡಗಿಸಿಕೊಂಡ ಬಹುಮುಖ ಪ್ರತಿಭೆಯವರಾಗಿದ್ದು, ಆಕಾಶವಾಣಿ, ದೂರದರ್ಶನಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಈಗಾಗಲೇ ಇವರ ಸಂಪಾದಕ್ತ್ವದಲ್ಲಿ ನೂಪುರ ಭಮರಿ ಎಂಬ ಪತ್ರಿಕೆ ಪ್ರಕಟವಾಗಿದ್ದು, ವಿದ್ವಜ್ಜನರ ಅಭಿಮಾನ ಗಳಿಸಿದೆ. ಕಳೆದ ವರ್ಷ ‘ಅಕ್ಕ’-ಹೊರನಾಡ ಕನ್ನಡಿಗರ ಒಕ್ಕೂಟ, ಯುಎಸ್ಎ ಇವರು ಏರ್ಪಡಿಸಿದ ಅಂತಾರಾಷ್ಟ್ರೀಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ತಮ್ಮ ‘ಪ್ರದರ್ಶಕ ಕಲೆಗಳಲ್ಲಿ ಫ್ಯೂಷನ್ ಪರಂಪರೆ’ ಎಂಬ ಪ್ರಬಂಧಕ್ಕೆ ಪ್ರಥಮ ಬಹುಮಾನ ಪಡೆದಿದ್ದರು. ಕೃತಿಯೊಂದರ ತರುವಾಯ ; ಮುದ್ರಾರ್ಣವ ಲೇಖಕಿಯ ಎರಡನೆಯ ಕೃತಿಯಾಗಿ ಹೊರಹೊಮ್ಮಿದೆ.
ಮುದ್ರಾರ್ಣವ;- ಈ ಕೃತಿಯನ್ನು ಯಕ್ಷಗಾನದ ಅಗ್ರಮಾನ್ಯ ಕಲಾವಿದ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣಾರ್ಥವಾಗಿ ರೂಪುಗೊಂಡ ಯಕ್ಷಗಾನ ಪ್ರತಿಷ್ಠಾನವು ಪ್ರಕಾಶಿಸಿದ್ದು, ಪ್ರತಿಷ್ಠಾನದ ಸಂಚಾಲಕರಾಗಿ ಹೊಸನಗರ ಶ್ರೀರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮೇಳದ ಸಂಚಾಲಕ, ಯಕ್ಷಗಾನ ಕಲಾವಿದ ಶ್ರೀ ಉಜಿರೆ ಅಶೋಕ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಪುಸ್ತಕದ ಬೆಲೆ ರೂ. ೨೫೦/- ಆಗಿದ್ದು ; ಪ್ರತಿಗಳಿಗಾಗಿ ದೂರವಾಣಿ ೯೯೬೪೧೪೦೯೨೭, ೯೪೪೯೨೫೫೬೬೬ ಸಂಪರ್ಕಿಸಬಹುದು.
No comments:
Post a Comment