Friday, June 5, 2009

ಭಾರತೀಯ ನೃತ್ಯ ಕಲೆ : ಭವಿತವ್ಯಕ್ಕೊಂದು ಆಸರೆ

ದೇಶವೊಂದರ ಸಾಂಸ್ಕೃತಿಕ ಔನ್ನತ್ಯವನ್ನು, ನಾಗರೀಕತೆಯ ವ್ಯಾಪ್ತಿಯನ್ನು ಆ ದೇಶದ ಪ್ರದರ್ಶಿತ ಕಲೆಯಿಂದ ಅರಿತುಕೊಳ್ಳಬಹುದು. ಅಷ್ಟಕ್ಕೂ ದೇಶವೊಂದರ ಕಲೆಗಳು ಬೆಳೆಯುವುದೇ ಅಲ್ಲಿನ ಆಧ್ಯಾತ್ಮಿಕ, ನಾಗರೀಕ, ಸಾಂಸ್ಕೃತಿಕ ಅಗತ್ಯ ಮತ್ತು ಸತ್ಯಗಳನ್ನು ಕಂಡುಕೊಂಡು. ಹಾಗಾದ್ದರಿಂದಲೇ ಭಾರತದ ಭಾಷೆಗಳು ನಾಗರೀಕತೆಯ ಉಗಮದಿಂದ ಇಲ್ಲಿಯವರೆವಿಗೂ ಶಾಬ್ದಿಕವಾಗಿಯಷ್ಟೇ ಅಲ್ಲದೆ, ಅಶಾಬ್ದಿಕವಾಗಿಯೂ ಪ್ರಬಲವಾಗಿ ತನ್ನ ಅಸ್ತಿತ್ವವವನ್ನು ವಿವಿಧ ರೂಪಗಳಲ್ಲಿ ಉಳಿಸಿಕೊಂಡು ಬಂದಿದೆ. ಜೊತೆಗೆ ಭಾಷೆಯು ತನಗೆ ಬೇಕಾದ ಸನ್ನಿವೇಶಗಳನ್ನು, ಸಂಕೇತಗಳನ್ನು ಆವಾಹಿಸಿಕೊಂಡಿದ್ದರಿಂದಾಗಿ ಅದಕ್ಕೆ ಪೂರಕವಾದ ಅಪ್ರಜ್ಞಾಪೂರ್ವಕ ದೇಹಭಾಷೆಗಳ ಬೆಳವಣಿಗೆಯಾಯಿತು. ಅಂತಹ ಅಂಗಭಂಗಿಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿ ಅತ್ಯಾಕರ್ಷಕವಾಗಿ ಮನರಂಜನೆಯೊಂದಿಗೆ ಮಾಹಿತಿ, ಶಿಕ್ಷಣವನ್ನೂ ಕೊಂಡೊಯ್ಯುವ ಕಾರ್ಯ ನೃತ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಲೇ ಬಂದಿದೆ.
ನೃತ್ಯಕಲೆ ತಾಳ-ಅಭಿನಯ-ಅಂಗವಿನ್ಯಾಸಗಳ ಸಮ್ಮಿಳಿತ ಕಲೆ, ಆದ್ದರಿಂದ ಕೇವಲ ಶ್ರವ್ಯದಿಂದ ಮಾತ್ರವಲ್ಲದೆ ದೃಶ್ಯದಿಂದ ಮಾನವನ ಮನಸ್ಸಿನ ಮೇಲೆ ಆಳವಾಗಿ ಪರಿಣಾಮ ಬೀರಬಲ್ಲ ಕಲೆ ನೃತ್ಯ. ನೃತ್ಯ ಕಲೆಯು ಸಾಹಿತ್ಯಿಕವಾಗಿ, ಆಧ್ಯಾತ್ಮಿಕವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿ ಒಂದು ಆರೋಗ್ಯಯುತ ಮನಸ್ಸುಗಳನ್ನು ಸೃಷ್ಠಿ ಮಾಡಬಲ್ಲುದು. ಜಾತಿಮತಗಳ ಭೇದವಿಲ್ಲದೆ, ಮೇಲುಕೀಳು ಭಾವನೆಯಿಲ್ಲದೆ ಈ ಕಲೆಯನ್ನು ಕಲಿಯಲು, ನೋಡಲು ಸಾಧ್ಯ. ಅದರಲ್ಲೂ ಅದರ ಇತಿಹಾಸ, ಭವ್ಯತೆ, ಶಾಸ್ತ್ರೀಯ ಚೌಕಟ್ಟು, ಜಾನಪದೀಯ ಹಿನ್ನಲೆ, ವೇಷಭೂಷಣಗಳು ಆಯಾಯ ಸಮಾಜದ ಗುಣ-ಅವಗುಣಗಳನ್ನು ತಿಳಿಸುವ ಮಾರ್ಗಸೂಚಿಯೂ ಹೌದು. ಅದರ ತಾಳ, ಗಾನ, ಅಭಿನಯ, ಲಯ, ಮಾತು ಇತ್ಯಾದಿ..,ಒಂದೇ ಸಮಯದಲ್ಲಿ ಹಲವು ಭಾವಗಳನ್ನು ವಿಷಯಗಳನ್ನು ತಿಳಿಯಪಡಿಸುವ ಸಾಧನ. ಹಾಗೆಯೇ ಸರಳ ಸುಂದರ ರೀತಿಯಲ್ಲಿ ಸಮಾಜದ ಓರೆಕೋರೆಗಳ ಬಗ್ಗೆ ತಿಳಿವಳಿಕೆಯಿತ್ತು, ತಿದ್ದುವ ಕೆಲಸ ಈ ಕಲೆಯಿಂದ ಸಾಧ್ಯ.
ಹಾಗಾಗಿ ನೃತ್ಯವು ಮಾನವನ ನೀತಿ, ರೀತಿ, ತತ್ವ, ಸರಸ-ಸಂಭಾಷಣೆ, ಪ್ರಾರ್ಥನೆ, ನಿಲುವು…ಹೀಗೆ ಹತ್ತು ಹಲವು ವಿಷಯಗಳನ್ನು ಸರಳ-ಸುಂದರ ರೀತಿಯಲ್ಲಿ ಮನಸ್ಸಿಗೆ ತಲುಪಿಸಲು ಸಾಧ್ಯವಾಗಿದೆ. ಜೊತೆಗೆ ಭಾರತದ ಉದ್ದಗಲಕ್ಕೂ ಇರುವ ಪ್ರಾಚೀನ ದೇವಾಲಯಗಳಲ್ಲಿ ನೃತ್ಯಭಂಗಿಗಳ ಶಿಲ್ಪಗಳನ್ನು ಅಸಂಖ್ಯಾತವಾಗಿ ಕಾಣಬಹುದಾಗಿದೆ. ಶಿಲ್ಪದಲ್ಲಿನ ಸೂತ್ರಗಳಿಗೆ ಸಮವಾಗಿ ನಾಟ್ಯಭಂಗಿಗಳು ಪ್ರೇರಿತವಾಗಿವೆ ಎನ್ನಲಾಗಿದೆ. ಈ ಎಲ್ಲಾ ಶಿಲ್ಪಗಳು ಮಾನವ ಜೀವನದ ಸಾಮಾನ್ಯ ವಿಷಯಗಳೊಂದಿಗೆ ಹಲವು ಭಾವಗಳನ್ನು, ಅನುಭಾವಗಳನ್ನು, ವಿಷಯಗಳನ್ನು, ಲೌಕಿಕ ರೀತಿನೀತಿಗಳನ್ನು ಪ್ರತಿಪಾದಿಸಿರುವುದನ್ನು ಕಾಣುತ್ತೇವೆ.
ಜೀವನ ಸಂಸ್ಕೃತಿಯಲ್ಲಿ ಪ್ರತೀ ಸನ್ನಿವೇಶವೂ ಒಂದು ನಾಟ್ಯದ ವಸ್ತುವಾಗಿ ಕಾಣಿಸುವುದು ನಾಟ್ಯದ ಹೆಚ್ಚುಗಾರಿಕೆ. ಸಾಹಿತ್ಯ, ಶಿಲ್ಪಕಲೆ, ಪುರಾಣ, ಸಂಗೀತ, ರಾಜಮನೆತನ, ಸಾಮಾಜಿಕ ಜೀವನ ಹೀಗೆ ಪ್ರತಿಯೊಂದರಲ್ಲೂ ನಾಟ್ಯದ ಕೊಡುಗೆ ಮಹತ್ವ ಪೂರ್ಣವಾಗಿ ಗೋಚರಿಸುತ್ತದೆ. ಆ ಮೂಲಕ ನೃತ್ಯ ತಾನೊಂದು ಭಾಷಾ ಮಾಧ್ಯಮ ಎಂಬುದನ್ನೂ ದೃಢಪಡಿಸುತ್ತದೆ.
ಕ್ರಿ.ಪೂ. ೨ನೇ ಶತಮಾನದಲ್ಲಿ ರಚಿತವಾಯಿತೆನಿಸುವ ಭರತಮುನಿಯ ನಾಟ್ಯಶಾಸ್ತ್ರದ ಆಧಾರದಲ್ಲಿ ಭಾರತದಲ್ಲಿ ಅನೇಕ ನೃತ್ಯ ಪ್ರಕಾರಗಳು ರೂಪುಗೊಂಡಿತಾದರೂ, ಅದಕ್ಕೂ ಮುಂಚೆ ಪಾಣಿನಿ, ಕೃಶಾಶ್ವರು ಬರೆದ ಸೂತ್ರಗಳಿತ್ತೆನ್ನಲಾಗಿದೆ. ಆದರೆ ಅವೆಲ್ಲವನ್ನೂ ಒಂದೇ ಸೂತ್ರದಲ್ಲಿ ಹಿಡಿದಿಡುವ ಕೆಲಸ ಭರತಮುನಿಯಿಂದಾಯಿತೆನ್ನಬಹುದು. ನಾಲ್ಕು ವೇದಗಳಿಂದ ಪಠ್ಯ, ಗಾನ, ರಸ, ಲಯ ಮುಂತಾದವುಗಳನ್ನು ಆರಿಸಿಕೊಂಡು ಐದನೇಯ ವೇದ ನಾಟ್ಯವೇದವನ್ನು ರಚಿಸಿದನೆಂಬುದು ಐತಿಹ್ಯ.
ಕ್ರಮೇಣ ನಾಟ್ಯಶಾಸ್ತ್ರವನ್ನು ಆಧರಿಸಿ ಪ್ರಾಂತೀಯ ಜನಜೀವನ- ಸಂಸ್ಕೃತಿಯ ಪ್ರಭಾವದಿಂದ, ವಿವಿಧ ರೀತಿಯಲ್ಲಿ ನೃತ್ಯ ಪ್ರಕಾರಗಳು ಸೃಜನೆಯಾದವು. ಹಾಗಾಗಿ ನಾಟ್ಯಕಲೆ ಹರಿದುಬಂದ ಕಥೆಯಲ್ಲಿ ಭರತನು ಕಾವ್ಯದೃಷ್ಟಿ, ಧರ್ಮದೃಷ್ಟಿ ರಸದೃಷ್ಟಿಗಳನ್ನು ಕೊಡುವುದಷ್ಟೇ ಅಲ್ಲದೆ ಲೌಕಿಕ ಪ್ರಜ್ಞೆಯನ್ನು ನೀಡಿದ್ದಾನೆ. ಅಷ್ಟು ಮಾತ್ರವಲ್ಲದೆ, ಭಾರತೀಯ ಪರಿಭಾಷೆಯಲ್ಲಿ ಭರತನು ನೀಡಿದ ಕೊಡುಗೆಗಳ ಪೈಕಿ ಸಾಧಾರಣೀಕರಣ ಎನ್ನುವ ಸಂವಹನ ನೀತಿ ತತ್ವವು ಪ್ರಪಂಚದ ಸಂವಹನ ಕ್ಷೇತ್ರಕ್ಕಿತ್ತ ಮಹತ್ವದಕಾಣಿಕೆ. ವೈಯಕ್ತಿಕ ಸಾಧ್ಯತೆಗಳಿಂದ ಅನಂತತೆಗೆ, ವೈವಿಧ್ಯತೆಗಳಿಂದ ಏಕತೆಗೆ ಕೊಂಡೊಯ್ಯುವಲ್ಲಿ ಈ ಸಾಧಾರಣೀಕರಣ ಬಹು ಮುಖ್ಯ ಪಾತ್ರ ವಹಿಸುತ್ತದೆ.
ಕಾಲಾನಂತರದಲ್ಲಿ ಭರತನ ನಾಟ್ಯಶಾಸ್ತ್ರವಷ್ಟೇ ಅಲ್ಲದೆ ನಂದಿಕೇಶ್ವರನ ಅಭಿನಯ ದರ್ಪಣ, ಪುಂಡರೀಕ ವಿಠಲನ ನರ್ತನ ನಿರ್ಣಯ, ಸಾರಂಗಧರನ ಸಂಗೀತ ರತ್ನಾಕರ, ಭರತಾರ್ಣವ, ಹಸ್ತ ಲಕ್ಷಣ ದೀಪಿಕ.., ಹೀಗೆ ಹತ್ತು ಹಲವು ಗ್ರಂಥಗಳು ವಿವಿಧ ಬಗೆಯ ನೃತ್ಯ ಪದ್ಧತಿಗಳಿಗೆ ಆಕರವಾದವು. ಭರತನಾಟ್ಯವು ಅಭಿನಯ ದರ್ಪಣವನ್ನು ಮುಖ್ಯವಾಗಿ ಅವಲಂಬಿಸಿದರೆ ಮೋಹಿನಿಯಾಟ್ಟಂ, ಕಥಕ್ಕಳಿಂiiಂತಹ ನೃತ್ಯ ಪ್ರಕಾರಗಳು ಅವಲಂಬಿಸಿದ್ದು ಹಸ್ತಲಕ್ಷಣ ದೀಪಿಕಾವನ್ನು.
ಆರಂಭದಲ್ಲಿ ಜನಜೀವನದ ಮಾಮೂಲಿ ನೃತ್ಯಗಳಾಗಿದ್ದು, ಕಾಲಾಂತರದಲ್ಲಿ ಪರಿಷ್ಕರಣೆಗೊಳಪಟ್ಟವುಗಳೇ ಇಂದಿನ ಎಲ್ಲಾ ಬಗೆಯ ಶಾಸ್ತೀಯ ನೃತ್ಯಗಳು. ಇವುಗಳ ಬಳಕೆ, ಮತ್ತು ಪ್ರೋತ್ಸಾಹ ವಿವಿಧ ದೇಶ-ಕಾಲದಲ್ಲಿ ನಡೆದು ಅನೇಕ ಸ್ಥಿತ್ಯಂತರಗಳಿಗೆ, ಕಾಲಕ್ರಮೇಣ ಒಂದು ಸಂಪ್ರದಾಯದ ಚೌಕಟ್ಟಿಗೆ ಒಳಪಟ್ಟು ಶಾಸ್ತ್ರೀಯ-ಸಂಪ್ರದಾಯಯನ್ನು ಪಡೆದವು. ಸಮಾಜದ ಉನ್ನತಿಗೆ, ವ್ಯಕ್ತಿತ್ವ ವಿಕಸನೆಗೆ, ಸೌಂದರ್ಯಾನುಭವಕ್ಕೆ ರೂಪುಗೊಂಡ ಇಂತಹ ಪದ್ಧತಿಗಳಲ್ಲಿ ತಮಿಳುನಾಡಿನ ಭರತನಾಟ್ಯ, ಆಂಧ್ರದ ಕೂಚುಪುಡಿ, ಒರಿಸ್ಸಾದ ಒಡಿಸ್ಸಿ, ಕೇರಳದ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ, ಮಣಿಪುರದ ಮಣಿಪುರಿ, ಉತ್ತರಭಾರತದ ಕಥಕ್, ಅಸ್ಸಾಂನ ಸತ್ರಿಯಾ, ಕರ್ನಾಟಕದ ಯಕ್ಷಗಾನಗಳು ಕೂಡಾ ಒಂದೊಮ್ಮೆ ಜನಪದದ ಹರಿವಿನಿಂದ ಶಾಸ್ತ್ರೀಯ ನಡೆವಳಿಕೆಗಳಿಗೆ ಚಾಚಿಕೊಂಡಿರಬಹುದಾದ ಎಲ್ಲಾ ಸಾಧ್ಯತೆಗಳನ್ನು ಪ್ರಕಟಪಡಿಸಿವೆ. ಹೀಗೆ, ಕಲಾವಿದನ ಶಕ್ತಿಯು ಆಯಾಯ ದೇಶದ ಸ್ಥಿತಿಗತಿಗಳ, ರಾಜಕೀಯ, ಆರ್ಥಿಕ, ಮತ್ತು ಸಂಸ್ಕೃತಿಯನ್ನು ಅವಲಂಬಿಸಿರುತ್ತದೆ.
ಇಂದಿನ ಶಾಸ್ತ್ರೀಯ ನೃತ್ಯಗಳ ಒಂದೊಂದು ಅಂಶವೂ ಸೂಕ್ಷ್ಮಾವಲೋಕನದಿಂದ, ನಿಯಮ ವಿಧಿಗಳಿಗೆ ಬದ್ಧವಾಗಿ, ಶಾಸ್ತ್ರೀಯ ಸೂತ್ರಗಳನ್ನು ಹೊಂದಿದ ಪರಿಷ್ಕೃತ ಪದ್ಧತಿಯನು ಒಳಗೊಂಡಿದ್ದು; ಬಹಳಷ್ಟು ಹಿಂದಿನಿಂದಲೇ ಗೌರವಕ್ಕೆ ಅರ್ಹವಾದ ಕಲೆಗಳಾಗಿದ್ದವು ಎನ್ನುವುದು ಗಮನಾರ್ಹ. ಒಂದು ಕಾಲದಲ್ಲಿ ಸಾಮಾನ್ಯ ಜನರ ಅಭಿವ್ಯಕ್ತಿಯ ಸಾಧನವಾಗಿದ್ದು, ಜನಪದವೇ ಆಗಿದ್ದಿರಬಹುದೆನ್ನಲಾದ ಇಂದಿನ ಶಾಸ್ತ್ರೀಯ ನೃತ್ಯಗಳು, ಕಾಲಾನುಕ್ರಮದಲ್ಲಿ ಹಲವು ಪರಿಷ್ಕರಣೆಗೊಳಪಟ್ಟು, ಬದಲಾವಣೆಗಳಿಗೆ ಒಗ್ಗಿಸಿಕೊಂಡು ಒಂದು ಸಿದ್ಧ ಪರಂಪರೆಯ ರೂಪಕ್ಕೆ ಬಂದಿದ್ದೇ ಅವುಗಳ ಇಂದಿನ ಅಸ್ತಿತ್ವಕ್ಕೆ ಕಾರಣ. ಹಾಗಾಗಿ ನಾಟ್ಯಶಾಸ್ತ್ರದ ಹಿನ್ನಲೆಯಲ್ಲಿ ಬೆಳೆದು ಬಂದ ಕಲೆಗಳಾದ ನೃತ್ಯ ಪದ್ಧತಿಗಳನ್ನು ಕೇವಲ ಶಾಸ್ತ್ರೀಯ ಪರಿಭಾಷೆಯಾಗಿ ನೋಡದೆ ಅದರ ವ್ಯಾಪ್ತಿಯ ಬಗ್ಗೆ, ಸಾಧಾರಣೀಕರಣ ಪ್ರಸ್ತಾಪಿಸುವ ಅಂಶಗಳಿಗೆ ಎಷ್ಟು ಪೂರಕವಾಗಿ ನಡೆದುಕೊಳ್ಳುತ್ತದೆ ಎಂಬ ಬಗ್ಗೆ ಮತ್ತು ಈಗಾಗಲೇ ಅಸ್ತಿತ್ವದಲ್ಲಿದ್ದರೂ ತೆರೆಮರೆಗೆ ಸರಿಯುತ್ತಿರುವ ಅದರ ಸಂವಹನ ಅನುಕೂಲ ಅಂಶಗಳ ಕುರಿತಾಗಿ ಮತ್ತಷ್ಟು ಅಧ್ಯಯನಗಳು ನಡೆಯಬೇಕಾಗಿವೆ. ಬದಲಾವಣೆಯ ಕಾಲಘಟ್ಟಕ್ಕೆ ಪೂರಕವಾಗಿ ನಡೆಯಬೇಕೆಂಬ ಉದ್ದೇಶಗಳನ್ನಿಟ್ಟು ನಡೆದರೆ ಕಲೆಯು ಕೇವಲ ಸಾಂಪ್ರದಾಯಿಕ, ಸಾಂಸ್ಕೃತಿಕ ಅಗತ್ಯಗಳನ್ನಷ್ಟೇ ಪೂರೈಸುವುದಕ್ಕೆ ಸೀಮಿತವಾಗದೆ ಸಾಮಾಜಿಕ ಅಗತ್ಯ ಮತ್ತು ಪ್ರಜ್ಞೆಯನ್ನು ಪೂರೈಸಿಕೊಂಡು, ಪ್ರಸ್ತುತವೆನಿಸುತ್ತದೆ.
ಕಲೆ ನಿಂತ ನೀರಲ್ಲ. ನೃತ್ಯ ಪದ್ಧತಿಗಳು ಉಗಮವಾದಾಗಿನಿಂದಲೂ ಸಾಕಷ್ಟು ಚಲನೆಗಳಿಗೆ ಸಾಕ್ಷಿಯಾಗಿದೆ. ಕಲೆಯ ಮತ್ತು ಅದರೊಂದಿಗಿನ ಜೀವನಪ್ರೀತಿಯನ್ನು ಪೋಷಿಸುವ ಮತ್ತು ನಿತ್ಯ ನವೀಕರಿಸಿಕೊಳ್ಳುವ ದೃಷ್ಟಿಯಿಂದ ಮುನ್ನಡೆದರಷ್ಟೇ ಕಾರ್ಯಗಳು ಜೀವನಮುಖಿಯೆನಿಸಿಕೊಳ್ಳುತ್ತದೆ. ಭರತನೇ ತನ್ನ ನಾಟ್ಯಶಾಸ್ತ್ರದಲ್ಲಿ ಕಾಲಾನುಕೂಲಕ್ಕೆ ಅಗತ್ಯವಿದ್ದಂತೆ ಜನಜೀವನದ ಮಾರ್ಪಾಡುಗಳಿಗೆ ಅನುಗುಣವಾಗಿ ನೃತ್ಯ ಸಂಸ್ಕೃತಿಯಲ್ಲೂ ಬದಲಾವಣೆಗಳನ್ನು ತಂದುಕೊಳ್ಳಬಹುದಾಗಿದೆ ; ತಾನು ಪ್ರಸ್ತಾಪಿಸಿರುವ ಅಂಶಗಳೇ ಸಾರ್ವಕಾಲೀನ ಮಾನದಂಡವಲ್ಲ ಎಂದಿದ್ದಾನೆ. ಆದರೆ ಶತಶತಮಾನಗಳಿಂದಲೂ ಪೂಜಾ ಮಂದಿರ, ರಾಜರ ಆಶ್ರಯಗಳಲ್ಲಿ ಬೆಳೆದು ಬಂದು ಕ್ರಮೇಣ, ಸ್ವಹಿತಾಸಕ್ತಿಗಳಿಂದಾಗಿ ಕಳೆದ ಶತಮಾನದ ಪೂರ್ವ ಮತ್ತು ಮಧ್ಯಕಾಲದಲ್ಲಿ ಸೊರಗಿ ಹೋಯಿತು. ಪರಕೀಯರ ದಾಳಿ ಆಗುವವರೆಗೂ ರಾಜಶ್ರಯದಲ್ಲಿದ್ದ ಕಲೆಗಳು ಮತ್ತಷ್ಟು ಬಿಗಡಾಯಿಸಿದವು. ದೈವಿಕಭಾವದ ಕಲೆಗೆ ಕಾಮುಕತೆಯ ಲಕ್ಷಣಗಳು ಅಂಟಿಕೊಂಡು. ಕೀಳುಮಟ್ಟದ ಜೀವನಕ್ಕೆ ಸಾಕ್ಷಿಯಾಯಿತು. ಅಸಡ್ಡೆ, ತಿರಸ್ಕಾರ, ಮರ್ಯಾದೆಗೆ ಯೋಗ್ಯವಲ್ಲ ಎಂಬ ನೀತಿ ನೃತ್ಯಕ್ಷೇತ್ರದಲ್ಲಿ ವ್ಯಾಪಕವಾಗಿ ಹಬ್ಬಿತ್ತು.
ನಂತರ ಹಲವು ಸುಧಾರಕರ ಕರಕುಶಲತೆಗೆ ಕನ್ನಡಿಯಾಗಿ ಇಂದು ನಾವೇನು ಕಾಣುತ್ತಿದ್ದೇವೆಯೋ ಈ ಭವ್ಯ ಹೊಸಿಲಿಗೆ ಬಂದು ನಿಂತಿದೆ. ಉದಾ : ದೇವದಾಸಿಯರ ಕಳಪೆ, ನಿರ್ಲಕ್ಷಿತ ಜೀವನದಡಿ ಸಾದಿರ್, ಕೂತ್ತು ಎಂಬೆಲ್ಲಾ ಹೆಸರುಗಳಿಂದ ಕಳೆಗುಂದಿ ನಲುಗಿ ಹೋಗಿದ್ದ ದಕ್ಷಿಣ ಭಾರತದ ಸಾದಿರ್, ಕೂತ್ತು, ದಾಸಿ‌ಆಟ್ಟಂ ಎಂದು ಕರೆಸಿಕೊಳ್ಳುತ್ತಿದ್ದ ಮುಖ್ಯ ನೃತ್ಯ ಪ್ರಕಾರವೊಂದಕ್ಕೆ ೧೯೫೦ರ ದಶಕಗಳಲ್ಲಿ ರುಕ್ಮಿಣೀದೇವಿ ಅರುಂಡೇಲ್, ಕೃಷ್ಣ ಅಯ್ಯರ್ ಮುಂತಾದವರು ಭರತನಾಟ್ಯವೆಂಬ ಹೆಸರನ್ನಿತ್ತು, ಮರುಜ್ಜೀವ ಕೊಟ್ಟು ಸಾಕಷ್ಟು ಪರಿಷ್ಕರಿಸಿದರು.
ಕಾಲ ಬದಲಾಗಿದೆ., ಕಾಲ-ನೆಲೆಗಳಿಂದ ಮೊದಲ್ಗೊಂಡು ವೇಷಭೂಷಣ, ಸಂಗೀತ, ಪಠ್ಯಕ್ರಮ, ನರ್ತನ ಆಶಯಗಳ ಉದ್ದಗಲಕ್ಕೂ ಸಾಕಷ್ಟು ಮಾರ್ಪಾಡುಗಳು ಶಾಸ್ತ್ರೀಯ ನೃತ್ಯಗಳಲ್ಲಿ ಆಗುತ್ತಾ ಬಂದಿವೆ. ಇತರ ಮಾಧ್ಯಮಗಳ ಪ್ರಭಾವವೂ ಸಾಕಷ್ಟು ಆಗಿದೆ. ಇತ್ತೀಚಿನ ದಶಕಗಳಲ್ಲಿ ಈ ನೃತ್ಯ ಸಂಸ್ಕೃತಿಯ ಮೂಲ ಅಂಶಗಳನ್ನು ಉಳಿಸಿಕೊಂಡಂತೆ ಸಾಕಷ್ಟು ಫ್ಯೂಶನ್‌ಗಳು ಹರಡಿದ್ದು, ಸಮಕಾಲೀನ ಸಮಾಜಕ್ಕೆ ಪೂರಕವಾಗಿ ನಡೆದುಕೊಳ್ಳಬಲ್ಲ ಎಲ್ಲಾ ಅಂಶಗಳನ್ನು ತೋರಿಸಿಕೊಟ್ಟಿದೆ. ಅಂದು ನೃತ್ಯವೆಂಬುದು ಕಳಂಕ ; ಅದೇ ಇಂದು ಪ್ರತಿಷ್ಠೆಯ ವಿಷಯ. ನೃತ್ಯ ಕ್ಷೇತ್ರದ ವ್ಯಾಪಾರೀಕರಣ ಬಡವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವೆಚ್ಚದಾಯಕವೆಂಬ ಕಾರಣಕ್ಕೆ ನೃತ್ಯಕ್ಕೆಂದು ಹುಳಿದ್ರಾಕ್ಷಿಯೇ ಹೌದು ! ಅನಾರೋಗ್ಯಕರ ಸ್ಪರ್ಧೆಯಿಂದಾಗಿ ವಿದ್ಯೆಯೆಂಬುದು ಕೇವಲ ಗಿಳಿಪಾಠವೇ ಸರಿ ! ಮಾತ್ರವಲ್ಲ, ನೃತ್ಯ ಪರೀಕ್ಷೆಗಳ ಸಾಕಷ್ಟು ಲೋಪಗಳು ಅಕಾಡೆಮಿಕ್ ಮಾನ್ಯತೆಗೊಂದು ಕಪ್ಪುಚುಕ್ಕಿ. ಹಾಗಾಗಿ ಬರಬರುತ್ತಾ ಎಲ್ಲಾರೀತಿಯಿಂದಲೂ ಯೋಗ್ಯತೆ ಪಡೆದಿರುವ ನಾಟ್ಯಾಚಾರ್ಯರು ವಿರಳವಾಗುತ್ತಿದ್ದಾರೆ. ವಿವಿಧ ಸಂಪ್ರದಾಯಗಳ ಒಳಜಗಳಗಳು, ಪ್ರದರ್ಶನ-ರಂಗಪ್ರವೇಶಗಳೇ ಅರ್ಹತೆಯ ಮಾನದಂಡಗಳೆಂಬ ಕಪೋಲ ಕಲ್ಪಿತ ನಂಬಿಕೆಗಳು ರಸಾನುಭೂತಿಯನ್ನೇ ಮರೆಸಿ ನಿರ್ವಾತ ವಾತಾವರಣವನ್ನು ಸೃಷ್ಠಿಸುತ್ತಿವೆ.
ಇಷ್ಟೆಲ್ಲಾ ನೃತ್ಯಕ್ಷೇತ್ರದ ಹಲವು ವಿರೋಧಾಭಾಸಗಳ ಮಧ್ಯೆ ಪರಂಪರೆಯ ಜೊತೆಗೆ ವಿನೂತನ ನಡೆಯನ್ನು ಮುಕ್ತವಾಗಿ ಒಪ್ಪಿ, ತಿದ್ದಿ ನಡೆಯುವ ವಿಶಾಲ ಮತ್ತು ಪ್ರತಿಭಾಶೀಲ ಮನಸ್ಸುಗಳ ಅಗತ್ಯವಿದೆ. ಒಂದಷ್ಟು ಚಲನಶೀಲತೆ, ಗುಣಮಟ್ಟದ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇರುವವರೆಗೆ ಕಲೆಯ ಕಡೆಗೆ ನೋಡುವ ಪ್ರತೀ ದೃಷ್ಠಿಯೂ ಹೊಸತೆನಿಸುತ್ತದೆ. ಭಾರತದ ನೃತ್ಯಪರಂಪರೆ ಇಲ್ಲಿನ ಆತ್ಮಚರಿತ್ರೆ. ಆತ್ಮದ ಉನ್ನತಿಯೇ ಕಲೆಯ ಪರಮೋದ್ದೇಶ. ಅಂತಹ ಸಧಭಿರುಚಿಯ ಪ್ರಯತ್ನಗಳು ನಮ್ಮಿಂದ ಹರಿದುಬರಲಿ.
(ಅಸೀಮಾ ಮಾರ್ಚ್ ೨೦೦೯ ಪತ್ರಿಕೆಯಲ್ಲಿ ಪ್ರಕಟವಾದ ಮುಖಪುಟ ವಿಷಯ ಲೇಖನ )